Ranji Trophy: ಆಂಧ್ರ ತಂಡದ ನಾಯಕತ್ವ ತ್ಯಜಿಸಲು ರಾಜಕೀಯ ಒತ್ತಡವೇ ಕಾರಣ; ಸಹ ಆಟಗಾರನ ಮೇಲೆ ಹನುಮ ವಿಹಾರಿ ಆರೋಪ-hanuma vihari accuses political pressure from teammate forced to quit captaincy of andhra ranji team ranji trophy jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  Ranji Trophy: ಆಂಧ್ರ ತಂಡದ ನಾಯಕತ್ವ ತ್ಯಜಿಸಲು ರಾಜಕೀಯ ಒತ್ತಡವೇ ಕಾರಣ; ಸಹ ಆಟಗಾರನ ಮೇಲೆ ಹನುಮ ವಿಹಾರಿ ಆರೋಪ

Ranji Trophy: ಆಂಧ್ರ ತಂಡದ ನಾಯಕತ್ವ ತ್ಯಜಿಸಲು ರಾಜಕೀಯ ಒತ್ತಡವೇ ಕಾರಣ; ಸಹ ಆಟಗಾರನ ಮೇಲೆ ಹನುಮ ವಿಹಾರಿ ಆರೋಪ

Hanuma Vihari: ರಣಜಿ ಟ್ರೋಫಿ 2024ರ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಆಂಧ್ರಪ್ರದೇಶ ತಂಡ ಸೋತ ಬೆನ್ನಲ್ಲೇ, ಹನುಮ ವಿಹಾರಿ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದಾರೆ. ತಾವು ಆಂದ್ರ ನಾಯಕತ್ವ ತೊರೆಯುವ ಹಿಂದೆ ರಾಜಕೀಯ ಒತ್ತಡವೇ ಮುಖ್ಯ ಕಾರಣ ಎಂದು ಆರೋಪಿಸಿದ್ದಾರೆ.

ಸಹ ಆಟಗಾರನ ಮೇಲೆ ಹನುಮ ವಿಹಾರಿ ಆರೋಪ
ಸಹ ಆಟಗಾರನ ಮೇಲೆ ಹನುಮ ವಿಹಾರಿ ಆರೋಪ

ಆಂಧ್ರಪ್ರದೇಶ ರಣಜಿ ತಂಡದ ಮಾಜಿ ನಾಯಕ ಹನುಮ ವಿಹಾರಿ (Hanuma Vihari), ತಾವು ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರದ ಹಿಂದಿನ ನೈಜ ಕಾರಣವನ್ನು ಬಹಿರಂಗಪಡಿಸಿದ್ದಾರೆ. ನಾಯಕತ್ವ ತ್ಯಜಿಸಿದ ಒಂದು ತಿಂಗಳ ಬಳಿಕ ಈ ಕುರಿತು ವಿವರಿಸಿರುವ ಅವರು, ಮತ್ತೆ ಎಂದಿಗೂ ಆಂಧ್ರಪ್ರದೇಶ ಪರ ಆಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

ರಾಜಕೀಯ ಒತ್ತಡದಿಂದಾಗಿ ಆಂಧ್ರ ರಣಜಿ ತಂಡದ ನಾಯಕತ್ವವನ್ನು ತ್ಯಜಿಸಿದ್ದಾಗಿ ವಿಹಾರಿ ಹೇಳಿದ್ದಾರೆ. 2024ರ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಆಂಧ್ರಪ್ರದೇಶ ತಂಡವು 4 ರನ್‌ಗಳಿಂದ ಸೋಲು ಕಂಡ ಬೆನ್ನಲ್ಲೇ ಹನುಮ ವಿಹಾರಿ ಈ ಹೇಳಿಕೆ ನೀಡಿದ್ದಾರೆ.

