ಕಾರ್ಕಳ: ಕರಿಮಣಿ ಮಾಲಿಕ ನೀನಲ್ಲ ಎಂದು ರೀಲ್ಸ್ ಮಾಡಿದಾಕೆಯಿಂದಲೇ ಪತಿಯ ಮರ್ಡರ್; ಪ್ರಿಯಕರನೊಂದಿಗೆ ಸೇರಿ ವಿಷ ಉಣಿಸಿ ಕೊಲೆ
Karkala Crime: ಪ್ರಿಯಕರನೊಂದಿಗೆ ಇರುವ ಸಲುವಾಗಿ ಕರಿಮಣಿ ಕಟ್ಟಿದ ಗಂಡನನ್ನೇ ಪತ್ನಿ ಕೊಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ. ಸ್ಲೋ ಪಾಯಿಸನ್ ನೀಡಿ ಕೊಲೆ ಯತ್ನ ಮಾಡಿದ್ದು, ಅನಾರೋಗ್ಯದಿಂದಿದ್ದ ಪತಿಯನ್ನು ಬೆಡ್ಶೀಟ್ ಒತ್ತಿ ಉಸಿರುಗಟ್ಟಿಸಿ ಸಾಯಿಸಲಾಗಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)
ಉಡುಪಿ: ಕರಿಮಣಿ ಮಾಲೀಕ ನೀನಲ್ಲ ಎಂದು ರೀಲ್ಸ್ ಮಾಡುವ ಮೂಲಕ ಪತಿ, ಪತ್ನಿ ಕಾರ್ಕಳ ಪರಿಸರದಲ್ಲಿ ಫೇಮಸ್ ಆಗಿದ್ದರು. ಆದರೆ ಪತ್ನಿ ಆ ಮಾತನ್ನು ನಿಜವಾಗಿಸಿದ್ದಾಳೆ. ಪ್ರಿಯಕರನ ಜೊತೆ ಸೇರಿ ಪತಿ ಕರಿಮಣಿ ಮಾಲೀಕ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಾಳೆ. ವಿಷ ಹಾಕಿದರೂ ಬದುಕುಳಿದ ಪತಿಯನ್ನು ಕೊರಳೊತ್ತಿ ಕೊಂದಿದ್ದಾಳೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿ (44) ಅವರಿಗೆ ಕೆಲ ಸಮಯದಿಂದ ತೀವ್ರ ಅನಾರೋಗ್ಯ ಕಾಡುತ್ತಿತ್ತು. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿದ್ದರೂ ಪ್ರಯೋಜನವಾಗುತ್ತಿರಲಿಲ್ಲ. ಇನ್ನು ಮನೆಯಲ್ಲೇ ಚಿಕಿತ್ಸೆ ನೀಡುವುದು ಒಳ್ಳೆಯದು ಎಂದು ಅಕ್ಟೋಬರ್ 19ರಂದು ಮನೆಗೆ ಕರೆತರಲಾಯಿತು. ಮರುದಿನ ಅಂದರೆ ಆಗಸ್ಟ್ 20ರ ರಾತ್ರಿ ಅವರು ಸಾವನ್ನಪ್ಪಿದರು.
ಬಾಲಕೃಷ್ಣ ಸಾವಿನ ಕುರಿತು ಅವರ ಸಂಬಂಧಿಕರಲ್ಲಿ ಅನುಮಾನ ವ್ಯಕ್ತವಾಗಿತ್ತು. ಅವರ ತಂದೆಯೇ ಅಜೆಕಾರು ಪೊಲೀಸರಿಗೆ ಈ ಕುರಿತು ದೂರು ನೀಡಿದರು. ಮೇಲ್ನೋಟಕ್ಕೆ ಯಾವುದೇ ಸಂಶಯ ಕಾಣಿಸದ ಕಾರಣ, ಅಂತ್ಯಕ್ರಿಯೆಯನ್ನು ಅಂದು ನಡೆಸಲಾಯಿತು. ಆದರೆ ಮತ್ತಷ್ಟು ತೀವ್ರ ತನಿಖೆ ನಡೆಸಿದಾಗ ಸತ್ಯಾಂಶ ಬಯಲಾಯಿತು.
