ವಕ್ಫ್‌ ಭೂಮಿ ವಶಕ್ಕೆ ಮುಖ್ಯ ಕಾರ್ಯದರ್ಶಿ ಆದೇಶ, ನೊಟೀಸ್‌ ವಾಪಸ್‌ಗೆ ಕಂದಾಯ ಇಲಾಖೆ ಸೂಚನೆ, ಯಾವುದು ಸತ್ಯ ಸಿದ್ದರಾಮಯ್ಯರೇ: ಬಿಜೆಪಿ ಪ್ರಶ್ನೆ
ಕನ್ನಡ ಸುದ್ದಿ  /  ಕರ್ನಾಟಕ  /  ವಕ್ಫ್‌ ಭೂಮಿ ವಶಕ್ಕೆ ಮುಖ್ಯ ಕಾರ್ಯದರ್ಶಿ ಆದೇಶ, ನೊಟೀಸ್‌ ವಾಪಸ್‌ಗೆ ಕಂದಾಯ ಇಲಾಖೆ ಸೂಚನೆ, ಯಾವುದು ಸತ್ಯ ಸಿದ್ದರಾಮಯ್ಯರೇ: ಬಿಜೆಪಿ ಪ್ರಶ್ನೆ

ವಕ್ಫ್‌ ಭೂಮಿ ವಶಕ್ಕೆ ಮುಖ್ಯ ಕಾರ್ಯದರ್ಶಿ ಆದೇಶ, ನೊಟೀಸ್‌ ವಾಪಸ್‌ಗೆ ಕಂದಾಯ ಇಲಾಖೆ ಸೂಚನೆ, ಯಾವುದು ಸತ್ಯ ಸಿದ್ದರಾಮಯ್ಯರೇ: ಬಿಜೆಪಿ ಪ್ರಶ್ನೆ

ಕರ್ನಾಟಕದಲ್ಲಿನ ವಕ್ಫ್‌ ಆಸ್ತಿ ವಿಚಾರವಾಗಿ ಉಂಟಾಗಿರುವ ಗೊಂದಲವನ್ನು ಸಿಎಂ ಸಿದ್ದರಾಮಯ್ಯ ಬಗೆಹರಿಸಬೇಕು. ಆದೇಶದಲ್ಲಿ ಸುಳ್ಳು ಯಾವುದು, ಸತ್ಯ ಏನಿದೆ ಎನ್ನುವುದನ್ನು ಬಹಿರಂಗಪಡಿಸಬೇಕು ಎನ್ನುವುದು ಬಿಜೆಪಿ ಆಗ್ರಹ.

ವಕ್ಫ್‌ ಆಸ್ತಿ ಗೊಂದಲದ ವಿಚಾರವಾಗಿ ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಆದೇಶ ಪ್ರತಿ ಪ್ರದರ್ಶಿಸಿದರು.
ವಕ್ಫ್‌ ಆಸ್ತಿ ಗೊಂದಲದ ವಿಚಾರವಾಗಿ ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಆದೇಶ ಪ್ರತಿ ಪ್ರದರ್ಶಿಸಿದರು.

