ವಿಜಯಪುರದ ಹಳೆ ಡಿಸಿ ಆಫೀಸ್‌ಗೆ ಬೈ; ಬರಲಿದೆ 55.60 ಕೋಟಿ ರೂ. ವೆಚ್ಚ ಬೃಹತ್‌ ಡಿಸಿ ಕಚೇರಿ, ಹೀಗಿದೆ ಹೊಸ ಕಟ್ಟಡದ ಯೋಜನೆ-vijayapura news vijayapura to get new dc office with 3 floors 55 60 crore kalaburgi cabinet meeting apporved project kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ವಿಜಯಪುರದ ಹಳೆ ಡಿಸಿ ಆಫೀಸ್‌ಗೆ ಬೈ; ಬರಲಿದೆ 55.60 ಕೋಟಿ ರೂ. ವೆಚ್ಚ ಬೃಹತ್‌ ಡಿಸಿ ಕಚೇರಿ, ಹೀಗಿದೆ ಹೊಸ ಕಟ್ಟಡದ ಯೋಜನೆ

ವಿಜಯಪುರದ ಹಳೆ ಡಿಸಿ ಆಫೀಸ್‌ಗೆ ಬೈ; ಬರಲಿದೆ 55.60 ಕೋಟಿ ರೂ. ವೆಚ್ಚ ಬೃಹತ್‌ ಡಿಸಿ ಕಚೇರಿ, ಹೀಗಿದೆ ಹೊಸ ಕಟ್ಟಡದ ಯೋಜನೆ

ಆದಿಲ್‌ ಶಾಹಿಗಳ ನಾಡು ವಿಜಯಪುರದಲ್ಲಿ ಹೊಸ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಯೋಜನೆ ವಿವರ ಇಲ್ಲಿದೆ.

ವಿಜಯಪುರದ ಈಗಿನ ಡಿಸಿ ಕಚೇರಿ ಹಾಗು ಹೊಸ ಕಚೇರಿಯ ನೀಲನಕ್ಷೆ.
ವಿಜಯಪುರದ ಈಗಿನ ಡಿಸಿ ಕಚೇರಿ ಹಾಗು ಹೊಸ ಕಚೇರಿಯ ನೀಲನಕ್ಷೆ.

ವಿಜಯಪುರ: ಶತಮಾನಕ್ಕೂ ಹೆಚ್ಚು ಕಾಲ ಸೇವೆ ನೀಡಿದ ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ವಿದಾಯ ಹೇಳಿ ಹೊಸ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸುವ ಪ್ರಸ್ತಾವನೆಗೆ ಸರ್ಕಾರದ ಅನುಮತಿ ಸಿಕ್ಕಿದೆ. ಮುಂದಿನ ಎರಡು ಮೂರು ವರ್ಷದಲ್ಲಿ ಹೊಸ ಡಿಸಿ ಕಚೇರಿ ವಿಜಯಪುರದಲ್ಲಿ ತಲೆ ಎತ್ತಲಿದೆ. ವಿಜಯಪುರ ಜಿಲ್ಲೆಯ ಜಿಲ್ಲಾ ಕಚೇರಿಗಳ ಸಂಕೀರ್ಣ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯ ರೂ. 55.60 ಕೋ. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪೂಟ ಸಭೆಯಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ವಿಜಯಪುರ ನಗರದ ಕನಕದಾಸ ಬಡಾವಣೆಯ ಬಾಲಭವನದ ಪಕ್ಕದಲ್ಲಿ ಆರು ಎಕರೆ ಸರಕಾರಿ ಜಾಗೆಯಲ್ಲಿ 10,510 ಚದರ ಮೀಟರ್ (1,13,000 ಚದರ ಅಡಿ) ಪ್ರದೇಶದಲ್ಲಿ ಜಿಲ್ಲಾ ಕಚೇರಿಗಳ ನೂತನ ಸಂಕೀರ್ಣ ನಿರ್ಮಾಣವಾಗಲಿದೆ.

ನೆಲಮಹಡಿ ಸೇರಿದಂತೆ ಒಟ್ಟು ನಾಲ್ಕು ಮಹಡಿಗಳನ್ನು ಈ ಕಟ್ಟಡ ಒಳಗೊಂಡಿದ್ದು, ಸುಮಾರು 20 ನಾನಾ ಕಚೇರಿಗಳು, ದಾಖಲೆ ಕೊಠಡಿಗಳು, ಸಭಾಂಗಣ, ಬ್ಯಾಂಕ್, ಅಂಚೆ ಕಚೇರಿ, ವಿಡಿಯೋ ಕಾನ್ಪರೆನ್ಸ್ ಹಾಲ್, ವಾಚನಾಲಯ, ಕ್ಯಾಂಟಿನ್ ಹೊಂದಲಿದೆ.

