ಕನ್ನಡ ಸುದ್ದಿ  /  ಕರ್ನಾಟಕ  /  Kura Thangal: ಸರಳ, ನಿಗರ್ವಿ ಕೂರ ತಂಙಳ್ ಎಂಬ ವಿದ್ವಾಂಸರ ನಿರ್ಗಮನ, ಬಿಎಂ ಹನೀಫ್‌ ಲೇಖನ

Kura Thangal: ಸರಳ, ನಿಗರ್ವಿ ಕೂರ ತಂಙಳ್ ಎಂಬ ವಿದ್ವಾಂಸರ ನಿರ್ಗಮನ, ಬಿಎಂ ಹನೀಫ್‌ ಲೇಖನ

Kerala ಕರ್ನಾಟಕದ ಕರಾವಳಿಯಲ್ಲಿ ಜನಿಸಿ ಕೇರಳದಲ್ಲಿ ಜನಪ್ರಿಯರಾದ ವಿದ್ವಾಂಸ, ಸರಳತೆಗೆ ಹೆಸರಾದ ಮಂಗಳೂರಿನ ಉಳ್ಳಾಲದ ಖಾಜಿ ಆಗಿರುವ ಫಝಲ್ ಕೋಯಮ್ಮ ತಂಙಳ್(Qazi Assayed Fazal Koyamma Thangal Koorath) ಅವರನ್ನು ಹಿರಿಯ ಪತ್ರಕರ್ತ, ಲೇಖಕ ಬಿ.ಎಂ.ಹನೀಫ್‌ ನೆನಪಿಸಿಕೊಂಡಿದ್ದಾರೆ.

ಮಂಗಳೂರಿನ ಉಳ್ಳಾಲದ ಖಾಜಿ ಆಗಿರುವ ಫಝಲ್ ಕೋಯಮ್ಮ ತಂಙಳ್ ಅವರೀಗ ನೆನಪು ಮಾತ್ರ.
ಮಂಗಳೂರಿನ ಉಳ್ಳಾಲದ ಖಾಜಿ ಆಗಿರುವ ಫಝಲ್ ಕೋಯಮ್ಮ ತಂಙಳ್ ಅವರೀಗ ನೆನಪು ಮಾತ್ರ.

ರಾಜ್ಯದ ಸುನ್ನಿ ಮುಸ್ಲಿಮರ ಬಹುದೊಡ್ಡ ಶ್ರದ್ಧಾ ಕೇಂದ್ರಗಳಲ್ಲಿ ಒಂದಾದ ಮಂಗಳೂರಿನ ಉಳ್ಳಾಲದ ಖಾಜಿ ಆಗಿರುವ ಫಝಲ್ ಕೋಯಮ್ಮ ತಂಙಳ್(Qazi Assayed Fazal Koyamma Thangal Koorath) ಇಹಲೋಕದಿಂದ ಇವತ್ತು ನಿರ್ಗಮಿಸಿದ್ದಾರೆ. ( ಇನ್ನಾ ಲಿಲ್ಲಾಹಿ...) ಕರಾವಳಿಯಲ್ಲಿ ಲಕ್ಷಾಂತರ ಅಭಿಮಾನಿ ವರ್ಗವನ್ನು ಹೊಂದಿರುವ ಗುರುಗಳು ಇವರು. (ಇವರ ತಂದೆಯವರಾದ ತಾಜುಲ್ ಉಲಮಾ ಅವರೂ ಬಹುದೊಡ್ಡ ಇಸ್ಲಾಮಿಕ್ ವಿದ್ವಾಂಸರಾಗಿ ದಕ್ಷಿಣದ ರಾಜ್ಯಗಳಲ್ಲಿ ಹೆಸರುವಾಸಿಯಾಗಿದ್ದರು.)

ನಾನು ಸಾಮಾನ್ಯವಾಗಿ ಪ್ರಖ್ಯಾತ ಧಾರ್ಮಿಕ ಗುರುಗಳಿಂದ ಅಂತರ ಕಾಪಾಡಿಕೊಂಡದ್ದೇ ಹೆಚ್ಚು. ಸಮಾರಂಭಗಳಲ್ಲಿ ಭೇಟಿಯಾದಾಗ ಅವರಿಗೆ ಗೌರವಪೂರ್ವಕ ಕರಪಿಡಿದು ಸಲಾಮ್ ಹೇಳುವುದು ಬಿಟ್ಟರೆ ಉಳಿದಂತೆ ಅವರಲ್ಲಿಗೇ ಹೋಗಿ ಮಾತುಕತೆಯಾಡಿದ್ದು ಬಹಳ ಕಡಿಮೆ.

