ನಾವೂ ಕನ್ನಡಿಗರೇ; ಬೆಂಗಳೂರು ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ಹಂಚಿ ಕನ್ನಡ ರಾಜ್ಯೋತ್ಸವ ಆಚರಿಸಿದ ತಮಿಳು ಕನ್ನಡಿಗರು
ಕನ್ನಡ ಸುದ್ದಿ  /  ಕರ್ನಾಟಕ  /  ನಾವೂ ಕನ್ನಡಿಗರೇ; ಬೆಂಗಳೂರು ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ಹಂಚಿ ಕನ್ನಡ ರಾಜ್ಯೋತ್ಸವ ಆಚರಿಸಿದ ತಮಿಳು ಕನ್ನಡಿಗರು

ನಾವೂ ಕನ್ನಡಿಗರೇ; ಬೆಂಗಳೂರು ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ಹಂಚಿ ಕನ್ನಡ ರಾಜ್ಯೋತ್ಸವ ಆಚರಿಸಿದ ತಮಿಳು ಕನ್ನಡಿಗರು

ಬೆಂಗಳೂರು ನಗರದಲ್ಲಿ ಇರುವ ತಮಿಳು ಕನ್ನಡಿಗರು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ. ಈ ವೇಳೆ ನಗರದ ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ಹಾಗೂ ಸಿಹಿ ಹಂಚಿ ಮನಗೆದ್ದಿದ್ದಾರೆ. ಭಾಷೆ ಬೇರೆಯಾಗದ್ದರೂ ನಾವೆಲ್ಲಾ ಒಂದೇ ಎಂದು ತಮಿಳು ಕನ್ನಡಿಗರು ಹೇಳಿಕೊಂಡಿದ್ದಾರೆ.

ಬೆಂಗಳೂರು ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ಹಂಚಿ ಕನ್ನಡ ಹಬ್ಬ ಆಚರಿಸಿದ ತಮಿಳು ಕನ್ನಡಿಗರು
ಬೆಂಗಳೂರು ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ಹಂಚಿ ಕನ್ನಡ ಹಬ್ಬ ಆಚರಿಸಿದ ತಮಿಳು ಕನ್ನಡಿಗರು

ಬೆಂಗಳೂರು: ವಿವಿಧ ತಮಿಳು ಸಂಘಟನೆಗಳು ಜಂಟಿಯಾಗಿ ರೂಪುಗೊಂಡ ಮಾತೃಭಾಷಾ ಒಕ್ಕೂಟದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯ್ತು. ಜಯನಗರದ 9ನೇ ಬ್ಲಾಕ್‌ನಲ್ಲಿರುವ ಕಾರ್ಪೊರೇಷನ್ ಕಾಲೋನಿ ಮೈದಾನದಲ್ಲಿ ಸಂಭ್ರಮ ಮನೆಮಾಡಿತ್ತು. ಉದ್ಯಾನ ನಗರಿಯಲ್ಲಿ ನೆಲೆಸಿರುವ ತಮಿಳರು ಕಟ್ಟಿಕೊಂಡಿರುವಂತಹ 17 ತಮಿಳು ಸಂಘಗಳು, 50ಕ್ಕೂ ಮೇಲ್ಪಟ್ಟ ತಮಿಳು ಸಂಘಟನೆಗಳು ಸೇರಿ 'ಮಾತೃಭಾಷಾ ಒಕ್ಕೂಟ' ಕಾರ್ಯನಿರ್ವಹಿಸುತ್ತಿದ್ದು, ಸಂಘದ ಅಧ್ಯಕ್ಷ ಡಾ.ಎಸ್‌ಡಿ ಕುಮಾರ್ ಅವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಶುಕ್ರವಾರ ಬೆಳಗ್ಗೆ ಕನ್ನಡದ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ 69 ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ಹಾಗೂ ಸಿಹಿ ಹಂಚಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಯನಗರ ಶಾಸಕ ಸಿಕೆ ರಾಮಮೂರ್ತಿ, ಕರ್ನಾಟಕದಲ್ಲಿ ಕನ್ನಡಿಗರ ಜೊತೆಗೆ ಬೇರೆ ಭಾಷಿಕರೂ ಜೀವನ ಮಾಡುತ್ತಿದ್ದಾರೆ. ಕನ್ನಡಿಗರು ಧಾರಾಳವಾಗಿ ಇತರೆ ಭಾಷಿಕರಿಗೆ ಆಶ್ರಯ, ಸೌಹಾರ್ದ ತೋರಿದ್ದಾರೆ. ಇಲ್ಲಿನ ಭಾಷೆ, ನೆಲ, ಜಲ ವಿಚಾರದಲ್ಲಿ ಕನ್ನಡಿಗರಂತೆಯೇ ಪರಭಾಷಿಕರ ಭಾವನೆಯೂ ಇರಬೇಕು. ಮನೆಯಲ್ಲಿ ಯಾವುದೇ ಭಾಷೆಯನ್ನು ಮಾತನಾಡಿ. ಆದರೆ, ಹೊರಗೆ ಬಂದಾಗ ಕನ್ನಡ ಭಾಷೆಯನ್ನು ಮಾತನಾಡಿ ಇಲ್ಲಿನ ಜನರಿಗೂ ಗೌರವ ನೀಡಬೇಕು ಎಂದು ಹೇಳಿದರು.

