ವಿಜಯಪುರ ಜಿಲ್ಲೆಯ ಬಡ ವಿದ್ಯಾರ್ಥಿ ಡಿಪ್ಲೋಮಾದಲ್ಲಿ ರಾಜ್ಯಕ್ಕೆ ಟಾಪರ್‌, ಎಂಜಿನಿಯರಿಂಗ್‌ ಸೇರಲು ಸಿಕ್ಕಿತು ಸಚಿವರ ಆರ್ಥಿಕ ನೆರವು
ಕನ್ನಡ ಸುದ್ದಿ  /  ಕರ್ನಾಟಕ  /  ವಿಜಯಪುರ ಜಿಲ್ಲೆಯ ಬಡ ವಿದ್ಯಾರ್ಥಿ ಡಿಪ್ಲೋಮಾದಲ್ಲಿ ರಾಜ್ಯಕ್ಕೆ ಟಾಪರ್‌, ಎಂಜಿನಿಯರಿಂಗ್‌ ಸೇರಲು ಸಿಕ್ಕಿತು ಸಚಿವರ ಆರ್ಥಿಕ ನೆರವು

ವಿಜಯಪುರ ಜಿಲ್ಲೆಯ ಬಡ ವಿದ್ಯಾರ್ಥಿ ಡಿಪ್ಲೋಮಾದಲ್ಲಿ ರಾಜ್ಯಕ್ಕೆ ಟಾಪರ್‌, ಎಂಜಿನಿಯರಿಂಗ್‌ ಸೇರಲು ಸಿಕ್ಕಿತು ಸಚಿವರ ಆರ್ಥಿಕ ನೆರವು

Vijayapura News ಪ್ರತಿಭಾವಂತ ಬಡ ವಿದ್ಯಾರ್ಥಿಯ ಎಂಜಿನಿಯರಿಂಗ್‌ ಶಿಕ್ಷಣದ ಕನಸಿಗೆ ಬಲವನ್ನು ತುಂಬಿದ್ದಾರೆ ಸಚಿವ ಎಂ.ಬಿ.ಪಾಟೀಲ( MB Patil)

ವಿಜಯೊಉರದ ಕಿರಣ್‌ ಶಂಕರ್‌ ಚವ್ಹಾಣ್‌ ಓದಿಗೆ ಸಚಿವ ಎಂ,.ಬಿ.ಪಾಟೀಲ್‌ ನೆರವಿನ ಚೆಕ್‌ ವಿತರಿಸಿದರು.
ವಿಜಯೊಉರದ ಕಿರಣ್‌ ಶಂಕರ್‌ ಚವ್ಹಾಣ್‌ ಓದಿಗೆ ಸಚಿವ ಎಂ,.ಬಿ.ಪಾಟೀಲ್‌ ನೆರವಿನ ಚೆಕ್‌ ವಿತರಿಸಿದರು.

ವಿಜಯಪುರ: ತಂದೆ ತಾಯಿಗೆ ಉದ್ಯೋಗವೂ ಇಲ್ಲ. ಸಿಕ್ಕಾಗ ಕೆಲಸ. ಟೈಲರಿಂಗ್‌ ಅವರಿಗೆ ಬದುಕಿಗಾಸರೆ. ಅದರಲ್ಲೂ ಇಬ್ಬರು ಮಕ್ಕಳನ್ನು ಓದಿಸುತ್ತಿದ್ದಾರೆ ದಂಪತಿ. ವಿಜಯಪುರ ಜಿಲ್ಲೆಯಲ್ಲಿ ಹಲವಾರು ಕುಟುಂಬಗಳು ಉದ್ಯೋಗಕ್ಕಾಗಿ ಗುಳೆ ಹೋಗುವುದು ಸಾಮಾನ್ಯ. ಈ ಕುಟುಂಬಕ್ಕೆ ಇದರ ಅನುಭವವೂ ಇದೆ. ಇವೆಲ್ಲವನ್ನೂ ಮೀರಿ ಮಗ ರಾಜ್ಯಕ್ಕೆ ಟಾಪರ್.‌ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಯಾದ ಆತ ಮನೆಯಲ್ಲಿ ಕಷ್ಟವಿದ್ದರೂ ಓದಿಗೆ ಅಡ್ಡಿ ಮಾಡಿಕೊಂಡಿರಲಿಲ್ಲ. ಎಂಜಿನಿಯರ್‌ ಶಿಕ್ಷಣಕ್ಕೆ ಸೇರಬೇಕು ಎಂದರೆ ಹಣವಿರಲಿಲ್ಲ. ಬ್ಯಾಚುಲರ್ ಆಫ್ ಎಂಜಿನಿಯರಿಂಗ್(ಬಿ.ಇ) ಪದವಿಗಾಗಿ ಡಿಪ್ಲೋಮಾ ವಿಭಾಗದಿಂದ ನಡೆದ ಸಿಇಟಿ(ಲ್ಯಾಟರಲ್ ಎಂಟ್ರಿ)ಯಲ್ಲಿ ರಾಜ್ಯಕ್ಕೆ ಪ್ರಥಮ‌ ಸ್ಥಾನ ಪಡೆದಿರುವ ಪ್ರತಿಭಾವಂತ ಬಡ ವಿದ್ಯಾರ್ಥಿಕಿರಣ ಶಂಕರ ಚವ್ಹಾಣಗೆ ಹಣದ ನೆರವು ಹರಿದು ಬಂದೇ ಬಿಟ್ಟಿತು. ಅದೂ ಶಿಕ್ಷಣಕ್ಕಾಗಿ ಸಹಾಯ ಧನ ನೀಡುವ ಮೂಲಕ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಹಾಯ ಹಸ್ತ ಚಾಚಿದ್ದು ವಿಶೇಷ. ವಿಜಯಪುರದ ಬಿ.ಎಲ್‌‌.ಡಿ.ಇ ಸಂಸ್ಥೆಯ ವತಿಯಿಂದ ರೂ. 1.20 ಲಕ್ಷ ಮೊತ್ತದ ಚೆಕ್ ವಿತರಿಸಿದರು‌.

