ದಕ್ಷಿಣ ಕನ್ನಡದಲ್ಲಿ ನಕ್ಸಲ್ ಚಟುವಟಿಕೆ; ಸುಳ್ಯ ಕೂಜಿಮಲೆ ಪ್ರದೇಶದಲ್ಲಿ ಕಂಡವಳು ನಕ್ಸಲ್ ಅಲ್ಲ, ರಾಜಸ್ತಾನಿ ಮಹಿಳೆ
ಕನ್ನಡ ಸುದ್ದಿ  /  ಕರ್ನಾಟಕ  /  ದಕ್ಷಿಣ ಕನ್ನಡದಲ್ಲಿ ನಕ್ಸಲ್ ಚಟುವಟಿಕೆ; ಸುಳ್ಯ ಕೂಜಿಮಲೆ ಪ್ರದೇಶದಲ್ಲಿ ಕಂಡವಳು ನಕ್ಸಲ್ ಅಲ್ಲ, ರಾಜಸ್ತಾನಿ ಮಹಿಳೆ

ದಕ್ಷಿಣ ಕನ್ನಡದಲ್ಲಿ ನಕ್ಸಲ್ ಚಟುವಟಿಕೆ; ಸುಳ್ಯ ಕೂಜಿಮಲೆ ಪ್ರದೇಶದಲ್ಲಿ ಕಂಡವಳು ನಕ್ಸಲ್ ಅಲ್ಲ, ರಾಜಸ್ತಾನಿ ಮಹಿಳೆ

ದಕ್ಷಿಣ ಕನ್ನಡದಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿರುವ ಮಾಹಿತಿ ಇದ್ದು, ನಕ್ಸಲ್‌ ನಿಗ್ರಹ ದಳ ನಿರಂತರ ಶೋಧ ಕಾರ್ಯ ನಡೆಸುತ್ತಿದೆ. ಈ ನಡುವೆ, ಸುಳ್ಯ ಕೂಜಿಮಲೆ ಪ್ರದೇಶದಲ್ಲಿ ಕಂಡವಳು ನಕ್ಸಲ್ ಅಲ್ಲ, ರಾಜಸ್ತಾನಿ ಮಹಿಳೆ ಎಂಬುದನ್ನು ಪೊಲೀಸರು ಖಾತರಿಪಡಿಸಿದ್ದಾರೆ. ನಕ್ಸಲ್ ಚಟುವಟಿಕೆಯ ಇತ್ತೀಚಿನ ವರದಿ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಸುಳ್ಯ ಕೂಜಿಮಲೆ ಪ್ರದೇಶದಲ್ಲಿ ಕಂಡವಳು ನಕ್ಸಲ್ ಅಲ್ಲ, ರಾಜಸ್ತಾನಿ ಮಹಿಳೆ  (ನಕ್ಸಲ್ ಚಟುವಟಿಕೆಯ ಸಾಂಕೇತಿಕ ಚಿತ್ರ)
ಸುಳ್ಯ ಕೂಜಿಮಲೆ ಪ್ರದೇಶದಲ್ಲಿ ಕಂಡವಳು ನಕ್ಸಲ್ ಅಲ್ಲ, ರಾಜಸ್ತಾನಿ ಮಹಿಳೆ (ನಕ್ಸಲ್ ಚಟುವಟಿಕೆಯ ಸಾಂಕೇತಿಕ ಚಿತ್ರ) (vifindia)

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ ಸಮೀಪ ಕೊಡಗು, ದಕ್ಷಿಣ ಕನ್ನಡ ಸಂಪರ್ಕದ ಕೂಜಿಮಲೆ ಎಸ್ಟೇಟ್ ಪರಿಸರದಲ್ಲಿ ಬುಧವಾರ ಮಹಿಳೆಯೊಬ್ಬಳು ಕಾಣಿಸಿಕೊಂಡು ಅವಳು ನಕ್ಸಲ್ ಎಂಬ ರೀತಿಯಲ್ಲಿ ಸುದ್ದಿಯಾಗಿತ್ತು. ಇದೀಗ ಖುದ್ದು ಕೊಡಗು ಪೊಲೀಸರು ಅವಳು ನಕ್ಸಲ್ ಅಲ್ಲ, ರಾಜಸ್ತಾನದ ಮಹಿಳೆ ಎಂದು ಖಚಿತಪಡಿಸಿದ್ದಾರೆ.

ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶನಿವಾರ ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ. ಶನಿವಾರ ಸಂಜೆ 6 ಗಂಟೆ ವೇಳೆ ಈ ಭಾಗದಲ್ಲಿ ಸಣ್ಣದಾಗಿ ಮಳೆ ಸುರಿಯುತ್ತಿತ್ತು. ಈ ಸಂದರ್ಭ ಶಂಕಿತರ ತಂಡ ಐನೆಕಿದು ಗ್ರಾಮದ ಅರಣ್ಯದಂಚಿನ ತೋಟದ ಮೂಲಕ ಆಗಮಿಸಿತ್ತು. 

ತೋಟದಲ್ಲಿದ್ದ ಕೆಲಸದವರ ಶೆಡ್‌ಗೆ ಭೇಟಿ ನೀಡಿದ ವೇಳೆ ಕೆಲಸದಾಳು ಶೆಡ್‌ನ‌ ಬಾಗಿಲು ಹಾಕಿದ್ದು, ಬಳಿಕ ಶಂಕಿತರ ತಂಡ ಅಲ್ಲೇ ಪಕ್ಕದಲ್ಲಿರುವ ತೋಟದ ಮಾಲೀಕರ ಮನೆಗೆ ತೆರಳಿ ಒಳಹೊಕ್ಕಿತ್ತು. ಮನೆಯವರ ಜತೆ ಸುಮಾರು ಒಂದು ತಾಸಿಗೂ ಅಧಿಕ ಕಾಲ ಮಾತುಕತೆ ನಡೆಸಿದೆ ಎಂದು ವರದಿಯಾಗಿತ್ತು.

ವಿಶೇಷ ಎಂದರೆ ನಕ್ಸಲ್‌ ನಿಗ್ರಹ ದಳ ನಿರಂತರ ಶೋಧ ಕಾರ್ಯ ನಡೆಸುತ್ತಿದ್ದರೂ ಇದೇ ಪರಿಸರದಲ್ಲಿ ಸುತ್ತಾಡುತ್ತಿದ್ದ ನಕ್ಸಲರು ಎಎನ್‌ಎಫ್ ತಂಡಕ್ಕೆ ಕಾಣಿಸಿಲ್ಲ. ಸೋಮವಾರಪೇಟೆ ಮತ್ತು ಇನ್ನೊಂದು ದಾರಿಯಾಗಿ ಗಾಳಿಬೀಡು, ಸಂಪಾಜೆ ಮೂಲಕ ಕೇರಳಕ್ಕೆ ಅರಣ್ಯದೊಳಗೆ ಸಂಪರ್ಕ ಸಾಧಿಸಲು ಸಾಧ್ಯವಿರುವ ಹಿನ್ನೆಲೆಯಲ್ಲಿ ಕೊಡಗು, ದಕ್ಷಿಣ ಕನ್ನಡ ಗಡಿಯಲ್ಲಿ ಪೊಲೀಸರು ಕಣ್ಣಿಗೆ ಎಣ್ಣೆ ಹಾಕಿ ಕಾಯುತ್ತಿದ್ದಾರೆ.

ಕೂಜಿಮಲೆ ಎಸ್ಟೇಟ್ ಸಮೀಪ ಅಪರಿಚಿತ ಮಹಿಳೆ; ಯಾಕೆ ಸಂಶಯ ಹುಟ್ಟಿತು?

