ಮೈಸೂರು ದಸರಾದಲ್ಲಿ ಆನೆ ಮೇಲೆಯೇ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿಗ್ರಹ ಇಡುವುದು ಏಕೆ, ಇದರ ಮಹತ್ವವೇನು, ಈ ಪರಂಪರೆ ಶುರುವಾಗಿದ್ದು ಯಾವಾಗ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ದಸರಾದಲ್ಲಿ ಆನೆ ಮೇಲೆಯೇ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿಗ್ರಹ ಇಡುವುದು ಏಕೆ, ಇದರ ಮಹತ್ವವೇನು, ಈ ಪರಂಪರೆ ಶುರುವಾಗಿದ್ದು ಯಾವಾಗ

ಮೈಸೂರು ದಸರಾದಲ್ಲಿ ಆನೆ ಮೇಲೆಯೇ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿಗ್ರಹ ಇಡುವುದು ಏಕೆ, ಇದರ ಮಹತ್ವವೇನು, ಈ ಪರಂಪರೆ ಶುರುವಾಗಿದ್ದು ಯಾವಾಗ

ಮೈಸೂರಿನ ಜಂಬೂ ಸವಾರಿಯಲ್ಲಿ ಆನೆ,ಅಂಬಾರಿ ಹಾಗೂ ಶ್ರೀ ಚಾಮುಂಡೇಶ್ವರಿ ಮೂರ್ತಿಯ ಮೆರವಣಿಗೆ ತನ್ನದೇ ಇತಿಹಾಸ, ಪರಂಪರೆಯಿದೆ. ಏನಿದರ ವಿಶೇಷ. ಇಲ್ಲಿದೆ ವಿವರ.

ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಆನೆ ಮೇಲೆ ಅಂಬಾರಿ ಇರಿಸಿ ಅದಲ್ಲಿ ಚಾಮುಂಡೇಶ್ವರಿ ಮೂರ್ತಿ ಕೂರಿಸಿ ಮೆರವಣಿಗೆ ಮಾಡುವುದು ಮುಂದುವರಿದಿದೆ.
ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಆನೆ ಮೇಲೆ ಅಂಬಾರಿ ಇರಿಸಿ ಅದಲ್ಲಿ ಚಾಮುಂಡೇಶ್ವರಿ ಮೂರ್ತಿ ಕೂರಿಸಿ ಮೆರವಣಿಗೆ ಮಾಡುವುದು ಮುಂದುವರಿದಿದೆ.

ಮೈಸೂರು: ಆನೆ, ಅಂಬಾರಿ, ತಾಯಿ ಚಾಮುಂಡೇಶ್ವರಿ, ಪುಷ್ಪಾರ್ಚನೆ, ಉಘೇ ಉಘೇ ಚಾಮುಂಡಿ ಎನ್ನುವ ಉದ್ಘಾರ.. ಇದು ಮೈಸೂರು ದಸರಾದ ಭಾಗವಾಗಿರುವ ವಿಶ್ವ ವಿಖ್ಯಾತ ಜಂಬೂ ಸವಾರಿಯ ಹಿನ್ನೆಲೆ. ನಾಲ್ಕು ಶತಮಾನಗಳಿಗೂ ಹಿನ್ನೆಲೆ ಇರುವ ಮೈಸೂರು ದಸರಾ ಧಾರ್ಮಿಕ ಮಹತ್ವ ಇರುವ ಪ್ರಮುಖ ಹಬ್ಬ., ನವರಾತ್ರಿಯ ವೈಭವ ಹಾಗೂ ವಿಜಯದಶಮಿಯ ಸಂಭ್ರಮದ ಭಾಗವಾಗಿ ಹತ್ತು ದಿನಗಳ ಕಾಲ ನಡೆಯುವ ಉತ್ಸವ. ಅದರಲ್ಲೂ ಕೊನೆಯ ದಿನದ ವಿಜಯ ದಶಮಿಯಂದು ನಡೆಯುವ ಚಿನ್ನದ ಅಂಬಾರಿ ಹೊತ್ತ ಆನೆ ಮೇಲೆ ಚಾಮುಂಡೇಶ್ವರಿ ತಾಯಿ ಮೂರ್ತಿಯನ್ನು ಇರಿಸಿ ಐದು ಕಿ.ಮಿ ಮೆರವಣಿಗೆ ಮೂಲಕ ಸಾಗುವ, ಲಕ್ಷಾಂತರ ಭಕ್ತರು ನಿಂತಲ್ಲೇ ದರ್ಶನ ಪಡೆಯಲು ಆರೇಳು ಗಂಟೆ ಕಾಯುವ ಭಕ್ತಿ ಭಾವದ ಸಂಗಮವೂ ಹೌದು.

