Alvas Virasat 2023: ಆಳ್ವಾಸ್ ವಿರಾಸತ್ ಅದ್ಧೂರಿ ಆರಂಭ, ಡಿ 17ರವರೆಗೆ ಕಲೆ, ಸಾಂಸ್ಕೃತಿಕ ವೈಭವ, ಕಾರ್ಯಕ್ರಮಗಳ ವಿವರ ಹೀಗಿದೆ
ಮೂಡುಬಿದಿರೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವರ್ಷಂಪ್ರತಿ ನಡೆಸುವ ಆಳ್ವಾಸ್ ವಿರಾಸತ್‌ಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಇದು 29ನೇ ವರ್ಷದ ಸಾಹಿತ್ಯ, ಸಾಂಸ್ಕೃತಿಕ ಸಡಗರದ ಹಬ್ಬವಾಗಿದ್ದು ಡಿ.17ರವರೆಗೆ ನಡೆಯಲಿದೆ. ಈ ಕಲೆ, ಸಾಂಸ್ಕೃತಿಕ ವೈಭವ, ಕಾರ್ಯಕ್ರಮಗಳ ವಿವರ ಹೀಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಸ್ಕೃತಿಕ ನಗರಿ ಎಂದೇ ಗುರುತಿಸಲ್ಪಟ್ಟಿರುವ ಮೂಡುಬಿದಿರೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ನೇತೃತ್ವದಲ್ಲಿ 29ನೇ ವರ್ಷದ ಆಳ್ವಾಸ್ ವಿರಾಸತ್ 2023ಕ್ಕೆ ಅದ್ಧೂರಿ ಚಾಲನೆ ಗುರುವಾರ ದೊರಕಿದೆ. ಡಿಸೆಂಬರ್ 17ರವರೆಗೆ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಸಮೀಪದ ಕೃಷಿಸಿರಿ ವೇದಿಕೆ ಸೇರಿದಂತೆ ಆವರಣದಲ್ಲಿ ’ಸಪ್ತ ಮೇಳಗಳ ಸಂಗಮವು ಜನರಿಗೆ ಖುಷಿ ನೀಡಿದರೆ, ದೀಪಾಲಂಕಾರ, ಕಲಾಕೃತಿಗಳು, ಪುಷ್ಪ-ಫಲಗಳಿಂದ ನಂದನವನವೇ ಸೃಷ್ಟಿಯಾಗಿದೆ.
ಫಲ-ಪುಷ್ಪ- ಕಲಾಕೃತಿ: ವಿರಾಸತ್ ನಡೆಯುವ ವಿದ್ಯಾಗಿರಿ ಆವರಣದ ತುಂಬಾ ಸುಮಾರು ಸಾವಿರಕ್ಕೂ ಅಧಿಕ ಕಲಾಕೃತಿಗಳು ಕೈ ಬೀಸಿ ಕರೆಯುತ್ತಿವೆ. ವೀರಪುರುಷರು, ಪ್ರಾಣಿ-ಪಕ್ಷಿಗಳು, ಸಾಂಸ್ಕೃತಿಕ ನಾಯಕರು, ದೈವ-ದೇವರು, ಸ್ವಾತಂತ್ರ್ಯ ಹೋರಾಟಗಾರರು, ಪುಟಾಣಿಗಳ ನೆಚ್ಚಿನ ಕಾರ್ಟೂನ್ ಪಾತ್ರಗಳು, ತಾಯಿಯ ಮಮತೆ, ಬುದ್ಧನ ಧ್ಯಾನ, ನಗಿಸುವ ಮೋಟು, ಪ್ರಾದೇಶಿಕ ಕಲಾಪ್ರಕಾರಗಳ ಕಲಾಕೃತಿಗಳು ಮನ ಸೆಳೆಯುತ್ತವೆ.
