ಚನ್ನಪಟ್ಟಣ ಉಪಚುನಾವಣೆ, ಕಾಂಗ್ರೆಸ್‌ ಜೆಡಿಎಸ್‌ ಗೆ ಪ್ರತಿಷ್ಠೆ, ನಿಖಿಲ್‌ ಕುಮಾರ್‌ ಮೈತ್ರಿ ಅಭ್ಯರ್ಥಿ ನಿಕ್ಕಿ, ಕಾಂಗ್ರೆಸ್‌ನಿಂದ ಯಾರು?
ಕನ್ನಡ ಸುದ್ದಿ  /  ಕರ್ನಾಟಕ  /  ಚನ್ನಪಟ್ಟಣ ಉಪಚುನಾವಣೆ, ಕಾಂಗ್ರೆಸ್‌ ಜೆಡಿಎಸ್‌ ಗೆ ಪ್ರತಿಷ್ಠೆ, ನಿಖಿಲ್‌ ಕುಮಾರ್‌ ಮೈತ್ರಿ ಅಭ್ಯರ್ಥಿ ನಿಕ್ಕಿ, ಕಾಂಗ್ರೆಸ್‌ನಿಂದ ಯಾರು?

ಚನ್ನಪಟ್ಟಣ ಉಪಚುನಾವಣೆ, ಕಾಂಗ್ರೆಸ್‌ ಜೆಡಿಎಸ್‌ ಗೆ ಪ್ರತಿಷ್ಠೆ, ನಿಖಿಲ್‌ ಕುಮಾರ್‌ ಮೈತ್ರಿ ಅಭ್ಯರ್ಥಿ ನಿಕ್ಕಿ, ಕಾಂಗ್ರೆಸ್‌ನಿಂದ ಯಾರು?

channapatna election ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಘೋಷಣೆ ಮುನ್ನವೇ ರಾಜಕೀಯ ಚಟುವಟಿಕೆ ಜೋರಾಗಿದೆ.ಸುದ್ದಿ ವಿಶ್ಲೇಷಣೆ: ಎಚ್‌.ಮಾರುತಿ, ಬೆಂಗಳೂರು

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಳಿಸಿಕೊಳ್ಳಲು ಜೆಡಿಎಸ್‌ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ಫೈಟ್‌ ಜೋರಾಗಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಳಿಸಿಕೊಳ್ಳಲು ಜೆಡಿಎಸ್‌ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ಫೈಟ್‌ ಜೋರಾಗಿದೆ.

ಬೆಂಗಳೂರು: ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರಕ್ಕೆ ಉಪ ಚುನಾವಣೆ ನಿಗದಿಯಾಗುವುದೊಂದೇ ಬಾಕಿ. ಆಗಲೇ ಚುನಾವಣೆ ರಾಜಕೀಯ ಚಟುವಟಿಕೆಗಳು ಕ್ಷೇತ್ರದ ಒಳಗೆ ಹಾಗೂ ಹೊರಗೆ ಗರಿಗೆದವರಿವೆ. ಇಲ್ಲಿ ಶಾಸಕರಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಕೇಂದ್ರದಲ್ಲಿ ಮಂತ್ರಿಯಾಗಿದ್ಧಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಚುನಾವಣೆ ನಡೆಯುವುದು ಬಾಕಿಯಿದ್ದು, ಯಾವುದೇ ಕ್ಷಣದಲ್ಲಾದರೂ ಚುನಾವಣೆ ಪ್ರಕಟವಾಗಬಹುದು, ಈ ಕಾರಣದಿಂದ ಕ್ಷೇತ್ರದಲ್ಲಿ ತಮ್ಮ ಹಿಡಿತ ಉಳಿಸಿಕೊಳ್ಳಲು ಎಚ್‌ಡಿಕುಮಾರಸ್ವಾಮಿ, ಡಿಸಿಎಂ ಡಿಕೆ ಶಿವಕುಮಾರ್‌ ಜತೆಗೆ ಈ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿ ಸಚಿವರೂ ಆಗಿದ್ದ ಹಾಲಿ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಕೂಡ ಪ್ರಯತ್ನಿಸುತ್ತಿದ್ದಾರೆ. ಇದರಿಂದ ರಾಜಕೀಯ ಚಟುವಟಿಕೆಗಳಂತೂ ಗರಿಗೆದರಿವೆ.