ಚಾಮುಂಡೇಶ್ವರಿ ಮೆರವಣಿಗೆ

ಮೈಸೂರು ದಸರಾದ ವಿಜಯದಶಮಿ ಮೆರವಣಿಗೆ ಎಂದರೆ ಅದು ಜಂಬೂ ಸವಾರಿ. ಮೈಸೂರಿನ ಉತ್ಸವ ಎನ್ನುವುದು ಜನಜನಿತ. ಚಾಮುಂಡೇಶ್ವರಿ ತಾಯಿಯ ವಿಗ್ರಹವನ್ನು ಇರಿಸಿ ಆನೆ ಮೇಲೆ ಮೆರವಣಿಗೆ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಮೈಸೂರು ಮಹಾರಾಜರಿಗೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ತಾಯಿಯೇ ಮನೆ ದೇವರು. ಅಲ್ಲದೇ ಮೈಸೂರು ಯದುವಂಶಸ್ಥರು ದೈವ ಭಕ್ತರು. ಗೌರವ, ಶ್ರದ್ದೆಯಿಂದಲೇ ಎಲ್ಲವನ್ನೂ ಆಚರಿಸಿಕೊಂಡು ಬಂದಿದ್ದಾರೆ. ಇದೇ ರೀತಿ ಜಂಬೂ ಸವಾರಿ ಭಾಗವಾಗಿ. ಚಾಮುಂಡೇಶ್ವರಿ ದೇವಿಯ ಮೆರವಣಿಗೆಯನ್ನು ನಡೆಸಿಕೊಂಡು ಬಂದಿದ್ದಾರೆ. ಮೊದಲೆಲ್ಲಾ ಮಹಾರಾಜರನ್ನೂ ಮೆರವಣಿಗೆ ಮೂಲಕ ಕರೆ ತರಲಾಗುತ್ತಿತ್ತು. ಆನೆ ಮೇಲೂ ಬರುತ್ತಿದ್ದರು. ರಾಜತ್ವ ಅಳಿದು ಪ್ರಜಾಪ್ರಭುತ್ವ ಬಂದ ಮೇಲೆ ಇದು ನಿಂತು ಹೋಗಿದೆ. ಈಗೇನಿದ್ದರೂ ಆನೆ ಹಾಗೂ ಅಂಬಾರಿಯ ಮೆರವಣಿಗೆ, ಚಾಮುಂಡೇಶ್ವರಿ ತಾಯಿ ಮೇಲೆ ಭಕ್ತಿ ಭಾವದ ಹಿಂದಿನ ಪರಂಪರೆ ಮುಂದೆವರೆದುಕೊಂಡು ಹೋಗುತ್ತಿವೆ.