ವಿಜಯಪುರ ನಗರದ ಸ್ಪಿನ್ನಿಂಗ್ ಮಿಲ್ ತಾಂಡಾದ ಮತ್ತು ಸಧ್ಯಕ್ಕೆ ಸಾಯಿ ಪಾರ್ಕಿನಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿ ಕಿರಣ ಶಂಕರ ಚವ್ಹಾಣ ಡಿಪ್ಲೋಮಾ ಸಿಇಟಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅಲ್ಲದೇ, ಬಿ. ಇ ಗಾಗಿ ಬೆಂಗಳೂರಿನ‌ ಆರ್. ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಸರಕಾರಿ ಕೋಟಾದಡಿ ಸೀಟು ಪಡೆದಿದ್ದಾರೆ. ಈ ವಿದ್ಯಾರ್ಥಿಯ ತಂದೆ ಶಂಕರ ಮತ್ತು ರಮಾ ಚವ್ಹಾಣ ದಂಪತಿ ಬಡ ಕುಟುಂಬಕ್ಕೆ ಸೇರಿದ್ದಾರೆ. ಬಿ.ಇ ಗೆ ಸೀಟು ಸಿಕ್ಕರೂ ಪ್ರವೇಶ ಪಡೆಯಲು‌ ತೊಂದರೆ ಅನುಭವಿಸುತ್ತಿದ್ದ ವಿದ್ಯಾರ್ಥಿಗೆ ಸಚಿವ ಎಂ. ಬಿ. ಪಾಟೀಲ ಅವರು ಇಂದು ಬುಧವಾರ ಬಿ.ಎಲ್.ಡಿ.ಇ ಸಂಸ್ಥೆಯ ವತಿಯಿಂದ ಚೆಕ್ ವಿತರಿಸಿದರು. ಅಲ್ಲದೇ, ಈ ವಿದ್ಯಾರ್ಥಿ ಬಿ. ಇ ಪದವಿ ಅಧ್ಯಯನಕ್ಕೆ ಮೂರು ವರ್ಷಗಳ ಶಿಕ್ಷಣಕ್ಕೆ ಅಗತ್ಯವಾದ ವೆಚ್ಚವನ್ನೂ ಭರಿಸಲಿದ್ದಾರೆ.

ವಿದ್ಯಾರ್ಥಿಯ ಸಾಧನೆಯನ್ನು ಮೆಚ್ಚಿದ ಸಚಿವರು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಪೋಷಕರು ಮತ್ತು ಜಿಲ್ಲೆಗೆ ಕೀರ್ತಿ ತರಬೇಕು. ಮುಂದಿನ ವೃತ್ತಿಪರ ಶಿಕ್ಷಣ ಇನ್ನೂ ಚೆನ್ನಾಗಿ ಸಾಗಲಿ ಎಂದು ಶುಭ ಕೋರಿದರು.

ಸಚಿವರ ನೆರವಿಗೆ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿ ಕಿರಣ ಚವ್ಹಾಣ, ವಿಜಯಪುರ ನಗರದಲ್ಲಿರುವ ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೋಮಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಡಿಪ್ಲೋಮಾ ಓದಿದ್ದೇನೆ. ಬಿ.ಇ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರೂ ಆರ್ಥಿಕ ಸಮಸ್ಯೆಯ ಹಿನ್ನೆಲೆಯಲದಲಿ ಪ್ರವೇಶ ಪಡೆಯಲು ಸಂಕಷ್ಟ ಎದುರಿಸುತ್ತಿದ್ದೆ. ತಂದೆ ಶಂಕರ ಮನೆಯಲ್ಲಿಯೇ ಇರುತ್ತಾರೆ. ತಾಯಿ ರಮಾ ಟೇಲರಿಂಗ್ ಕೆಲಸ ಮಾಡಿ ನನ್ನನ್ನು ಮತ್ತು ನಮ್ಮ ಅಣ್ಣ ರಾಹುಲನನ್ನು ಓದಿಸುತ್ತಿದ್ದಾರೆ. ನನಗೆ ಸಚಿವರು ಸಹಾಯ ಮಾಡುವ ಆಪದ್ಬಾಂಧವರಾಗಿದ್ದಾರೆ. ಅವರಿಗೆ ಸದಾ ಋಣಿಯಾಗಿರುತ್ತೇನೆ. ಉತ್ತಮವಾಗಿ ಓದಿ ಇನ್ನೂ ಹೆಚ್ಚಿನ ಸಾಧನೆ ಮಾಡುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.

ವಿದ್ಯಾರ್ಥಿಯ ತಾಯಿ ರಮಾ ಶಂಕರ ಚವ್ಹಾಣ ಮಾತನಾಡಿ, ಮಗನ ಭವಿಷ್ಯದ ಶಿಕ್ಷಣದ ಬಗ್ಗೆ ಚಿಂತೆಯಲ್ಲಿದ್ದ ನಮ್ಮ ಕುಟುಂಬಕ್ಕೆ ಎಂ. ಬಿ. ಪಾಟೀಲ ಸಾಹೇಬರು ನೆರವಾಗುವ ಮೂಲಕ ನಮ್ಮ ಆತಂಕ ದೂರ ಮಾಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು‌.

Whats_app_banner