ಒಂದು ಉಪ ಚುನಾವಣೆ ಇಬ್ಬರು ರಾಜ್ಯ ಮುಖಂಡರ ಭವಿಷ್ಯ ನಿರ್ಧರಿಸಲಿದೆ. ನಿಜ! ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಒಂದೆರಡು ತಿಂಗಳಲ್ಲಿ ನಡೆಯಲಿದೆ. ಈ ಕ್ಷೇತ್ರದ ಫಲಿತಾಂಶ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಕೇಂದ್ರಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.

ಎಚ್‌ಡಿಕೆ ವರ್ಸಸ್‌ ಡಿಕೆಶಿ

ಇಬ್ಬರೂ ಮುಖಂಡರ ಕರ್ಮಭೂಮಿ ರಾಮನಗರ ಜಿಲ್ಲೆ. ಭವಿಷ್ಯದಲ್ಲಿ ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ನಾಮಕರಣಗೊಳ್ಳಲಿದೆ. ಎರಡೂ ಪಕ್ಷಗಳಲ್ಲಿ ಅಭ್ಯರ್ಥಿಗಳು ಯಾರೇ ಆದರೂ ನಿಜ ಅರ್ಥದಲ್ಲಿ ಗೆಲ್ಲುವವರು ಸೋಲುವವರು ಇವರಿಬ್ಬರೇ. ಈ ಹಿಂದೆ ಕುಮಾರಸ್ವಾಮಿ ಅವರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕಾರಣಕ್ಕೆ ರಾಜ್ಯಾದ್ಯಂತ ಕುತೂಹಲ ಕೆರಳಿಸಲು ಮತ್ತೊಂದು ಕಾರಣವಾಗಿದೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ನಂತರ ಅವರು ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಇದಕ್ಕಾಗಿಯೇ ಮೈಸೂರು ಚಲೋ ಪಾದಯಾತ್ರೆಯಲ್ಲಿ ಮುಂಚೂಣಿಯಲ್ಲಿ ಇದ್ದುದು ನಿಖಿಲ್‌. ಅವರು ಕೂಡ ಈ ಪಾದಯಾತ್ರೆ ಮೂಲಕ ತಮ್ಮ ವರ್ಚಸ್ಸು ವೃದ್ದಿಸಿಕೊಂಡಿದ್ದಾರೆ.

ಮತ್ತೊಂದು ಕಡೆ ಚನ್ನಪಟ್ಟಣ ಕ್ಷೇತ್ರ ಒಳಪಡುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಮಾಜಿ ಪ್ರದಾನಿ ದೇವೇಗೌಡ ಅವರ ಕುಟುಂಬ ಕಸಿದುಕೊಂಡಿದೆ. ಅವರ ಆಳಿಯ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.‌ ಮಂಜುನಾಥ್‌ ಅವರು ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಡಿಕೆಶಿ ಸಹೋದರ ಡಿಕೆ ಸುರೇಶ್‌ ಅವರನ್ನು ಮಣಿಸಿದ್ದಾರೆ. ಇದು ಶಿವಕುಮಾರ್‌ ಅವರಿಗೆ ನುಂಗಲಾರದ ತುತ್ತಾಗಿದೆ. ಹಾಗಾಗಿ ಈ ಕ್ಷೇತ್ರ ಸೇಡು ತೀರಿಸಿಕೊಳ್ಳುವ ಅಖಾಡವಾಗಿ ಮಾರ್ಪಟ್ಟಿದೆ.

ಶಿವಕುಮಾರ್‌ ಮತ್ತು ಕುಮಾರಸ್ವಾಮಿ ವರ್ಷಗಳ ಹಿಂದೆ ಪರಸ್ಪರ ಮಿತ್ರರಾಗಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಶಿವಕುಮಾರ್‌ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು. ಇದೀಗ ಪರಸ್ಪರ ಎದುರಾಳಿಗಳಾಗಿದ್ದಾರೆ. ಇದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಪರಸ್ಪರ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಏಕವಚನದಲ್ಲಿ ನಿಂದಿಸುವ ಮಟ್ಟ ತಲುಪಿದೆ.

