Mangalore News: ಅರಣ್ಯ ಇಲಾಖೆ ಮಡಿಲಿಗೆ ಮರಳಲಿದೆ ಮಂಗಳೂರು ಪಿಲಿಕುಳ ಮೃಗಾಲಯ: ಮರು ಹಸ್ತಾಂತರ ಏಕೆ?
ಪ್ರಾಣಿಗಳ ಸಂರಕ್ಷಣೆ, ಆಡಳಿತಾತ್ಮಕ ಹಿತದೃಷ್ಟಿಯಿಂದ ಪಿಲಿಕುಳವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ಸುಪರ್ದಿಗೆ ಹಸ್ತಾಂತರಿಸಲು ಕ್ರಮಕೈಗೊಳ್ಳುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ಹಸ್ತಾಂತರ ಪ್ರಕ್ರಿಯೆಗಳು ನಡೆಯುತ್ತಿದ್ದು, ಶೀಘ್ರದಲ್ಲಿ ಪಿಲಿಕುಳ ಮೃಗಾಲಯ ಅರಣ್ಯ ಇಲಾಖೆಗೆ ಸುಪರ್ದಿಗೆ ಸೇರಲಿದೆ
ಮಂಗಳೂರು: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸುಪರ್ದಿಯಿಂದ ನೇರವಾಗಿ ಅರಣ್ಯ ಇಲಾಖೆಗೆ ಹೋಗಲಿದೆಯೇ?
ಈಗಾಗಲೇ ನಡೆಯುತ್ತಿರುವ ಸರ್ಕಾರಿ ಮಟ್ಟದ ಪ್ರಕ್ರಿಯೆಗಳ ಪ್ರಕಾರ ಹೌದು.
ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ಮೃಗಾಲಯ ದೇಶದ ಅತೀದೊಡ್ಡ ಹಾಗೂ ಪ್ರತಿಷ್ಠಿತ ಮೃಗಾಲಯದಲ್ಲಿ ಒಂದು. ಈ ಮೃಗಾಲಯವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಸರಕಾರಿ ಮಟ್ಟದಲ್ಲಿ ಪ್ರಕ್ರಿಯೆ ನಡೆಯುತ್ತಿದ್ದು, ಈ ಬಗ್ಗೆ ಮುಂದಿನ ಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶವನ್ನೂ ಹೊರಡಿಸಿಯಾಗಿದೆ. ಈ ಕುರಿತು ನಿರ್ದೇಶಕ ಜಯಪ್ರಕಾಶ್ ಭಂಡಾರಿ ಮಾಹಿತಿ ನೀಡಿದ್ದಾರೆ.
2004ರಲ್ಲಿ ಆಗಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಜೈವಿಕ ಉದ್ಯಾನವನವನ್ನು ಉದ್ಘಾಟಿಸಿದ್ದರು. ಕದ್ರಿಯಲ್ಲಿದ್ದ ಮಿನಿ ಝೂ ವನ್ನು ಇಲ್ಲಿಗೆ ಶಿಪ್ಟ್ ಮಾಡಲಾಯಿತು. ದೇಶದಲ್ಲಿರುವ 147 ಮೃಗಾಲಯಗಳ ಪೈಕಿ 18 ದೊಡ್ಡ ಮೃಗಾಲಯಗಳಿವೆ. ಅದರಲ್ಲಿ ಪಿಲಿಕುಳ ಕೂಡ ಒಂದು. ಈ ಮೃಗಾಲಯದಲ್ಲಿ ಸಾವಿರಾರು ಪ್ರಾಣಿಗಳಿವೆ. ಬೇರೆ ಮೃಗಾಲಯಗಳಿಂದ ಪ್ರಾಣಿಗಳ ವಿನಿಮಯ ಮಾಡಿ ತರಲಾಗಿದೆ. ಭಾರತ ದೇಶದ ಯಾವುದೇ ಮೃಗಾಲಯದಲ್ಲಿ ಇಷ್ಟು ಜಾಗ ಇರುವ ಮೃಗಾಲಯ ಇಲ್ಲ ಎಂಬ ಹೆಗ್ಗಳಿಕೆ ಇದಕ್ಕಿದೆ. ಹಾಗೆ ನೋಡಿದರೆ, ಪಿಲಿಕುಳದಲ್ಲಿ ಪ್ರಾಣಿಗಳ ಸಂತಾನೋತ್ಪತ್ತಿ ಜಾಸ್ತಿ ಎಂದು ಅಂಕಿ,ಅಂಶಗಳು ಹೇಳುತ್ತವೆ . ಪಿಲಿಕುಳ ಡೆವಲಪ್ಮೆಂಟ್ ಅಥಾರಿಟಿಯಾದ ಬಳಿಕ ಸರಕಾರದ ಅನುದಾನ ಬರುವುದಿಲ್ಲ, ದೇಣಿಗೆ ನೀಡುವವರು ಬರುವುದಿಲ್ಲ. ಇದರಿಂದ ಮೃಗಾಲಯ ನಿರ್ವಹಣೆ ಮಾಡುವುದು ಕಷ್ಟ. ಅದಕ್ಕಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ಇದನ್ನು ಅರಣ್ಯ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲು ವಿನಂತಿಸಲಾಗಿತ್ತು.
ಸವಾಲಾಗಿದ್ದ ನಿರ್ವಹಣೆ
ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದಡಿ ಪಿಲಿಕುಳ ಜೈವಿಕ ಉದ್ಯಾನವನದ ಮೃಗಾಲಯವಿದೆ. ಈ ಉದ್ಯಾನವನ 150 ಎಕರೆ ವ್ಯಾಪ್ತಿಯಲ್ಲಿದೆ. ದೇಶದಲ್ಲಿ ಅತೀ ದೊಡ್ಡ 18 ಮೃಗಾಲಯಗಳಿದ್ದು ಅದರಲ್ಲಿ ಪಿಲಿಕುಳ ಜೈವಿಕ ಉದ್ಯಾನವನ ಕೂಡ ಒಂದು. ಈ ಮೃಗಾಲಯದಲ್ಲಿ 1440 ಪ್ರಾಣಿ ಪಕ್ಷಿಗಳಿದ್ದು, ಇದರ ನಿರ್ವಹಣೆಯೇ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ದೊಡ್ಡ ಸವಾಲಾಗಿತ್ತು ಪಿಲಿಕುಳ ಮೃಗಾಲಯಕ್ಕೆ ತಿಂಗಳಿಗೆ 30 ಲಕ್ಷದಂತೆ ವರ್ಷಕ್ಕೆ 3.60 ಕೋಟಿ ರೂ. ನಿರ್ವಹಣೆ ವೆಚ್ಚವಾಗುತ್ತಿದೆ. ಟಿಕೆಟ್ ಕೌಂಟರ್ ಮೂಲಕ 2.5 ಕೋಟಿಯಿಂದ 3 ಕೋಟಿ ಸಂಗ್ರಹವಾಗುತ್ತಿದೆ. ಉಳಿದ ಮೊತ್ತವನ್ನು ಸಂಗ್ರಹಿಸುವುದೇ ಸವಾಲು.
ಮೃಗಾಲಯದ ಅಭಿವೃದ್ಧಿಗೆ ಈಗಾ ಗಲೇ ಎಂಆರ್ ಪಿಎಲ್, ಕುದುರೆಮುಖ, ರಿಲೆಯನ್ಸ್ ಸೇರಿ ದಂತೆ ನಾನಾ ಕಾರ್ಪೊರೇಟ್ ಕಂಪನಿಗಳು ಸಿಎಸ್ ಆರ್ ಅನುದಾನ ನೀಡುವ ಮೂಲಕ ಪ್ರೋತ್ಸಾಹವನ್ನು ನೀಡಿವೆ. ಇದು ಮಾತ್ರವಲ್ಲದೆ ದಾನಿಗಳು, ಸೆಲೆಬ್ರಿಟಿಗಳು ಪ್ರಾಣಿಗಳ ದತ್ತು ತೆಗೆದುಕೊಂಡು ಪ್ರೋತ್ಸಾಹವನ್ನು ನೀಡುತ್ತಿದ್ದಾರೆ.
