ಕಣ್ಮುಚ್ಚಿ ಕುಳಿತ ಸರ್ಕಾರ; 69 ವರ್ಷದ ಶಾಲೆ ಉಳಿಸಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೇ ಶಾರ್ದೂಲ ವೇಷ ಧರಿಸಿ ದೇಣಿಗೆ ಸಂಗ್ರಹ
ಕನ್ನಡ ಸುದ್ದಿ  /  ಕರ್ನಾಟಕ  /  ಕಣ್ಮುಚ್ಚಿ ಕುಳಿತ ಸರ್ಕಾರ; 69 ವರ್ಷದ ಶಾಲೆ ಉಳಿಸಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೇ ಶಾರ್ದೂಲ ವೇಷ ಧರಿಸಿ ದೇಣಿಗೆ ಸಂಗ್ರಹ

ಕಣ್ಮುಚ್ಚಿ ಕುಳಿತ ಸರ್ಕಾರ; 69 ವರ್ಷದ ಶಾಲೆ ಉಳಿಸಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೇ ಶಾರ್ದೂಲ ವೇಷ ಧರಿಸಿ ದೇಣಿಗೆ ಸಂಗ್ರಹ

Mangaluru News: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ದೇವಶ್ಯ ಮೂಡೂರು ಎಂಬಲ್ಲಿ 69 ವರ್ಷಗಳ ಹಿಂದೆ ಆರಂಭಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳಿಸಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ತಂಡವೇ ‘ಶಾರ್ದೂಲ ವೇಷ’ ಧರಿಸಿ ಹಣ ಸಂಗ್ರಹಿಸುತ್ತಿರುವುದು ವಿಶೇಷ. (ವರದಿ: ಹರೀಶ ಮಾಂಬಾಡಿ)

ಶಾಲೆ ಉಳಿಸಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೇ ಶಾರ್ದೂಲ ವೇಷ ಧರಿಸಿ ದೇಣಿಗೆ ಸಂಗ್ರಹ
ಶಾಲೆ ಉಳಿಸಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೇ ಶಾರ್ದೂಲ ವೇಷ ಧರಿಸಿ ದೇಣಿಗೆ ಸಂಗ್ರಹ

ಮಂಗಳೂರು: ಎರಡು ತಾಸೆ, ಒಂದು ಬ್ಯಾಂಡ್, ಒಂದು ಶಾರ್ದೂಲ ವೇಷಧಾರಿ, ಒಂದೂ ಜೋಕರ್, ಒಂದು ಬಂದೂಕುಧಾರಿ.. ಹೀಗೆ ಹನ್ನೆರಡು ಮಂದಿಯ ತಂಡ. ಇದು ಯಾವುದೇ ವೃತ್ತಿಪರರು ತಮ್ಮ ಜೀವನ ನಿರ್ವಹಣಗಾಗಿ ನಡೆಸುವ ಇಲ್ಲವೇ ವೃತ್ತಿ ಅನುಭವಸ್ಥರು ಇರುವ ಶಾರ್ದೂಲ ತಂಡವಲ್ಲ. ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ 2 ಮಕ್ಕಳು ಶಾಲಾ ಸಮಸ್ಯೆಯ ಬ್ಯಾನರ್ ಹಿಡಿದು, ಶಾಲೆ ಅಭಿವೃದ್ಧಿಗಾಗಿ ಸಹಾಯ ಮಾಡಿ ಎಂಬ ಪೆಟ್ಟಿಗೆ ಹಿಡಿದು ಆ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೇ ಶಾರ್ದೂಲ ವೇಷಧಾರಿಯಾಗಿ ಕುಣಿದು ಶಾಲಾ ಅಭಿವೃದ್ಧಿಗಾಗಿ ಹಣ ಸಂಗ್ರಹ ಮಾಡುವ ತಂಡ.

ಹೌದು, ಇದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ದೇವಶ್ಯ ಮೂಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಮತ್ತು ಹಳೆ ವಿದ್ಯಾರ್ಥಿಗಳ ತಂಡ. ಈ ವರ್ಷ ದಸರಾ ಮಹೋತ್ಸವದ ವಿಶೇಷ. ತಮ್ಮೂರಿನ ಶಾಲೆ ತೀರಾ ದುರಸ್ತಿಯಲ್ಲಿದ್ದು, ಸರ್ಕಾರದಿಂದಲೂ ಶಾಲೆಯ ಅಭಿವೃದ್ಧಿಗಾಗಿ ಯಾವುದೇ ಅನುದಾನ ಬಾರದಿರುವ ಕಾರಣ ಹೊಸತೊಂದು ತಂಡವನ್ನು ಕಟ್ಟಿ ಬಂಟ್ವಾಳ ತಾಲೂಕಿನಲ್ಲಿ ಮನೆ ಮನೆಗೆ ತೆರಳಿ ಶಾರ್ದೂಲ ವೇಷ ಕುಣಿದು ಅದರಿಂದ ಬಂದ ಹಣವನ್ನು ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ವಿನಿಯೋಗಿಸಲು ನಿರ್ಧಾರ ಮಾಡಿದ ತಂಡ ಇದಾಗಿದೆ.

