Mandya Agriculture Fair: ಮಂಡ್ಯ ಕೃಷಿ ಮೇಳ 2024ಕ್ಕೆ ಬನ್ನಿ, ಹೃದಯಾಘಾತ ತಡೆಯುವ ಈಶಾನ್ಯ ರಾಜ್ಯಗಳ ಬಂಬಾರ ಕಡಲೆ, ಹಡಲೆ ರಾಗಿ ಸವಿ ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  Mandya Agriculture Fair: ಮಂಡ್ಯ ಕೃಷಿ ಮೇಳ 2024ಕ್ಕೆ ಬನ್ನಿ, ಹೃದಯಾಘಾತ ತಡೆಯುವ ಈಶಾನ್ಯ ರಾಜ್ಯಗಳ ಬಂಬಾರ ಕಡಲೆ, ಹಡಲೆ ರಾಗಿ ಸವಿ ನೋಡಿ

Mandya Agriculture Fair: ಮಂಡ್ಯ ಕೃಷಿ ಮೇಳ 2024ಕ್ಕೆ ಬನ್ನಿ, ಹೃದಯಾಘಾತ ತಡೆಯುವ ಈಶಾನ್ಯ ರಾಜ್ಯಗಳ ಬಂಬಾರ ಕಡಲೆ, ಹಡಲೆ ರಾಗಿ ಸವಿ ನೋಡಿ

ರೈತರ ಸುಸ್ಥಿರತೆಯನ್ನು ಕಾಪಾಡಲು ಸಮಗ್ರ ಕೃಷಿ ವಾರ್ಷಿಕ ಬೆಳೆಗಳ ಜೊತೆಗೆ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆಯನ್ನು ಮಾಡಿದಾಗ ಮಾತ್ರ ಹವಮಾನ ವೈಪರಿತ್ಯ ಉಂಟಾದರು ಕೂಡ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಮಗ್ರ ಕೃಷಿ ವಿಧಾನ ಸಹಾಯ ಮಾಡುತ್ತದೆ. ಈ ಬಗ್ಗೆ ಮಂಡ್ಯದ ಕೃಷಿ ಮೇಳದಲ್ಲಿ ರೈತರಿಗೆ ಮಾಹಿತಿ ಒದಗಿಸಲಾಗುತ್ತಿದೆ.

ಮಂಡ್ಯ ಜಿಲ್ಲೆಯ ವಿಸಿಫಾರಂನಲ್ಲಿ ನವೆಂಬರ್‌ 26ರಿಂದ ಎರಡು ದಿನಗಳ ಕೃಷಿ ಮೇಳ ನಡೆಯಲಿದೆ.
ಮಂಡ್ಯ ಜಿಲ್ಲೆಯ ವಿಸಿಫಾರಂನಲ್ಲಿ ನವೆಂಬರ್‌ 26ರಿಂದ ಎರಡು ದಿನಗಳ ಕೃಷಿ ಮೇಳ ನಡೆಯಲಿದೆ.

ಮಂಡ್ಯ: ಸಮೃದ್ಧ ಬಾಳ್ವೆಗೆ ಸಮಗ್ರ ಕೃಷಿ ಎಂಬ ಧ್ಯೇಯ ವಾಕ್ಯವನ್ನೊಳಗೊಡಂತೆ 2024 ರ ಕೃಷಿ ಮೇಳವನ್ನುಮಂಡ್ಯದ ವಿ.ಸಿ ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ನವೆಂಬರ್ 26 ಮತ್ತು 27ನೇ ರಂದು ಆಯೋಜಿಲಾಗುತ್ತಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಮಂಡ್ಯ ವಿ ಸಿ ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ವಲಯದ ರೈತರಿಗಾಗಿ ಮಂಡ್ಯದ ವಿ.ಸಿ ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ 3 ಜಿಲ್ಲೆಗಳ ಸ್ಥಳ ಆಧಾರಿತ ಕೃಷಿ ತಾಂತ್ರಿಕತೆಗಳ ಪ್ರಾತ್ಯಾಕ್ಷಿಕೆಗಳು ಮೇಳದಲ್ಲಿ ಇರಲಿವೆ.