ಕೂರತ್ ತಂಙಳ್ ಎಂದೇ ಖ್ಯಾತಿ ಹೊಂದಿರುವ ಫಝಲ್ ತಂಙಳ್ ಅವರು ಪುತ್ತೂರು ಬಳಿಯ ಕೂರ ಎಂಬ ಪುಟ್ಟ ಗ್ರಾಮದಲ್ಲಿ ವಾಸವಾಗಿದ್ದರು. 15 ವರ್ಷಗಳ ಹಿಂದೆ ನನ್ನ ಮಾವನವರ ಒತ್ತಾಸೆ ಮೇರೆಗೆ ಒಮ್ಮೆ ಕೂರ ಗ್ರಾಮಕ್ಕೆ ಇವರನ್ನು ಭೇಟಿಯಾಗಲು ಹೋಗಿದ್ದೆ.

ಟ್ರೆಂಡಿಂಗ್​ ಸುದ್ದಿ

ನಾವು ಬೆಳಿಗ್ಗೆ ಐದೂವರೆಗೇ ಅಲ್ಲಿದ್ದೆವು. ಅಷ್ಟು ಹೊತ್ತಿಗೇ ಅವರ ಮನೆಯಲ್ಲಿ ಜನಜಾತ್ರೆ ನೆರೆದಿತ್ತು. ಸಾಮಾನ್ಯವಾಗಿ ದೈಹಿಕ ಮತ್ತು ಮಾನಸಿಕ ಕಿರಿಕಿರಿಗಳಿಂದ ಬಳಲಿರುವ ಜನರು ಇವರ ಬಳಿ ಬರುತ್ತಿದ್ದರು. ಅವರ ಮಾತುಗಳನ್ನು ಕೇಳಿ ಸಮಾಧಾನ ಹೊಂದಿ ಮರಳುತ್ತಿದ್ದರು. ಬಂದವರು ಏನಾದರೂ ಔಷಧಿ ಕೊಡಿ ಎಂದರೆ ಒಂದು ಬಾಟಲಿಯಲ್ಲಿ ನೀರು ಕೊಟ್ಟು 'ಪವಿತ್ರ ಖುರಾನ್ ನ ಇಂತಹ ಒಂದು ಅಧ್ಯಾಯವನ್ನು ಓದಿ ಇದಕ್ಕೆ ಊದಿ ಪ್ರತಿದಿನ ಕುಡಿಯಿರಿ' ಅನ್ನುತ್ತಿದ್ದರು. ನಾನು ಕಂಡಂತೆ ಇನ್ಯಾವ ಮಂತ್ರ ತಂತ್ರಗಳ ಗೊಡವೆಗೆ ಇವರು ಹೋಗುತ್ತಿರಲಿಲ್ಲ.

ನಾನು ಅವತ್ತು ಹೋದಾಗ ಇಷ್ಟೊಂದು ಪ್ರಸಿದ್ಧಿ ಹೊಂದಿರುವ ತಂಙಳ್ ಹೇಗಿರುತ್ತಾರೋ ಎಂಬ ಕುತೂಹಲವಿತ್ತು. ಮಸೀದಿಯ ಹಿಂಭಾಗಕ್ಕೆ ತಾಗಿಕೊಂಡಿದ್ದ ಪುಟ್ಟ ಹೆಂಚಿನ ಮನೆಯದು. ಹಿಂಭಾಗದ ಅಂಗಳದ ಮರದ ಬೆಂಚಿನಲ್ಲಿ ನಾವು ಹೋಗಿ ಕೂತೆವು.

ಸ್ವಲ್ಪ ಹೊತ್ತಲ್ಲಿ ಬನಿಯನ್ ಮತ್ತು ಪಂಚೆ ಉಟ್ಟಿದ್ದ ಮಧ್ಯವಯಸ್ಸಿನ ಒಬ್ಬರು ಬಾಗಿಲು ತೆರೆದು ಹೊರಬಂದರು. ಅವರನ್ನು ನೋಡಿ, 'ಇವರು ತಂಙಳ್ ಅವರ ಸೇವಕರು ಇರಬೇಕು' ಎಂದುಕೊಂಡೆ. ಅವರು ಮೆಟ್ಟಲಿಳಿದು ಬಾವಿ ಕಟ್ಟೆಗೆ ಹೋದರು. ಬಾವಿಗೆ ಹಗ್ಗ ಇಳಿಸಿ ಕೊಡಪಾನದಿಂದ ನೀರೆಳೆದು ಅಲ್ಲಿದ್ದ ಪ್ಲಾಸ್ಟಿಕ್ ಬಕೆಟ್ ತುಂಬಿಸಿ, ಅದನ್ನು ಎತ್ತಿಕೊಂಡು ಹಿತ್ತಲ ತುದಿಯಲ್ಲಿದ್ದ ಶೌಚಾಲಯಕ್ಕೆ ಹೋದರು.

ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಕೋಣೆಯೊಳಗೆ ಹೋದಾಗ, ನನ್ನ ಜೊತೆಗೆ ಬಂದಿದ್ದ ಒಬ್ಬ ಉಸ್ತಾದರು "ಇವರೇ ಕೂರ ತಂಙಳ್" ಎಂದು ಪಿಸುಗುಟ್ಟಿದರು. ನನಗೆ ಅವರ ಸರಳತೆ ಬಹಳ ಇಷ್ಟವಾಯಿತು.

ಸ್ವಲ್ಪ ಹೊತ್ತಿನ ಬಳಿಕ ಅವರ ಕೋಣೆಯೊಳಗೆ ಹೋಗಲು ನಮಗೆ ಕರೆ ಬಂತು. ಒಳಗೆ ಹೋದರೆ 7x 10 ಅಡಿ ಇರಬಹುದಾದ ಪುಟ್ಟ ಕೋಣೆ. ಪುಟ್ಟ ಮಂಚದ ಮೇಲೆ ಅವರು ಮಲಗಿದ್ದ ಹತ್ತಿಯ ಹಾಸಿಗೆ ಮಡಚಿ ಇಟ್ಟಿದ್ದರು. ಅವರು ಮಂಚದ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತಿದ್ದರು.

ನಮ್ಮ ಜೊತೆಗೆ ಸಂಬಂಧಿಕರ ಹೆಂಗಸರು, ಮಕ್ಕಳು ಸೇರಿ ಏಳೆಂಟು ಜನರು ಇದ್ದರು. ಕರೆದೊಯ್ದ ಉಸ್ತಾದ್ ಜೊತೆಗಿದ್ದರು. ಎಲ್ಲರನ್ನೂ ನೆಲದ ಮೇಲಿದ್ದ ಚಾಪೆಯಲ್ಲಿ ಕುಳಿತುಕೊಳ್ಳಲು ಹೇಳಿದರು. ನನಗ್ಯಾಕೊ ಮುಜುಗರ ಅನ್ನಿಸಿ ನಾನು ಗೋಡೆಗೆ ಒರಗಿ ನಿಂತೇ ಇದ್ದೆ. 'ಕುಳಿತುಕೊಳ್ಳಿ' ಎಂದು ನನ್ನ ಜೊತೆಗಿದ್ದ ಉಸ್ತಾದ್ ಹೇಳಿದರು. ‌ನಾನು "ಪರವಾಗಿಲ್ಲ, ನಿಂತೇ ಇರ್ತೀನಿ" ಅಂದೆ.

ಕೂರ ತಂಙಳ್ ನನ್ನ ಮುಜುಗರವನ್ನು ಅರ್ಥ ಮಾಡಿಕೊಂಡವರಂತೆ, ಅಲ್ಲಿದ್ದ ಶಿಷ್ಯನೊಬ್ಬನಿಗೆ ಒಳಗಿನ ಕೋಣೆಯಿಂದ ಕುರ್ಚಿ ತರಲು ಹೇಳಿದರು. ಆತ ಪ್ಲಾಸ್ಟಿಕ್ ಕುರ್ಚಿಯೊಂದನ್ನು ತಂದರು.‌ ಅವರು ಮಮತೆಯಿಂದ ಕುಳಿತುಕೊಳ್ಳಿ ಎಂದು ಸನ್ನೆ ಮಾಡಿದರು. ಕುಳಿತೆ.

ನನ್ನ ಜೊತೆಗೆ ಬಂದಿದ್ದವರು ಒಬ್ಬೊಬ್ಬರಾಗಿ ತಮ್ಮ ಸಮಸ್ಯೆ ಹೇಳಿಕೊಂಡರು. ಖುರಾನಿನ ಇಂತಹ ಅಧ್ಯಾಯವನ್ನು ಇಂತಿಷ್ಟು ದಿನ ಓದಿ ಎಂದು ಅವರು ಸಲಹೆ ನೀಡಿದರು. ಬೇರೆ ಯಾವುದೇ ತಾಯಿತ, ನೂಲು ಕೊಡಲಿಲ್ಲ. ಒಂದಿಬ್ಬರಿಗೆ ಮನಸ್ಸಿಗೆ ಸಾಂತ್ವನ ಹೇಳುವ ಮಾತುಗಳನ್ನು ಆಡಿದರು. ಕೊನೆಗೆ ಎಲ್ಲ ಹೊರಡುವಾಗ ನಾನು ಅವರ ಬಳಿ ಹೋಗಿ ಎರಡೂ ಹಸ್ತಗಳನ್ನು ಹಿಡಿದುಕೊಂಡು ಸಲಾಮ್ ಹೇಳಿದೆ. ಸ್ನೇಹಮಯ ಕಿರುನಗೆಯೊಂದಿಗೆ ಒಳಿತಾಗಲಿ ಎಂದು ಹಾರೈಸಿ ಕಳಿಸಿಕೊಟ್ಟರು.

ಅವರ ಕೋಣೆಯಿಂದ ಹೊರಗೆ ಬಂದಾಗ ಅಂಗಳದಲ್ಲಿ ಭೇಟಿಯಾಗಲು ಬಂದ ಜನಸಂದಣಿ ಇನ್ನಷ್ಟು ಹೆಚ್ಚಾಗಿತ್ತು. " ಇಡೀ ದಿನ ಅವರು ಪ್ರತಿಯೊಬ್ಬರನ್ನೂ ಮಾತನಾಡಿಸಿ ಕಳುಹಿಸುತ್ತಾರೆ. ಜನಸಂದಣಿ ನಿಯಂತ್ರಣಕ್ಕಾಗಿ ಜನರ ಭೇಟಿಯನ್ನು ಮುಂಗಡವಾಗಿ ಖಚಿತಪಡಿಸಿಕೊಂಡು ಸಂದರ್ಶಕರಿಗೆ ನಂಬರ್ ಪಡೆಯುವ ವ್ಯವಸ್ಥೆ ಇದೆ" ಎಂದು ನಮ್ಮ ಜೊತೆಗೆ ಬಂದಿದ್ದ ಉಸ್ತಾದ್ ಹೇಳಿದರು.

ಅವತ್ತು ಕೂರ ತಂಙಳರ ಸರಳತೆ ಮತ್ತು ವಿನಯಪೂರ್ವಕ ನಡವಳಿಕೆ ನೋಡಿ ನನಗೆ ಅಚ್ಚರಿ ಮಾತ್ರವಲ್ಲ, ಅವರ ಬಗ್ಗೆ ವಿಶೇಷ ಗೌರವ ಮೂಡಿತು. ಆ ಬಳಿಕ ಇಷ್ಟು ವರ್ಷಗಳಲ್ಲಿ ಅವರನ್ನು ಭೇಟಿಯಾಗುವ ಯಾವ ಸಂದರ್ಭವೂ ಬರಲಿಲ್ಲ. ಇವತ್ತು ಅವರು ನಿರ್ಗಮಿಸಿದ ಸುದ್ದಿ ಬಂದಾಗ ಈ ಘಟನೆ ನೆನಪಾಯಿತು.

ಜ್ಞಾನಸಂಪನ್ನ‌ ವ್ಯಕ್ತಿಗಳು ಅವರದ್ದೇ ಆದ ಒಂದು ನೆಮ್ಮದಿಯ ಸ್ಥಿತಿಯಲ್ಲಿರುತ್ತಾರೆ. ಸಾವಿರಾರು ಜನರು ಅವರ ಸುತ್ತ ಸೇರುವುದಾಗಲೀ, ಅವರ ಬಗ್ಗೆ ಅಭಿಮಾನ ವ್ಯಕ್ತ ಪಡಿಸುವುದಾಗಲೀ ಅವರಲ್ಲಿ ಯಾವ ಅಹಂಕಾರವನ್ನೂ ಮೂಡಿಸುವುದಿಲ್ಲ. ಅವರು ಸರಳವಾಗಿಯೇ ಬದುಕುತ್ತಾರೆ. ಕೂರ ತಂಙಳ್ ಅಂತಹ ವಿರಳ ಧರ್ಮಗುರುಗಳಲ್ಲಿ ಒಬ್ಬರಾಗಿದ್ದರು.