Koosina Mane: ಸಿಎಂ ಸಿದ್ದರಾಮಯ್ಯ ತವರಲ್ಲಿ ಮಕ್ಕಳ ಆರೈಕೆ ತಾಣವಾದ 80 ಕೂಸಿನ ಮನೆಗಳು
ಮೈಸೂರು ಜಿಲ್ಲೆಯಲ್ಲಿ ಮ-ನರೇಗಾ ಕೂಲಿ ಜಾಬ್ ಕಾರ್ಡ್ ಹೊಂದಿರುವವರ ಪೈಕಿ ಮೂರು ವರ್ಷದ ಒಳಗಿನ ಮಕ್ಕಳನ್ನು ಗುರುತಿಸಿ ಅವರನ್ನು ಕೂಸಿನ ಮನೆಗೆ ಕರೆತರುವ ಪ್ರಯತ್ನ ನಿರಂತರವಾಗಿ ಸ್ಥಳೀಯ ಸಹಕಾರದಿಂದ ನಡೆಯುತ್ತಿದೆ.
ಮೈಸೂರು: ಮೈಸೂರು ಜಿಲ್ಲೆಯಲ್ಲೂ ಮಕ್ಕಳ ಕಲರವಕ್ಕೆ ಕಾರಣವಾಗಿವೆ ಕೂಸಿನ ಮನೆಗಳು. ಮೈಸೂರು ಜಿಲ್ಲೆಯ ಹಲವು ಕಡೆಗಳಲ್ಲಿ ಕೂಸಿನ ಮನೆಗಳನ್ನು ನಿರ್ಮಿಸಲಾಗಿದ್ದು, ಮಕ್ಕಳು ಅವುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕೆಲಸ ಮಾಡುವ ತಾಯಂದರಿಗಂತೂ ಇದರ ಉಪಯೋಗ ಹೆಚ್ಚು ಆಗುತ್ತಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಸರ್ಕಾರ ಆರಂಭಿಸಿರುವ ಕೂಸಿನ ಮನೆ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಾದ ಮೈಸೂರು ಜಿಲ್ಲೆಯಲ್ಲಿ ಕಾರ್ಮಿಕ ಮಹಿಳೆಯರ ಪಾಲಿಗೆ ವರದಾನವಾಗಿ ಪರಿಣಮಿಸಿದೆ.
ಮ-ನರೇಗಾ ಕೆಲಸದಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕ ಮಹಿಳೆಯರ ಮೂರು ವರ್ಷದ ಒಳಗಿನ ಮಕ್ಕಳನ್ನು ಆರೈಕೆ ಮಾಡುವ ಕೂಸಿನ ಮನೆ ಕೇಂದ್ರ ಜನ ಮೆಚ್ಚುಗೆಗೂ ಪಾತ್ರವಾಗಿದೆ. ಕೂಲಿ ಕಾರ್ಮಿಕ ಮಹಿಳೆಯರ ಮಕ್ಕಳ ಪೋಷಣೆ, ರಕ್ಷಣೆ, ಪಾಲನೆ ಹಾಗೂ ಪೌಷ್ಠಿಕತೆ ಹೆಚ್ಚಳಕ್ಕೆ ಈ ಕೇಂದ್ರ ಬಹುದೊಡ್ಡ ಹೆಜ್ಜೆಯನ್ನಿರಿಸಿದೆ. ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಇರಿಸಿ ನೆಮ್ಮದಿಯಿಂದ ಕೂಲಿ ಮಾಡಲು ಕೂಸಿನ ಮನೆಯ ಕೇಂದ್ರ ನೆರವಿಗೆ ನಿಂತಿದೆ.
ಮೈಸೂರು ಜಿಲ್ಲೆಯಲ್ಲಿ ಈಗಾಗಲೇ 80 ಕಡೆಗಳಲ್ಲಿ ಕೇಂದ್ರ ಪ್ರಾರಂಭವಾಗಿದೆ. ಎಚ್.ಡಿ.ಕೋಟೆಯಲ್ಲಿ 7, ಹುಣಸೂರಿನಲ್ಲಿ 16, ಕೆ.ಆರ್.ನಗರದಲ್ಲಿ 6, ಮೈಸೂರು 12, ನಂಜನಗೂಡು 11, ಪಿರಿಯಾಪಟ್ಟಣ 12, ಸರಗೂರು 6, ತಿ.ನರಸೀಪುರ 10 ಕಡೆಗಳಲ್ಲಿ ಕೂಸಿನ ಮನೆ ಕಾರ್ಯಾರಂಭ ಮಾಡಿ ಮಕ್ಕಳ ಪಾಲನೆ, ಪೋಷಣೆಗೆ ಶ್ರಮಿಸುತ್ತಿವೆ.
