Udupi News: ಉಡುಪಿ ಜಿಲ್ಲೆಯಲ್ಲಿ ಚಿರತೆ ದಾಳಿ, ಜಗಲಿಯಲ್ಲಿ ಮಲಗಿದ್ದ ವ್ಯಕ್ತಿಗೆ ತೀವ್ರ ಗಾಯ
ಉಡುಪಿ ಜಿಲ್ಲೆ ಶಿರ್ವ ಭಾಗದಲ್ಲಿ ಚಿರತೆ ಉಪಟಳ ಜೋರಾಗಿದ್ದು, ಮನೆಯ ಜಗಲಿ ಮೇಲೆ ಮಲಗಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿದೆ.(ವರದಿ: ಹರೀಶ್ ಮಾಂಬಾಡಿ, ಮಂಗಳೂರು)
ಉಡುಪಿ: ಉಡುಪಿ ಜಿಲ್ಲೆಯ ಶಿರ್ವ ಕಲ್ಲೊಟ್ಟು ಎಂಬಲ್ಲಿ ಮನೆಯ ಜಗಲಿಯಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ. ಬಿಹಾರ ಮೂಲದ ಕಾರ್ಮಿಕ ಸುರೇಂದ್ರ (55) ದಾಳಿಗೊಳಗಾದವರು. ಅವರೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುರೇಂದ್ರ ನದಿಯಿಂದ ಮರಳು ತೆಗೆಯುವ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ರಾಜೇಶ್ ಎಂಬುವವರ ಮನೆಯ ಜಗುಲಿಯಲ್ಲಿ ಮಲಗಿದ್ದ ಸುರೇಂದ್ರ ಅವರ ಮೇಲೆ ಚಿರತೆ ದಾಳಿ ಮಾಡಿದೆ. ಸುರೇಂದ್ರ ಅವರ ಕೆನ್ನೆ, ಗಲ್ಲ, ಮುಖಕ್ಕೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸುರೇಂದ್ರ ಅವರ ಮೇಲೆ ದಾಳಿ ಮಾಡಿದ ಚಿರತೆ ಅದರ ಮರಿಯೊಂದಿಗೆ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಲ್ಲೊಟ್ಟು, ಸೊರ್ಪು, ಅಗೋಳಿಬೈಲು, ಪಡವು ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ. ಎರಡು ದಿನಗಳ ಹಿಂದೆಯಷ್ಟೇ ಸಂಗೀತಾ ನಾಯ್ಕ ಅವರ ಒಡೆತನದ ಎರಡು ಸಾಕು ನಾಯಿಗಳನ್ನು ಚಿರತೆಯೊಂದು ಬೇಟೆಯಾಡಿತ್ತು.
ಈ ಪ್ರದೇಶದಲ್ಲಿ ಶಾಲೆ, ಕಾಲೇಜುಗಳಿಗೆ ಕಾಲ್ನಡಿಗೆಯಲ್ಲಿ ತೆರಳುವವರು, ಕೆಲಸಕ್ಕೆ ಹೋಗುವವರು ಇದ್ದು, ಗ್ರಾಮಸ್ಥರೀಗ ಭೀತರಾಗಿದ್ದಾರೆ. ಘಟನೆ ನಡೆದ ಕಲ್ಲೊಟ್ಟು ಪರಿಸರದಲ್ಲಿ ಬೋನು ಇರಿಸಲು ಈಗಾಗಲೇ ಅರಣ್ಯ ರಕ್ಷಕರಿಗೆ ಸೂಚಿಸಲಾಗಿದೆ ಎಂದು ಪಡುಬಿದ್ರಿ ಉಪವಲಯ ಅರಣ್ಯಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತತಕ್ಷಣದ ಪರಿಹಾರವಾಗಿ 5 ಸಾವಿರ ರೂಗಳನ್ನು ಗಾಯಾಳುವಿಗೆ ನೀಡಲಾಗಿದೆ. ಗ್ರಾಪಂ ಆಡಳಿತ ಮತ್ತು ಅರಣ್ಯ ಇಲಾಖೆ ಸಮಸ್ಯೆಗೆ ತುರ್ತು ಪರಿಹಾರ ಒದಗಿಸಬೇಕು ಎಂದು ನಾಗರಿಕರು ಒತ್ತಾಯಪಡಿಸಿದ್ದಾರೆ.