ಹಲವು ಹೊಸ ಪರಿಚಯ

ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆಗಳಿದ್ದು, ಕೃಷಿ ವಿಶ್ವವಿದ್ಯಾನಿಲಯದಿಂದ ಬಿಡುಗಡೆ ಮಾಡಲಾಗಿರುವ ಮುಸುಕಿನ ಜೋಳದ ಅಭಿವೃದ್ಧಿ ತಳಿ, ಹಲಸಂದೆ ಕೆ ಬಿ ಸಿ -12, ಎಣ್ಣೆ ಕಾಳು ಸೂರ್ಯಕಾಂತಿ ಕೆ ವಿ ಎಸ್ ಹೆಚ್ -90 ಮತ್ತು ದೀರ್ಘವಾದ ಹಾಗೂ ಹೆಚ್ಚು ಬೆಳೆ ಕೊಡುವ ಪಿ ಎಲ್ ಬಿ - 342 ಮೇವಿನ ಬೆಳೆಯಾದ ನಾಲ್ಕು ಪ್ರಮುಖ ತಳಿಗಳನ್ನು ಅನಾವರಣಗೊಳಿಸಲಾಗುವುದು.

ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗೆ ಶಿಫಾರಸ್ಸು ಮಾಡಲಾಗಿರುವ ಭತ್ತ, ರಾಗಿ ಮತ್ತು ಸಿರಿಧಾನ್ಯ, ಮುಸುಕಿನ ಜೋಳದಲ್ಲಿ ಹೈಬ್ರಿಡ್ ತಳಿ, ಅತ್ಯುತ್ತಮ ಇಳುವರಿ ಕೊಡುವ ಹಾಗೂ ಹೆಚ್ಚು ಸಕ್ಕರೆ ಅಂಶವಿರುವ ಕಬ್ಬಿನ ತಳಿಯಾದ ಬಾಹುಬಲಿ - 517, ಮೇವಿನ ಬೆಳೆ, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು, ನೀರಾವರಿ ಪದ್ಧತಿ ಹಾಗೂ ಇನ್ನಿತರೆ ರೈತರಿಗೆ ಬೇಕಾದ ಮುಖ್ಯ ವಿಷಯಗಳ ಬಗ್ಗೆ ಪ್ರಾತ್ಯಾಕ್ಷಿಕೆಯನ್ನು ಏರ್ಪಡಿಸಲಾಗಿದೆ.

ಬಂಬಾರ ಕಡಲೆ ಮತ್ತು ಹಡಲೆ ರಾಗಿ (ಬಾಬ್ಸ್ ತಿಯರ್) ಪರಿಚಯ

ಕೃಷಿ ಮೇಳದಲ್ಲಿ ಆರೋಗ್ಯದ ದೃಷ್ಟಿಯಿಂದ ಉಪಯೋಗವಾಗುವಂತಹ ಬಂಬಾರ ಮತ್ತು ಹಡಲೆ ರಾಗಿ(ಬಾಬ್ಸ್ ತಿಯರ್) ಎಂಬ 2 ಬೆಳೆಗಳನ್ನು ಹೊಸದಾಗಿ ಪರಿಚಯ ಮಾಡುವುದರ ಜೊತೆಗೆ ಬೆಳೆಸುವ ವಿಧಾನವನ್ನು ತಿಳಿಸಲಾಗುತ್ತದೆ. ಅಡಲೆ ರಾಗಿಯಲ್ಲಿ ಅಧಿಕ ಪ್ರೊಟೀನ್ ಅಂಶ ಇದ್ದು, ಮೇಘಾಲಯ, ಮಿಜೋರಾಮ್, ಸಿಕ್ಕಿಂನಲ್ಲಿ ಈ ಬೆಳೆಯನ್ನು ಬೆಳೆದು ಗಂಜಿ ರೂಪದಲ್ಲಿ ಬಳಸಲಾಗುತ್ತದೆ. ಹಡಲೆ ರಾಗಿಯು ಮಾನವನ ಮೂಳೆಯ ಸಾಂದ್ರತೆ ಕಾಪಾಡಲು, ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಹಾಸ್ಟಿಯೋ ಪೊರೋಸಿಸ್ ರೋಗವನ್ನು ಹೋಗಲಾಡಿಸಲು ಬಹಳ ಉಪಯುಕ್ತವಾಗಿದೆ.

