ಮುಡಾ ಪ್ರಕರಣದಲ್ಲಿ ನನ್ನ ಪತಿಗೆ ಕೆಟ್ಟ ಹೆಸರು ಬರುವುದು ಬೇಡ, ತನಿಖೆಗೆ ಒಳಪಡಿಸಿ, ರಾಜಕೀಯ ದ್ವೇಷಕ್ಕೆ ಬಳಸಬೇಡಿ: ಪಾರ್ವತಿ ಸಿದ್ದರಾಮಯ್ಯ ಪತ್ರ-mysore muda scam cm siddaramaiah wife parvati writes 2 page letter public developments site issue kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮುಡಾ ಪ್ರಕರಣದಲ್ಲಿ ನನ್ನ ಪತಿಗೆ ಕೆಟ್ಟ ಹೆಸರು ಬರುವುದು ಬೇಡ, ತನಿಖೆಗೆ ಒಳಪಡಿಸಿ, ರಾಜಕೀಯ ದ್ವೇಷಕ್ಕೆ ಬಳಸಬೇಡಿ: ಪಾರ್ವತಿ ಸಿದ್ದರಾಮಯ್ಯ ಪತ್ರ

ಮುಡಾ ಪ್ರಕರಣದಲ್ಲಿ ನನ್ನ ಪತಿಗೆ ಕೆಟ್ಟ ಹೆಸರು ಬರುವುದು ಬೇಡ, ತನಿಖೆಗೆ ಒಳಪಡಿಸಿ, ರಾಜಕೀಯ ದ್ವೇಷಕ್ಕೆ ಬಳಸಬೇಡಿ: ಪಾರ್ವತಿ ಸಿದ್ದರಾಮಯ್ಯ ಪತ್ರ

ಮುಡಾ ನಿವೇಶನ ವಿವಾದ ತೀವ್ರ ಸ್ವರೂಪಗೊಳ್ಳುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ನಿವೇಶನ ವಾಪಾಸ್‌ ನೀಡುವ ಜತೆಗೆ ಎರಡು ಪುಟಗಳ ಪತ್ರವನ್ನೂ ಬರೆದಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ನಿವೇಶನ ವಿವಾದದ ಕುರಿತು ವಿಸ್ತೃತವಾಗಿಯೇ ಪತ್ರ ಬರೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ನಿವೇಶನ ವಿವಾದದ ಕುರಿತು ವಿಸ್ತೃತವಾಗಿಯೇ ಪತ್ರ ಬರೆದಿದ್ದಾರೆ.

ಬೆಂಗಳೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಪಡೆದಿರುವ ಬದಲಿ ನಿವೇಶನಗಳ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ನಿವೇಶನ ವಾಪಾಸ್‌ ನೀಡುವ ನಿರ್ಧಾರವನ್ನು ಪ್ರಕಟಿಸಿರುವ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಎರಡು ಪುಟಗಳ ವಿವರಣೆಯ ಪತ್ರವನ್ನು ಬರೆದಿದ್ದಾರೆ.ಅದನ್ನು ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಕಚೇರಿಯಿಂದಲೇ ಬಿಡುಗಡೆ ಮಾಡಲಾಗಿದೆ. ನಿವೇಶನ ಪಡೆದ ಕಾರಣ, ಆನಂತರದ ಬೆಳವಣಿಗೆಗಳು, ರಾಜಕೀಯ ಸಹಿತ ಹಲವು ವಿಚಾರಗಳನ್ನು ಪಾರ್ವತಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇಡೀ ಪ್ರಕರಣದ ತನಿಖೆಯನ್ನು ನಡೆಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಇದನ್ನು ಸಿಎಂ ಸಿದ್ದರಾಮಯ್ಯ ಅವರ ಎಕ್ಸ್‌ ಅಕೌಂಟ್‌ನಿಂದಲೂ ಮಧ್ಯರಾತ್ರಿ ಪೋಸ್ಟ್‌ ಮಾಡಲಾಗಿದೆ.

