ರಾಜೀವ್ ಹೆಗಡೆ ಲೇಖನ: ಜ್ಞಾನ ದೇಗುಲಕ್ಕೆ ಸಂಬಂಧಿಸಿ ಧೈರ್ಯವಾದ ಪ್ರಶ್ನೆ, ಕೈ ಮುಗಿದು ಉತ್ತರಿಸಿ!
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಲುವು ಹಾಗೂ ಸರ್ಕಾರದ ಕ್ರಮದ ಕುರಿತು ಲೇಖಕ ರಾಜೀವ್ ಹೆಗಡೆ ಇಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
1. ಅಕ್ರಮವಾಗಿ ಎಂಡಿ ಸೀಟು ಹಂಚಿದ್ದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಐದು ಲಕ್ಷ ರೂಪಾಯಿ ದಂಡ!
2. ನಿಯಮ ಬಾಹಿರವಾಗಿ ಎಂಡಿ ಸೀಟು ಹಂಚಿದ್ದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಒಂದು ಲಕ್ಷ ರೂಪಾಯಿ ದಂಡ!
3. ಪರೀಕ್ಷಾ ಪ್ರಾಧಿಕಾರದ ಸೀಟು ಹಂಚಿಕೆ ಬಗ್ಗೆ ಸಮಗ್ರ ತನಿಖೆ ಆಗಬೇಕು: ರಾಷ್ಟ್ರೀಯ ವೈದ್ಯಕೀಯ ಆಯೋಗ!
ಕೆಲ ತಿಂಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದಿರುವ ಬೆಳವಣಿಗೆಯಿದು. ಹಾಲಿ ಶೈಕ್ಷಣಿಕ ವರ್ಷದ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ ಎಂದು ಹೈಕೋರ್ಟ್ ಎರಡು ದಂಡ ಹಾಕಿದೆ. ನಿಯಮ ಬಾಹಿರವಾಗಿ ಸೀಟು ಹಂಚಿಕೆ ಪ್ರಕ್ರಿಯೆ ನಡೆದಿದೆ, ಸಮಗ್ರ ತನಿಖೆ ಆಗಬೇಕು ಎಂದು ವೈದ್ಯ ಕೋರ್ಸ್‌ಗಳಿಗೆ ಸಂಬಂಧಿಸಿದ ಸರ್ವೋಚ್ಛ ಸಂಸ್ಥೆಯು ಆಗ್ರಹಿಸಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಮಾತ್ರ ಸತತ ವರ್ಗಾವಣೆ ಆಗಿರುವ ಓರ್ವ ಅಧಿಕಾರಿಗೆ ರತ್ನಗಂಬಳಿಯ ಜತೆಗೆ ಮೇವು ಹಾಕಿಕೊಂಡು ಸಲಹುತ್ತಿದೆ. ಇಷ್ಟೊಂದು ಬಹಿರಂಗವಾಗಿ ಅಕ್ರಮಗಳು ನಡೆದಿದೆ, ಕೋರ್ಟ್ ದಂಡ ಹಾಕುತ್ತಿದೆ ಎಂದಾದರೆ ವ್ಯವಸ್ಥೆ ಎನ್ನುವುದರ ಅಗತ್ಯವೇನಿದೆ.
ಹೀಗೊಂದು ಕಾಲವಿತ್ತು!
