ಮೈಸೂರು ಬದಲಿ ನಿವೇಶನ ಹಗರಣ: ಬಿರುಸುಗೊಂಡ ಲೋಕಾಯುಕ್ತ ತನಿಖೆ, ಮುಡಾ ಹಿಂದಿನ ಆಯುಕ್ತ ನಟೇಶ್‌, ಸಿದ್ದರಾಮಯ್ಯ ಆಪ್ತ ಸಹಿತ ಹಲವರ ವಿಚಾರಣೆ ತೀವ್ರ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ಬದಲಿ ನಿವೇಶನ ಹಗರಣ: ಬಿರುಸುಗೊಂಡ ಲೋಕಾಯುಕ್ತ ತನಿಖೆ, ಮುಡಾ ಹಿಂದಿನ ಆಯುಕ್ತ ನಟೇಶ್‌, ಸಿದ್ದರಾಮಯ್ಯ ಆಪ್ತ ಸಹಿತ ಹಲವರ ವಿಚಾರಣೆ ತೀವ್ರ

ಮೈಸೂರು ಬದಲಿ ನಿವೇಶನ ಹಗರಣ: ಬಿರುಸುಗೊಂಡ ಲೋಕಾಯುಕ್ತ ತನಿಖೆ, ಮುಡಾ ಹಿಂದಿನ ಆಯುಕ್ತ ನಟೇಶ್‌, ಸಿದ್ದರಾಮಯ್ಯ ಆಪ್ತ ಸಹಿತ ಹಲವರ ವಿಚಾರಣೆ ತೀವ್ರ

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಮುಡಾದಲ್ಲಿ ನಡೆದಿರುವ ಬದಲಿ ನಿವೇಶನದ ಬೃಹತ್‌ ಹಗರಣದ ತನಿಖೆಯನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ಮತ್ತಷ್ಟು ಬಿರುಸುಗೊಳಿಸಿದ್ದಾರೆ

ಮೈಸೂರು ಮುಡಾ ಹಗರಣದ ವಿಚಾರವಾಗಿ ಮಾಜಿ ಆಯುಕ್ತ ನಟೇಶ್‌ ಲೋಕಾಯುಕ್ತ ವಿಚಾರಣೆ ಎದುರಿಸಿದರು, ನಟೇಶ್‌  ಬಂಧನಕ್ಕೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಗಂಗರಾಜು ಮೈಸೂರಲ್ಲಿ ಪ್ರತಿಭಟನೆ ನಡೆಸಿದರು.
ಮೈಸೂರು ಮುಡಾ ಹಗರಣದ ವಿಚಾರವಾಗಿ ಮಾಜಿ ಆಯುಕ್ತ ನಟೇಶ್‌ ಲೋಕಾಯುಕ್ತ ವಿಚಾರಣೆ ಎದುರಿಸಿದರು, ನಟೇಶ್‌ ಬಂಧನಕ್ಕೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಗಂಗರಾಜು ಮೈಸೂರಲ್ಲಿ ಪ್ರತಿಭಟನೆ ನಡೆಸಿದರು.

ಮೈಸೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿರುವ ಬದಲಿ ನಿವೇಶನದ ಹಗರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಈಗಾಗಲೇ ಹೈಕೋರ್ಟ್‌ ಸೂಚನೆ ಮೇರೆಗೆ ತನಿಖೆ ನಡೆಸುತ್ತಿರುವ ಲೋಕಾಯುಕ್ತದ ಮೈಸೂರು ಎಸ್ಪಿ ಕಚೇರಿಯಲ್ಲಿ ಮಂಗಳವಾರ ದಿನವಿಡೀ ಬಿರುಸಿನ ಚಟುವಟಿಕೆಗಳು ನಡೆದವು.ಮುಡಾದ ಹಿಂದಿನ ಆಯುಕ್ತ ಡಿ,ಬಿ.ನಟೇಶ್‌, ಮುಡಾದ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಆಪ್ತ ಡಿ.ಧೃವಕುಮಾರ್‌ ಸಹಿತ ಹಲವರು ವಿಚಾರಣೆಗೆ ಎದುರಾದರು. ಅದರಲ್ಲೂ ಡಿ.ಬಿ. ನಟೇಶ್‌ ಅವರನ್ನು ಸತತವಾಗಿ ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್‌ ನೇತೃತ್ವದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಈ ನಡುವೆ ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಜಮೀನು ಮಾಲೀಕ ದೇವರಾಜು ಅವರ ವಿಚಾರಣೆ ಬುಧವಾರ ನಡೆಯಲಿದೆ. ಇದೇ ವೇಳೆ ಹಗರಣದ ಮುಖ್ಯ ರೂವಾರಿ ಡಿ.ಬಿ.ನಟೇಶ್‌ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಗಂಗರಾಜು ಕಪ್ಪು ಪಟ್ಟಿ ಹಿಡಿದು ಪ್ರತಿಭಟನೆಯನ್ನೂ ದಾಖಲಿಸಿದರು.

