ಮೈಸೂರು ದಸರಾ ವೇಳೆ ಸ್ಥಳದಲ್ಲಿಯೇ ವಿವಿಧ ವಿಭಾಗಗಳ ಚಿತ್ರ ಬಿಡಿಸಿ, ಬಹುಮಾನಗಳನ್ನು ಗೆಲ್ಲಿರಿ; ಏನೇನು ಅವಕಾಶಗಳಿವೆ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ದಸರಾ ವೇಳೆ ಸ್ಥಳದಲ್ಲಿಯೇ ವಿವಿಧ ವಿಭಾಗಗಳ ಚಿತ್ರ ಬಿಡಿಸಿ, ಬಹುಮಾನಗಳನ್ನು ಗೆಲ್ಲಿರಿ; ಏನೇನು ಅವಕಾಶಗಳಿವೆ

ಮೈಸೂರು ದಸರಾ ವೇಳೆ ಸ್ಥಳದಲ್ಲಿಯೇ ವಿವಿಧ ವಿಭಾಗಗಳ ಚಿತ್ರ ಬಿಡಿಸಿ, ಬಹುಮಾನಗಳನ್ನು ಗೆಲ್ಲಿರಿ; ಏನೇನು ಅವಕಾಶಗಳಿವೆ

ಮೈಸೂರು ದಸರಾ ಅಂಗವಾಗಿ ಸ್ಥಳದಲ್ಲೇ ಚಿತ್ರ ಬರೆಯುವ ಹಾಗೂ ಮಣ್ಣಿನಿಂದ ಕಲಾಕೃತಿ ರಚಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವೂ ಸಿಗಲಿದೆ.

ದಸರಾ ಕುರಿತು ಚಿತ್ರ ಬರೆಯುವ ಸ್ಪರ್ಧೆಯನ್ನು ಲಲಿತ ಕಲಾ ಉಪ ಸಮಿತಿಯು ಆಯೋಜಿಸಿದೆ.
ದಸರಾ ಕುರಿತು ಚಿತ್ರ ಬರೆಯುವ ಸ್ಪರ್ಧೆಯನ್ನು ಲಲಿತ ಕಲಾ ಉಪ ಸಮಿತಿಯು ಆಯೋಜಿಸಿದೆ.

ಮೈಸೂರು: ನೀವು ಈ ಬಾರಿ ಮಕ್ಕಳೊಂದಿಗೆ ಮೈಸೂರು ದಸರಾ ನೋಡಲು ಬರುತ್ತಿದ್ದೀರಾ. ಹಾಗಾದರೇ ದಸರಾ ವೇಳೆಯೇ ಆಯೋಜಿಸುತ್ತಿರುವ ಸ್ಥಳದಲ್ಲಿ ವಿವಿಧ ವಿಭಾಗಗಳ ಚಿತ್ರ ಬಿಡಿಸುವ ಹಾಗೂ ಮಣ್ಣಿನ ಕಲಾಕೃತಿ ರಚಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನಗಳನ್ನು ಗೆಲ್ಲಿರಿ. ಮೈಸೂರು ದಸರಾದ ಲಲಿತ ಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಹಾಗೂ ಬೆಂಗಳೂರಿನ ಕರ್ನಾಟಕ ಶಿಲ್ಪಕಲಾ ಶಿಬಿರ ಅಕಾಡೆಮಿ ಸಹಯೋಗದೊಂದಿಗೆ ಅಕ್ಟೋಬರ್ 06 ರಂದು ಬೆಳಗ್ಗೆ 10 ಗಂಟೆಗೆ ಶಾಲಾ ಕಾಲೇಜು ಮಕ್ಕಳಿಗಾಗಿ ಸ್ಥಳದಲ್ಲಿ ವಿವಿಧ ವಿಭಾಗಗಳ ಚಿತ್ರ ಬಿಡಿಸುವ ಮತ್ತು ಮಣ್ಣಿನ ಕಲಾಕೃತಿ ರಚಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿದೆ.

ಪ್ರತಿ ವರ್ಷ ದಸರಾ ವೇಳೆ ಲಲಿತ ಕಲೆಗಳು ಹಾಗೂ ಕರಕುಶಲ ಉಪಸಮಿತಿಯಿಂದ ನಾನಾ ಸ್ಪರ್ಧೆ ಆಯೋಜನೆ ಮಾಡುತ್ತಾ ಬರಲಾಗುತ್ತಿದೆ. ಈ ಬಾರಿಯೂ ಹಲವಾರು ಚಟುವಟಿಕೆಗಳು, ಸ್ಪರ್ಧೆಗಳು ಇರಲಿವೆ.