ಆದರೂ ಮೃಗಾಲಯವನ್ನು ಪ್ರಸ್ತುತ ಸ್ಥಿತಿಯಲ್ಲಿಯೇ ಮುಂದಿನ ದಿನಗಳಲ್ಲಿ ಮುಂದು ವರಿಸುವುದು ಸವಾಲಾಗಿದೆ. ಇದನ್ನು ಅರಣ್ಯ ಇಲಾಖೆ ತನ್ನ ಸುಪರ್ದಿಗೆ ಪಡೆದುಕೊಳ್ಳುವಂತೆ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಅರಣ್ಯ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಇದಕ್ಕೆ ರಾಜ್ಯ ಅರಣ್ಯ ಇಲಾಖೆಯೂ ಸೂಕ್ತವಾಗಿ ಸ್ಪಂದಿಸಿ ಆದೇಶವನ್ನು ಹೊರಡಿಸಿದೆ.
ಹಸ್ತಾಂತರ ಬಾಕಿ
ಪಿಲಿಕುಳ ನಿಸರ್ಗಧಾಮ ಸಂಸ್ಥೆಯು 2001ರಂದು ಆರಂಭವಾಗಿದ್ದು, ಇದು ಉಪ ಅರಣ್ಯ ಸಂರಕ್ಷಣಾಕಾರಿ ಮಂಗಳೂರು ವಿಭಾಗ ಆಡಳಿತ ವ್ಯಾಪ್ತಿಯಲ್ಲಿತ್ತು, ಕ್ರಮೇಣ ಪಿಲಿಕುಳ ನಿಸರ್ಗಧಾಮ ಟ್ರಸ್ಟ್ ಸಹಕಾರ ಸಂಘಗಳ ಕಾಯಿದೆಯಡಿ ಸೊಸೈಟಿಯಾಗಿ ನೋಂದಣಿಗೊಂಡು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಮೃಗಾಲಯದ ಪರವಾನಗಿಯನ್ನು 2022 ಸೆ.27ರಂದು ನಡೆದ ಸೆಂಟ್ರಲ್ ಝೂ ಅಥಾರಿಟಿ ತಾಂತ್ರಿಕ ಸಮಿತಿ ಸಭೆಯಲ್ಲಿ ಮೂರು ವರ್ಷಗಳ ಅವಧಿಗೆ ನವೀಕರಿಸಿ ಆದೇಶ ಮಾಡಲಾಗಿತ್ತು. ಪಿಲಿಕುಳ ನಿಸರ್ಗಧಾಮದಲ್ಲಿ ದಿನನಿತ್ಯದ ಪಾಲನೆ ಪೋಷಣೆಯನ್ನು ಸಮರ್ಥವಾಗಿ ನಿರ್ವಹಿಸಲು ಸಾಕಷ್ಟು ಅನುದಾನದ ಲಭ್ಯತೆ ಇಲ್ಲದೆ ಇರುವುದರಿಂದ ಹಾಗೂ ಮಾನವ- ವನ್ಯಜೀವಿ ಸಂಘರ್ಷವನ್ನು ಸಮರ್ಪಕವಾಗಿ ಪರಿಹರಿಸಿ ಉತ್ತಮ ಸಮನ್ವಯ ಕಾಯ್ದುಕೊಳ್ಳಲು ಪಿಲಿಕುಳ ಮೃಗಾಲಯವನ್ನು ಕರ್ನಾಟಕ ಅರಣ್ಯ ಇಲಾಖೆಗೆ ವರ್ಗಾಯಿಸಲು ಸೂಚಿಸಲಾಗಿತ್ತು.
(ಹರೀಶ ಮಾಂಬಾಡಿ, ಮಂಗಳೂರು)
ವಿಭಾಗ