ಶಾಲೆಗೆ 1.2 ಎಕ್ರೆ ಭೂಮಿ ಇದ್ದು, ಶಾಲೆಯ ಕಟ್ಟಡವು ಹಂಚಿನ ಮಾಡಿನದ್ದಾಗಿದೆ. 69 ವರ್ಷಗಳ ಹಿಂದೆ ಆರಂಭಗೊಂಡ ಈ ಶಾಲೆ ತುಂಬಾ ಹಳೆಯದಾಗಿದೆ. ವರ್ಷ ವರ್ಷ ಅದರ ನಿರ್ವಹಣೆ ಮಾಡುವುದೇ ಒಂದು ಕೆಲಸ, ಶಾಲೆ ಕಟ್ಟಡದ ದುರಸ್ತಿಯಾಗಬೇಕಿದೆ. ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್‌ಇಲ್ಲ, ಸ್ಥಳಾವಕಾಶ ಇದ್ದರೂ ರಂಗ ಮಂದಿರ ಇಲ್ಲ, ವಿದ್ಯಾರ್ಥಿಗಳಿಗಾಗಿ ಪ್ರಯೋಗಾಲಯ ಇಲ್ಲ. ಈ ಎಲ್ಲ ವ್ಯವಸ್ಥೆಗಳನ್ನು ಮಾಡುವುದಕ್ಕಾಗಿ ಈ ಪ್ರಯತ್ನ. ಪ್ರಸ್ತುತ 84 ವಿದ್ಯಾರ್ಥಿಗಳು, 6 ಶಿಕ್ಷಕರಿದ್ದಾರೆ.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ ಮುದಿಮಾರ್ ವೃತ್ತಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಗ್ರಾಮೀಣ ಜನರ ಶಿಕ್ಷಣ ದೇಗುಲವಾಗಿರುವ ಈ ಶಾಲೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ನಿಟ್ಟಿನಲ್ಲಿ ತಾವೇ ಶಾರ್ದೂಲ ವೇಷಧರಿಸಿದ್ದಾರೆ. ಇವರಿಗೆ ಸಹಕಾರಿಯಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶವಂತ ಕಾಂದ್ರೋಡಿ ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯ ಹರೀಶ ನಾಯ್ಕ್ ಹಾಗೂ ಕೆಲವೊಂದು ಹಿರಿಯ ವಿದ್ಯಾರ್ಥಿಗಳು ಇವರ ಜೊತೆಗಿದ್ದಾರೆ. ತಾಸೆ, ಶಾರ್ದೂಲದ ಬಟ್ಟೆ, ಡೋಲು, ಜೋಕರ್ ಬಟ್ಟೆ, ಬಂದೂಕುಧಾರಿಯ ಬಟ್ಟೆ ಇವೆಲ್ಲಾ ಬಾಡಿಗೆಗೆ ಪಡೆದು ಐದು ದಿನಗಳಿಂದ ಇವರು ಬಂಟ್ವಾಳ ತಾಲೂಕಿನಾದ್ಯಂತ ಸಂಚರಿಸುತ್ತಾ ಇದ್ದಾರೆ.

1955ರಲ್ಲಿ ಆರಂಭವಾದ ದೇವಶ್ಯಮೂಡೂರು ಶಾಲೆಯಲ್ಲಿ ಪ್ರಸ್ತುತ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ 84 ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಶಾರ್ದೂಲ ವೇಷದಿಂದ ಬಂದ ಹಣದಿಂದ ತಮ್ಮ ಶಾಲೆಗೆ ಒಳ್ಳೆಯದಾಗಲಿ, ತಮ್ಮೂರಿನ ಶಾಲೆ ಸಾರ್ವಜನಿಕರ ಸಹಕಾರದಿಂದ ಅಭಿವೃದ್ಧಿಯಾಗಲಿ ಎಂಬುದೇ ಇವರ ಆಶೆ.

ಮನೆ ಮನೆಗೆ ತೆರಳುತ್ತಿದ್ದೇವೆ

ಸರ್ಕಾರಿ ಶಾಲೆಯ ಅಭಿವೃದ್ಧಿಗೆ 5 ದಿನಗಳಿಂದ ಬಂಟ್ವಾಳ ತಾಲೂಕಿನಲ್ಲಿ ಮನೆ ಮನೆಗೆ ಶಾರ್ಧೂಲ ವೇಷದ ತಂಡವಾಗಿ ಹೋಗುತ್ತಿದ್ದೇವೆ. ಸಾರ್ವಜನಿಕರಿಂದ ತುಂಬಾ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಗ್ರಾಮಸ್ಥರು, ಶಾಲಾ ಶಿಕ್ಷಕರ ತಂಡ, ಹಳೆ ವಿದ್ಯಾರ್ಥಿಗಳ ತಂಡ ನಮ್ಮ ಜೊತೆಗಿದ್ದು, ನಮ್ಮ ಈ ಯೋಜನೆ ಯಶಸ್ವಿಯಾಗುವುದೆಂಬ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಮುದಿಮಾರು.

ನಮ್ಮೂರಿನ ದಾನಿಗಳಿಂದ ಸಾಧ್ಯವಾಗುವಷ್ಟು ದೇವಶ್ಯಮೂಡುರು ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಹಕಾರ ದೊರೆತಿರುತ್ತದೆ. ಶಾಲಾ ಕಟ್ಟಡ ದುರಸ್ತಿಯಾಗಬೇಕು. ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್, ಲೆಬೊರೇಟರಿ, ಸಭಾಂಗಣ, ರಂಗ ಮಂದಿರ ಇವೆಲ್ಲದರ ಅಗತ್ಯ ಇರುವುದರಿಂದ ಶಾಲಾಭಿವೃದ್ಧಿ ಸಮಿತಿ ಹೊಸ ಯೋಜನೆ ರೂಪಿಸಿದ್ದು ತುಂಬಾ ಸಂತೋಷವಾಗಿದೆ ಎ‌ನ್ನುತ್ತಾರೆ ಮುಖ್ಯ ಶಿಕ್ಷಕಿ ಹರಿಣಾಕ್ಷಿ.

Whats_app_banner