Mysore News ಮೈಸೂರು ಡಿಸಿ ಕಚೇರಿ ಸ್ಥಳಾಂತರಕ್ಕೆ ಬೇಕಾಯ್ತು ಐದು ವರ್ಷ: ಸಿದ್ದರಾಮಯ್ಯ ಸೂಚನೆಗೆ ಎಚ್ಚೆತ ಜಿಲ್ಲಾಡಳಿತ
ಐದು ವರ್ಷದ ಹಿಂದೆಯೇ ಕಟ್ಟಡ ಪೂರ್ಣಗೊಂಡಿದ್ದರೂ ದೂರ ಎನ್ನುವ ಕಾರಣವೊಡ್ಡಿ ಮೈಸೂರು ನೂತನ ಡಿಸಿ ಕಚೇರಿ ಬಳಸುತ್ತಿರಲಿಲ್ಲ. ಸಿದ್ದರಾಮಯ್ಯ ಅವರು ಮೈಸೂರಿಗೆ ಬರುತ್ತಿರುವ ಮುನ್ನಾ ದಿನವೇ ಕಟ್ಟಡ ತರಾತುರಿಯಲ್ಲಿ ಸ್ಥಳಾಂತರಗೊಂಡಿದೆ. ಗುರುವಾರದಿಂದಲೇ ಹೊಸ ಕಟ್ಟಡದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕಾರ್ಯಾರಂಭ ಮಾಡಿದ್ದಾರೆ.
ಮೈಸೂರು: ಮೈಸೂರಿನಲ್ಲಿ ಹಿಂದೆ ಸಿದ್ದರಾಮಯ್ಯ ಅವರಿದ್ದಾಗಲೇ ನಿರ್ಮಾಣಗೊಂಡು ಉದ್ಘಾಟನೆಗೊಂಡಿದ್ದ ಜಿಲ್ಲಾಧಿಕಾರಿಗಳ ಹೊಸ ಕಚೇರಿ ಸ್ಥಳಾಂತರಕ್ಕೂ ಅವರೇ ಸಿಎಂ ಆಗಿ ಬರಬೇಕಾಯಿತು !
ಐದು ವರ್ಷದ ಹಿಂದೆಯೇ ಕಟ್ಟಡ ಪೂರ್ಣಗೊಂಡಿದ್ದರೂ ದೂರ ಎನ್ನುವ ಕಾರಣವೊಡ್ಡಿ ಬಳಸುತ್ತಿರಲಿಲ್ಲ. ಸಿದ್ದರಾಮಯ್ಯ ಅವರು ಮೈಸೂರಿಗೆ ಬರುತ್ತಿರುವ ಮುನ್ನಾ ದಿನವೇ ಕಟ್ಟಡ ತರಾತುರಿಯಲ್ಲಿ ಸ್ಥಳಾಂತರಗೊಂಡಿದೆ. ಗುರುವಾರದಿಂದಲೇ ಹೊಸ ಕಟ್ಟಡದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕಾರ್ಯಾರಂಭ ಮಾಡಿದ್ದಾರೆ. ಈ ಮೂಲಕ ನಗರದ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಹಲವು ದಶಕಗಳಿಂದ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡವಾಗಿದ್ದ ಹಠಾರ ಕಚೇರಿ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆಯ ವಸ್ತುಸಂಗ್ರಹಾಲಯವಾಗಿ ಮಾರ್ಪಡಲಿದೆ.