ಬಂಬಾರ ನೆಲೆಗಡಲೆಯು ಹಲಸಂದೆ ಬೆಳೆಯ ಜಾತಿಗೆ ಸೇರಿದ್ದಾಗಿದ್ದು, ಬಂಬಾರವು ನೆಲಗಡಲೆಯ ರೀತಿ ನೆಲದಲ್ಲಿ ಬಿಡುವುದರಿಂದ ಇದು ವಿಶೇಷವಾಗಿದೆ. ಬಂಬಾರ ನೆಲಗಡಲೆಯಲ್ಲಿ ಪೊಟ್ಯಾಶಿಯಂ ಅಂಶ ಜಾಸ್ತಿ ಇರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಹಳ ಉಪಯುಕ್ತವಾಗುತ್ತದೆ ಎನ್ನುವುದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಡಾ ಎಚ್ ಎಸ್ ಶಿವರಾಮು ಅವರ ಅಭಿಪ್ರಾಯ.

ಕೃಷಿ ಮೇಳದಲ್ಲಿ ಕೃಷಿ ಹಾಗೂ ಕೃಷಿ ಉಪಕರಣಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಮೇಳದಲ್ಲಿ ಒಟ್ಟು 200 ಮಳಿಗೆಗಳನ್ನು ಆಯೋಜಿಸಿದೆ. ಅದರಲ್ಲಿ ಬ್ಯಾಂಕ್ ವತಿಯಿಂದ ರೈತರಿಗೆ ಮಾಹಿತಿ ನೀಡಲಾಗುತ್ತದೆ. 25 ಸಂಶೋಧಕರು ವಿಶ್ವ ವಿದ್ಯಾನಿಲಯದ ವತಿಯಿಂದ ಒಟ್ಟು 20 ಮಳಿಗೆಗಳಲ್ಲಿ ರೈತರಿಗೆ ಮಾಹಿತಿ ನೀಡುತ್ತಾರೆ. ಜೊತೆಗೆ ಸ್ವಸಹಾಯ ಸಂಘ, ನರ್ಸರಿ, ಸೀಡ್ಸ್ ಕಂಪನಿ, ಸ್ವಂತ ಉದ್ಯಮ ಮಾಡುತ್ತಿರುವ ರೈತರು, ನೂತನ ಕೃಷಿ ಪರಿಕರಗಳು ಸೇರಿದಂತೆ ಅನೇಕ ಅಂಶಗಳನ್ನು ರೈತರ ಸದುಪಯೋಗಕ್ಕೆ ಆಯೋಜಿಸಲಾಗಿದೆ ಎನ್ನುತ್ತಾರೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ ವೈ ಎನ್ ಶಿವಲಿಂಗಯ್ಯ.