ಪತ್ರದ ವಿವರಣೆ ಹೀಗಿದೆ

ನನ್ನ ಪತಿಯವರಾದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ ರು ತಮ್ಮ ನಲವತ್ತು ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಸಣ್ಣ ಕಳಂಕವೂ ಅಂಟಿಕೊಳ್ಳದಂತ ನೈತಿಕತೆಯನ್ನು ವೃತದಂತೆ ಪಾಲಿಸಿಕೊಂಡು ಬಂದವರು. ರಾಜಕೀಯವೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡು ಅವರಿಗೆ ಮುಜುಗರ ಉಂಟು ಮಾಡಬಾರದು ಎಂಬ ನಿರ್ಧಾರಕ್ಕೆ ಬದ್ದಳಾಗಿ ಬದುಕಿದವಳು.

ನಾನೆಂದೂ ಮನೆ, ಆಸ್ತಿ, ಚಿನ್ನ, ಸಂಪತ್ತನ್ನು ಬಯಸಿದವಳಲ್ಲ. ಯಾವುದೇ ಕಾರಣಕ್ಕೂ ನನ್ನಿಂದ ಅವರ ರಾಜಕೀಯ ಜೀವನಕ್ಕೆ ಒಂದು ಸಣ್ಣ ಹನಿಯಷ್ಟೂ ಕಳಂಕ ತಟ್ಟಬಾರದೆಂದು ಎಚ್ಚರಿಕೆಯಿಂದ ನಡೆದುಕೊಂಡವಳು. ನನ್ನ ಪತಿಗೆ ರಾಜ್ಯದ ಜನತೆ ಹರಸುತ್ತಾ ಬಂದ ಪ್ರೀತಿ ಹಾಗೂ ಅಭಿಮಾನಗಳನ್ನು ದೂರದಿಂದಲೇ ಕಂಡು ಸಂತೋಷ ಮತ್ತು ಹೆಮ್ಮೆ ಪಟ್ಟವಳು.ಹೀಗಿದ್ದರೂ ಮೈಸೂರಿನ ಮುಡಾ ನಿವೇಶನಕ್ಕೆ ಸಂಬಂಧಿಸಿದಂತ ಕೇಳಿ ಬಂದ ಆರೋಪಗಳಿಂದ ನಾನು ಘಾಸಿಗೊಂಡಿದ್ದೇನೆ. ನನ್ನ ಸ್ವಂತ ಸೋದರ ಅರಿಶಿನ ಕುಂಕುಮದ ಭಾಗವಾಗಿ ಕೊಟ್ಟ ಜಮೀನಿನ ಬಾಬ್ತು ಪಡೆದ ನಿವೇಶನಗಳು ಇಷ್ಟೊಂದು ರಾದ್ದಾಂತವಾಗುತ್ತದೆ. ಇದರಿಂದ ನನ್ನ ಪತಿಯವರು ಅನ್ಯಾಯವಾಗಿ ಆರೋಪಗಳನ್ನು ಎದುರಿಸುವಂತಾಗಬಹುದು ಎನ್ನುವುದನ್ನೂ ನಾನು ಊಹಿಸಿದವಳೂ ಅಲ್ಲ.

ನನಗೆ ಈ ನಿವೇಶನ, ಮನೆ, ಆಸ್ತಿ, ಸಂಪತ್ತು ಯಾವುದೂ ಕೂಡ ನನ್ನ ಪತಿಯ ಗೌರವ, ಘನತೆ, ಮರ್ಯಾದೆ ಮತ್ತು ಅವರ ನೆಮ್ಮದಿಗಿಂತ ದೊಡ್ಡದಲ್ಲ. ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಅವರಿಂದ ಏನನ್ನೂ ನನಗಾಗಲಿ, ನನ್ನ ಕುಟುಂಬಕ್ಕಾಗಲಿ ಬಯಸದೇ ಇದ್ದ ನನೆ ಈ ನಿವೇಶನಗಳಿ ತೃಣಕ್ಕೆ ಸಮ.ಈ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣವಾಗಿರುವ ಮುಡಾದ ಹದಿನಾಲ್ಕು ನಿವೇಶನಗಳನ್ನು ವಾಪಸ್‌ ಮಾಡಲು ನಿರ್ಧರಿಸಿದ್ಧೇನೆ.

