Karnataka Weather: ಕರ್ನಾಟಕದಲ್ಲಿ ಮಳೆ ಇಳಿಮುಖ, ಸಹಜ ಸ್ಥಿತಿಗೆ ಮರಳುತ್ತಿದೆ ಜನಜೀವನ, ಇಂದು ವೇಗದ ಗಾಳಿ ಬೀಸುವ ಸಾಧ್ಯತೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಕರ್ನಾಟಕದಲ್ಲಿ ಮಳೆ ಇಳಿಮುಖ, ಸಹಜ ಸ್ಥಿತಿಗೆ ಮರಳುತ್ತಿದೆ ಜನಜೀವನ, ಇಂದು ವೇಗದ ಗಾಳಿ ಬೀಸುವ ಸಾಧ್ಯತೆ

Karnataka Weather: ಕರ್ನಾಟಕದಲ್ಲಿ ಮಳೆ ಇಳಿಮುಖ, ಸಹಜ ಸ್ಥಿತಿಗೆ ಮರಳುತ್ತಿದೆ ಜನಜೀವನ, ಇಂದು ವೇಗದ ಗಾಳಿ ಬೀಸುವ ಸಾಧ್ಯತೆ

ಬೆಂಗಳೂರು ನಗರ ಮತ್ತು ಕರಾವಳಿಯ ಜಿಲ್ಲೆಗಳಲ್ಲಿ ಇಂದು (ಆಗಸ್ಟ್ 3) ಗಾಳಿಯ ವೇಗ ಹೆಚ್ಚಾಗಲಿದೆ. ಮಳೆಯ ಪ್ರಮಾಣ ಕಡಿಮೆಯಾದರೂ, ಮಳೆ ಮುಂದುವರಿಯಲಿದೆ.

ಕರ್ನಾಟಕದ ಹವಾಮಾನ
ಕರ್ನಾಟಕದ ಹವಾಮಾನ

ಬೆಂಗಳೂರು: ಸತತ ಮಳೆಯಿಂದ ಕಂಗೆಟ್ಟಿದ್ದ ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಶನಿವಾರ (ಆಗಸ್ಟ್ 2) ಮಳೆ ಪ್ರಮಾಣ ಕಡಿಮೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಮಳೆ ಬಿಡುವು ಕೊಡುತ್ತಿದ್ದು ಜನಜೀವನ ನಿಧಾನವಾಗಿ ಸಹಜಸ್ಥಿತಿಗೆ ಮರಳುತ್ತಿದೆ. ನದಿಗಳಲ್ಲಿಯೂ ನೀರಿನ ಮಟ್ಟ ಇಳಿಯುತ್ತಿದ್ದು, ಅನಾಹುತಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಕಾವೇರಿ ಕೊಳ್ಳದ ಮುಖ್ಯ ಜಲಾಶಯಗಳಾದ ಕಬಿನಿ, ಹೇಮಾವತಿ ಮತ್ತು ಕೆಆರ್‌ಎಸ್‌ಗಳಲ್ಲಿಯೂ ಒಳಹರಿವು ಕಡಿಮೆಯಾಗುತ್ತಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇತ್ತೀಚಿನ ದಿನಗಳಲ್ಲಿ ಹವಾಮಾನ ಇಲಾಖೆಯು ಮಲೆನಾಡಿನ ಬೆಳಗಾವಿ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಸತತವಾಗಿ ರೆಡ್ ಅಲರ್ಟ್‌ ನೀಡುವ ಮೂಲಕ ಹೆಚ್ಚು ಮಳೆಯಾಗಲಿದೆ ಎನ್ನುವ ಎಚ್ಚರಿಕೆ ನೀಡುತ್ತಿತ್ತು. ಇದೇ ಮೊದಲ ಬಾರಿಗೆ ಈ ಜಿಲ್ಲೆಗಳಿಗೆ ಹಳದಿ ಅಲರ್ಟ್‌ ನೀಡಲಾಗಿದೆ. ಈ ಜಿಲ್ಲೆಗಳ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಶಿವಮೊಗ್ಗ, ಜಿಲ್ಲೆಗೆ ಮಾತ್ರ ಆರೆಂಜ್ ಅಲರ್ಟ್‌ ಮುಂದುವರಿದಿದ್ದು, ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಸೂಚಿಸಲಾಗಿದೆ. ಬೆಂಗಳೂರು ಮಹಾನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಬೆಂಗಳೂರಿನಲ್ಲಿ ಚಳಿಯು ಕಡಿಮೆಯಾಗಿದೆ. ಶನಿವಾರದ (ಆಗಸ್ಟ್ 3) ಗರಿಷ್ಠ ತಾಪಮಾನ 27 ಡಿಗ್ರಿ, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಷಿಯಲ್ ಇರಬಹುದು ಎಂದು ಮುನ್ಸೂಚನೆ ತಿಳಿಸಿದೆ.

ಕರಾವಳಿಯಲ್ಲಿ ಮಳೆ ಅನಾಹುತ

ಉಡುಪಿ ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಸೌಪರ್ಣಿಕ ನದಿ ಉಕ್ಕಿ ಹರಿಯುತ್ತಿದೆ. ಬೈಂದೂರು ತಾಲ್ಲೂಕಿನ ಹಲವು ಮನೆಗಳು ಹೊರಜಗತ್ತಿನ ಸಂಪರ್ಕ ಕಡಿದುಕೊಂಡಿವೆ. ಜನರು ನಿತ್ಯ ಕೆಲಸಗಳನ್ನು ನಿರ್ವಹಿಸಲು ದೋಣಿಗಳನ್ನು ಆಶ್ರಯಿಸಿದ್ದಾರೆ.

ಶಿರಾಡಿ ಘಾಟ್‌ಗೆ ತಜ್ಞರ ಭೇಟಿ

ಬೆಂಗಳೂರು-ಮಂಗಳೂರು ನಗರಗಳಿಗೆ ಸಂಪರ್ಕ ಕಲ್ಪಿಸುವ ಅತಿಮುಖ್ಯ ರಸ್ತೆ ಎನಿಸಿರುವ ಶಿರಾಡಿ ಘಾಟ್‌ಗೆ 'ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ'ದ ತಜ್ಞರ ತಂಡ ಭೇಟಿ ನೀಡಿ ಇತ್ತೀಚೆಗೆ ಪರಿಶೀಲನೆ ನಡೆಸಿತು. ಶಿರಾಡಿ ಘಾಟ್‌ನ ಒಂದಲ್ಲ ಒಂದು ಕಡೆ ನಿರಂತರ ಭೂಕುಸಿತ ಸಂಭವಿಸುತ್ತಿದೆ. ಸತತ ಭೂಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಜನರು ದೂರುತ್ತಿದ್ದರು. ಇದೀಗ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಸಲಹೆ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ವೇಗವಾಗಿ ಬೀಸಲಿದೆ ಗಾಳಿ

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಜಿಲ್ಲೆಗಳಲ್ಲಿ ಸುಮಾರು 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸಬಹುದು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ವೇಗವಾಗಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Whats_app_banner