ಕೃಷಿಯಲ್ಲಿ ರಾಜಮುಡಿ ತಳಿ ಭತ್ತವು ಬಹಳ ಗುಣಮಟ್ಟದ ತಳಿಯಾಗಿದೆ. ಇದು ಎತ್ತರವಾಗಿ ಬೆಳೆಯುವ ಹಾಗೂ ಕೊಟ್ಟಿಗೆ ಗೊಬ್ಬರದಲ್ಲಿ ಮಾತ್ರ ಬೆಳೆಯಾಗಿತ್ತು. ರಾಜಮುಡಿ ಬೆಳೆಯು 1 ವರ್ಷಕ್ಕೆ 1 ಬೆಳೆಯನ್ನು ಬೆಳೆಯಲಾಗುತ್ತಿತ್ತು. ಆದರೆ ಈ ಬಾರಿ ನಾವು ವಾರ್ಷಿಕವಾಗಿ 2 ಬೆಳೆ ಬೆಳೆಯಲು ರಾಜಮುಡಿ ತಳಿಯಲ್ಲಿ ಗುಣಮಟ್ಟತೆಯನ್ನು ಕಾಪಾಡುವ ಜೊತೆಗೆ ಅದರ ಎತ್ತರ ಹಾಗೂ ಅವಧಿಯನ್ನು ಕಡಿಮೆಗೊಳಿಸಲಾಗಿದೆ. ಸಾವಯವ ಹಾಗೂ ರಾಸಾಯನಿಕ ಸಮಗ್ರ ಗೊಬ್ಬರದಿಂದ ಬೆಳೆಯುವ ಜೊತೆಗೆ ಹಿಂಗಾರು ಹಾಗೂ ಮುಂಗಾರು 2 ಹವಾಮಾನಕ್ಕೂ ಹೊಂದಿಕೆಯಾಗುತ್ತದೆ ಎಂದು ಸಲಹೆ ನೀಡಿದವರು ಮಂಡ್ಯ ವಿ ಸಿ ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ ಎನ್ ಶಿವಕುಮಾರ್.

ಕೃಷಿಮೇಳದ ಆಕರ್ಷಣೆಗಳು

  • ಭತ್ತ: ಸುಧಾರಿತ ತಳಿಗಳು ಹಾಗೂ ಹೈಬ್ರಿಡ್‌ಗಳ ಪ್ರಾತ್ಯಕ್ಷಿಕೆ, ವಿವಿಧ ಬೇಸಾಯ ಪದ್ಧತಿ ತಾಕುಗಳು, ರೋಗ ಹಾಗೂ ಕೀಟ ನಿಯಂತ್ರಣ ಪ್ರಾತ್ಯಕ್ಷಿಕೆ ತಾಕುಗಳು, ಡ್ರಂ ಸೀಡರ್‌ನಿಂದ ಹಾಗೂ ಯಂತ್ರಜಾಲಿತ ನಾಟಿ ಪ್ರಾತ್ಯಕ್ಷಿಕೆ, ಹೈಬ್ರಿಡ್ ಭತ್ತದ ಬೀಜೋತ್ಪಾದನಾ ತಾಕುಗಳು
  • ರಾಗಿ / ಸಿರಿಧಾನ್ಯ: ನೂತನ ರಾಗಿ ತಳಿಗಳ ಪ್ರಾತ್ಯಕ್ಷಿಕೆ, ಸುಧಾರಿತ ಸಿರಿಧಾನ್ಯ ತಳಿಗಳ ಪ್ರಾತ್ಯಕ್ಷಿಕೆ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ವಿವಿಧ ಸುಧಾರಿತ ಸಿರಿಧಾನ್ಯ ತಳಿಗಳು, ಆರೋಗ್ಯದಾಯಕ ಹೊಸ ಬೆಳೆಗಳು: ಅಡಲೆ ರಾಗಿ ಮತ್ತು ಬಂಬಾರ ನೆಲಗಡಲೆ, ಜೋಳದ ತಳಿಯ ತಾಕು
  • ಮುಸುಕಿನ ಜೋಳ: ಹೈಬ್ರಿಡ್ ತಳಿಗಳ ಪ್ರಾತ್ಯಕ್ಷಿಕೆ, ಮುಸುಕಿನ ಜೋಳದ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ.
  • ವಾಣಿಜ್ಯ ಬೆಳೆಗಳು: ಸುಧಾರಿತ ಕಬ್ಬಿನ ತಳಿಗಳು, ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆಯ ಪ್ರಾತ್ಯಕ್ಷಿಕೆ, ಕಬ್ಬು ನಾಟಿ ಹಾಗೂ ತರಗು ಪುಡಿ ಮಾಡುವ ಯಂತ್ರಗಳ ಪ್ರಾತ್ಯಕ್ಷಿಕೆ, ಅಂಗಾಂಶ ಕೃಷಿ ತಂತ್ರಜ್ಞಾನದಲ್ಲಿ ಕಬ್ಬಿನ ಸಸಿಗಳ ಉತ್ಪಾದನೆ, ಒಂಟಿ ಕಣ್ಣಿನ ಬಿತ್ತನೆ ನರ್ಸರಿ, ವಿವಿಧ ಹತ್ತಿ ತಳಿಗಳ ಪ್ರಾತ್ಯಕ್ಷಿಕೆ.
  • ಮೇವಿನ ಬೆಳೆಗಳು: ಸುಧಾರಿತ ಮೇವಿನ ಬೆಳೆಗಳ ತಾಕು, ರಸಮೇವು ಮತ್ತು ಅಜೋಲ ಉತ್ಪಾದನೆ, ಜಲ ಕೃಷಿಯಲ್ಲಿ (ಹೈಡೋಫೋನಿಕ್ಸ್) ಮೇವಿನ ಉತ್ಪಾದನೆ
  • ದ್ವಿದಳ ಧಾನ್ಯ ಹಾಗೂ ಎಣ್ಣೆ ಕಾಳು ಬೆಳೆಗಳು: ಉದ್ದು, ಅವರೆ, ಸೋಯಾ ಅವರೆ, ಹೆಸರು ಮತ್ತು ಅಲಸಂದೆ ಬೆಳೆಗಳ ಪ್ರಾತ್ಯಕ್ಷಿಕೆ.