ಪತ್ನಿಯೇ ಪ್ರಿಯಕರನ ಜೊತೆ ಸೇರಿ ಯಾರಿಗೂ ಸಂಶಯ ಬಾರದ ರೀತಿ ಪತಿಯನ್ನು ಕೊಲೆ ಮಾಡಿದ್ದಳು. ಇದೀಗ ಕೊಲೆ ಮಾಡಿರುವ ಅವರ ಪತ್ನಿ ಪ್ರತಿಮಾ (36) ಮತ್ತು ಆಕೆಯ ಪ್ರಿಯಕರ ದಿಲೀಪ್ (28) ಎಂಬಿಬ್ಬರನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ.
ಮಧ್ಯರಾತ್ರಿವರೆಗೂ ಸರಿ ಇದ್ದ ಬಾಲಕೃಷ್ಣರನ್ನು ಕೊಂದದ್ದು ಹೇಗೆ?
ಆಗಸ್ಟ್ 20ರಂದು ಮಧ್ಯರಾತ್ರಿವರೆಗೂ ಬಾಲಕೃಷ್ಣ ಪೂಜಾರಿ ಅವರಿಗೆ ಏನೂ ಆಗಿರಲಿಲ್ಲ. ಆದರೆ ಅಚಾನಕ್ ಆಗಿ ಮೃತಪಟ್ಟಿರುವ ಕುರಿತು ಮೃತರ ಹೆತ್ತವರು ಹಾಗೂ ಆರೋಪಿ ಪ್ರತಿಮಾಳ ಸಹೋದರರಿಗೆ ಸಂಶಯ ಮೂಡಿತು. ಸಾವಿನ ಮೂರನೇ ದಿನದ ವಿಧಿ, ವಿಧಾನ ನಡೆಸಿದ ಬಳಿಕ ಆಗಸ್ಟ್ 25ರಂದು ಮತ್ತೆ ಈ ವಿಚಾರವನ್ನು ಕೆದಕಿದರು. ಈ ಸಂದರ್ಭ ವಿಷಯ ಬಹಿರಂಗವಾಯಿತು. ತಾನೇ ಕೊಲೆ ಮಾಡಿರುವುದನ್ನು ಪ್ರತಿಮಾ ಒಪ್ಪಿಕೊಂಡಳು. ಕೂಡಲೇ ಅಜೆಕಾರು ಠಾಣೆಗೆ ತಿಳಿಸಿ, ಕೇಸು ದಾಖಲಿಸಲಾಯಿತು.
ಬಾಲಕೃಷ್ಣ ಪೂಜಾರಿಗೆ ರೋಸಿಯಂ ಎಂಬ ವಿಷ ಪದಾರ್ಥವನ್ನು ಆಹಾರದೊಳಗೆ ಸೇರಿಸಿ ಹಲವು ದಿನಗಳಿಂದ ಕೊಟ್ಟಿದ್ದ ಪತ್ನಿಯ ನಡೆ ಗೊತ್ತೇ ಆಗಿರಲಿಲ್ಲ. ಇದರಿಂದಾಗಿ ಆರೋಗ್ಯ ಹದಗೆಟ್ಟಿತ್ತು. ಚಿಕಿತ್ಸೆ ಪಡೆದು ಬಂದಿದ್ದ ಬಾಲಕೃಷ್ಣ ಪೂಜಾರಿ ರಾತ್ರಿ ಮಲಗಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದಿರುವ ಕುರಿತು ತನ್ನ ಪ್ರಿಯಕರ ದಿಲೀಪ್ ಹೆಗ್ಡೆಗೆ ತಿಳಿಸಿ, ಮನೆಗೆ ಬರಲು ಹೇಳಿ, ಇಬ್ಬರೂ ಬೆಡ್ ಶೀಟ್ ಅನ್ನು ಮುಖಕ್ಕೆ ಒತ್ತಿ ಹಿಡಿದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ವಿಚಾರಣೆ ಸಂದರ್ಭ ಗೊತ್ತಾಗಿದೆ.
ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾಕೆ ರೀಲ್ಸ್ ಹವ್ಯಾಸಿ
ಅಜೆಕಾರಿನಲ್ಲಿ ಬ್ಯುಟಿ ಪಾರ್ಲರ್ ನಡೆಸುತ್ತಿದ್ದ ಪ್ರತಿಮಾಗೆ ರೀಲ್ಸ್ ಹವ್ಯಾಸವಿತ್ತು. ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಆಕೆ ಸಕ್ರಿಯವಾಗಿದ್ದಳು. ಇನ್ಸ್ಟಾಗ್ರಾಮ್ನಲ್ಲಿ ಪ್ರತಿಮಾಸ್ ಮೇಕೋವರ್ ಎಂಬ ಪೇಜ್ ತೆಗೆದು ರೀಲ್ಸ್ ಹಾಕುತ್ತಿದ್ದಳು. ಈ ಸಂದರ್ಭ, ಆಕೆಗೆ ಕಾರ್ಕಳದ ಹೋಟೆಲ್ ಮಾಲೀಕರೋರ್ವರ ಪುತ್ರ ದಿಲೀಪ್ ಹೆಗ್ಡೆ ಸ್ನೇಹವಾಗಿದೆ. ಇಬ್ಬರ ನಡುವೆ ಸಂಬಂಧಕ್ಕೂ ಇದು ಕಾರಣವಾಯಿತು. ಈ ವಿಷಯ ಬಾಲಕೃಷ್ಣ ಪೂಜಾರಿಗೆ ಗೊತ್ತಾಗಿತ್ತು. ಅವರು ಪತ್ನಿಯ ಅಣ್ಣನ ಗಮನಕ್ಕೆ ತಂದಿದ್ದರು. ಬಳಿಕ ಇಬ್ಬರ ಸಂಬಂಧದ ಕುರಿತು ಅಜೆಕಾರು ಪೊಲೀಸ್ ಠಾಣೆ ಗಮನಕ್ಕೆ ತಂದು ಇಬ್ಬರನ್ನೂ ಕರೆಯಿಸಿ, ಮುಚ್ಚಳಿಕೆ ಬರೆಸಿಕೊಂಡಿದ್ದರು. ಈ ವೇಳೆ ಗಂಡನಿಂದ ದೂರವಾಗಿ ಪ್ರಿಯಕರನ ಜೊತೆ ಇರುವುದಾಗಿ ಆಕೆ ತಿಳಿಸಿದ್ದಳು. ಬಳಿಕ ಸೋದರ ಬುದ್ಧಿವಾದ ಹೇಳಿದ ಬಳಿಕ ಗಂಡನೊಂದಿಗೆ ಇರಲು ಒಪ್ಪಿಕೊಂಡಿದ್ದಳು. ಆದರೆ ಹೇಗಾದರೂ ಮಾಡಿ ಕೊಲೆ ಮಾಡಬೇಕು ಎಂದು ಸಂಚು ರೂಪಿಸಿದ್ದ ಆಕೆ, ದಿಲೀಪ್ ಜೊತೆ ಸೇರಿಕೊಂಡಳು. ಪ್ರತಿದಿನ ಬಾಲಕೃಷ್ಣ ಅವರ ಊಟದಲ್ಲಿ ವಿಷ ಪದಾರ್ಥ ಮಿಶ್ರಣ ಮಾಡಿ ಕೊಡುತ್ತಿದ್ದಳು. ಇದರಿಂದ ಅಸ್ವಸ್ಥರಾದ ಬಾಲಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರು ಕಂಡಿತು. ಸುಮಾರು ಏಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಿಸಲಾಗಿತ್ತು.
ಮೃತ ಬಾಲಕೃಷ್ಣ ಪೂಜಾರಿ ಹಾಗೂ ಪ್ರತಿಮಾ ಇಬ್ಬರು ಮಕ್ಕಳೊಂದಿಗೆ ದೆಪತ್ತೆ ಎಂಬಲ್ಲಿ ವಾಸವಾಗಿದ್ದರು. ಮುಂಬಯಿಯಲ್ಲಿದ್ದ ಅವರು ಕೋವಿಡ್ ಬಳಿಕ ಊರಿಗೆ ಬಂದಿದ್ದು, ನಿಟ್ಟೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು. ಕಳೆದ ವರ್ಷ ಹೊಸ ಮನೆ ಕಟ್ಟಿಸಿದ್ದರು. ಹಾಗೆಯೇ ಆರು ತಿಂಗಳ ಹಿಂದೆ ಅಜೆಕಾರಿನಲ್ಲಿ ಬ್ಯೂಟಿ ಪಾರ್ಲರ್ ಹಾಕಿಸಿಕೊಟ್ಟಿದ್ದರು. ದಂಪತಿಗೆ 9ನೇ ತರಗತಿಯಲ್ಲಿ ಕಲಿಯುವ ಮಗ ಹಾಗೂ 5ನೇ ತರಗತಿಯಲ್ಲಿ ಕಲಿಯುವ ಮಗಳು ಇದ್ದಾರೆ.