Mysore Jambu Savari: ಮೈಸೂರು ದಸರಾ ಜಂಬೂಸವಾರಿ ಎಷ್ಟು ಗಂಟೆಗೆ ಶುರುವಾಗುತ್ತೆ? ಸಿದ್ಧತೆಗಳು ಹೇಗಿವೆ ನೋಡಿ
ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ ರೀತಿಯ ಸಿದ್ಧತೆಗಳು ಸಾಗುತ್ತಿವೆ. ಅಭಿಮನ್ಯು ನೇತೃತ್ವದ ಗಜಪಡೆಯಿಂದ ಸಂಜೆ ಎಷ್ಟು ಗಂಟೆಗೆ ಜಂಬೂಸವಾರಿ ಮೆರವಣಿಗೆ ಆರಂಭವಾಗುತ್ತೆ, ಸಂಜೆಯವರಿಗೆ ಏನೆಲ್ಲಾ ಸಿದ್ಧತೆಗಳು ನಡೆಯುತ್ತವೆ ಅನ್ನೋದರ ವಿವರ ಇಲ್ಲಿದೆ.
ಮೈಸೂರು ಜಂಬೂಸವಾರಿ: ವಿಶ್ವವಿಖ್ಯಾತ ಮೈಸೂರು ದಸರಾ ಅದ್ಧೂರಿಯಾಗಿ ನಡೆಯುತ್ತಿದ್ದು, ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಕೂಡ ಸಕಲ ರೀತಿಯಲ್ಲಿ ಸಿದ್ಧವಾಗಿ ನಿಂತಿವೆ. ಅಭಿಮನ್ಯು ಆನೆ 5ನೇ ಬಾರಿ ಅಂಬಾರಿ ಹೊರಲಿದೆ. ಕೆಲವೇ ಗಂಟೆಗಳಲ್ಲಿ ನಾಡದೇವತೆ ಚಾಮುಂಡಿ ದೇವಿಯ ಉತ್ಸವ ಮೂರ್ತಿಯೊಂದಿಗೆ ಚಿನ್ನದ ಅಂಬಾರಿಯನ್ನು ಹೊತ್ತು ಜಂಬೂಸವಾರಿಯ ಮೆರವಣಿಗೆಯಲ್ಲಿ ಸಾಗಲಿದ್ದಾನೆ. ಅಭಿಮನ್ಯುಗೆ ನಿಶಾನೆ, ಧನಂಜಯ, ಗೋಪಿ, ಲಕ್ಷ್ಮಿ, ವರಲಕ್ಷ್ಮಿ ಸೇರಿ ಒಟ್ಟು 9 ಆನೆಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಜಂಬೂಸವಾರಿ ಎಷ್ಟು ಗಂಟೆಗೆ ಆರಂಭವಾಗಲಿದೆ. ಅದಕ್ಕೂ ಮುನ್ನ ಏನೆಲ್ಲಾ ಪ್ರಕ್ರಿಯೆಗಳು ನಡೆಯುತ್ತವೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
ಇಂದು (ಅಕ್ಟೋಬರ್ 12, ಶನಿವಾರ) ಬೆಳಿಗ್ಗೆ 10:15 ಕ್ಕೆ ಅರಮನೆಯಲ್ಲಿ ಉತ್ತರ ಪೂಜೆ ಆರಂಭವಾಯಿತು. ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳು ಸವಾರಿ ತೊಟ್ಟಿಗೆ ಆಗಮಿಸಿದ ನಂತರ ಉತ್ತರ ಪೂಜೆಯನ್ನು ಪೂರ್ಣಗೊಳಿಸಲಾಯಿತು. 