Yuva Dasara: ಮೈಸೂರಲ್ಲಿ ವೀಕೆಂಡ್ ಮುನ್ನವೇ ಯುವ ದಸರಾ ಜೋಶ್: ಈ ಬಾರಿ ವಿಭಿನ್ನ ಕಲಾವಿದರ ಕಮಾಲ್
Mysore Yuva Dasara Updates ಮೈಸೂರು ದಸರಾದ ಆಕರ್ಷಣೆಯಾದ ಯುವ ದಸರಾ(Yuva Dasara) ಈ ಬಾರಿ ನಾಲ್ಕು ದಿನ ನಡೆಯಲಿದೆ. ಹಲವು ಯುವ- ಹಿರಿಯ ಕಲಾವಿದರು ಯುವ ಮನಸುಗಳನ್ನು ತಣಿಸಲಿದ್ದಾರೆ.
ಮೈಸೂರು: ವಿಶ್ವ ಪ್ರಸಿದ್ದ ಮೈಸೂರು ದಸರಾಕ್ಕೆ ಯುವ ಮನಸುಗಳನ್ನು ಸೆಳಯುವ ಯುವ ದಸರಾ ಜೋಶ್ ಅಕ್ಟೋಬರ್ 18ರ ಬುಧವಾರದಿಂದ ನಾಲ್ಕು ದಿನ ಕಂಡು ಬರಲಿದೆ.
ಈ ಬಾರಿಯ ವೀಕೇಂಡ್‌ನಲ್ಲಿ ಮೈಸೂರಿಗೆ ಬಂದರೆ ನಾಲ್ಕು ದಿನಗಳ ಕಾಲ ಮಜವೇ ಬೇರೆ ರೀತಿ ಇರಲಿದೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇದಕ್ಕಾಗಿ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಭಾರೀ ವೇದಿಕೆ ಅಣಿಯಾಗಿದೆ. 50 ಸಾವಿರಕ್ಕೂ ಮಂದಿ ಕುಳಿತು ನೋಡುವಂತೆ ಇಕ್ಕೆಲಗಳಲ್ಲಿ ಕುರ್ಚಿಗಳು, ಅಲ್ಲಲ್ಲಿ ದೊಡ್ಡಪರದೆಗಳನ್ನು ಹಾಕಲಾಗಿದೆ.
ಕನ್ನಡ ಹಿರಿಯ ನಟ ಡಾ.ಶಿವರಾಜ್‌ಕುಮಾರ್ ಅವರು ಈ ಬಾರಿಯ ಯುವ ದಸರಾಗೆ ಬುಧವಾರ ಸಂಜೆ ಚಾಲನೆ ನೀಡಲಿದ್ದಾರೆ.
ಅಕ್ಟೋಬರ್ 18ರ ಸಂಜೆ 7 ರಿಂದ ಸ್ಯಾಂಡಲ್‌ವುಡ್ ನೈಟ್ ಕಾರ್ಯಕ್ರಮ ಇರಲಿದೆ. ಸಂಗೀತ ನಿರ್ದೇಶಕ ಹಾಗೂ ಹಿರಿಯ ಕಲಾವಿದ ಸಾಧುಕೋಕಿಲಾ ಹಾಗೂ ಅವರ ತಂಡದವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಅಂದು ಸಂಜೆ ರಾಧಿಕಾ ಚೇತನ್, ನಿರ್ಮಿಕಾ ರತ್ನಾಕರ್, ರಚನಾ ಇಂದರ್, ಕೃಷಿ ತಾಪಂಡ, ಬೃಂದಾ ಆಚಾರ್ಯ. ಶರಣ್ಯ ಶೆಟಟಿ, ನಿಶ್ವಿಕಾ ನಾಯ್ಡು, ವಿರಾಟ್. ಕಿಷನ್, ಶ್ರೇಯಸ್ ಮಂಜು, ಶರಣ್, ರವಿಶಂಕರ್ , ಐಶ್ವರ್ಯ ರಂಗನಾಥ್, ದಿವ್ಯಾರಾಮಚಂದ್ರನ್, ಧನ್ಯಾ ರಾಮಕುಮಾರ್, ವ್ಯಾಸರಾಜ್, ರಿಷಿ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಪ್ರಿಯಾಂಕ ಉಪೇಂದ್ರ, ರಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ರುಕ್ಮಿಣಿ ವಸಂತ್, ರೇಷ್ಮಾ ನಾಣಯ್ಯ, ಮಾಲಾಶ್ರೀ, ನವೀನ್, ಜೈದ್ ಜಮೀರ್, ಅಜಯ್ ರಾವ್ ಆಗಮಿಸುವರು.