2024ರ ಅಕ್ಟೋಬರ್ 06 ರಂದು ಬೆಳಗ್ಗೆ 10 ಗಂಟೆಗೆ ಶಾಲಾ ಕಾಲೇಜು ಮಕ್ಕಳಿಗಾಗಿ ಸ್ಥಳದಲ್ಲಿ ವಿವಿಧ ವಿಭಾಗಗಳ ಚಿತ್ರ ಬಿಡಿಸುವ ಮತ್ತು ಮಣ್ಣಿನ ಕಲಾಕೃತಿ ರಚಿಸುವ ಸ್ಪರ್ಧೆ ಆಯೋಜನೆ, ಅಕ್ಟೋಬರ್ 07 ರಂದು ಸಂಜೆ 4 ಗಂಟೆಗೆ ಉಪಸಮಿತಿಯ ಸಮಾರೋಪ ಸಮಾರಂಭ ಹಾಗೂ ಚಿತ್ರಕಲಾ ಮತ್ತು ಮಣ್ಣಿನ ಕಲಾಕೃತಿಗಳ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಕಾರ್ಯಾಧ್ಯಕ್ಷರು ತಿಳಿಸಿದ್ದಾರೆ.

ಶಿಲ್ಪ ಕಲಾ ಶಿಬಿರ

ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 03 ರವರೆಗೆ ಬೆಂಗಳೂರು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಹಯೋಗದೊಂದಿಗೆ ರಾಜ್ಯದ ಪ್ರಖ್ಯಾತ ಶಿಲ್ಪಕಲಾವಿದರಿಂದ ಶಿಲ್ಪಕಲಾ ಶಿಬಿರ ಆಯೋಜನೆಗೊಂಡಿದೆ.

ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 03 ರವರೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಇವರ ಸಹಯೋಗದೊಂದಿಗೆ ರಾಜ್ಯದ ಪ್ರಖ್ಯಾತ ಚಿತ್ರಕಲಾವಿದರಿಂದ ಚಿತ್ರಕಲಾ ಶಿಬಿರ, ಅಕ್ಟೋಬರ್ 03 ರಂದು ಸಂಜೆ 4 ಗಂಟೆಗೆ ಶಿಲ್ಪಕಲಾ ಶಿಬಿರ ಮತ್ತು ಲಲಿತಕಲಾ ಶಿಬಿರದಲ್ಲಿ ರಚನೆಯಾದ ಕಲಾಕೃತಿಗಳ ಪ್ರದರ್ಶನ, ರಾಜ್ಯ ಮಟ್ಟದ ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರ ಆಹ್ವಾನಿತ ಕಲಾಕೃತಿಗಳ ಪ್ರದರ್ಶನ, ಇಂದಿರಾಗಾoಧಿ ಮಾನವ ಸಂಗ್ರಹಾಲಯ, ಭೋಪಾಲ್ ಮತ್ತು ಕರ್ನಾಟಕ ಕರಕುಶಲ ಕಲಾವಿದರ ಕಲಾಕೃತಿಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತು ಮಾರಾಟ ಮಳಿಗೆ ಉದ್ಘಾಟನೆ ಹಾಗೂ ಅಕ್ಟೋಬರ್ 07 ರವರೆಗೆ ಪ್ರದರ್ಶನ, ವಿವಿಧ ರಾಜ್ಯಗಳ ಕರಕುಶಲ ಕಲಾವಿದರ ಕಲಾಕೃತಿಗಳ ಪ್ರದರ್ಶನ, ಪ್ರಾತ್ಯಕ್ಷಿತೆ ಮತ್ತು ಮಾರಾಟ ಮಳಿಗೆ ಉದ್ಘಾಟನೆ ಹಾಗೂ ಅಕ್ಟೋಬರ್ 07 ರವರೆಗೆ ಪ್ರದರ್ಶನವೂ ಇರಲಿದೆ ಎಂದು ತಿಳಿಸಿದ್ದಾರೆ.

ಶಿಬಿರ ಉದ್ಘಾಟನೆ

ಸೆಪ್ಟೆಂಬರ್ 23 ರಂದು ಬೆಳಗ್ಗೆ 10 ಗಂಟೆಗೆ ಸಿದ್ದಾರ್ಥ ನಗರದಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಆವರಣದಲ್ಲಿ “ರಾಜ್ಯ ಮಟ್ಟದ ಶಿಲ್ಪಕಲಾ ಶಿಬಿರದ” ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ.ಎಂ.ಗಾಯತ್ರಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್.ಎನ್., ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಆಶಾದ್ ರೆಹಮಾನ್ ಷರೀಫ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Whats_app_banner