ವಿವಾಹವಾಗುವುದಾಗಿ ನಂಬಿಸಿ ಪದೇ ಪದೇ ಅತ್ಯಾಚಾರ: ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ - Woman Rape Case
ಕನ್ನಡ ಸುದ್ದಿ  /  ಕರ್ನಾಟಕ  /  ವಿವಾಹವಾಗುವುದಾಗಿ ನಂಬಿಸಿ ಪದೇ ಪದೇ ಅತ್ಯಾಚಾರ: ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ - Woman Rape Case

ವಿವಾಹವಾಗುವುದಾಗಿ ನಂಬಿಸಿ ಪದೇ ಪದೇ ಅತ್ಯಾಚಾರ: ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ - Woman Rape Case

Mangaluru Crime News: ಮದುವೆಯಾಗುವುದಾಗಿ ನಂಬಿಸಿ ಪದೇ ಪದೇ ಬಲವಂತವಾಗಿ ಅತ್ಯಾಚಾರ ನಡೆಸಿದ್ದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ವಿವಾಹವಾಗುವುದಾಗಿ ನಂಬಿಸಿ ಪದೇ ಪದೇ ಅತ್ಯಾಚಾರ: ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ
ವಿವಾಹವಾಗುವುದಾಗಿ ನಂಬಿಸಿ ಪದೇ ಪದೇ ಅತ್ಯಾಚಾರ: ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

ಮಂಗಳೂರು: ವಿವಾಹವಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ ಆರೋಪಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪುತ್ತೂರು ಕಬಕದ ನಿವಾಸಿ ನಿತೇಶ್ (30) ಶಿಕ್ಷೆಗೊಳಗಾದವನು. ಈತನ ಜತೆಗೆ ಈತನ ತಂದೆ ರಾಮಣ್ಣ ಪೂಜಾರಿ (62) ಮತ್ತು ಬಾವ ನಿಖಿತಾಶ್ ಸುವರ್ಣ (40)ನಿಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ ವಿವರ

ನಿತೇಶ್ ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಆಕೆಯನ್ನು ಸುತ್ತಾಡಿಸಿ ಬಳಿಕ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಅಲ್ಲದೆ ಆಕೆಯ ಮನೆಗೂ ಹೋಗಿ ಅತ್ಯಾಚಾರವೆಸಗಿದ್ದ. ಯುವತಿ ವಿವಾಹವಾಗಲು ಕೇಳಿದಾಗ ಆತ ನಿರಾಕರಿಸಿದ್ದ. 

ಪರಸ್ಪರ ಜಾತಿ ಬೇರೆಯಾಗಿರುವುದರಿಂದ ತಂದೆ ಮತ್ತು ಬಾವ ಮದುವೆಗೆ ಒಪ್ಪುತ್ತಿಲ್ಲ ಎಂದು ಹೇಳಿದ್ದ. ನಿತೇಶ್‌ನ ತಂದೆ ಮತ್ತು ಬಾವನ ಬಳಿ ಯುವತಿ ಕೇಳಿಕೊಂಡಾಗ ಅವರು ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು.

ಈ ಬಗ್ಗೆ ಯುವತಿ 2019ರಲ್ಲಿ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಳು. ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯಕ್ ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ತೀರ್ಪು

ವಿಚಾರಣೆ ನಡೆಸಿದ ಬಳಿಕ  ಆರೋಪ ಸಾಬೀತಾಗಿದೆ ಎಂದು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್​ವಿ ಅವರು ತೀರ್ಪು ಕೊಟ್ಟಿದ್ದಾರೆ. ಅಲ್ಲದೆ, ಶಿಕ್ಷೆ ವಿಧಿಸಿ ದಂಡವನ್ನೂ ಹಾಕಿದ್ದಾರೆ.

ನಿತೇಶ್‌ಗೆ ಐಪಿಸಿ ಸೆಕ್ಷನ್ 376 (2) (ಎನ್) ಅಡಿಯಲ್ಲಿ 10 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಕಲಂ 418ರ ಅಡಿಯಲ್ಲಿ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 

ರಾಮಣ್ಣ ಪೂಜಾರಿ ಮತ್ತು ನಿಖಿತಾಶ್‌ಗೆ ಐಪಿಸಿ ಸೆಕ್ಷನ್ 504 ರಡಿ 1 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ಹಾಗೂ ಐಪಿಸಿ ಸೆಕ್ಷನ್ 506ರಡಿ 5 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಅಲ್ಲದೆ ನೊಂದ ಯುವತಿಗೆ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಪಾರಸ್ಸು ಮಾಡಿದ್ದಾರೆ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಕೆಲವು ಸಾಕ್ಷಿಗಳ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕ ಬಿ.ಶೇಖರ ಶೆಟ್ಟಿ ನಡೆಸಿದ್ದರು.

ಆನಂತರ ಸರ್ಕಾರಿ ಅಭಿಯೋಜಕ ಚೌಧರಿ ಮೋತಿಲಾಲ್ ಅವರು, ಉಳಿದ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು. ಒಟ್ಟು 16 ಮಂದಿ ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿತ್ತು. 88 ದಾಖಲೆಗಳನ್ನು ಗುರುತಿಸಲಾಗಿತ್ತು.

Whats_app_banner