HDK will not contest in 2 constituencies: 2 ಕ್ಷೇತ್ರಗಳಲ್ಲಿ ಸ್ಪರ್ಧೆ ಇಲ್ಲ; ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧೆ: ಹೆಚ್ಡಿಕೆ ಘೋಷಣೆ-no competition in the 2 constituencies contest only in channapatna says ex cm hd kumaraswamy ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Hdk Will Not Contest In 2 Constituencies: 2 ಕ್ಷೇತ್ರಗಳಲ್ಲಿ ಸ್ಪರ್ಧೆ ಇಲ್ಲ; ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧೆ: ಹೆಚ್ಡಿಕೆ ಘೋಷಣೆ

HDK will not contest in 2 constituencies: 2 ಕ್ಷೇತ್ರಗಳಲ್ಲಿ ಸ್ಪರ್ಧೆ ಇಲ್ಲ; ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧೆ: ಹೆಚ್ಡಿಕೆ ಘೋಷಣೆ

ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಇಲ್ಲ. ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದು, ಪಲಾಯನ ಮಾಡುವ ಪ್ರಶ್ನೆ ಇಲ್ಲ ಎಂದಿದ್ದಾರೆ.

ಮಾಜಿ ಸಿಎಂ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (ಫೋಟೋ-File)
ಮಾಜಿ ಸಿಎಂ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (ಫೋಟೋ-File)

ಚನ್ನಪಟ್ಟಣ/ರಾಮನಗರ: ತಮ್ಮ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಅಬ್ಬರಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಯಾವುದೇ ಕಾರಣಕ್ಕೂ ನಾನು ಚನ್ನಪಟ್ಟಣ ಕ್ಷೇತ್ರ ಬಿಟ್ಟು ಹೋಗುವುದಿಲ್ಲ, ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

ಚನ್ನಪಟ್ಟಣದಲ್ಲಿ ಇಂದು ಅಲ್ಪಸಂಖ್ಯಾತರ ಘಟಕದ ಕಚೇರಿ ಉದ್ಘಾಟನೆ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಹಲವಾರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವಂತೆ ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕರೆಯುತ್ತಿದ್ದಾರೆ. ಆದರೆ ನಾನು ನಾನು ಚನ್ನಪಟ್ಟಣದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ. ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ಸರ್ಕಾರ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್ ವಿರುದ್ಧ ಸಿಡಿಮಿಡಿಯಾದ ಹೆಚ್‌ಡಿಕೆ, ಇಂಥ ವ್ಯಕ್ತಿಗಳ ( ಸಿ.ಪಿ.ಯೋಗೇಶ್ವರ್) ತರದವರನ್ನು ಇನ್ನೂ ನೂರು ಜನರನ್ನು ಕಳಿಸಲಿ, ನಾನು ಹೆದರಿ ಪಲಾಯನ ಮಾಡುವ ವ್ಯಕ್ತಿ ಅಲ್ಲ ಎಂದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಕೊಳಕು ಮಾಡಿ ಹಾಳು ಮಾಡಿದ್ದು ಅವರು. ಅದನ್ನೆಲ್ಲ ನಾನು ಈಗ ಕ್ಲೀನ್ ಮಾಡುತ್ತಿದ್ದೇನೆ. ಸಿ.ಪಿ.ಯೋಗೇಶ್ವರ್ ಅಂಬೇಡ್ಕರ್ ಭವನ ಕಟ್ಟುವುದಕ್ಕೆ ಕೂಡ ಬಿಡುತ್ತಿಲ್ಲ. ವಿನಾಕಾರಣ ಚನ್ನಪಟ್ಟಣ ಜನರಿಗೆ ತೊಂದರೆ ಕೊಡ್ತಾ ಇದ್ದಾರೆ. ಚನ್ನಪಟ್ಟಣಕ್ಕೆ ಯೋಗೇಶ್ವರ್ ಅಂತಹ 100 ಜನರನ್ನ ಕರೆದುಕೊಂಡು ಬನ್ನಿ, ನಾನು ಯಾವುದಕ್ಕೂ ತಲೆ ಕೆಡೆಸಿಕೊಳ್ಳೋದಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ನೇರವಾಗಿ ಸವಾಲು ಎಸೆದರು.

ಗುದ್ದಲಿ ಪೂಜೆ ಮಾಡಬೇಕಾದರೆ ನಿಯಮ ಏನಿದೆ ಎನ್ನುವುದು ಇವರಿಗೆ ಗೊತ್ತಿಲ್ಲವೆ? ಈ ಸರ್ಕಾರಕ್ಕೆ ಶಿಷ್ಟಾಚಾರ ಏನೆಂಬುದು ಗೊತ್ತಿಲ್ಲವೇ? ಸ್ವಲ್ಪವಾದರೂ ವಿವೇಚನೆ ಬೇಡವೇ ಎಂದು ಹೆಚ್ಡಿಕೆ ಖಾರವಾಗಿ ಪ್ರಶ್ನಿಸಿದರು.