10:45 ರಿಂದ 11 ಗಂಟೆ ಒಳಗೆ ಸವಾರಿ ತೊಟ್ಟಿಯಲ್ಲಿ ಜಟ್ಟಿ ಕಾಳಗ ನಡೆಯಿತು. ಜಟ್ಟಿಕಾಳಗ ಮುಗಿದ ಬಳಿಕ, 11:20 ರಿಂದ 11:45 ರ ವರೆಗೆ ಅರಮನೆ ಆವರಣದ ಭುವನೇಶ್ವರಿ ದೇವಸ್ಥಾನಕ್ಕೆ ವಿಜಯಯಾತ್ರೆ ಹೊರಟು ಬನ್ನಿಪೂಜೆ ಬಳಿಕ ಸ್ವಸ್ಥಾನಕ್ಕೆ ವಾಪಸ್ ಬರಲಾಯಿತು. ಬಳಿಕ ಯದುವೀರ್ ಕಂಕಣ ವಿಸರ್ಜನೆ ಮಾಡಿದರು. ಅರಮನೆ ಆವರಣಕ್ಕೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ಬೆಳ್ಳಿ ರಥದಲ್ಲಿ ತರಲಾಗಿದೆ. ಅರಮನೆಯಲ್ಲಿ ವೇದಿಗೆ ಪೂಜೆ ಸಲ್ಲಿಸಲಾಯಿತು. ಪೂಜೆ ಸಲ್ಲಿಸಿ ತಾಯಿ ಚಾಮುಂಡೇಶ್ವರಿ ಮೂರ್ತಿಯನ್ನು ಅರ್ಚಕರು ಒಳಗಡೆ ತೆಗೆದುಕೊಂಡು ಹೋಗಿದ್ದಾರೆ.
ಮಧ್ಯಾಹ್ನ 1.41ರಿಂದ 2.10ರ ನಡುವೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ. ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿಯ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ. ಜಂಬೂಸವಾರಿ ಹಿನ್ನೆಲೆಯಲ್ಲಿ ಅರಮನೆ ಅಂಗಳದಲ್ಲಿ 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಅಭಿಮನ್ಯು ನೇತೃತ್ವದ ಗಜೆ ಪಡೆಗೆ ಬೆಳಗ್ಗೆಯಿಂದಲೇ ವಿವಿಧ ಬಣ್ಣಗಳಿಂದ ಅಲಂಕಾರ ಮಾಡಲಾಯಿತು. ಅರಮನೆ ಆವರಣದ ನೀರಿನ ತೊಟ್ಟಿ ಬಳಿ ಸ್ನಾನ ಮಾಡಿಸಿ ಸಿಂಗಾರದ ಕಾರ್ಯ ಶುರುವಾಯಿತು. ಹುಣಸೂರು ಮೂಲದ ಒಟ್ಟು 8 ಕಲಾವಿದರು ದಸರಾ ಆನೆಗಳಿಗೆ ವಿಶೇಷ ಬಣ್ಣದ ಅಲಂಕಾರ ಮಾಡಿದರು. ಆನೆಗಳ ಕಿವಿ ಮೇಲೆ ಶಂಖ, ಚಕ್ರ, ಸೊಂಡಿಲ ಮೇಲೆ ಗಂಡಭೇರುಂಡ, ಹೂವು, ಎಲೆ, ಬಳ್ಳಿ, ದಂತದ ಹಿಂಭಾಗ ಗಿಳಿ, ಎಲೆ, ಕೆನ್ನೆಯ ಮೇಲೆ ಹೂವು, ಬಳ್ಳಿ, ಮೊಗ್ಗು, ಎಲೆ, ಕಾಲುಗಳ ಮೇಲೆ ಪಕ್ಷಿ, ಎಲೆ, ಹೂವು, ಮೊಗ್ಗು, ಬಳ್ಳಿ, ಆನೆಗಳ ಬಾಲದ ಗಾತ್ರಕ್ಕೆ ತಕ್ಕಂತೆ ಪಕ್ಷಿಚಿತ್ರ ಹಾಗೂ ಹೂವು ಬಳ್ಳಿಗಳ ಅಲಂಕಾರ ಮಾಡಿದರು. ಸದ್ಯ ಗಜಪಡೆ ಸಿಂಗಾರಗೊಂಡಿದ್ದರೆ, ಮೈಸೂರಿನ ಅರಮನೆಯಲ್ಲೂ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿವೆ. ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿಯ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮ್ಯಯ ಅವರು ಪುಷ್ಪಾರ್ಚನೆ ಮೂಲಕ ಚಾಲನೆ ನೀಡಲಿದ್ದಾರೆ.