ಮುಂದಿನ ಮಾರ್ಚ್ ಒಳಗೆ ಜಿಲ್ಲೆಗೆ ನಿಗಧಿಪಡಿಸಿರುವ 109 ಗುರಿಯನ್ನು ತಲುಪುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಸನ್ನದ್ಧವಾಗಿದೆ. ಕೂಸಿನ ಮನೆ ನಿರ್ವಹಣೆಗಾಗಿ ಸರ್ಕಾರದಿಂದ ಮೈಸೂರು ಜಿಲ್ಲೆಗೆ 1 ಕೋಟಿ 9 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಗ್ರಾಮ ಪಂಚಾಯಿತಿಗಳಿಗೆ ಮರುಬಿಡುಗಡೆ ಮಾಡಲಾಗಿದೆ.
ಜಾಬ್ ಕಾರ್ಡ್‌ದಾರರೇ ಆರೈಕೆದಾರರು
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆದಿರುವ 10ನೇ ತರಗತಿ ಪಾಸಾಗಿರುವ ಮಹಿಳಾ ಕಾರ್ಮಿಕರೇ ಕೇರ್ ಟೇಕರ್ಸ್ ಆಗಿ ಕೂಸಿನ ಮನೆ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಕೂಸಿನ ಮನೆಯಲ್ಲಿ ಮಕ್ಕಳ ಲಾಲನೆ ಪಾಲನೆ ಕುರಿತು ಈಗಾಗಲೇ ಮೊದಲನೇ ಹಂತದಲ್ಲಿ 351 ಆರೈಕೆದಾರರಿಗೆ ತರಬೇತಿ ನೀಡಲಾಗಿದೆ. ಪ್ರತಿ ಕೇಂದ್ರಕ್ಕೆ ಸುಮಾರು 25 ಮಕ್ಕಳಿಗೆ ಅವಕಾಶವಿದ್ದು, ಪ್ರತಿದಿನ ಕನಿಷ್ಠ 6-7 ಗಂಟೆ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಆರೈಕೆದಾರರದ್ದಾಗಿದೆ.
ಮಕ್ಕಳಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ, ಸಂಜೆ ಲಘು ಉಪಾಹಾರ ನೀಡಲಾಗುತ್ತಿದ್ದು, ಮಕ್ಕಳ ಹಾಜರಾತಿಯನ್ನೂ ನಿರ್ವಹಿಸಲಾಗುತ್ತಿದೆ. ಪ್ರತಿ ಕೇಂದ್ರಕ್ಕೆ ಆಯಾ ಗ್ರಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 11 ಜನರ ಸಮಿತಿಯೂ ಇರುತ್ತದೆ.
ಮ-ನರೇಗಾ ಯೋಜನೆಯಲ್ಲಿ ಮಹಿಳಾ ಕೂಲಿಕಾರರಿಗೆ ಸಹಕಾರಿಯಾಗಲು ಈ ಯೋಜನೆ ಜಾರಿಗೆ ತರಲಾಗಿದೆ. ಚಿಕ್ಕ ಮಕ್ಕಳ ತಾಯಂದಿರು ಮಕ್ಕಳ ಲಾಲನೆ-ಪಾಲನೆಯಲ್ಲಿ ತೊಡಗುವುದರಿಂದ ಮ-ನರೇಗಾ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಪ್ರಸ್ತುತ ಈ ಯೋಜನೆಯು ಮಕ್ಕಳಿಗೆ ಆಶ್ರಯ ಹಾಗೂ ಮಹಿಳಾ ಕೂಲಿಕಾರರಿಗೆ ಕೂಲಿ ಕೆಲಸ ಹಾಗೂ ಆರ್ಥಿಕ ಸ್ವಾವಲಂಭಿಯಾಗಲು ಸಹಕಾರಿಯಾಗುತ್ತದೆ ಎನ್ನುವುದು ಮೈಸೂರು ಜಿಪಂ ಸಿಇಒ ಕೆ.ಎಂ.ಗಾಯಿತ್ರಿ ಅವರ ವಿವರಣೆ.
ಸರ್ಕಾರಿ ಕಟ್ಟಡಗಳಲ್ಲೇ ಕೂಸಿನ ಮನೆ ಆರಂಭ
ಎಲ್ಲೆಲ್ಲಿ ಮ-ನರೇಗಾ ಕಾಮಗಾರಿ ಹೆಚ್ಚೆಚ್ಚು ನಡೆಯುತ್ತಿದ್ದೆಯೂ ಆಯಾ ಭಾಗದಲ್ಲಿನ ಸರ್ಕಾರಿ ಕಟ್ಟಡಗಳಲ್ಲೆ ಕೂಸಿನ ಮನೆ ಸಿದ್ದಗೊಂಡಿದೆ. ಶಾಲಾ ಕಟ್ಟಡ, ಸಮುದಾಯ ಭವನ, ಗ್ರಾ.ಪಂ ಕಟ್ಟಡ ಸೇರಿ ಇನ್ನಿತರೆ ಸರ್ಕಾರಿ ಕಟ್ಟಡಗಳನ್ನು ಗುರುತಿಸಿ, ಕಟ್ಟಡಗಳಿಗೆ ಹೊಸ ಸ್ವರೂಪ ನೀಡುವ ಮೂಲಕ ಸುಂದರಗೊಳಿಸಲಾಗಿದೆ. ಅಲ್ಲದೇ ಮಕ್ಕಳ ಸ್ನೇಹಿ ಚಿತ್ರಗಳನ್ನು ಬಿಡಿಸಿ ಮಕ್ಕಳನ್ನು ಆಕರ್ಷಿಸಲಾಗುತ್ತಿದೆ.