ತಂದೆಗೆ ದೂರು ನೀಡಿದ ಆಟಗಾರ

ಫೆಬ್ರುವರಿ 26ರ ಸೋಮವಾರ ಇನ್‌ಸ್ಟಾಗ್ರಾಮ್ ಪೋಸ್ಟ್‌ ಮಾಡಿರುವ ಅವರು, ತಮ್ಮ ನಾಯಕತ್ವದ ಸಮಯದಲ್ಲಿ ಆಟಗಾರನೊಬ್ಬನ ಮೇಲೆ ರೇಗಿದ್ದಾಗಿ ಹೇಳಿದ್ದಾರೆ. ಆ ಬಗ್ಗೆ ಆ ಆಟಗಾರ ತನ್ನ ತಂದೆಗೆ ದೂರು ನೀಡಿದ್ದಾರೆ. ಆ ಆಟಗಾರನ ತಂದೆ ರಾಜಕಾರಣಿಯಾಗಿರುವುದರಿಂದ, ಹನುಮ ವಿಹಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ರಿಕೆಟ್ ಅಸೋಸಿಯೇಷನ್‌ಗೆ ಮನವಿ ಬಂದಿದೆ.

ಇದನ್ನೂ ಓದಿ | ಗಿಲ್‌-ಜುರೆಲ್‌ ಜವಾಬ್ದಾರಿಯುತ ಆಟ, ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ನಲ್ಲೂ ಭಾರತಕ್ಕೆ ರೋಚಕ ಜಯ; ಸರಣಿ ವಶ

“ಈ ಪೋಸ್ಟ್‌ ಮೂಲಕ ನಾನು ಕೆಲವೊಂದು ಸಂಗತಿಗಳನ್ನು ತಿಳಿಸುತ್ತಿದ್ದೇನೆ. ಬಂಗಾಳ ವಿರುದ್ಧದ ಮೊದಲ ಪಂದ್ಯದಲ್ಲಿ ನಾನು ನಾಯಕನಾಗಿದ್ದೆ. ಆ ಪಂದ್ಯದ ಸಮಯದಲ್ಲಿ ನಾನು 17ನೇ ಆಟಗಾರನ ಮೇಲೆ ರೇಗಿದ್ದೆ. ಆತ ರಾಜಕಾರಣಿಯಾದ ತನ್ನ ತಂದೆಗೆ ಈ ಕುರಿತು ದೂರು ನೀಡಿದ್ದಾನೆ. ಅದಕ್ಕೆ ಪ್ರತಿಯಾಗಿ ಅವರ ತಂದೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ರಿಕೆಟ್‌ ಅಸೋಸಿಯೇಷನ್‌ಗೆ ಹೇಳಿದ್ದಾರೆ” ಎಂದು ವಿಹಾರಿ ಹೇಳಿದ್ದಾರೆ.

ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಕಬಳಿಸಿದ ಅಶ್ವಿನ್; ಅನಿಲ್ ಕುಂಬ್ಳೆ ದಾಖಲೆ ಹಿಂದಿಕ್ಕಿದ ಮತ್ತು ಸರಿಗಟ್ಟಿದ ಸ್ಪಿನ್ನರ್

“ಬಂಗಾಳ ವಿರುದ್ಧ ನಾವು 410 ರನ್‌ ಚೇಸಿಂಗ್‌ ಮಾಡಿದ್ದರೂ, ನನ್ನ ಯಾವುದೇ ತಪ್ಪಿಲ್ಲದಿದ್ದರೂ ನಾಯಕತ್ವಕ್ಕೆ ರಾಜೀನಾಮೆ ನೀಡುವಂತೆ ನನ್ನಲ್ಲಿ ಹೇಳಲಾಯ್ತು. ನಾನು ಅವರಿಗೆ ಏನೂ ಹೇಳಿಲ್ಲ. ಆದರೆ, ಕಳೆದ ವರ್ಷ ಎಡಗೈನಲ್ಲಿ ಬ್ಯಾಟಿಂಗ್ ಮಾಡಿದ, ಕಳೆದ 7 ವರ್ಷಗಳಲ್ಲಿ 5 ಬಾರಿ ಆಂಧ್ರ ತಂಡವನ್ನು ನಾಕೌಟ್ ಹಂತಕ್ಕೆ ಮುನ್ನಡೆಸಿದ, ಭಾರತದ ಪರ 16 ಟೆಸ್ಟ್ ಪಂದ್ಯಗಳಲ್ಲಿ ಆಡಿದ ವ್ಯಕ್ತಿಗಿಂತ ಆ ಆಟಗಾರನೇ ಹೆಚ್ಚು ಮುಖ್ಯ ಎಂದು ಅಸೋಸಿಯೇಷನ್ ಭಾವಿಸಿದೆ” ಎಂದು ಹನುಮಾನ್ ವಿಹಾರಿ ಬರೆದುಕೊಂಡಿದ್ದಾರೆ.