ಈ ಮಧ್ಯೆ ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲಿ ಹೆಜ್ಜೆಯೂರಲು ಬಿಜೆಪಿ ಹವಣಿಸುತ್ತಿದೆ. ಕಾಂಗ್ರೆಸ್‌ ನ ನಷ್ಟ ನಿಖಲ್‌ ಅವರ ಭವಿಷ್ಯಕ್ಕೆ ನಾಂದಿ ಹಾಡಿದರೆ ಒಕ್ಕಲಿಗರ ಹದಯಭಾಗದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿಗೆ ಸಹಾಯಕವಾಗುತ್ತದೆ. ತಮ್ಮ ಸಹಕಾರದಿಂದಲೇ ಜೆಡಿಎಸ್‌ ಗೆದ್ದಿದೆ ಎಂದು ಬಿಜೆಪಿ ಬೀಗಬಹುದು.

ಗುಪ್ತವಾದ ಯೋಗೇಶ್ವರ್‌ ನಡೆ

ಈ ಮಧ್ಯೆ ಬಿಜೆಪಿ ಮತ್ತು ಜೆಡಿಎಸ್‌ ಗೆ ತಲೆ ನೋವಾಗಿರುವುದು ಇದೇ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಮಾಜಿ ಶಾಸಕ ಬಿಜೆಪಿ ಮುಖಂಢ ಸಿ.ಪಿ.ಯೋಗೇಶ್ವರ್‌. ಅವರೂ

ಸಹ ಬಿಜೆಪಿ ಅಭ್ಯರ್ಥಿಯಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಈ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿದ್ದ ಕಾರಣ ಈ ಕ್ಷೇತ್ರದ ಮೇಲೆ ಹಕ್ಕುಸಾಧಿಸುವುದು ಕಷ್ಟ ಎಂದು ಬಿಜೆಪಿ

ಮುಖಂಡರೊಬ್ಬರು ಹೇಳುತ್ತಾರೆ. ಯೋಗೇಶ್ವರ್ ಅವರನ್ನೇ ಅಭ್ಯರ್ಥಿ ಮಾಡಬೇಕೆಂದು ಅವರ ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ. ಒಂದು ವೇಳೆ ನಿಖಿಲ್‌ ಅಭ್ಯರ್ಥಿಯಾದರೆ ಇವರ ಗೆಲುವಿಗೆ ಬಿಜೆಪಿ ಶೇ.ನೂರರಷ್ಟು ಪ್ರಯತ್ನ ಮಾಡುವ ಸಾಧ್ಯತೆ ಕಡಿಮೆ ಎಂದೂ ಹೇಳಲಾಗುತ್ತಿದೆ. ಎನ್‌ ಡಿಎ ಮತ್ತು ಕಾಂಗ್ರೆಸ್‌ ಯೋಗೇಶ್ವರ್‌ ಅವರನ್ನು ಕಡೆಗಣಿಸುವಂತಿಲ್ಲ. ಅವರದ್ದೇ ಆದ ಹಿಡಿತ ಕ್ಷೇತ್ರದ ಮೇಲಿದೆ. ಸ್ವತಂತ್ರ ಅಭ್ಯರ್ಥಿಯಾದರೂ ಆಶ್ಚರ್ಯಪಡಬೇಕಿಲ್ಲ.

ಶಿವಕುಮಾರ್‌ ಅವರಿಗೂ ಈ ಕ್ಷೇತ್ರದ ಗೆಲುವು ಮುಖ್ಯವಾಗಿದೆ. ಬಿಜೆಪಿ ಇದೇ ಮಾರ್ಗದಲ್ಲಿ ಪಾದಯಾತ್ರೆ ನಡೆಸಿದ್ದು, ಗೆದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ ಹಾಗಾಗುತ್ತದೆ ಮತ್ತು ಮುಖ್ಯಮಂತ್ರಿ ಹುದ್ದೆಗೆ ಮತ್ತಷ್ಟು ಹತ್ತಿರವಾಗುತ್ತಾರೆ. ಕಾಂಗ್ರೆಸ್‌ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ಗುಟ್ಟಾಗಿ ಉಳಿದಿದೆ. ಡಿಕೆಶಿ ಮನಸ್ಸಿನಲ್ಲಿ ಸಹೋದರ ಡಿಕೆ ಸುರೇಶ್‌ ಇದ್ದಾರೋ, ಯೋಗೇಶ್ವರ್‌ ಇಲ್ಲವೇ ಮತ್ಯಾರು ಇದ್ದಾರೋ ಎನ್ನುವ ಕುತೂಹಲ ಮಾತ್ರ ಉಳಿದಿದೆ.

(ಸುದ್ದಿ ವಿಶ್ಲೇಷಣೆ: ಎಚ್.ಮಾರುತಿ, ಬೆಂಗಳೂರು)

 

Whats_app_banner