ಕೂಜಿಮಲೆ, ಐನೆಕಿದು ಪರಿಸರದಲ್ಲಿ ಕೆಲ ದಿನಗಳಿಂದ ನಕ್ಸಲ್ ಸಂಚಾರ ಇರುವುದು ವರದಿಯಾಗುತ್ತಿದೆ. ಎರಡು ಬಾರಿ ಸಾರ್ವಜನಿಕರಿಗೆ ಅನುಮಾನಾಸ್ಪದವಾಗಿ ಬಂದೂಕುಧಾರಿಗಳು ಎನ್ನಲಾದ ಗುಂಪೊಂದು ಕಾಣಸಿಕ್ಕಿದೆ. ಅಂಗಡಿಗೆ, ಮನೆಗೆ ಭೇಟಿ ನೀಡಿದ ತಂಡಗಳಲ್ಲಿ ಮಹಿಳೆಯರು ಇದ್ದರು. 

ಬಳಿಕ ನಕ್ಸಲ್ ನಿಗ್ರಹ ಪಡೆ ಈ ಭಾಗದಲ್ಲಿ ತೀವ್ರ ಶೋಧ ನಡೆಸುತ್ತಿದ್ದರೂ ಅವರಿಗೆ ನಕ್ಸಲರು ಕಾಣಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇನ್ನಿಲ್ಲದಂತೆ ತೀವ್ರ ಶೋಧ ಕಾರ್ಯವನ್ನು ಎಎನ್ ಎಫ್ ನಡೆಸುತ್ತಿದೆ. ಈ ಸಂದರ್ಭ ಬುಧವಾರ ಕೂಜಿಮಲೆ ಎಸ್ಟೇಟ್ ಪರಿಸರದಲ್ಲಿ ಅಪರಿಚಿತ ಮಹಿಳೆ ಕಾಣಿಸಿಕೊಂಡಿದ್ದಳು. 

ಸಂಶಯಗೊಂಡ ಸ್ಥಳೀಯರು, ಪೊಲೀಸರು, ಎಎನ್ ಎಫ್ ಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಎಎನ್ಎಫ್ ತಂಡ, ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಕಾರ್ಯಾಚರಣೆಯಲ್ಲಿ ಅಪರಿಚಿತ ಮಹಿಳೆ ಪತ್ತೆಯಾದಳು. ಈಕೆಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಬಳಿಕ ಆಕೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಆಶ್ರಮಕ್ಕೆ ಕಳಿಸಿಕೊಡಲಾಗುತ್ತದೆ ಎಂದು ಕೊಡಗು ಎಸ್ಪಿ ತಿಳಿಸಿದ್ದಾರೆ. 

ತೀವ್ರ ವಿಚಾರಣೆ ಬಳಿಕ ಈಕೆ ರಾಜಸ್ತಾನದಿಂದ ಯಾವುದೋ ಕೆಲಸಕ್ಕೆಂದು ಬಂದಿದ್ದ ಮಹಿಳೆಯಾಗಿದ್ದು, ಈಕೆ ನಕ್ಸಲ್ ಅಲ್ಲ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ, ಸುಳ್ಯ, ಕೊಡಗು ಭಾಗದಲ್ಲಿ ನಕ್ಸಲ್ ಚಟುವಟಿಕೆ ವಿಚಾರ ಗಂಭೀರವಾಗಿ ಗಮನಸೆಳೆದಿದೆ. ಇತ್ತೀಚಿನ ದಿನಗಳಲ್ಲಿ ಅವರ ಚಟುವಟಿಕೆ ತೀವ್ರಗೊಂಡಿದೆ ಎಂಬ ಮಾತು ಕೇಳತೊಡಗಿದೆ. 

ಸಂಪಾಜೆ ಮತ್ತು ಕೂಜಿಮಲೆ ಅರಣ್ಯ ಪ್ರದೇಶದಲ್ಲಿ ಅಪರಿಚಿತರ ಓಡಾಟ ಹೆಚ್ಚಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಇದು ಖಚಿತವಾಗಿರುವ ಕಾರಣವೇ ಈ ಭಾಗದಲ್ಲಿ ಶೋಧ ಕಾರ್ಯವನ್ನು ತೀವ್ರಗೊಳಿಸಿರುವುದಾಗಿ ಎಎನ್‌ಎಫ್ ಮೂಲಗಳು ಹೇಳಿವೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Whats_app_banner