Union Budget 2024: ಮೆಟ್ರೋ ನಗರಕ್ಕೆ ಬಡ್ತಿ, ಮನೆ ಭತ್ಯೆ ಬಾಡಿಗೆ ವಿನಾಯಿತಿ ಬೇಡಿಕೆ; ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರಿನ ನಿರೀಕ್ಷೆಗಳೇನು
Budget Bangalore Demands ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು( Nirmala Budget) ಜುಲೈ 23 ರಂದು ಬಜೆಟ್ ಮಂಡಿಸಲು ಸಜ್ಜಾಗಿರುವುದರಿಂದ, ಮನೆ ಬಾಡಿಗೆ ಭತ್ಯೆ (HRA) ವಿನಾಯಿತಿಗಾಗಿ ಟೆಕ್ ಮತ್ತು ಸ್ಟಾರ್ಟ್-ಅಪ್ ರಾಜಧಾನಿ ಬೆಂಗಳೂರುವನ್ನು ಮೆಟ್ರೋ ನಗರಗಳ( Metro City) ಪಟ್ಟಿಯಲ್ಲಿ ಸೇರಿಸಲು ಬೇಡಿಕೆ ಹೆಚ್ಚುತ್ತಿದೆ.
ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25 ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸಲು ಸಿದ್ದರಾಗಿದ್ದಾರೆ. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿರುವ ಹಾಗೂ ಬೆಂಗಳೂರು ನಂಟು ಹೊಂದಿರುವ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರು ಮಹಾನಗರಕ್ಕೆ ವಿಶೇಷವಾಗಿ ಏನಾದರೂ ಬಜೆಟ್‌ನಲ್ಲಿ ನೀಡಬಹುದೇ ಎನ್ನುವ ನಿರೀಕ್ಷೆಗಳು ಹೆಚ್ಚಿವೆ. ವಿಶೇಷವಾಗಿ ವಿಶ್ವದ ಆರ್ಥಿಕ ನಗರಿಯಾಗಿ ಹೊರ ಹೊಮ್ಮಿರುವ ಬೆಂಗಳೂರನ್ನು ಮೆಟ್ರೋ ನಗರವಾಗಿ ಘೋಷಿಸಬಹುದೇ, ಇದರ ಭಾಗವಾಗಿಯೇ ಭಾರತದ ಇತರೆ ಮಹಾನಗರಗಳಿಗೆ ಇರುವಂತೆ ಮನೆ ಬಾಡಿಗೆ ಮೊತ್ತ( HR Allowance) ಅನ್ನು ಏರಿಸುವ ಪ್ರಮುಖ ಬೇಡಿಕೆಗಳಿದ್ದು, ಅವುಗಳಿಗೆ ಸ್ಪಂದಿಸುವ ಲೆಕ್ಕಾಚಾರಗಳಿವೆ.
ಪ್ರಸ್ತುತ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಮಾತ್ರ ಹಳೆಯ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಶೇ. 50 ರಷ್ಟು ಮನೆ ಬಾಡಿಗೆ ಭತ್ಯೆ ವಿನಾಯಿತಿಗೆ ಅರ್ಹತೆ ಪಡೆದಿದ್ದರೆ, ಬೆಂಗಳೂರು, ಹೈದರಾಬಾದ್ ಮತ್ತು ಪುಣೆ ಸೇರಿದಂತೆ ಇತರ ಮೆಟ್ರೋಯೇತರ ನಗರಗಳು ಶೇ. 40 ರ ವರ್ಗದಡಿಯಲ್ಲಿವೆ. ಈಗಿರುವ ಸ್ಲ್ಯಾಬ್ ಅನ್ನು ಹೆಚ್ಚಿಸಬೇಕು ಎನ್ನುವುದು ಬೆಂಗಳೂರಿನ ಬೇಡಿಕೆ.