ನೀವು ಹೆಜ್ಜೆ ಹಾಕಿದಂತೆ ಆನೆ, ಜಿರಾಫೆ, ಎತ್ತು, ಮಹಿಷಾಸುರ, ಯಕ್ಷಗಾನ, ಎತ್ತಿನ ಬಂಡಿ, ಚಕ್ರ, ಗಣಪತಿ, ಸಂಗೊಳ್ಳಿ ರಾಯಣ್ಣ, ಡೊಳ್ಳು ಕುಣಿತ, ಅಂಬೇಡ್ಕರ್, ವೀರಗಾಸೆ, ಹನುಮಂತ, ಕೋಟಿ ಚೆನ್ನಯ, ಲಕ್ಷ್ಮಿ ನರಸಿಂಹ, ವೀರಭದ್ರ , ಬಾಹುಬಲಿ, ವಿವೇಕಾನಂದ, ಬುದ್ಧ, ಗಾಂಧೀಜಿ, ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಆದಿಯೋಗಿ ಶಿವ, ಮೀರಾಬಾಯಿ, ಕಥಕ್ಕಳಿ ಪ್ರತಿಮೆಗಳನ್ನು ಕಾಣಬಹುದು.
ಕಾರ್ಟೂನ್ ಪಾತ್ರಧಾರಿಗಳಾದ ಚೋಟಾ ಭೀಮ್, ಚುಟ್ಕಿ, ರಾಜು, ಕಾಲಿಯಾ, ಡೊನಾಲ್ಡ್, ಡಕ್, ಮಿಕಿ, ಜಗ್ಗು ,ಮಿಕ್ಕಿ ಮೌಸ್, ಇಂದುಮತಿ, ಡೋಲು ಬೋಲು ಪುಟಾಣಿಗಳಿಗೆ ಪುಳಕ ನೀಡಲಿದ್ದಾರೆ. ವರ್ಣರಂಜಿತ ಮೀನುಗಳ ಆಕೃತಿ, ಭಾರತಾಂಬೆ, ವಿವಿಧ ಸಂಸ್ಕೃತಿಯ ಪುರುಷ -ಮಹಿಳೆಯರು, ಬಿದಿರು ಗೊಂಬೆಗಳಿವೆ. ಕುಸ್ತಿಪಟು, ಬಕ, ನವಿಲು, ಕೋಳಿ, ಹುಂಜ, ಫ್ಲೆಮಿಂಗೋ ಪಕ್ಷಿ, ಹದ್ದು, ಸರ್ಪ, ನಂದಿಗಳ ಬೊಂಬೆಗಳೂ ಇವೆ..
ವೀರಭದ್ರ, ಗೊರವಜ್ಜ, ಕಿನ್ನಾಳ ಕಲೆ, ಗೊಂಬೆಗಳು ಇತ್ಯಾದಿಗಳು ಮನೋಲ್ಲಾಸ ನೀಡುತ್ತವೆ. ಈ ಕಲಾಕೃತಿಗಳನ್ನು ಮರ, ಲೋಹ, ಸಿಮೆಂಟ್, ರಬ್ಬರ್ ಇತ್ಯಾದಿಗಳಿಂದ ರಚಿಸಲಾಗಿದೆ. ಪ್ರಮುಖ ವೇದಿಕೆಯ, ರಸ್ತೆ ಬದಿಯಲ್ಲೂ ಸಾಲಾಗಿ ನಿಂತ ಗೊಂಬೆಗಳು ಮುದ ನೀಡುತ್ತವೆ.