ಚನ್ನಪಟ್ಟಣ ತಹಶೀಲ್ದಾರ್ ವಿರುದ್ಧವೂ ಕಿಡಿಕಾರಿದ ಮಾಜಿ ಮುಖ್ಯಮಂತ್ರಿಗಳು, ನನ್ನ ಕ್ಷೇತ್ರದಲ್ಲಿ ಬಂದು ಆತ ಆಟವಾಡುತ್ತಿದ್ದಾರೆ. ಮುಂದಿನ ಆರು ತಿಂಗಳ ಬಳಿಕ ಆತ ಎಲ್ಲಿರುತ್ತಾರೆ ಎನ್ನುವುದು ಗೊತ್ತಿದೆ. ನಮ್ಮ ಕುಟುಂಬದಲ್ಲಿ ಇಂಥವರನ್ನು ಲಕ್ಷಾಂತರ ಜನರನ್ನು ನೋಡಿದ್ದೇವೆ. ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಲೂಟಿ ಹೊಡೆಯುತ್ತಿದ್ದಾರೆ. ಕೆಲ ಕಳ್ಳರ ಜೊತೆ ಸೇರಿ ಆ ತಹಶೀಲ್ದಾರ್ ರೈತರಿಗೆ ತೊಂದರೆ ಕೊಡ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು

ನಾನು ಯಾರಿಗೋ ಹೆದರಿ ರಾಮನಗರ ಬಿಟ್ಟು ಹೋಗುವ ಮಗ ಅಲ್ಲ. ನಾನು ದೇವೇಗೌಡರ ಕುಟುಂಬದಲ್ಲಿ ಹುಟ್ಟಿರೋದು. ಎಲ್ಲದಕ್ಕೂ ಹೋರಾಟ ಮಾಡುವ ಶಕ್ತಿ ನಮ್ಮ ಅಪ್ಪ ನನಗೆ ಕೊಟ್ಟಿದ್ದಾರೆ. ನಾನು ಚನ್ನಪಟ್ಟಣದಿಂದಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ರಾಜ್ಯದ 120ಕ್ಕೂ ಹೆಚ್ಚು ಕಡೆ ನಾನು ಸಂಚಾರ ಮಾಡಬೇಕು. ನನ್ನ ಕಾರ್ಯಕರ್ತರೇ ನನ್ನ ಚುನಾವಣೆ ನಡೆಸುತ್ತಾರೆ ಎಂದು ರಾಜಕೀಯ ವಿರೋಧಿಗಳಿಗೆ ಹೆಚ್‌.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟರು.

ಸರ್ಕಾರಿ ಶಾಲೆಗಳಲ್ಲಿ ಮಾಸಿಕ 100 ರೂ.ವಸೂಲಿಗೆ ಆಕ್ರೋಶ

ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿಕೆ, ಸರ್ಕಾರಿ ಶಾಲೆಗಳಲ್ಲಿ ನಿತ್ಯದ ವೆಚ್ಚಕ್ಕೆ ಪೋಷಕರಿಂದ ಮಾಸಿಕ 100 ರೂ. ವಸೂಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದು ಅತಿ ನಾಚಿಕೆಗೇಡಿನ ಸಂಗತಿ. ತಕ್ಷಣವೇ ಸರ್ಕಾರ ಈ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದರು.

ಪೋಷಕರ ಬಳಿ ಹಣ ವಸೂಲಿ ಮಾಡೋದು ಕೆಟ್ಟ ನಿರ್ಧಾರ. ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಮೂಲಭೂತ ಸೌಕರ್ಯಗಳಿಲ್ಲ. ಆದರೆ, ಪೋಷಕರಿಂದ ಚಂದಾ ವಸೂಲಿ ಮಾಡೋದು ಸರ್ಕಾರದ ದಿವಾಳಿತನವನ್ನು ತೋರಿಸುತ್ತದೆ. ಈ ರೀತಿಯ ತೀರ್ಮಾನ ಮಾಡುವುದಕ್ಕೆ ಸರ್ಕಾರಕ್ಕೆ ನಾಚಿಕೆ ಆಗಬೇಕು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಖತ್ ಗರಂ ಆದರು.

ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ತಾಲ್ಲೂಕು ಜೆಡಿಎಸ್ ಅಲ್ಪಸಂಖ್ಯಾತರ ಘಟದ ಅಧ್ಯಕ್ಷ ಸೈಯ್ಯದ್ ಫಾಜಿಲ್ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಹಾಜರಿದ್ದರು.

mysore-dasara_Entry_Point