ಬೆಂಗಳೂರು: ಕರ್ನಾಟಕದಲ್ಲಿ ವಕ್ಫ್‌ ಭೂಮಿಗೆ ಸಂಬಂಧಿಸಿದ ವಿವಾದ ತೀವ್ರಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಸೂಚನೆ ಮೇರೆಗೆ ಕಂದಾಯ ಇಲಾಖೆ ನೋಟಿಸ್‌ ವಾಪಾಸ್‌ ಪಡೆಯಲು ಆದೇಶಿಸಿದೆ. ಮತ್ತೊಂದು ಕಡೆಯಲ್ಲಿ ಮುಖ್ಯ ಕಾರ್ಯದರ್ಶಿ ಭೂಮಿ ವಶಪಡಿಸಿಕೊಳ್ಳಲು ಲಿಖಿತ ಸೂಚನೆ ನೀಡಿದ್ದಾರೆ. ಈಗಲೂ ಈ ವಿಚಾರದಲ್ಲಿ ಗೊಂದಲ ನಿಂತಿಲ್ಲ. ಸಿಎಂ ಸಿದ್ದರಾಮಯ್ಯನವರು ನೋಟಿಸ್‌ ವಾಪಸ್‌ ಪಡೆಯಲು ಸೂಚಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಮುಖ್ಯಕಾರ್ಯದರ್ಶಿ ನೀಡಿದ ಆದೇಶದ ಸತ್ಯ ಮರೆಮಾಚಲು ಮುಖ್ಯಮಂತ್ರಿ ಸುಳ್ಳು ಹೇಳಿದ್ದಾರೆ ಎನ್ನುವುದು ಬಿಜೆಪಿ ಗಂಭೀರ ಆರೋಪ. ಇದರಲ್ಲಿ ಯಾವುದೂ ನಿಜ, ಯಾವುದು ಸುಳ್ಳು ಎಂದು ಮೊದಲು ಸ್ಪಷ್ಟಪಡಿಸಿ ಜನರಿಗೆ ನೈಜತೆ ತಿಳಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ಆಗ್ರಹಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ, ವಕ್ಫ್‌ ಮಂಡಳಿಯಿಂದ ಭೂ ಕಬಳಿಕೆಯಿಂದಾಗಿ ಭೀತಿಗೊಂಡ ಜನರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. 15 ದಿನಗಳಲ್ಲಿ ಎಲ್ಲ ಆಸ್ತಿಗಳನ್ನು ವಕ್ಫ್‌ ಮಂಡಳಿಗೆ ಬರೆಯಿಸಿ ಎಂದು ಅವರೇ ಹೇಳಿದ್ದಾರೆ. ಸಿಎಂ ಸೂಚನೆ ಮೇರೆಗೆ ಕಂದಾಯ ಇಲಾಖೆಯು ವಕ್ಫ್‌ ವಿಚಾರವಾಗಿ ನೀಡಿರುವ ನೋಟಿ ವಾಪಾಸ್‌ ಪಡೆಯುತ್ತಿರುವುದಾಗಿ ಹೇಳಿದೆ. ಮತ್ತೊಂದು ಕಡೆ ಮುಖ್ಯ ಕಾರ್ಯದರ್ಶಿ ಅವರು ಇಂತಹ ಭೂಮಿ ವಶಪಡಿಸಿಕೊಳ್ಳಲು ಲಿಖಿತ ಆದೇಶ ನೀಡಿದ್ದಾರೆ. ಈ ವಿಚಾರದಲ್ಲಿ ಸರ್ಕಾರದಲ್ಲೇ ಭಿನ್ನಾಭಿಪ್ರಾಯಗಳಿವೆ. ಸಿಎಂ ಅವರು ನೈಜತೆಯನ್ನು ಹೇಳದೇ ಜನರನ್ನು ಗೊಂದಲದಲ್ಲಿ ಮುಳುಗಿಸಿದ್ದಾರೆ ಎಂದು ಆರೋಪಿಸಿದರು.

ಜಮೀರ್‌ ನಾಯಕ

ವಕ್ಫ್‌ ಮಂಡಳಿ ಬಡವರ ಭೂಮಿ ಕಬಳಿಸುತ್ತಿರುವುದರಿಂದ ಎಲ್ಲರೂ ಭೀತಿಗೊಳಗಾಗಿದ್ದಾರೆ. ಸಚಿವ ಜಮೀರ್‌ ಅಹ್ಮದ್‌ ಇದರ ನೇತೃತ್ವ ವಹಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ದೂರಿದರು.