ಫಲಪುಷ್ಪ ಪ್ರದರ್ಶನ: ಚೆಂಡು ಹೂ, ಸದಾಪುಷ್ಪ, ಸೇವಂತಿಗೆ, ಜೀನಿಯಾ, ಗೌರಿ, ಡಾಲಿ, ಲಿಲ್ಲಿ, ಕೆಪುಳ, ಸಿಲ್ವರ್ ಡಸ್ಟ್ ಲಾವೆಂಡಾರ್, ಹನೆಸೊಪ್ಪು, ಅಂತೋರಿಯಮ್, ಮಲ್ಲಿಗೆ, ಸಲ್ವಿಯ ಸ್ಪ್ಲೆಂಡನ್ಸ್, ಸೆಲೋಶಿಯ, ಚೈನೀಸ್ ಫ್ರಿಂಜ್, ವೀಪಿಂಗ್ ಫಿಗ್, ವಿಶ್ಬೋನ್ ಸೇರಿದಂತೆ ಸುಮಾರು ಮೂರೂವರೆ ಲಕ್ಷಕ್ಕೂ ಅಧಿಕ ಪುಷ್ಪಗಳಿಂದ ಆವರಣವೇ ಅಲಂಕೃತಗೊಂಡಿದೆ. ಈ ಪೈಕಿ ಒಂದೇ ಹೂವಿನ ಹಲವು ತಳಿಗಳೂ ಇವೆ. ಇನ್ನು ವಿವಿಧ ವರ್ಣಗಳ ಕ್ರೋಟನ್ ಗಿಡ, ಬೋನ್ಸಾಯ್ ಗಿಡಗಳು, ಕಾಲಿಯಸ್ ಗಿಡಗಳಿವೆ. ಇವು ಹಳದಿ, ಕೇಸರಿ, ಬಿಳಿ, ನೇರಳೆ, ಗುಲಾಬಿ, ಕೆಂಪು ಮತ್ತಿತರ ಬಣ್ಣಗಳಿಂದ ಕೂಡಿದ್ದು, ’ವಿರಾಸತ್’ವರ್ಣಮಯಗೊಳಿಸಿವೆ. ಈ ಪೈಕಿ ಎರಡು ಲಕ್ಷಕ್ಕೂ ಅಧಿಕ ಸಸಿಗಳನ್ನು ಡಾ.ಎಂ. ಮೋಹನ ಆಳ್ವರ ಮಾರ್ಗದರ್ಶನದಲ್ಲಿ ಆವರಣದಲ್ಲಿಯೇ ಬೆಳೆಸಿದರೆ, ಸುಮಾರು 20ಕ್ಕೂ ಹೆಚ್ಚು ದೇಶಗಳ ವೈವಿಧ್ಯಮಯ ತಳಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಇಡೀ ಆವರಣದಾದ್ಯಂತ 5 ಲಕ್ಷದಷ್ಟು ಸಸ್ಯಗಳು ಕಂಗೊಳಿಸುತ್ತವೆ. ಇನ್ನು ಪುಷ್ಪಗಳಿಂದ ರಚಿಸಿದ ಆನೆ, ಕುದುರೆ, ಜಿರಾಫೆ, ನವಿಲು ಇತ್ಯಾದಿ ಕಲಾಕೃತಿಗಳಿವೆ.
ಈ ಬಾರಿಯ ಆಳ್ವಾಸ್ ವಿರಾಸತ್‌ನಲಿ ಇಷ್ಟು ಮಾತ್ರವಲ್ಲ, ಅನ್ವೇಷಣಾತ್ಮಕ ಕೃಷಿಕ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ) ಆವರಣದಲ್ಲಿ ನಡೆಯುವ 7 ಮೇಳಗಳ 750ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ’ಪ್ರದರ್ಶನ ಮತ್ತು ಮಾರಾಟ ಮೇಳವು’ ವಿಶೇಷ ಆಕರ್ಷಣೆಯಾಗಿದೆ.
