Crime News: ಮಂಗಳೂರು ಹೊರವಲಯದಲ್ಲಿ ಯುವಕರ ನಡುರಾತ್ರಿಯ ತಲವಾರ್ ಕಾಳಗ; ಇಬ್ಬರ ಸ್ಥಿತಿ ಗಂಭೀರ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮೆಮಾರ್ ಎಂಬಲ್ಲಿ ನಡುರಾತ್ರಿ ಯುವಕರ ಗುಂಪಿನ ನಡುವೆ ತಲವಾರ್ ಕಾಳಗ ನಡೆದಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಬಂಟ್ವಾಳ ತಾಲೂಕಿನ ಅಮ್ಮೆಮಾರ್ ಎಂಬಲ್ಲಿ ನಡುರಾತ್ರಿ ಯುವಕರ ಗುಂಪಿನ ನಡುವೆ ನಡೆದ ರಣಭೀಕರ ಕಾಳಗದ ವಿಡಿಯೋ ವೈರಲ್ ಆಗಿದ್ದು, ಘಟನೆಯಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯವಾಗಿದೆ. ತಲವಾರು ದಾಳಿಯಲ್ಲಿ ತಸ್ಲೀಮ್ ಹಾಗೂ ಮೊಹಮ್ಮದ್ ಶಾಕೀರ್ ಎಂಬಿಬ್ಬರು ಯುವಕರ ಸ್ಥಿತಿ ಗಂಭೀರವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳೀಯ ನಿವಾಸಿಗಳಾದ ಮನ್ಸೂರ್, ಪಲ್ಟಿ ಇಮ್ರಾನ್ ತಂಡದಿಂದ ತಲವಾರು ದಾಳಿ ನಡೆದಿದೆ. ಮುಸ್ತಾಫ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ತಲವಾರು ದಾಳಿ ನಡೆಸಿದ ಆರೋಪಿಗಳು. ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಆರೋಪಿಗಳು ತಸ್ಲೀಂಗೆ ಫೋನ್ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿ ಅಮ್ಮೆಮಾರ್ ಶಾಲೆ ಬಳಿ ಬರುವಂತೆ ಸವಾಲೆಸೆದಿದ್ದರು ಎನ್ನಲಾಗಿದೆ. ಅದರಂತೆ ತಸ್ಲಿಮ್ ಅಲ್ಲಿಗೆ ಶಾಕಿರ್ ಎಂಬಾತನೊಂದಿಗೆ ತೆರಳಿದ್ದಾನೆ.
ಈ ವೇಳೆ ಪಲ್ಟಿ ಇಮ್ರಾನ್ ತಲವಾರಿನಿಂದ ತಸ್ಲೀಮ್‌ನ ಬಲಗಾಲು, ಮತ್ತೋರ್ವ ಆರೋಪಿ ಮುಸ್ತಾಕ್ ಬಲಗೈಗೆ ಕಡಿದಿದ್ದಾನೆ. ಸರ್ಫುದ್ದೀನ್ ಕಲ್ಲಿನಿಂದ ಹೊಡೆದಿದ್ದಾನೆ. ಈ ವೇಳೆ ತಸ್ಲೀಮ್ ನೆಲಕ್ಕೆ ಬಿದ್ದಾಗ, ಮನ್ಸೂರ್ ಮುಖಕ್ಕೆ ಕಡಿದಿರುತ್ತಾನೆ. ಅಲ್ಲದೆ ಮಹಮ್ಮದ್ ಶಾಕೀರ್‌ಗೂ ಅದೇ ರೀತಿ ತಲವಾರಿನಿಂದ ಕಡಿದಿದ್ದಾರೆ. ಆಶ್ರಫ್, ರಿಜ್ವಾನ್ ಮತ್ತು ಲತೀಫ್ ಮರದ ದೊಣ್ಣೆಯಿಂದ ಹೊಡೆದಿರುತ್ತಾರೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು,ತಸ್ಲೀಮ್ ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.