ಈ ಹಿಂದೆ ರಾಜ್ಯದಲ್ಲಿದ್ದ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ತಿ.ನರಸೀಪುರ ಮುಖ್ಯ ರಸ್ತೆಯಲ್ಲಿನ ಸಿದ್ದಾರ್ಥನಗರ ಬಡಾವಣೆಯಲ್ಲಿ 15 ಎಕರೆ ವಿಶಾಲ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಆಗಿನ ಮುಖ್ಯಮಂತ್ರಿಯೂ ಆಗಿದ್ದ ಸಿದ್ದರಾಮಯ್ಯ ಅವರು 2016 ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಎರಡು ಅಂತಸ್ತಿನಲ್ಲಿರುವ ಈ ಕಟ್ಟಡ 5 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿದೆ. ಮೊದಲ ಅಂತಸ್ತಿಗೆ 56 ಕೋಟಿ ರೂ. ಹಾಗೂ 2ನೇ ಅಂತಸ್ತು ನಿರ್ಮಾಣಕ್ಕೆ 52 ಕೋಟಿ ರೂ. ಸೇರಿದಂತೆ ಒಟ್ಟು 108 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ಕಟ್ಟಡವನ್ನು 2018 ರ ಹೊತ್ತಿಗೆ ನಿರ್ಮಾಣ ಮಾಡಲಾಗಿತ್ತು. ಬಳಿಕ ಅದೇ ವರ್ಷದ ಮಾರ್ಚ್‌ನಲ್ಲಿ ಸಿದ್ದರಾಮಯ್ಯವರೆ ನೂತನ ಕಟ್ಟಡವನ್ನು ಉದ್ಘಾಟಿಸಿದ್ದರಾದರೂ, ತಮ್ಮ ಸರ್ಕಾರ ಹೋಗಿ ಸಮ್ಮಿಶ್ರ ಸರ್ಕಾರ, ಬಳಿಕ ಬಿಜೆಪಿ ಸರ್ಕಾರ ಬಂದರೂ ಜಿಲ್ಲಾಧಿಕಾರಿಗಳ ಕಚೇರಿ ಸ್ಥಳಾಂತರವಾಗಿರಲಿಲ್ಲ.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಡಿಸಿ ಕಚೇರಿಯ ಹೊಸ ಕಟ್ಟಡವನ್ನು 2018ರಲ್ಲಿ ನಿರ್ಮಿಸಲಾಗಿತ್ತು. ಬಹಳ ದಿನಗಳ ಹಿಂದೆಯೇ ಇಲ್ಲಿಗೆ ಕಚೇರಿ ಸ್ಥಳಾಂತರವಾಗಬೇಕಿತ್ತು. ಚುನಾವಣೆ ಹಿನ್ನೆಲೆ ಕೆಲಸದ ಒತ್ತಡದಲ್ಲಿ ಸ್ಥಳಾಂತರಿಸಲು ಸಾಧ್ಯವಾಗಿರಲಿಲ್ಲ. ಮುಖ್ಯಮಂತ್ರಿಗಳ ಆದೇಶ ಹಿನ್ನೆಲೆ ಗುರುವಾರ ಅಧಿಕೃತವಾಗಿ ಕಚೇರಿ ಸ್ಥಳಾಂತರಿಸಲಾಗಿದೆ ಎಂದರು.
ಹಳೆ ಡಿಸಿ ಕಚೇರಿ ಇನ್ನು ಮುಂದೆ ವಸ್ತುಸಂಗ್ರಹಾಲಯ
ಹಲವು ದಶಕಗಳಿಂದ ಮೈಸೂರಿನ ಡಿಸಿ ಕಚೇರಿಯ ಕಟ್ಟಡವಾಗಿದ್ದ ಈ ಪಾರಂಪರಿಕ ಕಟ್ಟಡ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆಯ ವಸ್ತು ಸಂಗ್ರಹಾಲಯವಾಗಿ ಮಾರ್ಪಡಲಿದೆ.
128 ವರ್ಷ ಹಳೆಯದಾಗಿರುವ ಈ ಪಾರಂಪರಿಕ ಕಟ್ಟಡವನ್ನು ಕೃಷ್ಣರಾಜ ಬುಲೇವಾರ್ಡ್ ಅವರು 1895ರಲ್ಲಿ ನಿರ್ಮಾಣ ಮಾಡಿದ್ದರು. ಅಂದಿನ ಮೈಸೂರು ಅರಸರಾಗಿದ್ದ 10ನೇ ಚಾಮರಾಜ ಒಡೆಯರ್ ಅವರು ಕಟ್ಟಡದಲ್ಲಿ ಪ್ರಜಾಪ್ರತಿನಿಧಿಗಳ ಸ`É ನಡೆಸಲು ಬಳಸುತ್ತಿದ್ದರು. ನಂತರ ಈ ಕಟ್ಟಡವನ್ನು ಮೈಸೂರು ಪ್ರಾಂತ್ಯದ ಅಂದಿನ ಅರಸರ ಮುಖ್ಯ ಆಯುಕ್ತರ ಕಚೇರಿಯಾಗಿ ಬಳಕೆ ಮಾಡಿಕೊಳ್ಳಲಾಯಿತು. ಬಳಿಕ ಸ್ವತಂತ್ರ್ಯಾನಂತದಲ್ಲಿ ವಿಭಾಗಾಧಿಕಾರಿಗಳ ಕಚೇರಿ ಈ ಕಟ್ಟಡದಲ್ಲಿತ್ತು. ನಂತರ ಜಿಲ್ಲಾಧಿಕಾರಿಗಳ ಕಚೇರಿಯಾಗಿ ಮಾರ್ಪಟ್ಟಿತು.
(ವರದಿ: ಧಾತ್ರಿ ಭಾರದ್ವಾಜ್)
ವಿಭಾಗ