1961 ರ ಐ-ಟಿ ಕಾಯ್ದೆಯ ಸೆಕ್ಷನ್ 10 (13 ಎ) ಅಡಿಯಲ್ಲಿ, ಸಂಬಳ ಪಡೆಯುವ ಉದ್ಯೋಗಿಗಳು ಎಚ್ಆರ್‌ಎ ವಿನಾಯಿತಿಯನ್ನು ಪಡೆಯಬಹುದು. ಐ-ಟಿ ನಿಯಮಗಳ ನಿಯಮ 2 ಎ ಪ್ರಕಾರ, 1962, ವಿನಾಯಿತಿ ಮೊತ್ತವು ಪಾವತಿಸಿದ ನಿಜವಾದ ಬಾಡಿಗೆ ಮೂಲ ವೇತನದ ಕಡಿಮೆಯಲ್ಲಿ ಶೇ. 10 ಮತ್ತು ತುಟ್ಟಿಭತ್ಯೆ, ಮತ್ತು ಮೂಲ ವೇತನದ 40 ಪ್ರತಿಶತ ಮತ್ತು ಡಿಎಗೆ ಬರುತ್ತದೆ. ನಾಲ್ಕು ಮಹಾನಗರಗಳಿಗೆ ಇದು ಭಿನ್ನವಾಗಿದ್ದರೆ, ಇತರೆ ನಗರಗಳಿಗೆ ಕಡಿಮೆ ಯಿದೆ. ಬೆಂಗಳೂರು ಕಳೆದ ಕೆಲವು ವರ್ಷಗಳಿಂದ ಎಚ್ಆರ್ ಎ ವಿನಾಯಿತಿಗಾಗಿ ಒತ್ತಾಯಿಸುತ್ತಿದೆ. ಕರ್ನಾಟಕ ಸರ್ಕಾರವು ಅಕ್ಟೋಬರ್, 2023 ರಿಂದ ಮಾರ್ಗದರ್ಶನ ಮೌಲ್ಯವನ್ನು ಶೇಕಡಾ 30 ರಷ್ಟು ಹೆಚ್ಚಿಸಿದೆ. ಆಸ್ತಿ ಮಾರ್ಗದರ್ಶನ ಮೌಲ್ಯಗಳ ಹೆಚ್ಚಳ, ವಸತಿಗಳ ಕಡಿಮೆ ಪೂರೈಕೆ, ಹೆಚ್ಚುತ್ತಿರುವ ನಿರ್ಮಾಣ ವೆಚ್ಚಗಳು ಮತ್ತು ಕಚೇರಿಯಿಂದ ಕೆಲಸ ಮಾಡುವ ಆದೇಶಗಳನ್ನು ನೀಡುವ ಕಂಪನಿಗಳು ಟೆಕ್ ರಾಜಧಾನಿಯಲ್ಲಿ ಬಾಡಿಗೆಗಳನ್ನು ಹೆಚ್ಚಿಸಿವೆ. ಕೋಲ್ಕತ್ತಾ ಮತ್ತು ಚೆನ್ನೈನಂತಹ ನಗರಗಳಿಗಿಂತ ಬೆಂಗಳೂರಿನಲ್ಲಿ ಬಾಡಿಗೆ ಹೆಚ್ಚಾಗಿದೆ. ಈ ಕಾರಣದಿಂದ ಎಚ್‌ಆರ್‌ಎ ಕೂಡ ಬದಲಾಗಬೇಕು ಎನ್ನುವುದು ಬೇಡಿಕೆಯ ಸಾರ.