ಈ ಬಗ್ಗೆ ನನ್ನ ಪತಿಯವರ ಅಭಿಪ್ರಾಯ ಏನಿದೆ ಎನ್ನುವುದು ನನಗೆ ತಿಳಿದಿಲ್ಲ. ನನ್ನ ಮಗನ ಬಳಿಯಾಗಲಿ, ನನ್ನ ಕುಟುಂಬದ ಇತರ ಸದಸ್ಯರ ಬಳಿಯಾಗಲಿ ಇದರ ಬಗ್ಗೆ ಚರ್ಚಿಸಿಲ್ಲ. ಇದು ನನ್ನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಪ್ರಜ್ಞಾಪೂರ್ವಕವಾಗಿ ಕೈಗೊಂಡಿರುವ ತೀರ್ಮಾನ.

ಈ ಹಂತದಲ್ಲಿ ಇಂತಹ ನಿರ್ಧಾರಕ್ಕೆ ಏಕೆ ಬಂದಿರಿ. ಎಂದು ಯಾರಾದರೂ ಕೇಳಬಹುದು. ಆರೋಪ ಕೇಳಿ ಬಂದ ದಿನವೇ ನಾನು ಈ ನಿರ್ಧಾರ ಮಾಡಿದ್ದೆ. ಆದರೆ ಈ ಮುಡಾ ನಿವೇಶನ ಹಂಚಿಕೆಯ ಆರೋಪವನ್ನು ರಾಜಕೀಯ ದುರುದ್ದೇಶದಿಂದ ಮಾಡಲಾಗದ್ದು. ಈ ಅನ್ಯಾಯದ ವಿರುದ್ದ ಹೋರಾಡಬೇಕು. ಅವರ ಸಂಚಿಗೆ ನಾವೂ ಬಲಿಯಾಗಬಾರದು ಎಂದು ಕೆಲವು ಹಿತೈಷಿಗಳು ಹೇಳಿದ ಕಾರಣಕ್ಕೆ ನಿವೇಶನ ವಾಪಾಸು ಮಾಡಬೇಕೆಂಬ ನಿರ್ಧಾರವನ್ನು ಕೈ ಬಿಟ್ಟಿದ್ದೆ.

ನನ್ನ ಈ ನಿರ್ಧಾರ ಅಚಲವಾಗಿದ್ದು, ಈ ನಿವೇಶನಗಳನ್ನು ವಾಪಾಸ್‌ ನೀಡುವುದರ ಜತೆಗೆ ಮುಡಾಕ್ಕೆ ಸಂಬಂಧಿಸಿದ ಎಲ್ಲಾ ಆರೋಪಗಳ ಬಗ್ಗೆ ಸಮಗ್ರ ತನಿಖೇ ಮಾಡಬೇಕು ಎಂದು ಆಗ್ರಹಿಸುವೆ.

ಕೊನೆಯದಾಗಿ ಎಲ್ಲಾ ರಾಜಕೀಯ ಪಕ್ಷದ ನಾಯಕರಲ್ಲಿ ಮನವಿ. ದಯವಿಟ್ಟು ರಾಜಕೀಯ ಕ್ಷೇತ್ರದಿಂದ ದೂರ ವಿದ್ದು ತಮ್ಮ ಪಾಡಿಗೆ ತಾವಿರುವ ರಾಜಕೀಯ ಕುಟುಂಬದ ಹೆಣ್ಣು ಮಕ್ಕಳನ್ನು ರಾಜಕೀಯ ದ್ವೇಷ ಸಾಧನೆಗಾಗಿ ವಿವಾದದ ಕಣಕ್ಕೆ ಎಳೆದು ತಂದು ಅವರ ಘನತೆ,ಗೌರವಗಳಿಗೆ ಹಾನಿ ಮಾಡಬಾರದು ಎಂದು ಮನವಿ ಮಾಡುವೆ.

(ವರದಿ: ಎಚ್‌.ಮಾರುತಿ. ಬೆಂಗಳೂರು)

mysore-dasara_Entry_Point