ಕೃಷಿ ಮೇಳ: ದೇಶದ ಬೆನ್ನೆಲುಬಾಗಿರುವ ರೈತರು ಹಾಗೂ ಕೃಷಿ ಸಂಸ್ಕೃತಿಯನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿರುವ ಆಳ್ವಾಸ್, ವಿಶೇಷವಾಗಿ ’ಕೃಷಿ ಮೇಳ’ವನ್ನು ಆಯೋಜಿಸಿದೆ. ಕೃಷಿಯಲ್ಲಿ ಬೀಜದಿಂದ ಮಾರುಕಟ್ಟೆ ವರೆಗಿನ ಎಲ್ಲ ಘಟ್ಟಗಳ ಸಮಗ್ರ ಚಿತ್ರಣವನ್ನು ಕೃಷಿ ಮೇಳ ನೀಡಲಿದೆ. ಇದು ಕೇವಲ ಪ್ರದರ್ಶನವಲ್ಲ, ಮಾರಾಟ ಮಳಿಗೆಗಳು, ಅನುಭವ ಪ್ರಾತ್ಯಕ್ಷಿಕೆಗಳೂ ಇರಲಿವೆ. ಈ ಮೇಳವು ಕೃಷಿಕರಿಗೆ ಮೌಲ್ಯವರ್ಧನೆಗೆ ಪೂರಕವಾದರೆ, ಕೃಷಿ ಕುಟುಂಬದಿಂದ ಬಂದು ವೃತ್ತಿಗಾಗಿ ನಗರ ಸೇರಿದ ಜನರಿಗೆ ತಮ್ಮ ಬದುಕಿನ ಮೂಲಕ್ಕೆ ಕೊಂಡೊಯ್ಯಲಿದೆ. ಪುಟಾಣಿಗಳನ್ನು ಕೃಷಿಯೆಡೆಗೆ ಸೆಳೆಯಲಿದೆ.
ಈ ಬಾರಿ ಕೃಷಿ ಮೇಳದಲ್ಲಿ ಹಣ್ಣು- ತರಕಾರಿ, ಬೀಜಗಳು, ನರ್ಸರಿಗಳು, ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳು, ನೀರು- ನೆಲಗಳಲ್ಲಿ ಬೆಳೆಯುವ ವಿವಿಧ ಸಸ್ಯ ಪ್ರಭೇದಗಳು, ಕೃಷಿ ಉಪಕರಣ- ಯಂತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರಲಿವೆ. ವಿವಿಧ ಕೃಷಿ ಸಸ್ಯ ಪ್ರಭೇದಗಳ ಬೀಜ, ಅವುಗಳನ್ನು ಬೆಳೆಸಲು ಬೇಕಾದ ಯಂತ್ರ- ತಾಂತ್ರಿಕ ಸಲಕರಣೆಗಳು, ಕೃಷಿ ಉತ್ಪನ್ನಗಳು ಈ ಬಾರಿಯ ವಿಶೇಷ ಆಕರ್ಷಣೆ.
ಆಹಾರ ಮೇಳ: ಆಹಾರ ಮೇಳದಲ್ಲಿ ಸುಮಾರು150 ಕ್ಕೂ ಅಧಿಕ ಮಳಿಗೆಗಳಲ್ಲಿ ಪಾರಂಪರಿಕದಿಂದ ಹಿಡಿದು ಫಾಸ್ಟ್‌ಫುಡ್ ತನಕದ ಸಸ್ಯಾಹಾರ ಹಾಗೂ ಮಾಂಸಾಹಾರ ಇತ್ಯಾದಿಗಳ ವೈವಿಧ್ಯ ಇವೆ. ಆಹಾರದ ಪ್ರದರ್ಶನ ಮತ್ತು ಮಾರಾಟವಿದ್ದು, ಕಣ್ಣು- ನಾಲಗೆಗೆ ಮಾತ್ರವಲ್ಲ, ಹೊಟ್ಟೆಯನ್ನೂ ತುಂಬಿಸಿಕೊಳ್ಳಬಹುದು.
ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ: ಪಾರಂಪರಿಕ ಸೌಂದರ್ಯವನ್ನು ಪಂಚೇಂದ್ರೀಯಗಳ ಮೂಲಕ ಅನುಭವಿಸುವುದೂ ಜ್ಞಾನಾರ್ಜನೆ. ಇಂತಹ ಕರಕುಶಲ ಮತ್ತು ಪ್ರಾಚ್ಯವಸ್ತುಗಳ ಮೇಳವು ವಿರಾಸತ್‌ನ ಸೊಬಗು. ದೇಶದ ಈಶಾನ್ಯ, ಉತ್ತರ, ಪೂರ್ವ ಸೇರಿದಂತೆ ಅಷ್ಟದಿಕ್ಕುಗಳಲ್ಲಿನ ರಾಜ್ಯಗಳ ಸುಮಾರು 100 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗುಡಿಕೈಗಾರಿಕೆ, ಕರಕುಶಲ, ಪ್ರಾಚ್ಯವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಇರಲಿವೆ.
ಚಿತ್ರಕಲಾ ಮೇಳ: ವಿರಾಸತ್‌ನ ಮತ್ತೊಂದು ದೃಶ್ಯಸೊಬಗು ಚಿತ್ರಕಲಾ ಮೇಳ. ಸುಮಾರು 200ಕ್ಕೂ ಹೆಚ್ಚು ದೇಶ ವಿದೇಶದ ಕಲಾಕಾರರ 500ಕ್ಕೂ ಅಧಿಕ ಚಿತ್ರಕಲಾಕೃತಿಗಳು ಪ್ರದರ್ಶನಕ್ಕಿವೆ. ವಿವಿಧ ಕಲಾಪ್ರಕಾರಗಳ ಕೃತಿಗಳೂ ಮನ ಸೆಳೆಯಲಿವೆ.
ಛಾಯಾಚಿತ್ರಗಳ ಪ್ರದರ್ಶನ: ವಿರಾಸತ್ ಅಂಗವಾಗಿ ವನ್ಯಜೀವಿ ಛಾಯಾಚಿತ್ರದ ಸ್ಪರ್ಧೆಯು ಈಗಾಗಲೇ ನಡೆದಿದ್ದು, ಪ್ರದರ್ಶನಕ್ಕೆ ಬಂದ ಫೋಟೊಗಳು ಸೇರಿದಂತೆ ಸುಮಾರು 3 ಸಾವಿರಕ್ಕೂ ಅಧಿಕ ಛಾಯಚಿತ್ರಗಳ ಪ್ರದರ್ಶನವಿದೆ.
ಸ್ಕೌಟ್-ಗೈಡ್ಸ್ ಸಾಹಸಮಯ ಚಟುವಟಿಕೆ ಕೇಂದ್ರ: ಸುಮಾರು ಎರಡು ಎಕರೆ ವಿಶಾಲ ಪ್ರದೇಶದಲ್ಲಿ ಈ ಕೇಂದ್ರವು ರೂಪುಗೊಂಡಿದ್ದು, ಮಕ್ಕಳಲ್ಲಿ ಸಾಹಸಮಯ ಪ್ರವೃತ್ತಿ, ಧೈರ್ಯ ಹಾಗೂ ಸ್ಪಂದನೆಯನ್ನು ತುಂಬುವಲ್ಲಿ ಸಹಕಾರಿ. ಇದು ಮಕ್ಕಳ ಆಕರ್ಷಣೆಯ ಆಟೋಟ ತಾಣವೂ ಹೌದು. ’ಧರ್ಮ, ಜಾತಿ, ಲಿಂಗ, ಪ್ರದೇಶ, ಆರ್ಥಿಕ, ವಯೋ ಭೇದಗಳನ್ನೆಲ್ಲ ಮರೆತು ನಾವೆಲ್ಲರೂ ಒಂದೇ ಎಂಬ ವಿವಿಧತೆಯಲ್ಲಿ ಏಕತೆಯ ಸಂದೇಶ ಸಾರುವುದು ಈ ವಿರಾಸತ್ ಉದ್ದೇಶ. ಪ್ರತಿನಿತ್ಯ ಒಂದು ಲಕ್ಷಕ್ಕೂ ಹೆಚ್ಚಿನ ಜನ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ನೂರಾರು ಸದುದ್ದೇಶದ ಸಂದೇಶಗಳು ರವಾನೆಯಾಗಬೇಕು ಎಂಬುದು ನಮ್ಮ ಆಶಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ.