ಒಂದು ದಶಕಗಳ ಹಿಂದಿನ ಕಥೆಯದು. ಆಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿಜಯಪುರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜೊಂದಕ್ಕೆ ವಿದ್ಯಾರ್ಥಿನಿಯೊಬ್ಬಳು ನಕಲಿ ಪ್ರಮಾಣಪತ್ರದ ಮೂಲಕ ಪ್ರವೇಶ ಪಡೆದಿದ್ದಾಳೆ ಎನ್ನುವ ದಾಖಲೆ ನನಗೆ ದೊರೆತಿತ್ತು. ಈ ಸುದ್ದಿ ಬರೆದ ಕೂಡಲೇ, ಆಕೆ ಸದ್ದಿಲ್ಲದೇ ಸೀಟನ್ನು ಸರೆಂಡರ್ ಮಾಡಿ ಶಾಂತವಾಗಿದ್ದಳು. ಆದರೆ ಆ ಪ್ರಕರಣದ ಜಾಡು ಹಿಡಿದು ಹೋದಾಗ ಸುಮಾರು 53 ವಿದ್ಯಾರ್ಥಿಗಳಿಗೆ ಇದೇ ರೀತಿ ಅಕ್ರಮವಾಗಿ ಸೀಟು ಹಂಚಿಕೆ ಮಾಡಲಾಗಿದೆ ಎನ್ನುವ ನಿಖರ ಮಾಹಿತಿ ದೊರೆಯಿತು. ಅದಕ್ಕೆ ಪೂರಕವಾಗಿ ನನಗೆ ಒಂದಿಷ್ಟು ನಿರ್ದಿಷ್ಟ ದಾಖಲೆಗಳು ಕೂಡ ದೊರೆತವು. ಆ ತನಿಖಾ ವರದಿಯನ್ನು ಸಾಯಿಸಲು ಆಗಿನ ಸರ್ಕಾರದಲ್ಲಿದ್ದ ಕೆಲ ಪ್ರಭಾವಿಗಳು ಪ್ರಯತ್ನ ಕೂಡ ಮಾಡಿದರು. ಆದರೆ ಹರ ಸಾಹಸದ ಬಳಿಕ ನನ್ನ ಸುದ್ದಿಯು ಅಂದಿನ ನಿರ್ದೇಶಕರ ಕೈಗೆ ಸಿಕ್ಕಾಗ, ದಿಗ್ಭ್ರಾಂತರಾದರು. ಮೂರು ದಿನ-ರಾತ್ರಿ ಕಚೇರಿಯಲ್ಲೇ ಕುಳಿತು, ದೊಡ್ಡ ಹಗರಣವನ್ನು ಖಾತ್ರಿ ಪಡಿಸಿದರು. ಸುಮಾರು 7500 ವಿದ್ಯಾರ್ಥಿಗಳ ದಾಖಲೆಯನ್ನು ದಾಖಲೆ ಪರಿಶೀಲನೆ ಬಳಿಕ ನಿಯಮ ಬಾಹಿರವಾಗಿ ತಿದ್ದಿರುವುದು ಬೆಳಕಿಗೆ ಬಂತು. ಅದರಲ್ಲಿ ಸಾಕಷ್ಟು ಜನರಿಗೆ ಪ್ರತಿಷ್ಠಿತ ವೈದ್ಯ ಹಾಗೂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ನೀಡಲಾಗಿತ್ತು. ಅಂತಹ ಸೀಟು ಪಡೆದ ವಿದ್ಯಾರ್ಥಿನಿಯ ಪಾಲಕರೊಬ್ಬರು ಹಣದ ಆಮಿಷವನ್ನು ಕೂಡ ಹಾಕಿದ್ದರು. ಅಂದಿನ ಸಿದ್ದರಾಮಯ್ಯ ಸರ್ಕಾರವು, ಈ ಕುರಿತು ಸಿಐಡಿ ತನಿಖೆಗೆ ಆದೇಶ ಕೂಡ ನೀಡಿತ್ತು. ಪ್ರಾಧಿಕಾರದ ಆಡಳಿತಾಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ಪ್ರಕರಣದಲ್ಲಿನ ಕೆಲ ತಿಮಿಂಗಿಲಗಳು ಸಿಐಡಿ ಕುಣಿಕೆಗೆ ಸಿಕ್ಕಿರಲಿಲ್ಲ.
