SDPI in Karnataka: ಕರ್ನಾಟಕದಲ್ಲಿ ಎಸ್‌ಡಿಪಿಐ ನಿಷೇಧಕ್ಕೆ ಚಿಂತನೆ ಎನ್ನುತ್ತಿವೆ ವರದಿಗಳು
ಕನ್ನಡ ಸುದ್ದಿ  /  ಕರ್ನಾಟಕ  /  Sdpi In Karnataka: ಕರ್ನಾಟಕದಲ್ಲಿ ಎಸ್‌ಡಿಪಿಐ ನಿಷೇಧಕ್ಕೆ ಚಿಂತನೆ ಎನ್ನುತ್ತಿವೆ ವರದಿಗಳು

SDPI in Karnataka: ಕರ್ನಾಟಕದಲ್ಲಿ ಎಸ್‌ಡಿಪಿಐ ನಿಷೇಧಕ್ಕೆ ಚಿಂತನೆ ಎನ್ನುತ್ತಿವೆ ವರದಿಗಳು

SDPI in Karnataka: ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI)ದ ರಾಜಕೀಯ ಘಟಕವೇ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2020ರಲ್ಲಿ ನಡೆದ ಗಲಭೆಯಲ್ಲಿ ಎಸ್‌ಡಿಪಿಐ ಕೈವಾಡ ಇರುವುದು ದೃಢಪಟ್ಟ ಕಾರಣ ರಾಜ್ಯ ಬಿಜೆಪಿ ಸರ್ಕಾರ ಈ ಚಿಂತನೆ ನಡೆಸಿದೆ ಎಂದು ವರದಿ ಹೇಳಿದೆ.

ಎಸ್‌ಡಿಪಿಐ (ಸಾಂಕೇತಿಕ ಚಿತ್ರ)
ಎಸ್‌ಡಿಪಿಐ (ಸಾಂಕೇತಿಕ ಚಿತ್ರ)

ಕರ್ನಾಟಕದಲ್ಲಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (SDPI)ವನ್ನು ನಿಷೇಧಿಸಲು ಚಿಂತನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI)ದ ರಾಜಕೀಯ ಘಟಕವೇ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2020ರಲ್ಲಿ ನಡೆದ ಗಲಭೆಯಲ್ಲಿ ಎಸ್‌ಡಿಪಿಐ ಕೈವಾಡ ಇರುವುದು ದೃಢಪಟ್ಟ ಕಾರಣ ರಾಜ್ಯ ಬಿಜೆಪಿ ಸರ್ಕಾರ ಈ ಚಿಂತನೆ ನಡೆಸಿದೆ ಎಂದು ವರದಿ ಹೇಳಿದೆ.

ಮ್ಯಾಜಿಸ್ಟ್ರೇಟ್‌ ತನಿಖಾ ವರದಿ ಕೂಡ 2020ರ ಗಲಭೆಯಲ್ಲಿ ಎಸ್‌ಡಿಪಿಐ ಕೈವಾಡವನ್ನು ದೃಢೀಕರಿಸುತ್ತಿದೆ. ಭಯೋತ್ಪಾದನೆಗೆ ಸಂಚು ರೂಪಿಸಿದ ಮಾದರಿಯಲ್ಲಿ ಎಸ್‌ಡಿಪಿಐ ಸದಸ್ಯರು ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಗಳಲ್ಲಿ ಭಯೋತ್ಪಾದಕರಂತೆ ವರ್ತಿಸಿದ್ದಾರೆ ಎಂದು ಬೆಂಗಳೂರು ನಗರ ಉಪ ಆಯುಕ್ತರ ತನಿಖಾ ವರದಿ ಹೇಳಿದೆ. ಇವುಗಳ ಆಧಾರದ ಮೇಲೆ ಎಸ್​ಡಿಪಿಐ ಬ್ಯಾನ್​ ಮಾಡಲು ಸರ್ಕಾರದ ಮಟ್ಟದಲ್ಲಿ ಚಿಂತನೆಗಳು ನಡೆದಿವೆ.

ಏನಿದು ಗಲಭೆ ಪ್ರಕರಣ?