ವಿಚಾರಣೆಗೆ ಬಂದ ನಟೇಶ್‌

ಈಗಾಗಲೇ ಇಡಿಯಿಂದಲೂ ಇದೇ ಪ್ರಕರಣದಲ್ಲಿ ವಿಚಾರಣೆಗೆ ಒಳಲಾಗಿರುವ ಮುಡಾ ಹಿಂದಿನ ಆಯುಕ್ತ ಡಿ.ಬಿ.ನಟೇಶ್‌ ವಿಚಾರಣೆಗೆ ಆಗಮಿಸಿದ್ದರು. ಆತಂಕದಲ್ಲಿಯೇ ಎಸ್ಪಿ ಕಚೇರಿಗೆ ಬಂದ ಅವರು ಕೆಲಹೊತ್ತು ವಿಚಾರಣೆಗೆ ಎದುರಾಗಿ ಕೆಲ ಹೊತ್ತು ಹೊರ ಹೋದರು. ಆನಂತರ ಮತ್ತೆ ಆಗಮಿಸಿ ಲೋಕಾಯುಕ್ತರ ಎದುರು ವಿಚಾರಣೆ ಎದುರಿಸಿದರು.

ಮಂಗಳವಾರ ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಲೋಕಾಯುಕ್ತ ಎಸ್ ಪಿ., ಟಿ ಜೆ ಉದೇಶ್‌ರಿಂದ ನೋಟಿಸ್ ಜಾರಿಯಾಗಿತ್ತು.ನಟೇಶ್ ವಿಚಾರಣೆಗಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಅನುಮತಿ ಲೋಕಾಯುಕ್ತ ಎಸ್ ಪಿ., ಟಿ ಜೆ ಉದೇಶ್ ಕೇಳಿದ್ದರು.

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ನೀಡಿದ್ದ ಗಂಭೀರ ಆರೋಪ ನಟೇಶ್ ಮೇಲಿದೆ.

ತೀವ್ರ ಕುತೂಹಲ ಕೆರಳಿಸಿದ್ದ ನಟೇಶ್ ಅವರ ಇಂದಿನ ವಿಚಾರಣೆ ವೇಳೆ ನಟೇಶ್‌ ಬದಲಿ ನಿವೇಶನ ಹಂಚಲು ಯಾರದ್ದಾದರೂ ಒತ್ತಡ ಇತ್ತೆ. ಯಾವ ಕಾಯಿದೆ ಅಡಿ ನಿವೇಶನ ಹಂಚಿದಿರಿ ಎನ್ನುವುದು ಸೇರಿದಂತೆ ಹಲವಾರು ವಿಷಯಗಳಿಗೆ ಉತ್ತರಿಸಿದರು ಎನ್ನಲಾಗಿದೆ.

ಸಿದ್ದರಾಮಯ್ಯ ಆಪ್ತಗೂ ಬುಲಾವ್‌

ಮುಡಾದ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಆಪ್ತ ಡಿ.ಧೃವಕುಮಾರ್‌ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೊಟೀಸ್‌ ಅನ್ನು ನೀಡಲಾಗಿದೆ. ಬುಧವಾರ ವಿಚಾರಣೆಯಿದ್ದರೂ ಧೃವಕುಮಾರ್‌ ಮಂಗಳವಾರವೇ ಬಂದಿದ್ದರು. ಅನಿವಾರ್ಯ ಕಾರಣಗಳಿಂದ ಬುಧವಾರ ವಿಚಾರಣೆಗೆ ಬರಲು ಆಗುವುದಿಲ್ಲ.ಇನ್ನೊಂದು ದಿನ ನೀಡುವಂತೆ ಅವರು ಕೋರಿಕೊಂಡರು.

ಈ ವೇಳೆ ಮಾತನಾಡಿದ ಧೃವಕುಮಾರ್‌, ನನ್ನ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಬದಲಿ ಭೂಮಿಯನ್ನು ಕೊಡಲು ತೀರ್ಮಾನ ಮಾಡಲಾಗಿತ್ತು. ಆದರೆ ಅದಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಲಿಲ್ಲ.ಸಿಎಂ ಪತ್ನಿಗೆ ಭೂಮಿ ಕೊಡುವ ಬಗ್ಗೆ, ನನ್ನ ಅವಧಿಯಲ್ಲಿ ಈ ವಿಚಾರ ಸಭೆಯಲ್ಲಿ ಚರ್ಚೆಗೆ ಬಂತು. ಬದಲಿ ಜಾಗವನ್ನು ಕೊಡಲು ತೀರ್ಮಾನ ಮಾಡಿದ್ದೆವು.

ಈ ವಿಚಾರವನ್ನು ನಾನೇ ಖುದ್ದಾಗಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ವಿಷಯ ತಿಳಿಸಿದೆ. ಆದರೆ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಬೇಡ. ನಾನು ಸಿಎಂ ಆಗಿರುವ ಸಮಯದಲ್ಲಿ ಈ ನಿರ್ಣಯಗಳು ಬೇಡ ಅಂದ್ರು ಎಂದು ಹೇಳಿದರು.