ಅಕ್ಟೋಬರ್ 19ರಂದು ಗುರುವಾರ ಸಂಜೆ 6.30 ರಿಂದ 8.00ರವರೆಗೆ ಗಾಯಕ ಸಂಜಿತ್ ಹೆಗ್ಡೆ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ಇರಲಿದೆ. ಹೊಸ ತಲೆಮಾರಿನ ಗಾಯಕ ಸಂಜಿತ್ ತಮ್ಮ ವಿಭಿನ್ನ ಧ್ವನಿಯಿಂದಲೇ ಮನೆ ಮಾತಾಗಿದ್ದಾರೆ. ಅದೇ ದಿನ ರಾತ್ರಿ 9.30 ರಿಂದ 10.50ರವರೆಗೆ ಶಿಲ್ಪರಾವ್ ತಂಡದ ಕಾರ್ಯಕ್ರಮ ನಿಗದಿಯಾಗಿದೆ.
ಅಕ್ಟೋಬರ್ 20ರ ಶುಕ್ರವಾರ ಸಂಜೆ 7.30 ರಿಂದ 8.30ರವರೆಗೆ ಆಲ್ ಓಕೆ ತಂಡದ ನೃತ್ಯ ವೈಭವ, ರಾತ್ರಿ 8.30 ರಿಂದ 10.30 ರಿಂದ ಸಲೀಂ ಸುಲೈಮಾನ್ ಜೋಡಿ ಮತ್ತು ತಂಡದವರ ಜೋಶ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಕ್ಟೋಬರ್ 21 ಶನಿವಾರ ಸಂಜೆ 7.10ರಿಂದ 8.40ರವರೆಗೆ ಮೋಹನ್ ಸಿಸ್ಟರ್ಸ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ, ರಾತ್ರಿ 9.00 ರಿಂದ 10.30ರವರೆಗೆ ಬೆನ್ನಿ ದಯಾಳ್ ಮತ್ತು ತಂಡದವರ ಕಾರ್ಯಕ್ರಮವಿದೆ. ಬೆನ್ನಿ ದಯಾಳ್ ಕೂಡ ಹಲವು ಭಾಷೆಗಳಲ್ಲಿ ಹಾಡಿದ್ದು. ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ.
ಪೂರ್ವಭಾವಿ ಸಭೆ
ಅಕ್ಟೋಬರ್ 18ರಿಂದ 21ರವರೆಗೆ ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆಯುವ ಯುವ ದಸರಾ ಪೂರ್ವ ಭಾವಿ ಸಿದ್ಧತೆಯ ಬಗ್ಗೆ ಸರ್ಕಾರಿ ಅತಿಥಿಗೃಹದಲ್ಲಿ ಅಧಿಕಾರೇತರ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಯುವ ದಸರಾ ಉಪಸಮಿತಿಯಿಂದ ಮಾಡಿಕೊಂಡಿರುವ ಸಿದ್ಧತೆ ಬಗ್ಗೆ ಸಮಿತಿಯ ಅಧ್ಯಕ್ಷರಿಗೆ, ಉಪಾಧ್ಯಕ್ಷರಗಳಿಗೆ ಹಾಗೂ ಸದಸ್ಯರಿಗೆ ಯುವ ದಸರಾ ಆಹ್ವಾನ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ಅಗತ್ಯ ಸಹಕಾರ ನೀಡುವಂತೆ ಕೋರಲಾಯಿತು.
ಈ ಸಂದರ್ಭದಲ್ಲಿ ಅಧಿಕಾರೇತರ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಸೂಕ್ತವಾದ ಆಸನ ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಮಿತಿ ಅಗತ್ಯ ಸಹಕಾರ ನೀಡುವುದಾಗಿ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಯುವ ದಸರಾ ಉಪಸಮಿತಿಯ ಸಮನ್ವಯಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಕೆ.ಸವಿತಾ, ಸಮಿತಿಯ ಕಾರ್ಯಾಧ್ಯಕ್ಷ ರಾದ ಉಪ ವಿಭಾಗಾಧಿಕಾರಿ ರಕ್ಷಿತ್, ಸದಸ್ಯ ಕಾರ್ಯದರ್ಶಿ ಶುಭಾ, ಸಹಾ ಕಾರ್ಯದರ್ಶಿ ಚೆನ್ನಪ್ಪ, ದಸರಾಉಪ ಸಮಿತಿಯ ಅಧ್ಯಕ್ಷರಾದ ಆರ್.ಚೆಲುವರಾಜು, ಉಪಾಧ್ಯಕ್ಷರುಗಳಾದ ಹಿನಕಲ್ ನಂಜುಂಡ, ರಂಜಿತ್ ಹಾಗೂ ಕೆ.ಬಿ.ಸ್ವಾಮಿ ಮತ್ತು ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.