ಪ್ರವೇಶ ಸಂಪೂರ್ಣ ಉಚಿತ : ’ಆಳ್ವಾಸ್ ವಿರಾಸತ್‌ಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಕಾರ್ಯಕ್ರಮಗಳು ಕ್ಲಪ್ತ ಸಮಯಕ್ಕೆ ಆರಂಭಗೊಳ್ಳಲಿವೆ. ಸುಮಾರು 40,000ಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮ ಆರಂಭಗೊಳ್ಳುವ 15 ನಿಮಿಷ ಮೊದಲೇ ಆಸೀನರಾಗಬೇಕು. ವಾಹನ ಪಾರ್ಕಿಂಗ್‌ಗೆ ವಿಶಾಲ ವ್ಯವಸ್ಥೆ ಇರುತ್ತದೆ. ಕಣ್ಮನ ಸೆಳೆಯುವ ಸೊಬಗನ್ನು ಸವಿಯಬಹುದು’ ಎಂದಿದ್ದಾರೆ. ಕಾರ್ಯಕ್ರಮಗಳು:ಈ ಬಾರಿ ವಿರಾಸತ್ ಅನ್ನು ದೇಶಕ್ಕಾಗಿ ದೇಹತ್ಯಾಗಿ ಮಾಡಿದ ವೀರಯೋದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಡಿ.15ರಂದು ಸಂಜೆ 6 ರಿಂದ 8ರ ವರೆಗೆ ಚಲನಚಿತ್ರ ಖ್ಯಾತ ಹಿನ್ನೆಲೆ ಗಾಯಕ ಬೆನ್ನಿ ದಯಾಲ್ ಅವರಿಂದ ’ಗಾನ ವೈಭವ ಇರಲಿದೆ. ಡಿ.16ರಂದು ಚಲನಚಿತ್ರ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರಿಂದ ’ಭಾವ ಲಹರಿ’ ನಡೆಯಲಿದೆ. ಎರಡೂ ದಿನಗಳೂ ಸಂಜೆ 5.45ಕ್ಕೆ ದ್ವೀಪ ಪ್ರಜ್ವಲನ ಹಾಗೂ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ಇರಲಿದೆ.
ಡಿ.17ರಂದು ಸಂಜೆ 5.15ರಂದು ಆಳ್ವಾಸ್ ವಿರಾಸತ್-2023ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಬಾರಿ ಡಾ.ಮೈಸೂರು ಮಂಜುನಾಥ್, ಡಾ. ಪ್ರವೀಣ್ ಗೋಡ್ಖಿಂಡಿ ಹಾಗೂ ವಿಜಯ ಪ್ರಕಾಶ್ ಅವರಿಗೆ ಪ್ರದಾನ ಮಾಡಲಾಗುವುದು. ಬಳಿಕ ಸಂಜೆ 6.30ಕ್ಕೆ ಡಾ. ಮೈಸೂರು ಮಂಜುನಾಥ್ ಮತ್ತು ಡಾ.ಪ್ರವೀಣ್ ಗೋಡ್ಖಿಂಡಿ ಮತ್ತು ವಿಜಯ ಪ್ರಕಾಶ್ ಅವರಿಂದ ’ತಾಳ-ವಾದ್ಯ- ಸಂಗೀತ’ ನಡೆಯಲಿದೆ. ರಾತ್ರಿ 7.30ಕ್ಕೆ ಚಲನಚಿತ್ರ ಖ್ಯಾತ ಹಿನ್ನೆಲೆಗಾಯಕ ವಿಜಯಪ್ರಕಾಶ್ ಅವರಿಂದ ಸಂಗೀತ ರಸ ಸಂಜೆ ನಡೆಯಲಿದೆ. 9.30ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಇರಲಿದೆ.
- ವರದಿ: ಹರೀಶ ಮಾಂಬಾಡಿ, ಮಂಗಳೂರು
ವಿಭಾಗ