ದಸರಾ ಉದ್ಘಾಟನೆಯಲ್ಲಿ ಕರ್ನಾಟಕ ರಾಜಕೀಯ ಪ್ರಸ್ತಾಪ; ಸರ್ಕಾರ ಅಸ್ಥಿರಗೊಳಿಸಬೇಡಿ, 5 ವರ್ಷ ಕಾಯಿರಿ ಎಂದು ಬಿಜೆಪಿ ಜೆಡಿಎಸ್‌ಗೆ ತಿವಿದ ಹಂಪನಾ
ಕನ್ನಡ ಸುದ್ದಿ  /  ಕರ್ನಾಟಕ  /  ದಸರಾ ಉದ್ಘಾಟನೆಯಲ್ಲಿ ಕರ್ನಾಟಕ ರಾಜಕೀಯ ಪ್ರಸ್ತಾಪ; ಸರ್ಕಾರ ಅಸ್ಥಿರಗೊಳಿಸಬೇಡಿ, 5 ವರ್ಷ ಕಾಯಿರಿ ಎಂದು ಬಿಜೆಪಿ ಜೆಡಿಎಸ್‌ಗೆ ತಿವಿದ ಹಂಪನಾ

ದಸರಾ ಉದ್ಘಾಟನೆಯಲ್ಲಿ ಕರ್ನಾಟಕ ರಾಜಕೀಯ ಪ್ರಸ್ತಾಪ; ಸರ್ಕಾರ ಅಸ್ಥಿರಗೊಳಿಸಬೇಡಿ, 5 ವರ್ಷ ಕಾಯಿರಿ ಎಂದು ಬಿಜೆಪಿ ಜೆಡಿಎಸ್‌ಗೆ ತಿವಿದ ಹಂಪನಾ

ಕರ್ನಾಟಕದಲ್ಲಿ ಕೆಲ ದಿನಗಳಿಂದ ನಡೆದಿರುವ ರಾಜಕೀಯ ಬೆಳವಣಿಗೆಗಳನ್ನು ಹಿರಿಯ ಸಾಹಿತಿ ಹಂಪನಾ ಅವರು ತಮ್ಮ ದಸರಾ ಉದ್ಘಾಟನಾ ಭಾಷಣದಲ್ಲಿ ಉಲ್ಲೇಖಿಸಿದರು. ಹೀಗಿತ್ತು ಅವರ ನಯವಾದ ಮಾತಿನ ತಿವಿತ.

ಮೈಸೂರು ದಸರಾ ಉದ್ಘಾಟನೆ ವೇದಿಕೆಯಲ್ಲಿ ಕರ್ನಾಟಕ ರಾಜಕೀಯದ ಚರ್ಚೆ ನಡೆಯಿತು,
ಮೈಸೂರು ದಸರಾ ಉದ್ಘಾಟನೆ ವೇದಿಕೆಯಲ್ಲಿ ಕರ್ನಾಟಕ ರಾಜಕೀಯದ ಚರ್ಚೆ ನಡೆಯಿತು,

ಮೈಸೂರು: ಯಾವುದೇ ಚುನಾಯಿತ ಸರ್ಕಾರವನ್ನು ಜನ ಕೊಟ್ಟ ಐದು ವರ್ಷದವರೆಗೂ ಅಸ್ಥಿರಗೊಳಿಸುವ ಕೆಲಸವನ್ನು ಯಾವುದೇ ರಾಜಕೀಯ ಪಕ್ಷಗಳು ಮಾಡಬಾರದು. ಹೀಗೆ ಮಾಡುವುದು ಮತ ನೀಡಿದ ಮತದಾರನಿಗೆ ಮಾಡುವ ಅವಮಾನ. ಮತ್ತೆ ಚುನಾವಣೆ ನಡೆಸುವುದು, ಜನ ಸಾಮಾನ್ಯರ ಮೇಲೆ ಹೊರೆ ಹೊರೆಸುವುದು ಬೇಡ ಎನ್ನಿಸುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದೂ ಇಲ್ಲ. ಇಂತಹ ದೂರಾಲೋಚನೆಯನ್ನು ಪ್ರತಿಪಕ್ಷಗಳು ಕೈ ಬಿಡಬೇಕು. ನಾಡಿನ ಅಭಿವೃದ್ದಿಗೆ ಒಳ್ಳೆಯ ಬೆಳವಣಿಗೆಯೂ ಅಲ್ಲ ಸೋತ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು, ಜನಮನವನ್ನು ತಮ್ಮ ಪರವಾಗಿ ಒಲಿಸಿಕೊಳ್ಳಲು ಐದುವರ್ಷದಲ್ಲಿ ಸಜ್ಜಾಗಬಹುದು ಎಂದು ಹಿರಿಯ ಸಾಹಿತಿ ಹಂಪನಾಗರಾಜಯ್ಯ ಬಿಜೆಪಿ ಹಾಗೂ ಜೆಡಿಎಸ್‌ಗೆ ಪರೋಕ್ಷ ಸಂದೇಶ ನೀಡಿದರು.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಗುರುವಾರ ಆರಂಭಗೊಂಡ ದಸರಾ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಈಗಿನ ಪರಿಸ್ಥಿತಿಯನ್ನು ಉಲ್ಲೇಖಿಸಿದರು. ಅದರಲ್ಲೂ ಕಾಂಗ್ರೆಸ್‌ ಹಾಗೂ ಬಿಜೆಪಿ- ಜೆಡಿಎಸ್‌ನ ರಾಜಕಾರಣವನ್ನೂ ಪರೋಕ್ಷವಾಗಿ ಪ್ರಸ್ತಾಪಿಸಿದರು.

ಸರಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆದು, ಚುನಾಯಿತ ಸರಕಾರಗಳನ್ನು ಉಳಿಸುವ ಚಿಂತನೆಗಳನ್ನು ಲೋಕಾಂಬಿಕೆಯು ಮೂಡಿಸಲೆಂದು ಬೇಡುತ್ತೇನೆ. ಕೆಡವುವುದು ಸುಲಭ, ಕಟ್ಟುವುದು ಕಷ್ಟ, ಮೊದಲೇ ದೊಡ್ಡ ಹೊರೆಗಳಿಂದ ಬಳಲಿ ಬಸವಳಿದಿರುವ ಶ್ರೀಸಾಮಾನ್ಯರ ಹೆಗಲಿಗೆ ಮತ್ತೆ ಮತ್ತೆ ನಡೆಯುವ ಚುನಾವಣೆಗಳು ಇನ್ನಷ್ಟು ಭಾರ ಹೇರಿದರೆ ಕುಸಿಯುತ್ತಾನಷ್ಟೆ ಯಾವ ಪಕ್ಷವೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದು ಅಸಾಧ್ಯ. ಚಕ್ರಾರ ಪಂಕ್ತಿರಿವ ಗಚ್ಛತಿ ಭಾಗ್ಯ ಪಂಕ್ತಿ ಎಂದು ಸಾಲುಗಳನ್ನೂ ಉಲ್ಲೇಖಿಸಿದರು.

ಜೋಡಿ ಕುಸ್ತಿ ಪೈಲ್ವಾನರು

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಸಮರ್ಥ ರಾಜಕೀಯ ಕುಸ್ತಿ ಪಟುಗಳು, ಪೈಲ್ವಾನರು ಎಂದು ಹೊಗಳಿದ ಹಂಪನಾ, ಇಬ್ಬರೂ ಎಲ್ಲಾ ರಾಜಕೀಯ ಪಟ್ಟುಗಳನ್ನು ತಿಳಿದಿದ್ದಾರೆ. ರಾಜಕೀಯದಲ್ಲಿ ಕುಸ್ತಿ ಆಡುತ್ತಲೇ ಮೇಲೆ ಬಂದಿದ್ದಾರೆ. ಅವರಿಬ್ಬರೂ ನಿಜವಾದ ಕುಸ್ತಿಪಟುಗಳೇ ಎಂದು ಹೇಳಿದರು.

ಸರ್ಕಾರ ಅಸ್ಥಿರ ಅಸಾಧ್ಯ

ಇದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಜನರಿಂದ ಆಯ್ಕೆಯಾದ ಚುನಾಯಿತ ಸರ್ಕಾರವನ್ನು ಯಾರು ಅಸ್ಥಿರ ಗೋಳಿಸಬಾರದು. ನಮಗೆ ಜನರು ಅಭಿವೃದ್ಧಿ ಮಾಡಲು 5 ವರ್ಷ ಅಧಿಕಾರ ನೀಡಿದ್ದಾರೆ. ಸತ್ಯಕ್ಕೆ ಯಾವಾಗಲೂ ಜಯ ದೊರೆಯುತ್ತದೆ. ಜನರ ಆಶೀರ್ವಾದ, ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಇರುವವರೆಗೆ ಯಾರು ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ನಾನು ಇಲ್ಲಿಯವರೆಗೆ 9 ಚುನಾವಣೆಗಳಲ್ಲಿ ಗೆದ್ದಿದ್ದೇನೆ. 1984 ರಲ್ಲಿ ನಾನು ಮಂತ್ರಿಯಾದೆ. ಮೊದಲ ಬಾರಿ ಮಂತ್ರಿಯಾಗಿ 40 ವರ್ಷ ಆಗಿದೆ. ನಾವು ಅಧಿಕಾರಕ್ಕೆ ಬರುವ ಮುಂಚೆ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದೂ. ಅಧಿಕಾರಕ್ಕೆ ಬಂದ ನಂತರ 5 ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಪ್ರತಿ ಕುಟುಂಬಕ್ಕೆ ವಾರ್ಷಿಕ 40 ರಿಂದ 50 ಸಾವಿರ ಸೌಲಭ್ಯ ದೊರೆಯುತ್ತಿದೆ. 1.21 ಕೋಟಿ ಕುಟುಂಬ ಗೃಹ ಲಕ್ಷ್ಮಿ, 1.6 ಕೋಟಿ ಕುಟುಂಬ ಗೃಹ ಜ್ಯೋತಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ. 1.86 ಲಕ್ಷ ಯುವಕರು ಯುವನಿಧಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಬಿಪಿಎಲ್ ಕುಟುಂಬಗಳ ಸದಸ್ಯರಿಗೆ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಗೆ ಹಣ ನೀಡಲಾಗುತ್ತಿದೆ. ರಾಜ್ಯದ ಪ್ರತಿಯೊಬ್ಬ ಮಹಿಳೆಯು ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.

ಸಾಹಿತ್ಯ ಪೈಲ್ವಾನ್‌

ತಮ್ಮ ಭಾಷಣದಲ್ಲಿ ಹಂಪನಾ ಅವರ ಸಾಹಿತ್ಯ ಸಾಧನೆಯನ್ನ ಹೊಗಳಿದ ಡಿಸಿಎಂ ಡಿಕೆ ಶಿವಕುಮಾರ್‌, ಅವರು ಏಳು ದಶಕದಿಂದಲೂ ಸಾಹಿತ್ಯ, ಸಾಮಾಜಿಕ ಕ್ಷೇತ್ರದಲ್ಲಿದ್ದಾರೆ. ಅವರೊಬ್ಬ ಸಾಹಿತ್ಯ ಪೈಲ್ವಾನ್‌ ಎಂದು ಬಣ್ಣಿಸಿದರು.

Whats_app_banner