ಮತ್ತೆ ಆಂಧ್ರ ಪರ ಆಡಲ್ಲ

ಸದ್ಯ ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ ನಿರ್ಧಾರದಿಂದ ಬೇಸರಗೊಂಡಿರುವ ವಿಹಾರಿ, ತಾವು ಘಟನೆಯಿಂದ ಅವಮಾನ ಮತ್ತು ಮುಜುಗರವನ್ನು ಅನುಭವಿಸಿದ್ದಾಗಿ ಹೇಳಿದ್ದಾರೆ. ಅಲ್ಲದೆ ಮತ್ತೆ ಎಂದಿಗೂ ಆಂಧ್ರಪ್ರದೇಶ ಪರ ಆಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

“ನನಗೆ ತುಂಬಾ ಮುಜುಗರವಾಯಿತು. ಆದರೆ ನಾನು ಈ ಋತುವಿನಲ್ಲಿ ಆಡಲು ಏಕೈಕ ಕಾರಣವೆಂದರೆ, ನಾನು ನನ್ನ ಆಟ ಮತ್ತು ತಂಡವನ್ನು ಗೌರವಿಸುತ್ತೇನೆ. ದುಃಖದ ಸಂಗತಿಯೆಂದರೆ, ತಾನು ಏನೇ ಹೇಳಿದರೂ ಆಟಗಾರರು ಅದನ್ನು ಕೇಳಬೇಕು ಮತ್ತು ಅವರಿಂದಾಗಿಯೇ (ಅಸೋಸಿಯೇಷನ್) ಆಟಗಾರರು ಇದ್ದಾರೆ ಎಂದು ಅಸೋಸಿಯೇಷನ್ ಭಾವಿಸಿದೆ. ನನಗೆ ಅವಮಾನ ಮತ್ತು ಮುಜುಗರವಾಯಿತು. ಹೀಗಾಗಿ ನಾನು ಅದನ್ನು ಇಲ್ಲಿಯವರೆಗೆ ಯಾರಲ್ಲೂ ಹೇಳಿಕೊಂಡಿಲ್ಲ” ಎಂದು ಹನುಮ ವಿಹಾರಿ ವಿವರಿಸಿದ್ದಾರೆ.

“ನನ್ನ ಆತ್ಮಗೌರವಕ್ಕೆ ಧಕ್ಕೆ ತಂಡ ಆಂಧ್ರ ಪರ ನಾನು ಎಂದಿಗೂ ಆಡುವುದಿಲ್ಲ ಎಂದು ನಾನು ನಿರ್ಧರಿಸಿದ್ದೇನೆ. ನಾನು ತಂಡವನ್ನು ಪ್ರೀತಿಸುತ್ತೇನೆ. ನಾವು ಪ್ರತಿ ಋತುವಿನಲ್ಲಿ ಬೆಳೆಯಲು ಬಯಸುತ್ತೇವೆ. ಆದರೆ ಕ್ರಿಕೆಟ್‌ ಅಸೋಸಿಯೇಷನ್‌ ಮಾತ್ರ ನಾವು ಬೆಳೆಯುವುದನ್ನು ನೋಡಲು ಬಯಸುವುದಿಲ್ಲ” ಎಂದು ಹನುಮ ವಿಹಾರಿ ಬೇಸರದಿಂದ ಬರೆದಿದ್ದಾರೆ.