ಬೆಂಗಳೂರು ನಗರವನ್ನು ಮಹಾನಗರಗಳ ಪಟ್ಟಿಯಲ್ಲಿ( ಮೆಟ್ರೋ ನಗರ) ಸೇರಿಸುವಂತೆ ಅನೇಕ ಕೈಗಾರಿಕೋದ್ಯಮಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇನ್ಫೋಸಿಸ್ ಮಾಜಿ ಸಿಎಫ್ಒ ಹಾಗೂ ಉದ್ಯಮಿ ಮೋಹನ್ದಾಸ್ ಪೈ ಪ್ರಕಾರ,ಹಳೆಯ ಪ್ರೆಸಿಡೆನ್ಸಿ ಪಟ್ಟಣಗಳನ್ನು ಮಾತ್ರ ಇನ್ನೂ ಮೆಟ್ರೋ ಎಂದು ವರ್ಗೀಕರಿಸಲಾಗಿದೆ, ಮತ್ತು ಸರ್ಕಾರವು 40-50 ವರ್ಷಗಳಲ್ಲಿ ಪಟ್ಟಿಯನ್ನು ವಿಸ್ತರಿಸಿಲ್ಲ. ಬೆಂಗಳೂರು ಮೂರನೇ ಅತಿದೊಡ್ಡ ಆರ್ಥಿಕತೆ ನಗರಿಯ ಪಟ್ಟಿಯಲ್ಲಿದೆ. ಕೋಲ್ಕತ್ತಾ ಅಥವಾ ಚೆನ್ನೈಗಿಂತ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಆದರೂ, ಸರ್ಕಾರವು ಬೆಂಗಳೂರಿನ ಬಗ್ಗೆ ತಾರತಮ್ಯವನ್ನು ತೋರಿಸುತ್ತಲೇ ಇದೆ. ಇದು ಬದಲಾಗಬೇಕು ಎಂದು ಹೇಳುತ್ತಾರೆ.
ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FKCCI) ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ ಅವರು ಹೇಳುವಂತೆ, ದೇಶದ ಜಿಡಿಪಿಯಲ್ಲಿ ಬೆಂಗಳೂರು ಗಮನಾರ್ಹ ಕೊಡುಗೆ ನೀಡುತ್ತದೆ. ಇದು ಐಟಿ ಮತ್ತು ಐಟಿಇಎಸ್ ಉದ್ಯಮದ ಕೇಂದ್ರವಾಗಿದೆ. ಇದನ್ನು ದೇಶದ ಸ್ಟಾರ್ಟ್-ಅಪ್ ರಾಜಧಾನಿ ಎಂದು ಕರೆಯಲಾಗುತ್ತದೆ. ಹೊಸ ನಗರಗಳು ಬೆಳೆಯುತ್ತಿರುವುದರಿಂದ ಮತ್ತು ಈ ನಗರಗಳಲ್ಲಿ ಜೀವನ ವೆಚ್ಚ ಹೆಚ್ಚುತ್ತಿರುವುದರಿಂದ, ಬೆಂಗಳೂರಿನಂತಹ ನಗರಗಳನ್ನು ಎಚ್ಆರ್ ಎ ವ್ಯಾಖ್ಯಾನದ ಅಡಿಯಲ್ಲಿ ಮೆಟ್ರೋ ನಗರಗಳೆಂದು ಪರಿಗಣಿಸುವುದು ಅವಶ್ಯಕವಾಗಿದೆ, ಇದು ಬೆಂಗಳೂರಿನಾದ್ಯಂತ ಕೋಟ್ಯಂತರ ಮಧ್ಯಮ ವರ್ಗದ ತೆರಿಗೆದಾರರಿಗೆ ಪ್ರಯೋಜನವನ್ನು ನೀಡುತ್ತದೆ ಎನ್ನುತ್ತಾರೆ.
ಎರಡು ವರ್ಷದ ಹಿಂದೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಇದೇ ವಿಚಾರವನ್ನು ಲೋಕಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಈಗಾಗಲೇ ಈ ಸಂಬಂಧ ಅಹವಾಲುಗಳನ್ನು ನೀಡಲಾಗಿದೆ ಎಂದು ಹೇಳಿದ್ದರು. ಆನಂತರ ಇದು ಚರ್ಚೆಗೆ ಬಂದಿಲ್ಲ. ಈಗ ಬಜೆಟ್ ಇರುವುದರಿಂದ ಮತ್ತೆ ಮುನ್ನಲೆಗೆ ಬಂದಿದ್ದು, ನಿರ್ಮಲಾಸೀತಾರಾಮನ್ ಅವರ ಬಜೆಟ್‌ನತ್ತ ದೃಷ್ಟಿ ನೆಟ್ಟಿದೆ.