ಕನ್ನಡಿಗರು ಮತ್ತು ತಮಿಳಿಗರು ಮೊದಲಿನಿಂದಲೂ ಸೌಹಾರ್ದದಿಂದ ಇದ್ದಾರೆ. ಎರಡೂ ಭಾಷೆಗಳ ಜನರ ಜನಜೀವನ ಬಹುತೇಕ ಒಂದೇ ರೀತಿಯಲ್ಲಿದೆ. ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಲಕ್ಷಾಂತರ ತಮಿಳಿಗರು ಬದುಕು ಕಟ್ಟಿಕೊಂಡಿದ್ದಾರೆ. ಅಂತಹವರೆಲ್ಲಾ ಮುಂದೆ ಬಂದು ಕನ್ನಡ ರಾಜ್ಯೋತ್ಸವ ಆಚರಿಸಿ ತಾವೂ ಕನ್ನಡಿಗರಾಗಿಯೇ ಬದುಕುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎರಡೂ ಭಾಷೆಗಳಲ್ಲಿ ಸಾಮ್ಯತೆ ಇದೆ

ಮಾತೃಭಾಷಾ ಒಕ್ಕೂಟದ ಅಧ್ಯಕ್ಷ ಡಾ.ಎಸ್‌ಡಿ ಕುಮಾರ್, ಕರ್ನಾಟಕದಲ್ಲಿರುವ ತಮಿಳಿಗರೂ ಕನ್ನಡಿಗರೇ. ಕನ್ನಡ ತಮಿಳಿಗರು ಅಂತ ಕರೆಸಿಕೊಳ್ತೀವಿ. ಈ ನೆಲದಲ್ಲಿಯೇ ಹುಟ್ಟಿ, ಇಲ್ಲಿಯೇ ಜೀವನ ಮಾಡುತ್ತಿದ್ದೇವೆ. ಎರಡೂ ಭಾಷೆಗಳಲ್ಲಿ ಸಾಮ್ಯತೆ ಇದೆ. ನಾವೆಲ್ಲರೂ ಅಣ್ಣ-ತಮ್ಮಂದಿರಂತೆಯೇ ಜೀವನ ನಡೆಸುತ್ತಿದ್ದೇವೆ. ಕನ್ನಡಿಗರಿಗೆ ಎಲ್ಲಾ ರೀತಿಯ ಸಹಕಾರ ಕೊಟ್ಟು ಅವರೊಂದಿಗೆ ಬರೆತು ಜೀವನ ಮಾಡುತ್ತಿದ್ದೇವೆ. ಮುಂದೆಯೂ ಸಹ ಕನ್ನಡಿಗರೊಂದಿಗೆ ಬೆರೆತು ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ ಎಂದು ಹೇಳಿದರು.

17 ತಮಿಳು ಸಂಘಂ, 50ಕ್ಕೂ ಮೇಲ್ಪಟ್ಟ ತಮಿಳು ಸಂಘಟನೆಗಳು ಸೇರಿ ಮಾತೃಭಾಷಾ ಒಕ್ಕೂಟ ಮಾಡಿಕೊಂಡಿದ್ದು, ಇಂದು ಎಲ್ಲ ಸಂಘಟನೆಗಳು ಒಟ್ಟಾಗಿ ಕನ್ನಡಿಗರೊಂದಿಗೆ ಸೇರಿ ಕನ್ನಡ ರಾಜ್ಯೊತ್ಸವ ಆಚರಿಸಿದ್ದೇವೆ. ಈ ಪರಂಪರೆ ಮುಂದುವರಿಯಬೇಕು ಎಂದು ಆಶಿಸಿದರು. ಬಿಬಿಎಂಪಿ ಮಾಜಿ ಸದಸ್ಯ ಗೋವಿಂದ ನಾಯ್ಡು, ಬೆಂಗಳೂರು ತಮಿಳು ಸಂಘಂನ ಮಾಜಿ ಅಧ್ಯಕ್ಷ ತಿ.ಕೋ. ದಾಮೋದರನ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Whats_app_banner