Karnataka New MLAs: ಸದನದಲ್ಲಿದ್ದಾರೆ 70 ಹೊಸ ಶಾಸಕರು, ಅವರೆಲ್ಲರಿಗೂ ಮೂರು ದಿನ ಟ್ರೈನಿಂಗ್ ಕ್ಯಾಂಪ್
ಕನ್ನಡ ಸುದ್ದಿ  /  ಕರ್ನಾಟಕ  /  Karnataka New Mlas: ಸದನದಲ್ಲಿದ್ದಾರೆ 70 ಹೊಸ ಶಾಸಕರು, ಅವರೆಲ್ಲರಿಗೂ ಮೂರು ದಿನ ಟ್ರೈನಿಂಗ್ ಕ್ಯಾಂಪ್

Karnataka New MLAs: ಸದನದಲ್ಲಿದ್ದಾರೆ 70 ಹೊಸ ಶಾಸಕರು, ಅವರೆಲ್ಲರಿಗೂ ಮೂರು ದಿನ ಟ್ರೈನಿಂಗ್ ಕ್ಯಾಂಪ್

Karnataka New MLAs: ಸ್ಪೀಕರ್ ಆದ ಬಳಿಕ ಮೊದಲ ಬಾರಿ ಮಂಗಳೂರಿಗೆ ಬಂದಿಳಿದ ಯು.ಟಿ.ಖಾದರ್ ಅವರನ್ನು ಗುರುವಾರ ( ಮೇ 25) ಸ್ವಾಗತಿಸಲಾಯಿತು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್ ಹೇಳಿದ್ದಿಷ್ಟು..

ವಿಧಾನಸೌಧ (ಸಂಗ್ರಹ ಚಿತ್ರ)
ವಿಧಾನಸೌಧ (ಸಂಗ್ರಹ ಚಿತ್ರ)

ಮಂಗಳೂರು: ವಿಧಾನಸಭೆಯಲ್ಲಿ ಈ ಬಾರಿ ಸುಮಾರು 70 ಹೊಸ ಶಾಸಕರಿದ್ದಾರೆ. ಅವರೆಲ್ಲರಿಗೂ ಮೂರು ದಿನಗಳ ಟ್ರೈನಿಂಗ್ ಕ್ಯಾಂಪ್ ಆಯೋಜಿಸಲಾಗುವುದು ಎಂದು ನೂತನವಾಗಿ ಆಯ್ಕೆಯಾದ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಹೇಳಿದರು.

ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಅವರು ಗುರುವಾರ ಮಾಧ್ಯಮದೊಂದಿಗೆ ಮಾತನಾಡಿ 70ರಷ್ಟು ಹೊಸ ಶಾಸಕರು ಈ ಬಾರಿಯ ಸದನದಲ್ಲಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿನ ನಿಯಮಗಳೇನು?. ಅದನ್ನು ಹೇಗೆ ಪಾಲನೆ ಮಾಡಬೇಕು , ವಿಧಾನಸಭೆಯ ಚರ್ಚೆಯಲ್ಲಿ ಗೌರವ ಹೆಚ್ಚಿಸಿಕೊಂಡು ಜನಸಾಮಾನ್ಯರಿಗೆ ತಮ್ಮ ಬಗ್ಗೆ ಕಾಳಜಿ ಇದೆ ಎಂಬ ಭಾವನೆಯನ್ನು ಹೇಗೆ ಮೂಡಿಸಬೇಕು ಎಂಬ ವಿಚಾರಗಳ ಬಗ್ಗೆ ಮೂರು ದಿನಗಳ ಟ್ರೈನಿಂಗ್ ಕ್ಯಾಂಪ್ ಅನ್ನು ನೂತನ ಶಾಸಕರಿಗೆ ಇಡಲಾಗುತ್ತದೆ ಎಂದರು.

ಹಿರಿಯ ಶಾಸಕರಲ್ಲಿಯೂ ಅಗತ್ಯ ಇರುವವರಿಗೆ ರಿಪ್ರೆಸ್ ಟ್ರೈನಿಂಗ್ ಕ್ಯಾಂಪ್ ಇಡಲಾಗುವುದು ಎಂದರು. ಅದೇ ರೀತಿ ಆಡಳಿತ ವ್ಯವಸ್ಥೆಯನ್ನು ಅಭಿವೃದ್ದಿಗೊಳಿಸಲು ಕೆಲವೊಂದು ಯೋಚನೆಗಳಿದ್ದು ಅದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.