ಆನೆಗಳೇ ಏಕೆ

ಜಂಬೂ ಸವಾರಿಗೆ ಶತಮಾನದಿಂದಲೂ ಆನೆಗಳನ್ನು ಬಳಸಲಾಗುತ್ತಿದೆ. ಮೈಸೂರು ಯದುವಂಶಜರು ವನ್ಯಜೀವಿ ಪ್ರಿಯರೂ ಹೌದು. ಅಲ್ಲದೇ ಆನೆಯನ್ನು ಗಣೇಶ ಎನ್ನುವ ರೂಪದಲ್ಲೂ ನೋಡಲಾಗುತ್ತದೆ. ಈಗಲೂ ಕರ್ನಾಟಕ ಮಾತ್ರವಲ್ಲದೇ ಭಾರತದ ಹಲವು ಭಾಗಗಳಲ್ಲಿ ಆನೆಗಳನ್ನು ಭಕ್ತಿ ಭಾವದಿಂದ ಪೂಜಿಸುವ ಪದ್ದತಿ ಮುಂದುವರಿದಿದೆ. ಆನೆಯ ಗಣೇಶ ಪ್ರತಿರೂಪ ಎಂಬ ನಂಬಿಕೆ. ನಮ್ಮಲ್ಲಿ ಎಲ್ಲದಕ್ಕೂ ಮೊದಲ ಪೂಜೆ ಗಣೇನನಿಗೆ. ವಿಘ್ನನಿವಾರಕನನ್ನು ಪ್ರಾರ್ಥಿಸಿದರೆ ಎಲ್ಲವೂ ಒಳಿತಾಗಲಿದೆ ಎನ್ನುವ ನಂಬಿಕೆ. ಆನೆಯನ್ನು ಗಣೇಶ ಎನ್ನುವ ಭಾವನೆಯಿಂದ ಪೂಜಿಸುವುದರಿಂದ ಅಂಬಾರಿ ಮೇಲೆ ಕೂರಿಸುವುದು ಮುಂದುವರಿದಿದೆ.

ಆನೆಗಳು ಅತ್ಯಂತ ಬುದ್ದಿವಂತ ಪ್ರಾಣಿಗಳು. ಅಷ್ಟೇ ಅಲ್ಲ ಮನುಷ್ಯನ ರೀತಿಯಲ್ಲೇ ಸಂಘ ಜೀವಿಗಳು. ಅವು ಮನುಷ್ಯ ಹೇಳಿದ ಮಾತನ್ನು ಪಾಲಿಸುತ್ತವೆ. ಪ್ರೀತಿಯಿಂದ ನಡೆದುಕೊಂಡರೆ ಎಂಥ ಕೆಲಸವನ್ನೂ ಮಾಡಬಲ್ಲವು. ಈ ಕಾರಣದಿಂದಲೂ ಆನೆಯನ್ನು ಅಂಬಾರಿ ಹೊರಲು ಬಳಕೆ ಮಾಡಲಾಗುತ್ತಿದೆ.

ಕರ್ನಾಟಕದಲ್ಲಿ ಮಾತ್ರವಲ್ಲದೇ ಹಲವು ಭಾಗಗಳಲ್ಲಿ ಆನೆಗಳನ್ನು ದಸರಾಗೆ ಬಳಕೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ವಿಶೇಷವಿದೆ. ಇಲ್ಲಿನ ಆನೆಗಳೊಂದಿಗೆ ಮನುಷ್ಯನಿಗೆ ಒಡನಾಟ ಇರುವುದರಿಂದ, ಗಣೇಶನ ರೂಪ ಎನ್ನುವ ನಂಬಿಕೆಯಿಂದ ಇದನ್ನು ಮುಂದುವರೆಸಲಾಗುತ್ತಿದೆ ಎಂದು ಎರಡು ದಶಕದ ಹಿಂದೆಯೇ ದಸರಾದ ಉಸ್ತುವಾರಿ ಅಧಿಕಾರಿಯಾಗಿ ಭಾಗಿಯಾಗಿದ್ದ, ನಿವೃತ್ತ ಐಎಫ್‌ಎಸ್‌ ಅಧಿಕಾರಿ ಗಾ.ನಂ. ಶ್ರೀಕಂಠಯ್ಯ ಅವರ ವಿವರಣೆ.

ಆನೆಗಳ ವಿಶೇಷ

ಆನೆಗಳು ಭಾರತದ ಎಲ್ಲಾ ಭಾಗದಲ್ಲೂ ಇವೆ. ಕರ್ನಾಟಕದಲ್ಲಿ ಮಾತ್ರ ಅಧಿಕ ಸಂಖ್ಯೆಯಲ್ಲಿವೆ. ಅದೂ ಅಲ್ಲದೇ ಆನೆಗಳನ್ನು ಸೆರೆ ಹಿಡಿದು ಅವುಗಳನ್ನು ಪಳಗಿಸುವ ಖೆಡ್ಡಾ ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ ಕಾಕನಕೋಟೆಯಲ್ಲಿತ್ತು. ದೈತ್ಯ ಜೀವಿಗಳನ್ನು ಹಿಡಿಯುವುದೇ ಕಷ್ಟ. ಸೆರೆ ಹಿಡಿದ ನಂತರ ಪಳಗಿಸುವುದು ಇನ್ನೂ ಕಷ್ಟವೇ. ಮೈಸೂರು ಮಹಾರಾಜರ ಕಾಲದಲ್ಲೇ ಆರಂಭಗೊಂಡ ಖೆಡ್ಡಾದಿಂದಲೇ ಪ್ರಮುಖ ಆನೆಗಳನ್ನು ಪಳಗಿಸಿದ ಸುದೀರ್ಘ ಇತಿಹಾಸವಿದೆ. ಇಂತಹ ಪಳಗಿಸುವ ವಿಭಿನ್ನತೆ ಕೌಶಲ್ಯತೆ ಬೇರೆಲ್ಲೂ ಇಲ್ಲ.

ಮೈಸೂರು ಮಹಾರಾಜರು ಬೇಟೆ ಪ್ರಿಯರಾಗಿದ್ದರು. ಅಲ್ಲದೇ ಪ್ರಾಣಿ ಪ್ರಿಯರೂ ಆಗಿದ್ದರು. ಅವರೇ ಆರಂಭಿಸಿದ ಖೆಡ್ಡಾದಲ್ಲಿ ಪಳಗಿದ ಬಹುತೇಕ ಆನೆಗಳು ಅಂಬಾರಿಯಲ್ಲಿ ಭಾಗಿಯಾಗಿವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಬಂದ ನಂತರ ಖೆಡ್ಡಾ ಸ್ಥಗಿತಗೊಂಡಿತು. ಆದರೂ ಆನೆ ಸೆರೆ ಹಿಡಿಯುವ, ಪಳಗಿಸುವ ಪದ್ದತಿ ಈಗಲೂ ಮೈಸೂರು ಭಾಗದ ಅರಣ್ಯದಂಚಿನ ಆನೆ ಶಿಬಿರಗಳಲ್ಲಿ ಮುಂದುವರಿದಿದೆ.

ಆನೆ ಎಂದರೆ ಅದು ಮೈಸೂರು ಎನ್ನುವಷ್ಟರ ಮಟ್ಟಿಗೆ ಖ್ಯಾತಿ ಗಳಿಸಿತ್ತು. ಖೆಡ್ಡಾವೂ ಇದರಲ್ಲಿ ಸೇರಿದೆ. ಮೈಸೂರು ದಸರಾಗೆ ಆನೆ ಬಳಸುವ ಇಂತಹ ಚಟುವಟಿಕೆಗೆ ಚಾಲನೆ ನೀಡಿದವರೇ ಮೈಸೂರು ಮಹಾರಾಜರು. ಈಗಲೂ ಆ ಹೆಮ್ಮೆಯ ಪರಂಪರೆ ಮುಂದುವರಿದಿದೆ ಎಂದು ನಿವೃತ್ತ ಐಎಫ್‌ಎಸ್‌ ಅಧಿಕಾರಿ ಕೆ.ಎಚ್‌.ವಿನಯಕುಮಾರ್‌ ಹೇಳುತ್ತಾರೆ.

Whats_app_banner