ಇಷ್ಟಾದ ಬಳಿಕವೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಪಾಲಕರು ಹಾಗೂ ವಿದ್ಯಾರ್ಥಿಗಳ ಅಹವಾಲನ್ನು ಮುಕ್ತವಾಗಿ ಕೇಳುವ ಮನಃಸ್ಥಿತಿಯಲ್ಲಿತ್ತು. ಯಾವುದೇ ಕ್ಷಣದಲ್ಲೂ ಕಚೇರಿಗೆ ಹೋಗಿ ಗೊಂದಲ ನಿವಾರಣೆ ಮಾಡಿಕೊಳ್ಳಬಹುದಿತ್ತು. ಇದಲ್ಲದೇ ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಹಳೆಯ ಸೀಟ್ ಬ್ಲಾಕಿಂಗ್ ಅಕ್ರಮ ತಡೆದಿದ್ದಕ್ಕಾಗಿ ಕೆಲ ಪಾಲಕರು ನೇರವಾಗಿ ನಿರ್ದೇಶಕರ ಕಚೇರಿಗೆ ಬಂದು ಅವಾಜು ಹಾಕುವಷ್ಟು ಸ್ವಾತಂತ್ರ್ಯವನ್ನು ಕೂಡ ಅಂದಿನ ಆಡಳಿತ ಮಂಡಳಿ ನೀಡಿತ್ತು. ಇದಕ್ಕೆ ನಾನು ಖುದ್ದು ಸಾಕ್ಷಿಯಿದ್ದೇನೆ.
ಈಗಿನ ಕಾಲ ಹೇಗಿದೆ?
ಪರೀಕ್ಷಾ ಪ್ರಾಧಿಕಾರದ ಬಗ್ಗೆ ಸರಣಿ ಗುರುತರ ಆರೋಪಗಳು ಬರುತ್ತಿವೆ. ಕೋರ್ಟ್ ಆದೇಶ ಹಾಗೂ ಒಟ್ಟಾರೆ ವಿಷಯಗಳನ್ನು ಗಮನಿಸಿದಾಗ ದಶಕದ ಹಿಂದಿನ ಹಗರಣವು ಮತ್ತೆ ದೊಡ್ಡ ರೂಪದಲ್ಲಿ ಆಗಿರಬಹುದೇನೋ ಎನ್ನುವ ಸಂದೇಹ ಜನಸಾಮಾನ್ಯನಾಗಿ ನನಗೆ ಮೂಡುತ್ತಿದೆ. ತನಿಖಾ ಪತ್ರಿಕೋದ್ಯಮಕ್ಕೆ ಇದು ಪಕ್ಕಾ ವಿಷಯವಾಗಿದೆ. ಇನ್ನೊಂದೆಡೆ ಸರ್ಕಾರದ ದಿವ್ಯ ನಿರ್ಲಕ್ಷ ಹಾಗೂ ಅಲ್ಲಿಯ ವಿವಾಧಿತ ಅಧಿಕಾರಿಯ ರಕ್ಷಣೆಯನ್ನು ಗಮನಿಸಿದರೆ, ಅಕ್ರಮದ ವಾಸನೆ ಬಲು ಜೋರಾಗಿಯೇ ಬರುತ್ತಿದೆ. ಕೋರ್ಟ್‌ನಿಂದ ಎರಡು ಬಾರಿ ದಂಡ ಹಾಕಿದ ಬಳಿಕವೂ ಪ್ರಾಧಿಕಾರದ ಜವಾಬ್ದಾರಿ ಹೊತ್ತ ಅಧಿಕಾರಿಯ ತಲೆದಂಡ ಆಗುವುದಿಲ್ಲ ಎಂದಾದರೆ, ಅವರಿಗೆ ತುಂಬಾ ದೊಡ್ಡವರ ಬೆಂಬಲವಿದೆ ಎನ್ನುವುದು ಮಾತ್ರ ಖಾತ್ರಿಯಾಗುತ್ತದೆ. ಇನ್ನೊಂದೆಡೆ ನನ್ನ ಮಾಧ್ಯಮ ಸ್ನೇಹಿತರು ಹೇಳುವಂತೆ ಈಗಿನ ಪ್ರಾಧಿಕಾರದಲ್ಲಿ ಮಾಹಿತಿ ಹಾಗೂ ಪಾರದರ್ಶಕತೆಗೆ ಸಾಕಷ್ಟು ನಿರ್ಬಂಧಗಳಿವೆಯಂತೆ.