ಅಭಿನಂದನೆ

ಸ್ಪೀಕರ್ ಆಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಬಂದ ಯು ಟಿ ಖಾದರ್ ಅವರನ್ನು ಕಾರ್ಯಕರ್ತರು ಅಭಿಮಾನಿಗಳಿಂದ ಅಭಿನಂದನೆ ನಡೆಯಿತು. ಇಂದು ಬೆಳಿಗ್ಗೆ ಸ್ಪೀಕರ್ ಯು ಟಿ ಖಾದರ್ ಅವರು ಸರ್ಕ್ಯೂಟ್ ಹೌಸ್ ಗೆ ಬಂದಿದ್ದ ವೇಳೆ ಕಾರ್ಯಕರ್ತರು , ಅಭಿಮಾನಿಗಳು ಮುತ್ತಿಕೊಂಡರು. ಹೂಗಚ್ಚ ನೀಡಿ, ಮಲ್ಲಿಗೆಯ ಹಾರ ಹಾಕಿ, ಕೈ ಕುಲುಕಿ, ಶಾಲು ಹಾಕಿ ಅಭಿನಂದಿಸಿದರು.

ಯುವಕರಿಗೆ ಹೆಚ್ಚು ಅವಕಾಶ:

ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಖಾದರ್, ನಾನು ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಂಡು ಹೆಚ್ಚಿನ ಅವಕಾಶಗಳನ್ನು ಯುವಕರಿಗೆ ಮತ್ತು ಹೊಸ ಮುಖಗಳಿಗೆ ನೀಡಲು ಪ್ರಯತ್ನ ಮಾಡುತ್ತೇನೆ. ಯಾರಲ್ಲಿ ಯಾವ ಶಕ್ತಿ ಇರುವ ಬಗ್ಗೆ ಗೊತ್ತಾಗುವುದಿಲ್ಲ. ಅವರು ಯುವಕರಾಗಿದ್ದರೂ, ಹೊಸಬರಾಗಿದ್ದರೂ ಅವರಲ್ಲಿರುವ ಜಾಣ್ಮೆಯನ್ನು ಹೊರತೆಗೆಯಲಾಗುತ್ತದೆ. ಅದರಿಂದ ರಾಜಕೀಯ ಪ್ರಯೋಜನ ಆಗಲಿದೆ. ಅವರಿಗೆ ಅವಕಾಶ ಕೊಡದಿದ್ದರೆ ಅವರ ವ್ಯಕ್ತಿತ್ವ ಮತ್ತು ಉತ್ತಮ ವಿಚಾರಗಳು ಅವರಲ್ಲಿಯೆ ಬಾಕಿಯಾಗುತ್ತದೆ. ಇದರಿಂದಾಗಿ ಅವರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು . ಅದರ ಸದುಪಯೋಗವನ್ನು ಹೊಸಬರು ಪಡೆಯಬೇಕಿದೆ ಎಂದರು.

ಸ್ಪೀಕರ್ ಮಾಡಿರುವ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ದ.ಹಲವಾರು ಜನರು ಇದ್ದರೂ ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ವಯಸ್ಸಿನಲ್ಲಿ ಕಿರಿಯ ಇರಬಹುದು. ಆದರೆ ಅನುಭವದಲ್ಲಿ ಹಿರಿಯನಿದ್ದೇನೆ. ಸಣ್ಣಂದಿನಿಂದಲೆ ಜನರ ಒಡನಾಟ ಇದೆ.ಎಲ್ಲರಿಗೂ ಗೌರವ ಬರುವ ರೀತಿ ಕೆಲಸ ಮಾಡುತ್ತೇನೆ.ನಾನು ಮಂತ್ರಿಯಾಗಿದ್ದರೆ ಒಂದು ಇಲಾಖೆಯ ಮಂತ್ರಿಯಾಗಬೇಕಿತ್ತು. ಇದೀಗ 32 ಇಲಾಖೆಯ ಮಂತ್ರಿಗಳು ನನ್ನ ವ್ಯಾಪ್ತಿಯಲ್ಲಿ ಬರುತ್ತಾರೆ. ಈ ಕಾರಣದಿಂದ ಕ್ಷೇತ್ರದ ಅಭಿವೃದ್ದಿ ಮಾಡಲು ಸಾಧ್ಯ ಎಂದರು.

ತುಳುವಿಗೆ ಪ್ರಾತಿನಿಧ್ಯ

ರಾಜ್ಯದಲ್ಲಿ ಎರಡನೇ ಭಾಷೆಯಾಗಿ ತುಳು ಭಾಷೆಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವರು ಜಿಲ್ಲೆಯವರಾಗಿ ಅದನ್ನು ಮಾಡಲು ಆಗಿಲ್ಲ. ಮುಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವರು ಯಾರು ಆಗುತ್ತಾರೆ ಎಂಬುದನ್ನು ನೋಡಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಅದನ್ನು ಮಾಡಲುಕ್ರಮ ತೆಗೆದುಕೊಳ್ಳಬಹುದು. ಈ ಸಂದರ್ಭದಲ್ಲಿ ನನ್ನ ಸಹಕಾರ ಕೊಡುತ್ತೇನೆ ಎಂದರು.

