ಟೊಮೆಟೊ ದರ ಭಾರಿ ಕುಸಿತ; ಉತ್ಪಾದನೆ ಹೆಚ್ಚಳ, ಕರ್ನಾಟಕ ರೈತರಿಗೆ ಬಾಂಗ್ಲಾದೇಶದ ರಾಜಕೀಯ ಬಿಕ್ಕಟ್ಟಿನ ಹೊಡೆತ
15 ಕೆಜಿ ತೂಕದ 1 ಕ್ರೇಟ್‌ಗೆ 800 ರಿಂದ 1000 ರೂಪಾಯಿ ವರೆಗೆ ಇದ್ದ ಟೊಮೆಟೊ ಬೆಲೆಯಲ್ಲಿ ಭಾರಿ ಕುಸಿತವಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆಯುವ ಚಿಕ್ಕಬಳ್ಳಾಪುರ, ಕೋಲಾರದ ರೈತರಿಗೆ ಭಾರಿ ಹೊಡೆತ ನೀಡಿದೆ.
ಬೆಂಗಳೂರು: ಬಿರು ಬೇಸಿಗೆಯಲ್ಲಿ ರೋಗವನ್ನು ನಿಯಂತ್ರಿಸುವುದರೊಂದಿಗೆ ಕಷ್ಟಪಟ್ಟು ಟೊಮೆಟೊ ಬೆಳೆ ಬೆಳೆದಿದ್ದ ರೈತರು ಸ್ವಲ್ಪ ಮಟ್ಟಿಗೆ ಕಾಸು ಮಾಡಿಕೊಂಡಿದ್ದಾರೆ. ಬೆಲೆ ಸ್ವಲ್ಪ ದಿನಗಳ ಕಾಲ ಹೀಗೆ ಇರುತ್ತೆ ಎನ್ನುವಷ್ಟರಲ್ಲಿ ಭಾರಿ ನಿರಾಸೆಯನ್ನು ಅನುಭವಿಸುವಂತಾಗಿದ್ದು, ನಷ್ಟದಲ್ಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ 15 ಕೆಜಿ ತೂಕದ 1 ಟೊಮೆಟೊ ಬಾಕ್ಸ್ ಬೆಲೆ 800 ರಿಂದ 1000 ರೂಪಾಯಿ ವರೆಗೆ ಇತ್ತು. ಆದರೆ ಇದೀಗ 250 ರಿಂದ 300 ರೂಪಾಯಿಗೆ (Tomato Price) ಬಂದಿದೆ. ಇದು ಅನ್ನದಾತರಿಗೆ ಶಾಕ್ ನೀಡಿದಂತಾಗಿದೆ. ವಿಶೇಷವಾಗಿ ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರದ ರೈತರಿಗೆ ಇದು ಹೊಡೆತವಾಗಿದೆ.
ಹಬ್ಬದ ಸೀಸನ್ ಇದ್ದು, ಈ ವೇಳೆ ಟೊಮೆಟೊಗೆ ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಉತ್ಪಾದನೆ ಹೆಚ್ಚಳ, ಬಾಂಗ್ಲಾದೇಶಕ್ಕೆ ರಪ್ತು ಆಗದಿರುವುದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳು ಎಂದು ಹೇಳಲಾಗುತ್ತಿದೆ. ಏಷ್ಯಾದ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎನಿಸಿರುವ ಕೋಲಾರದ ಮಾರುಕಟ್ಟೆಗೆ (Kolar Tomato Market) ಕಳೆದ ಕೆಲ ವಾರಗಳಿಂದ ಹಿಂದೆ ರೈತರು 3 ಲಕ್ಷ ಟೊಮೆಟೊ ಬಾಕ್ಸ್ ಪೂರೈಕೆ ಮಾಡುತ್ತಿದ್ದರು. ಆದರೆ ಪ್ರಸ್ತುತ 10 ಲಕ್ಷ ಟೊಮೆಟೊ ಬಾಕ್ಸ್ ಬರುತ್ತಿದೆ. ಆದರೆ ಬೇಡಿಕೆ ಕಡಿಮೆ ಇರುವ ಪರಿಣಾಮವಾಗಿ ಬೆಲೆ ಕುಸಿತವಾಗಿದೆ ಎಂದು ಕೋಲಾರದ ಎಪಿಎಂಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ ಮಾತ್ರವಲ್ಲದೆ, ನೆರೆಯ ಆಂಧ್ರ ಪ್ರದೇಶದಿಂದಲೂ ಸಾವಿರಾರು ಬಾಕ್ಸ್ ಟೊಮೆಟೊ ಕೋಲಾರದ ಮಾರುಕಟ್ಟೆಗೆ ಬರುತ್ತಿದೆ. ಪೂರೈಕೆ 3 ಪಟ್ಟು ಹೆಚ್ಚಾಗಿದ್ದು, ಬೇಡಿಕೆ ಕುಸಿತವಾಗಿದೆ. ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಗಗನಕ್ಕೇರಿದ ಟೊಮೆಟೊ ದರ: ದಕ್ಷಿಣದತ್ತ ಕೇಂದ್ರ ಚಿತ್ತ
ನಿತ್ಯ 900 ಬಾಕ್ಸ್ ಹೊತ್ತ 40 ಲಾರಿಗಳು ಕೋಲಾರದಿಂದ ಬಾಂಗ್ಲಾದೇಶಕ್ಕೆ ಟೊಮೆಟೊ ಪೂರೈಕೆ ಮಾಡಲಾಗುತ್ತಿತ್ತು. ಅಲ್ಲಿ ರಾಜಕೀಯ ಉದ್ವಿಗ್ನತೆ ಆರಂಭವಾದ ನಂತರ ಕೇವಲ 15 ರಿಂದ 20 ಲಾರಿಗಳು ಮಾತ್ರ ನೆರೆಯ ದೇಶಕ್ಕೆ ಉತ್ಪನ್ನವನ್ನು ಹೊತ್ತು ಸಾಗುತ್ತಿವೆ. ಆದರೆ ಕಳೆದ ವಾರದಿಂದ ಈ ರಫ್ತು ಸಂಪೂರ್ಣವಾಗಿ ಸ್ಥಗಿತವಾಗಿದೆ.
ಬಾಂಗ್ಲಾದೇಶದ ಮಾತ್ರವಲ್ಲದೆ, ದೇಶದ ವಿವಿಧ ರಾಜ್ಯಗಳು ಕೂಡ ಕೋಲಾರ ಮಾರುಕಟ್ಟೆಯಿಂದ ಟೊಮೆಟೊ ಖರೀದಿಯನ್ನು ಕಡಿತ ಮಾಡಿವೆ. ಇದರಲ್ಲಿ ಪಶ್ಚಿಮ ಬಂಗಾಳದ ವ್ಯಾಪಾರಿಗಳು ಸೇರಿದ್ದಾರೆ. ಇತ್ತ ರಾಜಧಾನಿ ಬೆಂಗಳೂರಿಗೂ (Tomato Price in Bangalore) ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನ ಪೂರೈಕೆಯಾಗುತ್ತಿದೆ. ಅತ್ಯುತ್ತಮ ಗುಣಮಟ್ಟದ ಟೊಮೆಟೊವನ್ನು ಕೆಜಿಗೆ 20 ರಿಂದ 25 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ದ್ವಿತೀಯ ದರ್ಜೆಯ ಹಣ್ಣುಗಳನ್ನು 15 ರೂಪಾಯಿ ಹಾಗೂ ತೃತೀಯ ದರ್ಜೆಯ ಹಣ್ಣುಗಳನ್ನು ಕೆಜಿಗೆ 8 ರಿಂದ 10 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಪ್ರಮುಖವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಟೊಮೆಟೊ ಬೆಳಗಾರರಿಗೆ ಭಾರಿ ಹೊಡೆತವನ್ನು ನೀಡಿವೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಟೊಮೆಟೊಗೆ ಸರಿಯಾದ ಬೆಲೆ ಸಿಗದಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.