ಹಿಂದೆ ಹೇಳಿದ್ದು ನಿಜವಾಗುತ್ತಿದೆ!
ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಇನ್ನೊಂದು ಕೆಪಿಎಸ್‌ಸಿ ಅಕ್ರಮ ಕೂಟ ಮಾಡಲಾಗುತ್ತಿದೆ ಹಾಗೂ ವ್ಯವಸ್ಥಿತ ಕಾನೂನು ಚೌಕಟ್ಟಿಲ್ಲದೇ ಎಲ್ಲ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ಬರೆದಿದ್ದೆ. ಹಾಗೆಯೇ ಈ ಬಗ್ಗೆ ಸ್ವಲ್ಪ ಧ್ವನಿ ಎತ್ತಿ ಎಂದು ನನಗೆ ತಿಳಿದಿರುವ ಕೆಲ ಜನ ಪ್ರತಿನಿಧಿಗಳು ಹಾಗೂ ಪ್ರಭಾವಿಗಳಿಗೆ ಮನವಿ ಮಾಡಿದ್ದೆ. ಆದರೆ ಅವರ ಧ್ವನಿಗೂ ಬೆಲೆಯಿಲ್ಲದಷ್ಟು ವ್ಯವಸ್ಥೆ ಹದಗೆಟ್ಟಿದೆ. ಪರೀಕ್ಷಾ ಪ್ರಾಧಿಕಾರಕ್ಕೆ ಹಾಕಿರುವ ಬೇಲಿಯನ್ನು ತೆಗೆದು ಪಾರದರ್ಶಕ ಮಾಡಿದರೆ ಏನೇನು ಹೊರಗೆ ಬರುತ್ತದೆ ಎನ್ನುವುದನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಪರೀಕ್ಷಾ ಪ್ರಾಧಿಕಾರಕ್ಕೆ ಹಿಡಿಯುತ್ತಿರುವ ವೈರಸ್‌ಗೆ ತುರ್ತಾಗಿ ಲಸಿಕೆ ಹಾಕಿಸದಿದ್ದರೆ, ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಮಾದರಿ ಪರೀಕ್ಷಾ ಪ್ರಾಧಿಕಾರವು ಇನ್ನಷ್ಟು ಅಧೋಗತಿಗೆ ಹೋಗುವುದರಲ್ಲಿ ಸಂಶಯವಿಲ್ಲ.
ಜ್ಞಾನದೇಗುಲವಿದು, ಧೈರ್ಯವಿದ್ದರೆ ಉತ್ತರಿಸಿ!
1. ಹೈಕೋರ್ಟ್‌ನ ಎರಡು ಆದೇಶದ ಬಳಿಕವೂ ಸಾಕಷ್ಟು ಬಾರಿ ವರ್ಗಾವಣೆ ಆಗಿರುವ ಅಧಿಕಾರಿಯನ್ನು ಅದೇ ಜಾಗದಲ್ಲಿ ಕೂರಿಸುತ್ತಿರುವುದೇಕೆ?
2. ಅಕ್ರಮವಾಗಿದೆ ಎಂದು ಹೈಕೋರ್ಟ್ ದಂಡ ಹಾಕಿದ ಬಳಿಕವೂ, ಇವತ್ತಿನವರೆಗೆ ಸಮಗ್ರ ತನಿಖೆಗೆ ಏಕೆ ಸರ್ಕಾರ ಆದೇಶಿಸುತ್ತಿಲ್ಲ?
3. ಈ ವರ್ಷ ನಡೆದಿರುವ ಎಲ್ಲ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿ ದಾಖಲೆ ಪರಿಶೀಲನೆ ಬಳಿಕ ಎಷ್ಟು ದಾಖಲೆ ತಿದ್ದಲಾಗಿದೆ, ಸಮಗ್ರ ಸೀಟು ಹಂಚಿಕೆ ಹೇಗೆಲ್ಲ ನಡೆದಿದೆ ಎನ್ನುವ ಬಗ್ಗೆ ಕೂಲಂಕುಷ ತನಿಖೆ ಏಕೆ ಆಗುತ್ತಿಲ್ಲ?