ಸಭಾಧ್ಯಕ್ಷನಾದರೂ ಕ್ಷೇತ್ರದ ಶಾಸಕನಾಗಿ ಸೇವೆ ಸಲ್ಲಿಸುತ್ತೇನೆ.ಸಭಾಧ್ಯಕ್ಷನಾದರೂ ಕ್ಷೇತ್ರ ಮತ್ತು ಪಕ್ಷದ ಕಾರ್ಯಕರ್ತರ ನಿಕಟ ಸಂಬಂಧ ಇರಿಸಿಕೊಳ್ಳುತ್ತೇನೆ.ಸ್ಪೀಕರ್ ಸ್ಥಾನದ ಘನತೆ ಹೆಚ್ಚಿಸಿ ಕ್ಷೇತ್ರವನ್ನು ಮಾದರಿ ಯಾಗಿಸುತ್ತೇನೆ. ಕರ್ನಾಟಕ ರಾಜ್ಯದ ವಿಧಾನಸಭಾ ಸಭಾಧ್ಯಕ್ಷ ಸ್ಥಾನ ಗೌರವ ಇರುವ ಸ್ಥಾನವಾಗಿದ್ದು,ಇದರ ಗೌರವ ಉಳಿಸುವ ಕಾರ್ಯ ಮಾಡುತ್ತೇನೆ ಮತ್ತು ಜಿಲ್ಲೆ ಗೆ ಗೌರವ ತರುತ್ತೇನೆ ಎಂದರು.

ಜಿಲ್ಲೆಯ ಎರಡನೇ ಸ್ಪೀಕರ್:

ಹಿಂದೆ ವಿಧಾನಸಭೆಯ ಸ್ಪೀಕರ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವೈಕುಂಠ ಬಾಳಿಗ,ಲೋಕಸಭಾ ಸ್ಪೀಕರ್ ಆಗಿದ್ದ ಕೆ ಎಸ್ ಹೆಗ್ಡೆ ಅವರು ಅಧ್ಯಕ್ಷ ಸ್ಥಾನಕ್ಕೆ ಗೌರವ ಕೊಟ್ಟ ರೀತಿ ಯಲ್ಲಿ ನಾನು ಮಾಡುತ್ತೇನೆ.ಪ್ರತಿನಿಧಿಗಳ ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಾಮಾಜಿಕ ಪ್ರಜಾಪ್ರಭುತ್ವ ಅಗತ್ಯ.ಯಾವುದೇ ದ್ವೇಷವಿಲ್ಲದೆ,ಆವೇಶವಿಲ್ಲದೆ ಪ್ರೀತಿ ವಿಶ್ವಾಸ ಮಾಡಿ ಜನಸಾಮಾನ್ಯರ ನೆಮ್ಮದಿ ಬದುಕಿಗೆ ಪ್ರಯತ್ನಿಸುತ್ತೇನೆ ಎಂದರು

ಹಿಂದೆ ಶಾಸಕ ಮಂತ್ರಿಯಾಗಿ ಜನಸಾಮಾನ್ಯರ ಒಡನಾಟ ಇತ್ತು. ಇದೀಗ ಸಭಾಧ್ಯಕ್ಷ ನಾಗಿ ಜನರ ಒಡನಾಟ ಜತೆಗೆ ಪೀಠದ ಗೌರವ ಉಳಿಸುತ್ತೇನೆ.ಇದಕ್ಕೆ ಕ್ಷೇತ್ರದ ಮತದಾರರು ಸಹಕಾರ ನೀಡುತ್ತಾರೆ. ಜನಸಾಮಾನ್ಯರಿಗೆ ಮಂತ್ರಿ ಸ್ಥಾನ ಬಗ್ಗೆ ತಿಳುವಳಿಕೆ, ಆಸಕ್ತಿ ಮತ್ತು ಅದರ ಬಗ್ಗೆ ಜ್ಞಾನ ಇದೆ. ಸಭಾಧ್ಯಕ್ಷ ಆದರೆ ಕೈಗೆ ಸಿಗುವುದಿಲ್ಲ ಎಂಬ ಭಾವನೆ ಇದೆ. ಆದರೆ ಜನರ ಪ್ರೀತಿಗೆ ಅಧ್ಯಕ್ಷ ಸ್ಥಾನ ಅಡ್ಡಿಯಾಗುವುದಿಲ್ಲ.ಅವರು ಈ ಹುದ್ದೆಯ ಬಗ್ಗೆ ಸಂತೋಷ ಪಡುವ ರೀತಿ ಕೆಲಸ ಮಾಡುತ್ತಾನೆ ಎಂದರು.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner