Karnataka Police: ಕರ್ನಾಟಕದ ಪೊಲೀಸ್‌ ಸಿಬ್ಬಂದಿಗೆ ಸಕಾಲಕ್ಕೆ ಸಿಗದ ಜುಲೈ ವೇತನ; ಅನುದಾನ ಕೊರತೆ ಆತಂಕ, ಯಾದಗಿರಿ ಎಸ್ಪಿ ಪತ್ರ ತಂದ ಗೊಂದಲ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Police: ಕರ್ನಾಟಕದ ಪೊಲೀಸ್‌ ಸಿಬ್ಬಂದಿಗೆ ಸಕಾಲಕ್ಕೆ ಸಿಗದ ಜುಲೈ ವೇತನ; ಅನುದಾನ ಕೊರತೆ ಆತಂಕ, ಯಾದಗಿರಿ ಎಸ್ಪಿ ಪತ್ರ ತಂದ ಗೊಂದಲ

Karnataka Police: ಕರ್ನಾಟಕದ ಪೊಲೀಸ್‌ ಸಿಬ್ಬಂದಿಗೆ ಸಕಾಲಕ್ಕೆ ಸಿಗದ ಜುಲೈ ವೇತನ; ಅನುದಾನ ಕೊರತೆ ಆತಂಕ, ಯಾದಗಿರಿ ಎಸ್ಪಿ ಪತ್ರ ತಂದ ಗೊಂದಲ

Karnataka Police department ಜುಲೈ ತಿಂಗಳ ವೇತನಕ್ಕೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ವೇತನ ಗೊಂದಲವನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ಅನುದಾನದ ಕೊರತೆ ವಿಚಾರ ಒಂದು ಕಡೆ ಇದ್ದರೆ, ಮತ್ತೊಂದು ಕಡೆ ತಾಂತ್ರಿಕ ತೊಂದರೆಗೂ ಆಗಿರುವುದನ್ನು ತಿಳಿಸಲಾಗಿದೆ.

ಕರ್ನಾಟಕದ ಪೊಲೀಸ್‌ ಸಿಬ್ಬಂದಿಗೆ ಜುಲೈ ವೇತನ ಬಾರದ ಕುರಿತು ಚರ್ಚೆಗಳು ನಡೆದಿವೆ.
ಕರ್ನಾಟಕದ ಪೊಲೀಸ್‌ ಸಿಬ್ಬಂದಿಗೆ ಜುಲೈ ವೇತನ ಬಾರದ ಕುರಿತು ಚರ್ಚೆಗಳು ನಡೆದಿವೆ.

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಜಾರಿ ನಂತರ ಹಲವು ಇಲಾಖೆಗಳಲ್ಲಿ ವೇತನ ಸಕಾಲಕ್ಕೆ ಪಾವತಿಯಾಗದ ಬಗ್ಗೆ ದೂರುಗಳಿ ಬರುತ್ತಿವೆ. ಸಾರಿಗೆ ಇಲಾಖೆಯಲ್ಲಿ ಅರ್ಧ ವೇತನ ಮಾತ್ರ ನೀಡಲಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆರೋಪಿಸಿದ ಬೆನ್ನಲ್ಲೇ ಕರ್ನಾಟಕ ಪೊಲೀಸ್‌ ಇಲಾಖೆಯಲ್ಲೂ ವೇತನ ಸಮಸ್ಯೆಯಾಗಿರುವ ಆರೋಪ ಕೇಳಿ ಬಂದಿದೆ.

ಜುಲೈ ತಿಂಗಳ ವೇತನಕ್ಕೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ವೇತನ ಗೊಂದಲವನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ಅನುದಾನದ ಕೊರತೆ ವಿಚಾರ ಒಂದು ಕಡೆ ಇದ್ದರೆ, ಮತ್ತೊಂದು ಕಡೆ ತಾಂತ್ರಿಕ ತೊಂದರೆಗೂ ಆಗಿರುವುದನ್ನು ತಿಳಿಸಲಾಗಿದೆ.

ಎಸ್ಪಿ ಪತ್ರದಲ್ಲೇನಿದೆ

ಯಾದಗಿರಿ ಪೊಲೀಸ್‌ ವರಿಷ್ಟಾಧಿಕಾರಿ ವೇದಮೂರ್ತಿ ಅವರು ಬರೆದಿರುವ ಪತ್ರದಲ್ಲಿ, ಈ ಮೂಲಕ ಎಲ್ಲಾ ಪೊಲೀಸ್‌ ಠಾಣಾ, ಘಟಕ, ವೃತ್ತ, ಉಪ ವಿಭಾಗದ ಅಧಿಕಾರಿಗಳಿಗೆ ತಿಳಿಸುವುದೇನಂದರೆ ಅನುದಾನ ಕೊರತೆ ಹಾಗೂ ಎಚ್‌ಆರ್‌ಎಂಎಸ್‌ ತಾಂತ್ರಿಕ ದೋಷದಿಂದಾಗಿ ಅಧಿಕಾರಿ/ ಸಿಬ್ಬಂದಿಗಳ ಜುಲೈ ತಿಂಗಳಲ್ಲಿ ವಾರ್ಷಿಕ ವೇತನ ಬಡ್ತಿ, ಮುಂಬಡ್ತಿ, ಮುಂಬಡ್ತಿ ವೇತನ ಬಡ್ತಿಗಳನ್ನು ಪರಿಶೀಲಿಸಿ ನಿಗದಿಪಡಿಸಬೇಕಾಗಿರುವ ಕಾರಣ ವೇತನ ವಿಳಂಬವಾಗಲಿದೆ. ಈ ಕುರಿತು ತಮ್ಮ ಅಧೀನ ಸಿಬ್ಬಂದಿಗೆ ಮಾಹಿತಿ ನೀಡುವುದು ಎಂದು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರದ ಪೊಲೀಸ್‌ ಇಲಾಖೆಗಳ ಸಿಐಡಿ ಸಹಿತ ಹಲವು ವಿಭಾಗಗಳಲ್ಲಿ ಇನ್ನೂ ವೇತನ ಆಗಿಲ್ಲ. ಸಾಮಾನ್ಯ ಠಾಣೆಯ ಪೊಲೀಸರಿಗೆ ವೇತನದ ಸಮಸ್ಯೆ ಆದಂತೆ ಕಾಣುತ್ತಿಲ್ಲ. ಕಾರಣ ನಮಗೆ ತಿಳಿದಿಲ್ಲ. ವಿಳಂಬವಾಗುವ ಬಗ್ಗೆ ಅಧಿಕಾರಿಗಳು ಮಾಹಿತಿಯನ್ನೂ ನೀಡಿದ್ದಾರೆ ಎಂದು ಮೈಸೂರು ಜಿಲ್ಲೆಯ ಪೊಲೀಸ್‌ ಸಿಬ್ಬಂದಿಯೊಬ್ಬರು ಖಚಿತಪಡಿಸಿದರು.

ಯತ್ನಾಳ್‌ ಟ್ವೀಟ್‌

ಪೊಲೀಸರ ವೇತನದ ಕುರಿತು ಬಿಜೆಪಿ ಹಿರಿಯ ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ ಟ್ವೀಟ್‌ ಮಾಡಿದ್ದಾರೆ.

*ಪತ್ರದ ಮೇಲೆ 2022 ಎಂದು ತಪ್ಪು ನಮೂದಾಗಿದೆ, ಪತ್ರವೂ ಜುಲೈ 2023 ರ ವೇತನದ ಬಗ್ಗೆ ಎಂದು ಯಾದಗಿರಿ ಎಸ್ಪಿ ಅವರು ಉಲ್ಲೇಖಿಸಿದ್ಧಾರೆ. ಕರ್ನಾಟಕ ಸರ್ಕಾರದಲ್ಲಿ ಪೊಲೀಸರಿಗೆ ಸಂಬಳ ನೀಡಲು ಹಣವಿಲ್ಲವೇ? ಯಾದಗಿರಿ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಗಳು ಸಂಬಳ ನೀಡಲು ಅನುದಾನ ಕೊರತೆ ಇರುವ ಬಗ್ಗೆ ಕೆಳಗಿನ ಅಧಿಕಾರಿಗಳಿಗೆ ಈ ಸಂದೇಶ ಕಳುಹಿಸಲು ಹೇಳಿರುವವರು ಯಾರು? ವ್ಯಾರಂಟಿ ಇಲ್ಲದ ಗ್ಯಾರಂಟಿಗಳ ಕಾರಣದಿಂದಾಗ ಸರ್ಕಾರ ಆರ್ಥಿಕವಾಗಿ ಸಂಕಷ್ಟ ಅನುಭವಿಸಬೇಕಿದೆ.ನೀವು ಹೇಳಿದಂತೆಯೂ ಮಾಡಲಿಲ್ಲ, ಕೊಟ್ಟ ಮಾತನ್ನು ಪೂರೈಸಲಿಲ್ಲ ! ಈಗ ಕರ್ನಾಟಕವನ್ನ ಈ ಸ್ಥಿತಿಗೆ ತಲುಪಿಸುತ್ತಿದ್ದೀರಿ ಎಂದು ಯತ್ನಾಳ್‌ ಟೀಕಿಸಿದ್ದಾರೆ.

ಗೃಹ ಸಚಿವ ಪರಮೇಶ್ವರ್‌ ಉತ್ತರ

ಈ ನಡುವೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್‌, ಯಾದಗಿರಿ ಜಿಲ್ಲೆಯಲ್ಲಿ ಪೊಲೀಸ್‌ ವೇತನದ ತಾಂತ್ರಿಕ ಸಮಸ್ಯೆಯಾಗಿರಬಹುದು. ಅದನ್ನು ಅಲ್ಲಿನ ಎಸ್ಪಿ ಸರಿಪಡಿಸುತ್ತಾರೆ. ಆದರೆ ಇಡೀ ರಾಜ್ಯದಲ್ಲೇ ಪೊಲೀಸರಿಗೆ ವೇತನ ದೊರೆತಿಲ್ಲ ಎನ್ನುವುದು ಸರಿಯಲ್ಲ. ಸರ್ಕಾರದ ಆರ್ಥಿಕ ಸ್ಥಿತಿ ಆ ಮಟ್ಟಕ್ಕೆ ಹೋಗಿಲ್ಲ. ಹೋಗಲು ಬಿಡುವುದಿಲ್ಲ. ಯತ್ನಾಳ್‌ ಅವರು ಎಲ್ಲವನ್ನು ಮಾಲೆ ಕಣ್ಣಿನಿಂದ ನೋಡುವುದನ್ನು ಬಿಡಬೇಕು ಎಂದು ಹೇಳಿದರು.

ಮಾಜಿ ಸಿಎಂ ಬೊಮ್ಮಾಯಿ ರಾಮಲಿಂಗಾರೆಡ್ಡಿ ಟ್ವೀಟ್‌ ವಾರ್‌

ಸಾರಿಗೆ ಇಲಾಖೆ ಸಂಬಳ ವಿಚಾರವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ನಡುವೆ ಟ್ವೀಟ್‌ ವಾರ್‌ ನಡೆದಿದೆ.

ರಾ ಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆ ಫಲಶೃತಿ ಸಾರಿಗೆ ನೌಕರರಿಗೆ ಅರ್ಧ ಸಂಬಳ ಮಾತ್ರ ಗ್ಯಾರೆಂಟಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಶಕ್ತಿ ಯೋಜನೆ ಜಾರಿಯಾದ ಮೊದಲ ತಿಂಗಳಿನಿಂದಲೇ ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ಆರ್ಥಿಕ ಬರೆಯನ್ನು ಎಳೆದಿದೆ. ಗ್ಯಾರೆಂಟಿ ಯೋಜನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಹಣ ಒದಗಿಸಿದ್ದೇವೆ ಎಂಬ ಹೇಳಿಕೆ ಮೊದಲನೇ ತಿಂಗಳು ಹುಸಿಯಾಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೆ ಉತ್ತರ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗೆ ವಾಡಿಕೆಯಂತೆ ಪ್ರತಿ ತಿಂಗಳ 1ನೇ ತಾರೀಖು ಸಂಬಳ ಜಮಾ ಮಾಡಲಾಗುತ್ತದೆ. ನೀವು ಮುಖ್ಯಮಂತ್ರಿಗಳಾಗಿದ್ದಾಗಲೂ ಸಹ ಇದನ್ನೇ ಮಾಡಲಾಗುತ್ತಿತ್ತು. ಕಳೆದ ತಿಂಗಳ ಸಂಬಳವನ್ನು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಜಮೆ ಮಾಡಲಾಗಿದೆ.ಉಳಿದಂತೆ ಎನ್.ಡಬ್ಲು.ಕೆ.ಆರ್.ಟಿ.ಸಿ., ಬಿ.ಎಂ.ಟಿ.ಸಿ. ಮತ್ತು ಕೆ.ಕೆ.ಆರ್.ಟಿ.ಸಿ. ಸಿಬ್ಬಂದಿಗೆ ಪ್ರತಿ ತಿಂಗಳ 7ನೇ ತಾರೀಖು ಸಂಬಳ ಜಮೆ ಮಾಡಲಾಗುತ್ತದೆ.ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ತಮಗೆ ಈ ಪ್ರಾಥಮಿಕ ಮಾಹಿತಿಗಳು ತಿಳಿದಿಲ್ಲವೆಂದೇನಲ್ಲ. ಸದ್ಯಕ್ಕೆ ವಿರೋಧ ಪಕ್ಷದಲ್ಲಿರುವ ತಾವು, ಹೀಗೆ ಜನತೆಗೆ ತಪ್ಪು ಮಾಹಿತಿಗಳನ್ನು ನೀಡುವುದನ್ನು ಬಿಟ್ಟು ಕ್ರಿಯಾತ್ಮಕ ಟೀಕೆ ಟಿಪ್ಪಣಿಗಳನ್ನು ಮಾಡಿದರೆ ನಾಡಿನ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.

ಇದಕ್ಕೆ ಮರು ಟ್ವೀಟ್‌ ಮಾಡಿರುವ ಬೊಮ್ಮಾಯಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರೇ ಶಕ್ತಿ ಯೋಜನೆ ಅಡಿ ರಾಜ್ಯದಲ್ಲಿ ಮಹಿಳೆಯರು ಸಾರಿಗೆ ನಿಗಮದ ಬಸ್ ಗಳಲ್ಲಿ ಜೂನ್ ತಿಂಗಳಲ್ಲಿ 20 ದಿನ ಉಚಿತ ಪ್ರಯಾಣ ಮಾಡಿರುವುದರಿಂದ ನಾಲ್ಕು ಸಾರಿಗೆ ನಿಗಮಗಳಿಗೆ 250 ಕೋಟಿ ರೂ. ವೆಚ್ಚವಾಗಿದ್ದು, ಪ್ರಯಾಣ ವೆಚ್ಚದ ಮರು ಪಾವತಿ ಮಾಡಲು ನಾಲ್ಕೂ ನಿಗಮಗಳಿಗೆ ಆಗಸ್ಟ್ 1 ರಂದು 125 ಕೋಟಿ ಬಿಡುಗಡೆ ಮಾಡಿ ನಿಮ್ಮದೇ ಇಲಾಖೆ ಆದೇಶ ಮಾಡಿದೆ.ಸಾರಿಗೆ ನಿಗಮಗಳ ಬೇಡಿಕೆಗೂ ಸರ್ಕಾರ ಬಿಡುಗಡೆ ಮಾಡಿರುವ ಅನುದಾನಕ್ಕೂ ಅರ್ಧದಷ್ಟು ಕಡಿಮೆ ಇದ್ದು, ಹೀಗಿರುವಾಗ ಮೊದಲೇ ನಷ್ಟದಲ್ಲಿ ನಡೆಯುತ್ತಿರುವ ಸಾರಿಗೆ ನಿಗಮಗಳಿಗೆ ಸಿಬ್ಬಂದಿ ಸಂಬಳ, ಬಸ್ ಗಳ ನಿರ್ವಹಣೆ, ಡಿಸೇಲ್ ಗೆ ಹಣದ ಕೊರತೆಯಾಗುವುದು ವಾಸ್ತವಿಕ ಸತ್ಯ. ಆ ಸತ್ಯವನ್ನೇ ನಾನು ರಾಜ್ಯದ ಜನತೆಗೆ ತಿಳಿಸಿದ್ದೇನೆ ಎಂದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

Whats_app_banner