    ಇದನ್ನೂ ಓದಿರಿ: Bangalore News: ಬೆಂಗಳೂರು ಹೆಸರಘಟ್ಟದಲ್ಲಿ ಬಗೆಬಗೆಯ ಹಣ್ಣು, ಹೂವು, ತರಕಾರಿಗಳ ವೈಭವ, ರಾಷ್ಟ್ರೀಯ ತೋಟಗಾರಿಕೆ ಮೇಳ ಹೇಗಿದೆ
  • ಸೂರ್ಯಕಾಂತಿ, ಹರಳು, ಹುಚ್ಚೆಳ್ಳು ಹಾಗೂ ನೆಲಗಡಲೆ ಬೆಳೆಗಳ ಪ್ರಾತ್ಯಕ್ಷಿಕೆ.
  • ನೀರು ನಿರ್ವಹಣಾ ತಂತ್ರಜ್ಞಾನ: ದೂರ ಸಂವೇದಿ ನೀರಾವರಿ ಪದ್ಧತಿ, ವಿವಿಧ ಬೆಳೆಗಳಲ್ಲಿ ನೀರು ಉಳಿತಾಯ ಪದ್ಧತಿ ಪ್ರಾತ್ಯಕ್ಷಿಕೆ, ಸ್ವಯಂ ಚಾಲಿತ ಹನಿ ನೀರಾವರಿ ಪದ್ಧತಿ ಪ್ರಾತ್ಯಕ್ಷಿಕೆ,
  • ಇತರೆ ತಾಂತ್ರಿಕತೆಗಳು: ಭತ್ತ, ರಾಗಿ ಹಾಗೂ ಇತರೆ ಬೆಳೆಗಳ ಬೀಜೋತ್ಪಾದನಾ ತಾಕುಗಳು, ವಿಶಿಷ್ಟ ಸೊಪ್ಪು ಮತ್ತು ತರಕಾರಿ ಬೆಳೆಗಳ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ, ಸಮಗ್ರ ಮೀನು ಸಾಕಾಣಿಕೆ ಪದ್ಧತಿಗಳು, ಎರೆ ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ, ಕೃಷಿ ಮಾಹಿತಿ ಮತ್ತು ಸಲಹಾ ಕೇಂದ್ರ - ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ, ಕೃಷಿ ಪ್ರಕಟಣೆಗಳು ಹಾಗೂ ಬಿತ್ತನೆ ಬೀಜಗಳ ಮಾರಾಟ, ಕೃಷಿ ವಸ್ತುಪ್ರದರ್ಶನಗಳು ಮೇಳದಲ್ಲಿ ಆಕರ್ಷಣೆಗಳನ್ನು ಒಳಗೊಂಡಿದೆ.

Whats_app_banner