ಮುಡಾ ಹಗರಣದ ಒತ್ತಡದ ನಡುವೆ ಇಂದು ರಾತ್ರಿಯೇ ಮೈಸೂರಿಗೆ ಹೊರಟ ಸಿದ್ದರಾಮಯ್ಯ; ನಾಳೆ ದಸರಾ ಉದ್ಘಾಟನೆಯಲ್ಲಿ ಭಾಗಿ
ಸದ್ಯ ಮುಡಾ ಹಗರಣ ಪ್ರಕರಣದ ಒತ್ತಡದಲ್ಲಿರುವ ಸಿಎಂ ಸಿದ್ದರಾಮಯ್ಯ, ದಸರಾ ಉದ್ಘಾಟನೆಯಲ್ಲಿ ಭಾಗಿಯಾಗಲು ಹೊರಟಿದ್ದಾರೆ. ಗುರುವಾರ ನಾಡಹಬ್ಬಕ್ಕೆ ಚಾಲನೆ ಸಿಗುತ್ತಿದ್ದು, ಬುಧವಾರವಾದ ಇಂದೇ ಬೆಂಗಳೂರಿನಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಅಕ್ಟೋಬರ್ 3, ಗುರುವಾರ) ಉದ್ಘಾಟನಾ ಸಮಾರಂಭ ನಡೆಯಲಿದ್ದು, ನಾಡಿನ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರು ಅದ್ಧೂರಿ ದಸರಾ ವೈಭವಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗುತ್ತಿದ್ದು, ಅದಕ್ಕಾಗಿ ಇಂದು (ಅಕ್ಟೋಬರ್ 2 ಬುಧವಾರ) ರಾತ್ರಿಯೇ ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಪ್ರಯಾಣಿಸಲಿದ್ದಾರೆ. ದೇಶದಾದ್ಯಂತ ಸುದ್ದಿಯಾಗಿರುವ ಮುಡಾ ಹಗರಣದ ಒತ್ತಡದ ನಡುವೆಯೇ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಲಿದ್ದಾರೆ.
ಗುರುವಾರ ಬೆಳಗ್ಗೆ 9.15ರಿಂದ 9.45ನಡುವೆ ಶುಭಲಗ್ನದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಹೀಗಾಗಿ ಇಂದು ರಾತ್ರಿ 8.25ಕ್ಕೆ ವಿಶೇಷ ವಿಮಾನದ ಮೂಲಕ ಸಿಎಂ ಮೈಸೂರಿಗೆ ಆಗಮಿಸಲಿದ್ದಾರೆ. ಗುರುವಾರ ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿ ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಸಿಎಂ ಭಾಗಿಯಾಗುವ ಕಾರ್ಯಕ್ರಮಗಳ ವಿವರ
- ಬೆಳಗ್ಗೆ 11.30ಕ್ಕೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಚಲನಚಿತ್ರೋತ್ಸವ ಉದ್ಘಾಟನೆಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ.
- ಮಧ್ಯಾಹ್ನ 12.30ಕ್ಕೆ ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟನೆಯಾಗಲಿದೆ.
- ಸಂಜೆ 4 ಗಂಟೆಗೆ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನೆಯಾಗಲಿದೆ.
- ಸಂಜೆ 4.30ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ ಉದ್ಘಾಟನೆ.
- ಸಂಜೆ 6ಕ್ಕೆ ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ.
- ರಾತ್ರಿ 7.30ಕ್ಕೆ ದಸರಾ ವಸ್ತು ಪ್ರದರ್ಶನ ಉದ್ಘಾಟನೆ.
ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ನಾಳೆ ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್ 4ರಂದು ಬೆಳಿಗ್ಗೆ 10ಗಂಟೆಗೆ ವಿಶೇಷ ವಿಮಾನದಲ್ಲಿ ಮೈಸೂರಿನಿಂದ ಕೊಪ್ಪಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಅಕ್ಟೋಬರ್ 3ರ ಗುರುವಾ ಬೆಳಗ್ಗೆ 9:15ರಿಂದ 9:40ರೊಳಗಿನ ಶುಭ ವೃಶ್ಚಿಕ ಲಗ್ನದಲ್ಲಿ ನಾಡಿನ ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್‌ಸಿ ಮಹದೇವಪ್ಪ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಿದ್ದತೆ ನಡೆದಿದೆ. ವಾಟರ್ ಪ್ರೂಫ್ ಪೆಂಡಾಲ್ ನಿರ್ಮಿಸಿ, ನೂರಾರು ಆಸನಗಳನ್ನು ಅಳವಡಿಸಲಾಗಿದೆ. ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಸಿದ್ದತಾ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮ ಚಾಮುಂಡಿ ಬೆಟ್ಟದಲ್ಲಿ ನಡೆದರೆ, ಸಂಜೆ ಅರಮನೆ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಹೀಗಾಗಿ ಅರಮನೆ ಆವರಣದಲ್ಲಿ ಸಿದ್ದತಾ ಕಾರ್ಯ ಭರದಿಂದ ಸಾಗಿದೆ. ಆಕರ್ಷಕ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಸಾರ್ವಜನಿಕರು ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಆಸನಗಳನ್ನು ಇರಿಸಲಾಗಿದೆ.