ಈ ಕಟ್ಟಡದ ನೆಲ ಮಹಡಿಯಲ್ಲಿ ಸಂಸದರ ಕಚೇರಿ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಕೆ.ಜಿ.ಐ.ಡಿ ಕಚೇರಿ, ಚುನಾವಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಖಜಾನೆ ಕಚೇರಿ ಇರಲಿದೆ. ಇವುಗಳ ಜೊತೆಗೆ ರಿಸೆಪ್ಷನ್, ಪೊಲೀಸ್ ಚೆಕ್ ಪೋಸ್ಟ್, ಕಂಟ್ರೋಲ್ ರೂಂ, ಗ್ರಂಥಾಲಯ, ಬ್ಯಾಂಕ್, ಸಕಾಲ, ಪೋಸ್ಟ್ ಆಫೀಸ್, ಕ್ಯಾಂಟೀನ್, ಸ್ಪಂದನಾ ಕೌಂಟರ್, ಕೆ.ಎಸ್.ಡಬ್ಲ್ಯೂ.ಎ.ಎನ್ 1 ಮತ್ತು 2 ಸೇರಿದಂತೆ ಮಹಿಳೆಯರಿಗೆ ವಿಶ್ರಾಂತಿ ಕೊಠಡಿಗಳು ಇರಲಿವೆ.

ಮೊದಲನೇ ಮಹಡಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ, ಆಹಾರ ಮತ್ತು ಸರಬರಾಜು ಇಲಾಖೆ, ಅಪರ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ (ಡಿಯುಡಿಸಿ), ಎರಡು ಕೇಂದ್ರ ದಾಖಲೆ ಕೊಠಡಿಗಳು ಇರಲಿವೆ.

ಎರಡನೇ ಮಹಡಿಯಲ್ಲಿ ಉಪವಿಭಾಗಾಧಿಕಾರಿ(ಎ.ಸಿ) ಕಚೇರಿ, ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕರ ಮತ್ತು ಸಹಾಯಕ ನಿರ್ದೇಶಕರ ಕಚೇರಿ ಮತ್ತು ನಗರ ಸರ್ವೇ ಕಚೇರಿ ಇರಲಿವೆ. ಅಲ್ಲದೇ, ವಿಡಿಯೋ ಕಾನ್ಪರೆನ್ಸ್ ಕೊಠಡಿ ಹಾಗೂ 300 ಜನ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಂಗಣ ಇರಲಿವೆ.

ಮೂರನೇ ಮಹಡಿಯಲ್ಲಿ ಸಹಕಾರಿ ಸಂಘಗಳು, ಎನ್. ಐ. ಸಿ, ಗಣಿ ಮತ್ತು ಭೂ ವಿಜ್ಞಾನ, ಜವಳಿ, ವಕ್ಫ್, ಅಂಕಿಸಂಖ್ಯೆಗಳ ಕಚೇರಿ ಹಾಗೂ ಪ್ರವಾಸೋಧ್ಯಮ ಇಲಾಖೆ ಕಚೇರಿ ಜೊತೆಗೆ 100 ಜನ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಂಗಣ ಸೌಲಭ್ಯಗಳು ಇರಲಿವೆ.

ಅಲ್ಲದೇ, ಪ್ರತಿಯೊಂದು ಮಹಡಿಯಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಷ್ಟೇ ಅಲ್ಲ, ಈ ಕಟ್ಟಡದಲ್ಲಿ ಪಾರ್ಕಿಂಗ್, ಸಿವಿಲ್ ಕಾಮಗಾರಿಗಳ ಜೊತೆಗೆ ಪಿಠೋಪಕರಣಗಳು ಮತ್ತು ಸಕಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಈ ಸಂಕೀರ್ಣದ ನಾಲ್ಕು ದಿಕ್ಕುಗಳಲ್ಲಿ ಪ್ರತ್ಯೇಕ ಸ್ಟೇರಕೇಸ್, ನಾಲ್ಕು ಲೀಪ್ಟಗಳು, ಆಂತರಿಕ ರಸ್ತೆಗಳು, ಕಂಪೌಂಡ್ ಗೋಡೆ ಹಾಗೂ ಉದ್ಯಾನ ಇರಲಿವೆ.

ಈ ಮುಂಚೆ ಈ ಕಾಮಗಾರಿಗೆ ರೂ. 49 ಕೋ. ಅಂದಾಜು ವೆಚ್ಚ ಪ್ರಸ್ತಾಪಿಸಲಾಗಿತ್ತು. ಈಗ ಕಟ್ಟಡದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲು ಪರಿಷ್ಕೃತ ಅಂದಾಜು ವೆಚ್ಚ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ಹಿನ್ನಲೆಯಲ್ಲಿ ರೂ. 55.60 ಕೋ. ಅಂದಾಜು ವೆಚ್ಚದ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಈಗ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎನ್ನುವುದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ವಿವರಣೆ.

mysore-dasara_Entry_Point