ಟಿಪ್ಪು ಸುಲ್ತಾನ್‌ ಖಡ್ಗ ಬಳಸಿ ಅಮಾಯಕರನ್ನು ಮತಾಂತರ ಮಾಡಿದ್ದ. ಅದೇ ರೀತಿ ಈಗ ಕಾಂಗ್ರೆಸ್‌ ವಕ್ಫ್‌ ಬಳಸಿಕೊಂಡು ಜನರ ಭೂಮಿ ಕಬಳಿಸುತ್ತಿದೆ. ಸರ್‌.ಎಂ.ವಿಶ್ವೇಶ್ವರಯ್ಯನವರು ಓದಿದ ಶಾಲೆಯನ್ನೂ ವಕ್ಫ್‌ ಆಸ್ತಿ ಎಂದು ಉಲ್ಲೇಖಿಸಲಾಗಿದೆ. 15 ದಿನಗಳಲ್ಲಿ ಎಲ್ಲ ಆಸ್ತಿಗಳನ್ನು ವಕ್ಫ್‌ ಮಂಡಳಿಗೆ ಬರೆಯಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಕಬಳಿಕೆ ಮಾಡಿದ ಭೂಮಿ ವಾಪಸ್‌ ಪಡೆಯಿರಿ ಎಂದು ಹೇಳಿದ್ದಾರೆಯೇ ಹೊರತು, ರೈತರ ಜಮೀನು ಪಡೆಯಲು ಹೇಳಿಲ್ಲ. ಆದರೆ ಮಂಡಳಿಯ ಸದಸ್ಯರು ವಿಧಾನಸೌಧ ನಮ್ಮದು ಎಂದು ಕೂಡ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನೀತಿ ಸ್ಪಷ್ಟ

ಬಿಜೆಪಿ ಸರ್ಕಾರವಿದ್ದಾಗ ಕೋಲಾರದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗಿತ್ತು. ಈಗ ಅದರ ಮೇಲೆ ಮಸೀದಿ ಕಟ್ಟಿಸಿ ಕಾಂಪೌಂಡ್‌ ನಿರ್ಮಿಸಲಾಗಿದೆ. ಇಂತಹ ಅಕ್ರಮದ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದೆ ಎನ್ನುವುದು ಅಶೋಕ ಆರೋಪ.

ಬಿಜೆಪಿ ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ನಾವು ಆಡಳಿತ ಪಕ್ಷದಲ್ಲಿದ್ದಾಗ ಸಮಾಧಾನ ಚಿತ್ತದಿಂದ ಎಲ್ಲವನ್ನೂ ನಿರ್ವಹಿಸುತ್ತಿದ್ದೆವು. ಆದರೆ ಈ ಸರ್ಕಾರ ಎಲ್ಲಕ್ಕೂ ಹಿಂದಿನವರೇ ಕಾರಣ ಎಂದು ಆರೋಪ ಮಾಡುತ್ತಿದೆ ಎಂದರು.

ರಾಜಕೀಯ ಪ್ರೇರಿತ

ಕಾಂಗ್ರೆಸ್‌ ಸರ್ಕಾರ ಎಲ್ಲಕ್ಕೂ ಎಸ್‌ಐಟಿ ರಚಿಸುತ್ತಿದೆ. ಸಿದ್ದರಾಮಯ್ಯನವರ ಹಗರಣದ ವಿರುದ್ಧ ಕೆಂಪಣ್ಣ ಆಯೋಗ ರಚಿಸಿದ್ದು, ಅದರ ವರದಿ ಬಂದೇ ಇಲ್ಲ. ಕೋವಿಡ್‌ ಸಮಯದಲ್ಲಿ ಬಿ.ಎಸ್‌.ಯಡಿಯೂರಪ್ಪನವರು ಅಧಿಕಾರಿಗಳು ಹೇಳಿದಂತೆ ಖರೀದಿ ಮಾಡಲು ಸೂಚಿಸಿದ್ದಾರೆ. ಇದರಲ್ಲಿ ಯಾರದ್ದೂ ತಪ್ಪಿಲ್ಲ, ಇದು ರಾಜಕೀಯ ಪ್ರೇರಿತ ಸುಳ್ಳು ಪ್ರಕರಣ. ಖರೀದಿ ಮಾಡುವ ಅಧಿಕಾರ ಮುಖ್ಯಮಂತ್ರಿಗಿಲ್ಲ. ಯಾವ ಕಂಪನಿಯಿಂದ, ಎಲ್ಲಿಂದ ಖರೀದಿ ಮಾಡಬೇಕೆಂದು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಈ ಪ್ರಕರಣ ಸರ್ಕಾರಕ್ಕೆ ತಿರುಗುಬಾಣವಾಗಲಿದೆ ಎಂದರು.

Whats_app_banner