ಬೆಂಗಳೂರಿನಲ್ಲಿ ಖರೀದಿಸಿ ಮಂಗಳೂರಿಗೆ ಎಂಡಿಎಂಎ ಡ್ರಗ್ ಸಾಗಿಸುತ್ತಿದ್ದ ಕೇರಳದವರ ಸೆರೆ; ಐಷಾರಾಮಿ ಜೀವನ ನಡೆಸಲು ಈ ದಂಧೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಖರೀದಿಸಿ ಮಂಗಳೂರಿಗೆ ಎಂಡಿಎಂಎ ಡ್ರಗ್ ಸಾಗಿಸುತ್ತಿದ್ದ ಕೇರಳದವರ ಸೆರೆ; ಐಷಾರಾಮಿ ಜೀವನ ನಡೆಸಲು ಈ ದಂಧೆ

ಬೆಂಗಳೂರಿನಲ್ಲಿ ಖರೀದಿಸಿ ಮಂಗಳೂರಿಗೆ ಎಂಡಿಎಂಎ ಡ್ರಗ್ ಸಾಗಿಸುತ್ತಿದ್ದ ಕೇರಳದವರ ಸೆರೆ; ಐಷಾರಾಮಿ ಜೀವನ ನಡೆಸಲು ಈ ದಂಧೆ

Mangaluru Crime News: ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಘಟನೆ ಮಂಗಳೂರು ನಗರದ ಸುರತ್ಕಲ್ ಎನ್ಐಟಿಕೆ ಮುಕ್ಕದಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಖರೀದಿಸಿ ಮಂಗಳೂರಿನಲ್ಲಿ ಎಂಡಿಎಂಎ ಡ್ರಗ್ ಮಾರುತ್ತಿದ್ದ ಕೇರಳದವರ ಸೆರೆ
ಬೆಂಗಳೂರಿನಲ್ಲಿ ಖರೀದಿಸಿ ಮಂಗಳೂರಿನಲ್ಲಿ ಎಂಡಿಎಂಎ ಡ್ರಗ್ ಮಾರುತ್ತಿದ್ದ ಕೇರಳದವರ ಸೆರೆ

ಮಂಗಳೂರು: ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಸಾಗಾಟ, ಮಾರಾಟ ಮಾಡುತ್ತಿದ್ದ ಕೇರಳದ ಇಬ್ಬರು ಸೇರಿದಂತೆ ಮೂವರನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು, 42 ಗ್ರಾಂ ಎಂಡಿಎಂಎ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಶಾಜಹಾನ್ ಪಿಎಂ (32), ಮುಹಮ್ಮದ್ ನಿಶಾದ್ (27) ಮತ್ತು ಕೊಡಗಿನ ಮನ್ಸೂರು ಎಂಎಂ (27) ಬಂಧಿತರು. ಬೆಂಗಳೂರಿನಲ್ಲಿ ಎಂಡಿಎಂಎ ಅನ್ನು ಖರೀದಿಸಿ ಕಾರಿನಲ್ಲಿ ಸಾಗಾಟ, ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು‌ ಬಂಧಿಸಿದ್ದಾರೆ.

ಡ್ರಗ್ ವಶಕ್ಕೆ

ಮಂಗಳೂರು ನಗರದ ಸುರತ್ಕಲ್ ಎನ್ಐಟಿಕೆ ಮುಕ್ಕ ಪರಿಸರದಲ್ಲಿ ಅಕ್ರಮವಾಗಿ ಎಂಡಿಎಂಎ ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದರು. ಆರೋಪಿಗಳ ಜೊತೆಗೆ ಕಾರನ್ನೂ ವಶಕ್ಕೆ ಪಡೆದಿದ್ದಾರೆ.

ಕಾರಿನಲ್ಲಿದ್ದ 2.10 ಲಕ್ಷ ರೂಪಾಯಿ ಮೌಲ್ಯದ 42 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, 5 ಮೊಬೈಲ್ ಫೋನ್​ಗಳು, ಹೊಸ ಮಾರುತಿ ಬಲೆನೋ ಕಾರು, ಡಿಜಿಟಲ್ ತೂಕ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 12,18,500 ಆಗಬಹುದು ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಹೊಸ ಕಾರನ್ನು ಬಾಡಿಗೆಗೆ ಪಡೆದು ಬೆಂಗಳೂರಿನಿಂದ ಎಂಡಿಎಂಎ ಅನ್ನು ಖರೀದಿಸಿಕೊಂಡು ಕರ್ನಾಟಕ, ಕೇರಳ ರಾಜ್ಯದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು.

ಐಷಾರಾಮಿ ಜೀವನಕ್ಕೆ ಈ ದಂಧೆ

ಈ ಮಾದಕ ವಸ್ತು ಮಾರಾಟ, ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಇವರು ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಮಾದಕ ವಸ್ತುಗಳ ಮಾರಾಟ ದಂಧೆ ನಡೆಸುತ್ತಿರುವುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಶಾಜಹಾನ್ ವಿರುದ್ಧ ಈ ಹಿಂದೆ ಕಾಸರಗೋಡು ಜಿಲ್ಲೆ ಮೇಲ್ಪರಂಬ, ಬೇಕಲಂ, ವಿದ್ಯಾನಗರ, ಕುಂಬಳೆ, ಕಾಸರಗೋಡು ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ, ಸೇವನೆಗೆ ಸಂಬಂಧಪಟ್ಟಂತ 7 ಪ್ರಕರಣ ದಾಖಲಾಗಿವೆ. ಇನ್ನೋರ್ವ ಆರೋಪಿ ಮುಹಮ್ಮದ್ ನಿಶಾದ್ ವಿರುದ್ಧ ಪುತ್ತೂರು ನಗರ ಹಾಗೂ ಮಡಿಕೇರಿ ಪೊಲೀಸ್ ಠಾಣೆಯಲ್ಲಿ 2 ದ್ವಿಚಕ್ರ ವಾಹನ ಕಳವು ಪ್ರಕರಣ ದಾಖಲಾಗಿದೆ.

Whats_app_banner