4. ಲಕ್ಷಾಂತರ ವಿದ್ಯಾರ್ಥಿಗಳ ಜೀವನ ರೂಪಿಸುವ ಕೇಂದ್ರಕ್ಕೆ ಬೇಲಿ ಹಾಕಿಕೊಂಡು ಅಧಿಕಾರ ನಡೆಸುತ್ತಿರುವುದೇಕೆ?
5. ವಿದ್ಯಾರ್ಥಿಗಳಿಗಾಗಿ ಆರಂಭಿಸಿದ ಈ ಸೊಸೈಟಿಯನ್ನು ಇತರ ಉದ್ದೇಶಗಳಿಗೆ ಬಳಸುತ್ತಿರುವುದೇಕೆ?
6. ಸರ್ಕಾರದ ಸಾವಿರಾರು ನೇಮಕವನ್ನು ಯಾವುದೇ ಕಾನೂನು ಚೌಕಟ್ಟಿಲ್ಲದ ಒಂದು ಸೊಸೈಟಿಗೆ ಯಾವ ಅಧಾರದ ಮೇಲೆ ನೀಡಲಾಗುತ್ತಿದೆ?
7. ಸಾಂವಿಧಾನಿಕ ಮಾನ್ಯತೆಯಿಲ್ಲದ ಒಂದು ಸೊಸೈಟಿಗೆ ಇಂತಹ ಜವಾಬ್ದಾರಿ ನೀಡಬಹುದೆ?
8. ಪ್ರಾಧಿಕಾರದಲ್ಲಿನ ವಿದ್ಯಾರ್ಥಿಗಳ ಶುಲ್ಕದ ಹಣವನ್ನು ಯಾರ್ಯಾರ ಸಂಬಳ ಹಾಗೂ ಕಾರಿಗಾಗಿ ಬಳಸಲಾಗುತ್ತಿದೆ?
9. ದಶಕದ ಹಿಂದೆ ನಡೆದಿದ್ದ ರೀತಿಯ ಹಗರಣ ಮತ್ತೆ ನಡೆದಿದೆ ಎನ್ನುವ ಜನಸಾಮಾನ್ಯರ ಸಂಶಯವನ್ನು ಹೇಗೆ ಹೋಗಲಾಡಿಸುತ್ತೀರಿ?
10. ದಶಕಗಳ ಹಿಂದೆಯೇ ಪ್ರಾಧಿಕಾರವು ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿತ್ತು. ಈಗ ಯಾವ ಭಯದಿಂದ ಆ ಖಾತೆಯನ್ನು ಕೂಡ ಬಳಸುತ್ತಿಲ್ಲ?
11. ಕಳೆದ ಮೂರು ವರ್ಷಗಳಲ್ಲಿ ಪ್ರಾಧಿಕಾರದ ಮೂಲಕ ನಡೆದಿರುವ ನೇಮಕ ಪ್ರಕ್ರಿಯೆಯಲ್ಲಿ ಯಾವುದರಲ್ಲಿ ಗಂಭೀರ ಆರೋಪಗಳು ಕೇಳಿಬಂದಿವೆ? ಅವೆಲ್ಲದರ ತನಿಖೆಗಳು ಯಾವ ಹಂತದಲ್ಲಿವೆ?
12. ಪರೀಕ್ಷಾ ಪ್ರಾಧಿಕಾರವನ್ನು ಅಕ್ರಮ ಕೂಟವನ್ನಾಗಿ ಮಾಡದೇ ವಿದ್ಯಾರ್ಥಿಗಳ ಹಿತರಕ್ಷಣೆ ಕಾಪಾಡುವ ಸಂಸ್ಥೆಯನ್ನಾಗಿ ಪ್ರಾಮಾಣಿಕವಾಗಿ ಉಳಿಸಿಕೊಳ್ಳುತ್ತೀರಾ?