ಅರಣ್ಯ ಇಲಾಖೆ ಈ ಭಾಗದಲ್ಲಿ ಸಿಬ್ಬಂದಿ ನಿಯೋಜಿಸಿ ಬೀಟ್ ಹೆಚ್ಚಿಸಬೇಕು. ಜನರಲ್ಲಿ ಇರುವ ಭಯ ಹೋಗಲಾಡಿಸಲು ಕ್ರಮ ವಹಿಸಬೇಕು. ಕೂಡಲೇ ಚಿರತೆ ಸೆರೆ ಹಿಡಿದು ದೂರದ ಕಾಡಿಗೆ ಬಿಡಬೇಕು ಎನ್ನುವುದು ಸ್ಥಳೀಯರ ಒತ್ತಾಯ.
ಈ ಭಾಗದಲ್ಲಿ ಚಿರತೆ ಸಮಸ್ಯೆ ಇರುವುದು ನಿಜ. ಇದಕ್ಕಾಗಿ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
2023ರ ನವೆಂಬರ್‌ನಲ್ಲಿ ಕಲ್ಲೊಟ್ಟಿನ ದೇವಣ್ಣ ನಾಯಕ್ ಎಂಬುವವರ ಸಾಕು ನಾಯಿಯನ್ನು ಬೇಟೆಯಾಡಿದ ಚಿರತೆ ಮನೆಯ ಮಲ್ಲಿಗೆ ಗಿಡದ ಬಳಿ ಅರ್ಧ ತಿಂದಿದ್ದ ದೇಹವನ್ನು ಬಿಟ್ಟು ಹೋಗಿತ್ತು.
ಮಣಿಪಾಲದಲ್ಲಿ ಯುವಕನ ಮೇಲೆ ಅಮಾನುಷ ಹಲ್ಲೆ
ಮಣಿಪಾಲದ ಸರಳೆಬೆಟ್ಟು ಪ್ರದೇಶದಲ್ಲಿ ನಡೆದ ಆತಂಕಕಾರಿ ಘಟನೆಯೊಂದರಲ್ಲಿ ಸ್ಥಳೀಯ ಆರು ಯುವಕರನ್ನು ಒಳಗೊಂಡ ತಂಡವೊಂದರಿಂದ ಯುವಕನೊಬ್ಬನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಇಡೀ ಹಲ್ಲೆಯ ದೃಶ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಮಣಿಪಾಲದ ಸ್ಥಳೀಯ ಬಾರ್‌ನಲ್ಲಿ ದುಷ್ಕರ್ಮಿಗಳು ಒಬ್ಬರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಡಿದ್ದು ಬಳಿಕ ಆತನಿಗೆ ಮನಬಂದಂತೆ ಥಳಿಸಿದ್ದಾರೆ .ಯುವಕನನ್ನು ಮುಂಬೈ ಮೂಲದ ಮತ್ತು ಮಣಿಪಾಲದ ಖಾಸಗಿ ಕಾಲೇಜಿನ ವಿದ್ಯಾರ್ಥಿ ಅರುಷ್ ಕುಮಾರ್ (21) ಎಂದು ಗುರುತಿಸಲಾಗಿದೆ.
ಹಲ್ಲೆ ನಡೆಸಿದ ಗ್ಯಾಂಗ್ ಮದ್ಯ ಸೇವಿಸುತ್ತಿತ್ತು. ಹಲ್ಲೆಕೋರರು ಯುವಕನಿಗೆ ಸುಮಾರು ದೂರದ ವರೆಗೆ ಹಲ್ಲೆನಡೆಸುತ್ತ ಬಂದಿದ್ದಾರೆಂದು ತಿಳಿದಿದೆ. ಅವರು ಪಟ್ಟುಬಿಡದೆ ಅಟ್ಟಾಡಿಸುತ್ತ ಅರುಶ್ ಅವರನ್ನು ಅವರ ನಿವಾಸಕ್ಕೆ ಹಿಂಬಾಲಿಸಿದ್ದಾರೆ, ಬಳಿಕ ಅರುಷ್ ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿ ಬೆದರಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಮಣಿಪಾಲ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಅಗತ್ಯ ಮಾಹಿತಿ ಸಂಗ್ರಹಿಸಿ ದೂರು ದಾಖಲಿಸಿದ್ದಾರೆ.
(ವರದಿ: ಹರೀಶ್ ಮಾಂಬಾಡಿ, ಮಂಗಳೂರು)