GH Nayak: ಖ್ಯಾತ ಕನ್ನಡ ಸಾಹಿತ್ಯ ವಿಮರ್ಶಕ ಜಿಎಚ್ ನಾಯಕ ನಿಧನ
ಕನ್ನಡ ಸುದ್ದಿ  /  ಕರ್ನಾಟಕ  /  Gh Nayak: ಖ್ಯಾತ ಕನ್ನಡ ಸಾಹಿತ್ಯ ವಿಮರ್ಶಕ ಜಿಎಚ್ ನಾಯಕ ನಿಧನ

GH Nayak: ಖ್ಯಾತ ಕನ್ನಡ ಸಾಹಿತ್ಯ ವಿಮರ್ಶಕ ಜಿಎಚ್ ನಾಯಕ ನಿಧನ

ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ದರಾಗಿದ್ದ ಹಿರಿಯ ಸಾಹಿತಿ ಪ್ರೊ.ಜಿ.ಎಚ್‌.ನಾಯಕ್‌ ಬಹುಕಾಲದ ಅಸೌಖ್ಯದ ನಂತರ ಶುಕ್ರವಾರ ನಿಧನರಾದರು.

ಜಿಎಚ್ ನಾಯಕ
ಜಿಎಚ್ ನಾಯಕ

ಮೈಸೂರು: ತಮ್ಮ ನಿಷ್ಠುರ ಮಾತು, ವಿಮರ್ಶೆಯಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ದರಾಗಿದ್ದ ಹಿರಿಯ ಸಾಹಿತಿ ಪ್ರೊ.ಜಿ.ಎಚ್‌.ನಾಯಕ್‌ ಬಹುಕಾಲದ ಅಸೌಖ್ಯದ ನಂತರ ಶುಕ್ರವಾರ ನಿಧನರಾದರು.

ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ ಪುರಸ್ಕೃತರಾಗಿದ್ದ ನಾಯಕರಿಗೆ ಪತ್ನಿ, ಸಾಮಾಜಿಕ ಹೋರಾಟಗಾರ್ತಿ ಮೀರಾನಾಯಕ. ಪುತ್ರಿ ಕೀರ್ತಿ ಇದ್ದಾರೆ. ಮೈಸೂರಿನ ಸರಸ್ವತಿಪುರಂನಲ್ಲಿ ನೆಲೆಸಿದ್ದ ಅವರ ಅಂತ್ಯಕ್ರಿಯೆ ಮೊಮ್ಮಗಳು ಇಂಗ್ಲೆಂಡ್‌ನಿಂದ ಶನಿವಾರ ಬಂದ ನಂತರ ಮೈಸೂರಿನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿದ್ದಾರೆ.

ಉತ್ತರ ಕನ್ನಡದ ಅಂಕೋಲ ತಾಲ್ಲೂಕಿನ ಸೂರ್ವೆಯಲ್ಲಿ 1935 ಸೆಪ್ಟಂಬರ 18 ರಂದು ಜನಿಸಿದ್ದ ಅವರಿಗೆ 88 ವರ್ಷ ವಯಸ್ಸಾಗಿತ್ತು. ವಿದ್ಯಾರ್ಥಿ ದೆಸೆಯಿಂದಲೂ ಮೈಸೂರಿನಲ್ಲಿಯೇ ನೆಲೆಸಿದ್ದ ಅವರು ಮೈಸೂರಿಗರೇ ಆಗಿ ಹೋಗಿದ್ದರು.

ಕನ್ನಡ ಸಾಹಿತ್ಯ ಲೋಕದಲ್ಲಿ ಜಿ.ಎಚ್.ನಾಯಕ ಎಂದು ಚಿರಪರಿಚಿತರಾಗಿದ್ದ ಅವರ ಪೂರ್ಣ ಹೆಸರು ಗೋವಿಂದರಾಯ ಹಮ್ಮಣ್ಣ ನಾಯಕ . ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬಹುಕಾಲ ಅಧ್ಯಾಪಕರಾಗಿದ್ದ ಅವರು ವಿಮರ್ಶೆ ಜತೆಗೆ ಸಂಪಾದನೆ, ಕನ್ನಡ ಸಣ್ಣಕಥೆಗಳು, ಹೊಸಗನ್ನಡ ಕವಿತೆಗಳನ್ನೂ ರಚಿಸಿದ್ದರು. ಬಾಳು ಎನ್ನುವುದು ಅವರ ಆತ್ಮಕಥನ.

ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷೆ (1984), ನಿಜದನಿ (1988), ವಿನಯ ವಿಮರ್ಶೆ (1991), ಸಕಾಲಿಕ (1995), ಗುಣ ಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002), ಕೃತಿ ಸಾಕ್ಷಿ (2006), ಸ್ಥಿತಿ ಪ್ರಜ್ಞೆ (2007) ಮತ್ತೆ ಮತ್ತೆ ಪಂಪ (2008), ಸಾಹಿತ್ಯ ಸಮೀಕ್ಷೆ (2009), ಉತ್ತರಾರ್ಧ (2011) ಅವರ ಪ್ರಮುಖ ಕೃತಿಗಳು.

ಉತ್ತರಾರ್ಧ ಕೃತಿಗೆ 2014 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಪೇಕ್ಷ ವಿಮರ್ಶಾ ಕೃತಿಗೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ'ಯ ಪ್ರಶಸ್ತಿ. ನಿಜದನಿ ವಿಮರ್ಶಾ ಕೃತಿಗೆ 'ವಿ.ಎಂ.ಇನಾಂದಾರ ಸ್ಮಾರಕ ಜಿ.ಎಚ್‌.ನಾಯಕ ಅವರಿಗೆ ಲಭಿಸಿವೆ.

ಅಡಿಗರ ಗೌರವ ಗ್ರಂಥ ಸಂವೇದನೆ , ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ, ಶತಮಾನದ ಕನ್ನಡ ಸಾಹಿತ್ಯ (ಸಂಪುಟ - 1.2 ಗಳಿಗೆ) ಸಂಪಾದಕರೂ ಆಗಿದ್ದರು.

Whats_app_banner