ಸಿಎಂ ಪತ್ನಿ ಪಾರ್ವತಿ ಕಳೆದುಕೊಂಡ ಭೂಮಿಗೆ ಸಮಾನಂತರ ಬಡಾವಣೆಯಲ್ಲಿ ಭೂಮಿ ಕೊಡಲು ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತಾದರೂ ನನ್ನ ಅವಧಿ ಮುಗಿದ ಬಳಿಕ ಮುಂದೆ ಏನಾಗಿದೆಯೋ ಗೊತ್ತಿಲ್ಲ. ನಾನು ಮುಡಾದ ಆಯುಕ್ತರಿಗೆ ಯಾವುದೇ ಪತ್ರ ಬರೆದಿಲ್ಲ. ನಮ್ಮ ಕಾಲದಲ್ಲಿ ಅಲ್ಲ ಹಿಂದಿನ ಕಾಲದಿಂದಲೂ 50:50 ಅನುಪಾತ ಜಾರಿಯಲ್ಲಿದೆ.

ಆದರೆ ನನ್ನ ಅವಧಿಯಲ್ಲಿ 50:50 ಅನುಪಾತದಡಿಯಲ್ಲಿ 10 ಅಡಿ ಜಾಗವನ್ನು ಕೊಟ್ಟಿಲ್ಲ. ರೈತರನ್ನು ಕೇಳಿದಾಗ 50:50 ಅನುಪಾತಕ್ಕೆ ಯಾರು ಒಪ್ಪಲಿಲ್ಲ. ಯಾರು ಸಹ ಭೂಮಿಯನ್ನು ಕೊಡಲು ಒಪ್ಪಲಿಲ್ಲ. ಹೀಗಾಗಿ ಹೊಸ ಬಡಾವಣೆ ನಿರ್ಮಾಣ ಮಾಡಲಿಲ್ಲ. ಸಿದ್ದರಾಮಯ್ಯ ಪತ್ನಿ ಯಾವ ಪತ್ರವನ್ನು ಬರೆದಿಲ್ಲ, ನನಗೆ ಫೋನ್ ಕೂಡ ಮಾಡಿಲ್ಲ. ಅವರ ಸಹೋದರ ಮಲ್ಲಿಕಾರ್ಜುನಸ್ವಾಮಿ ಸಹ ಬಂದು ನನ್ನ ಬಳಿ ಮನವಿ ಮಾಡಿಲ್ಲ. ಇಡಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ಬಂದರೆ ಹೋಗಿ ತನಿಖೆ ಎದುರಿಸುತ್ತೇನೆ ಎಂದು ತಿಳಿಸಿದರು.

ನಟೇಶ್ ಬಂಧಿಸುವಂತೆ ಆರ್ ಟಿ ಐ ಕಾರ್ಯಕರ್ತ ಗಂಗರಾಜು ಒತ್ತಾಯ

ಲೋಕಾಯುಕ್ತ ಕಚೇರಿ ಮುಂದೆ ಕಪ್ಪು ಪಟ್ಟಿ ಪ್ರದರ್ಶನ ಮಾಡಿ ಒತ್ತಾಯಿಸಿದ ಸಾಮಾಜಿಕ ಕಾರ್ಯಕರ್ತ ಗಂಗರಾಜು ಬಂಧಿಸಿ ಬಂಧಿಸಿ ನಟೇಶ್ ಬಂಧಿಸಿ ಎಂದು ಘೋಷಣೆ ಕೂಗಿದರು.

ಪಾರ್ವತಿ ಸಿದ್ದರಾಮಯ್ಯ ಪ್ರಕರಣದಲ್ಲಿ ಹಿಂದಿನ ಆಯುಕ್ತ ಡಿ.ಬಿ. ನಟೇಶ್ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. 2017ರ ಮುಡಾ ಸಭೆ ನಿರ್ಣಯವನ್ನೂ ತಪ್ಪಾಗಿ ಅರ್ಥೈಸಿದ್ದಾರೆ. ಲೋಕಾಯುಕ್ತರು ಇವರನ್ನು ಬಂಧಿಸುವ ಧೈರ್ಯ ಮಾಡುವುದಿಲ್ಲ. ಇಡಿ ಯಲ್ಲಿ ಇವರ ವಿರುದ್ಧ ಹೋರಾಟ ಮುಂದುವರೆಸುತ್ತೇನೆ ಎಂದು ಹೇಳಿದರು.

ಇದೇ ಸಿದ್ದರಾಮಯ್ಯ ಈ ಹಿಂದೆ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿದ್ದರು. ಇದೀಗ ಅದೇ ಲೋಕಾಯುಕ್ತ ಸಂಸ್ಥೆಯ ಕಚೇರಿಗೆ ಬಂದು ವಿಚಾರಣೆ ಎದುರಿಸಿದ್ದಾರೆ. ಮುಡಾ ಹಗರಣದ ವಿಚಾರದಲ್ಲಿ ಲೋಕಾಯುಕ್ತ ತನಿಖೆಯಿಂದ ನ್ಯಾಯ ಸಿಗುವುದಿಲ್ಲ. ಇಡಿ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ ಎಂದರು.

Whats_app_banner