ಕೂಸಿನ ಮನೆಯಲ್ಲಿ ಏನೇನಿವೆ
ಇನ್ನು, ಶಿಶು ಪಾಲನಾ ಕೇಂದ್ರಗಳನ್ನು ಮಕ್ಕಳ ಸ್ನೇಹಿ ಕೇಂದ್ರಗಳನ್ನಾಗಿ ಮಾಡಿದ್ದು, ಈಗಾಗಲೇ ಕೇಂದ್ರದ ಗೋಡೆಗಳಿಗೆ ಮಕ್ಕಳ ಸ್ನೇಹಿ ಪೇಂಟಿಎOಗ್ ಮಾಡಿಸುವ ಮೂಲಕ ಅಂದ ಚೆಂದವನ್ನು ಹೆಚ್ಚಿಸಲಾಗಿದೆ. ಜೊತೆಗೆ ಮಕ್ಕಳ ಆಟೋಟಕ್ಕೆ ಆಟಿಕೆಗಳನ್ನು ಒದಗಿಸಲಾಗಿದ್ದು, ಮಕ್ಕಳು ಕೂಡ ಖುಷಿಯಿಂದ ಆಟವಾಡುತ್ತಿವೆ. ಚಿಕ್ಕ ಮಕ್ಕಳಿಗೆ ಭದ್ರವಾದ ಭಾವನಾತ್ಮಕ ವಾತಾವರಣವನ್ನು ನಿರ್ಮಿಸಿ ಉಳಿಸಿಕೊಳ್ಳುವಲ್ಲಿ ಕೂಸಿನ ಮನೆಯ ಪಾತ್ರವು ಅತ್ಯಂತ ಮಹತ್ವದ್ದಾಗಿದೆ.
ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ
ಸೋಮವಾರ: ಹಾಲು, ದಾಲ್ ಕಿಚಡಿ, ನ್ಯೂಟ್ರಿಮಿಕ್ಸ್, ಮಂಗಳವಾರ: ಹಾಲು, ಸಿಹಿ ಪೊಂಗಲ್, ನ್ಯೂಟ್ರಿಮಿಕ್ಸ್, ಬುಧವಾರ: ಹಾಲು, ಮೊಳಕೆ ಬರಿಸಿದ ಗೋದಿ ಪಾಯಸ, ಶೇಂಗಾ ಲಾಡು, ಗುರುವಾರ: ಹಾಲು, ದಾಲ್ ಕಿಚಡಿ, ನ್ಯೂಟ್ರಿಮಿಕ್ಸ್, ಶುಕ್ರವಾರ: ಹಾಲು, ಸಿಹಿ ಪೊಂಗಲ್, ನ್ಯೂಟ್ರಿಮಿಕ್ಸ್, ಶನಿವಾರ: ಮೊಳಕೆ ಬರಿಸಿದ ಗೋದಿ ಪಾಯಸ, ನ್ಯೂಟ್ರಿಮಿಕ್ಸ್ ವಿತರಣೆ ಮಾಡಲಾಗುತ್ತಿದೆ. ಮಕ್ಕಳಿಗೆ ಈ ರೀತಿಯ ಆರೋಗ್ಯಕರ ಪೌಷ್ಟಿಕ ಆಹಾರವನ್ನು ಒದಗಿಸುತ್ತಿರುವುದರಿಂದ ಹಾಗೂ ಆರೋಗ್ಯ ತಪಾಸಣೆ ಕೈಗೊಳ್ಳುವುದರಿಂದ ಗ್ರಾಮೀಣ ಭಾಗದ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಪ್ಪಿಸಲು ಸಹಕಾರಿಯಾಗಿದೆ.
ಜಿಲ್ಲೆಯಲ್ಲಿ 80 ಕಡೆಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಉಳಿದ ಕಡೆಗಳಲ್ಲಿಯೂ ಶೀಘ್ರವಾಗಿ ಜನ ಸೇವೆಗೆ ಕೇಂದ್ರ ತೆರೆದುಕೊಳ್ಳಲಿವೆ ಎನ್ನುತ್ತಾರೆ ಜಿ.ಪಂ.ಉಪಕಾರ್ಯದರ್ಶಿ(ಅಭಿವೃದ್ಧಿ) ಹಾಗೂ ಕೂಸಿನ ಮನೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ.ಎಂ.ಕೃಷ್ಣರಾಜು.
ವಿಭಾಗ