ಬೆಂಗಳೂರಿನಲ್ಲಿ 2020ರ ಆಗಸ್ಟ್‌ 11ರಂದು ರಾತ್ರಿ ಸಂಭವಿಸಿದ ಗಲಭೆ ಇದು. ಪಿ.ನವೀನ್‌ ಎಂಬಾತ ಫೇಸ್‌ಬುಕ್‌ನಲ್ಲಿ ಹಾಕಿದ್ದ ಒಂದು ಪೋಸ್ಟ್‌ ಗಲಭೆಗೆ ಮೂಲ ಕಾರಣವಾಗಿ ಕಂಡುಬಂದಿತ್ತು. ಇದರಿಂದಾಗಿ ಈತನ ಮನೆ ಸಮೀಪ ಡಿಜೆ ಹಳ್ಳಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಹಿಂಸಾಚಾರ ಸಂಭವಿಸಿತ್ತು. ಪುಲಕೇಶಿನಗರ ಕಾಂಗ್ರೆಸ್‌ ಶಾಸಕ ಆರ್‌.ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೂ ದಾಳಿ ನಡೆದಿತ್ತು. ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆ ಮೇಲೂ ದಾಳಿ ಆಗಿತ್ತು. ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು. ಶಾಸಕರ ನಿವಾಸ ಲೂಟಿ ಮಾಡಲಾಗಿತ್ತು ಎಂಬುದನ್ನು ಮಾಧ್ಯಮಗಳು ಅಂದು ವರದಿ ಮಾಡಿದ್ದವು.

ನಿಷೇಧಕ್ಕೆ ಇದು ಸಕಾಲ ಎಂದ ಸಿ.ಟಿ.ರವಿ

ಮೂರು ವರ್ಷ ಹಿಂದೆ ನಡೆದಿರುವ ಗಲಭೆ ಇದು. ಕೆಲವೇ ನಿಮಿಷಗಳಲ್ಲಿ ಗಲಭೆ ವ್ಯಾಪಿಸಿದ ರೀತಿ ಗಮನಿಸಿದರೆ ಅದು ಪೂರ್ವಯೋಜಿತ ಕೃತ್ಯದಂತೆ ಕಾಣುತ್ತದೆ. ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. 20ಕ್ಕೂ ಹೆಚ್ಚು ಗಂಟೆ ಕಾಲ ಗಲಭೆ ಮುಂದುವರಿದಿತ್ತು. ಇದನ್ನು ದಿಢೀರ್‌ ಮಾಡುವುದು ಸಾಧ್ಯವೇ? ಪೂರ್ವಯೋಜನೆ ಇದ್ದರಷ್ಟೆ ಇಂತಹ ದೊಡ್ಡ ಪ್ರಮಾಣದ ಗಲಭೆ ಮಾಡುವುದು ಸಾಧ್ಯ. ಇದರ ಹಿಂದೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಕೈವಾಡ ಇರುವುದನ್ನು ಹಿಂದೆಯೇ ಹೇಳಿದ್ದೆವು. ಈಗ ಪುರಾವೆ ಸಿಕ್ಕಿದ್ದು, ಕೃತ್ಯ ದೃಢಪಟ್ಟಿದೆ. ಆದ್ದರಿಂದ ಎಸ್‌ಡಿಪಿಐ ನಿಷೇಧಕ್ಕೆ ಇದುವೇ ಸರಿಯಾದ ಸಮಯ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಎಸ್‌ಡಿಪಿಐ ಮತ್ತು ಪಿಎಫ್‌ಐ

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ), ಅದರ ಸಹ ಸಂಘಟನೆಗಳು, ಅಧೀನ ಸಂಸ್ಥೆಗಳಿಗೆ ಐದು ವರ್ಷ ನಿಷೇಧ ಹೇರಲಾಗಿದೆ ಎಂದು ಕೇಂದ್ರ ಸರಕಾರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಘೋಷಿಸಿತ್ತು. ಪಿಎಫ್‌ಐನ ಕೆಲವು ಸ್ಥಾಪಕ ಸದಸ್ಯರು ನಿಷೇಧಿತ ಸ್ಟೂಡೆಂಟ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ (ಸಿಮಿ) ಮತ್ತು ಜಮಾತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ)ಯಂತಹ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವುದು ಸಾಬೀತಾಗಿದೆ ಎಂದು ಸರ್ಕಾರ ತಿಳಿಸಿತ್ತು. ಆದರೆ, ಪಿಎಫ್‌ಐನ ರಾಜಕೀಯ ಘಟಕ ಎಸ್‌ಡಿಪಿಐಯನ್ನು ಸರ್ಕಾರ ನಿಷೇಧಿಸಿರಲಿಲ್ಲ.

ಭಾರತದ ಚುನಾವಣಾ ಆಯೋಗದಲ್ಲಿ 2010ರ ಏಪ್ರಿಲ್‌ನಲ್ಲಿ ಎಸ್‌ಡಿಪಿಐ ನೋಂದಾವಣೆ ಮಾಡಿಕೊಂಡಿದ್ದು, ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಜತೆಗಿನ ಸಂಪರ್ಕವನ್ನು ಎಸ್‌ಡಿಪಿಐ ನಿರಾಕರಿಸುತ್ತ ಬಂದಿದೆ. ಆದಾಗ್ಯೂ, ಕೆಲವೊಂದು ಸಾಕ್ಷ್ಯಗಳು ವ್ಯತಿರಿಕ್ತವಾಗಿವೆ ಎಂದು ವರದಿಗಳು ಹೇಳಿವೆ.

Whats_app_banner