ಕರ್ನಾಟಕ: ನಕ್ಸಲ್ ಶರಣಾಗತಿ ಪ್ಯಾಕೇಜ್‌ ಎಂದರೇನು, ನಕ್ಸಲರ ಪುನರ್ವಸತಿಗೆ ಸಂಬಂಧಿಸಿ ಅದರಲ್ಲಿ ಗಮನಿಸಬೇಕಾದ 5 ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ: ನಕ್ಸಲ್ ಶರಣಾಗತಿ ಪ್ಯಾಕೇಜ್‌ ಎಂದರೇನು, ನಕ್ಸಲರ ಪುನರ್ವಸತಿಗೆ ಸಂಬಂಧಿಸಿ ಅದರಲ್ಲಿ ಗಮನಿಸಬೇಕಾದ 5 ಅಂಶಗಳು

ಕರ್ನಾಟಕ: ನಕ್ಸಲ್ ಶರಣಾಗತಿ ಪ್ಯಾಕೇಜ್‌ ಎಂದರೇನು, ನಕ್ಸಲರ ಪುನರ್ವಸತಿಗೆ ಸಂಬಂಧಿಸಿ ಅದರಲ್ಲಿ ಗಮನಿಸಬೇಕಾದ 5 ಅಂಶಗಳು

ಕರ್ನಾಟಕದಲ್ಲಿ ಸದ್ಯ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಪ್ಯಾಕೇಜ್ ವಿಚಾರ ಗಮನಸೆಳೆದಿದೆ. ಈ ನೀತಿ ಪ್ರಕಾರ ಶರಣಾದ ನಕ್ಸಲರು, ವಿಕ್ರಂ ಗೌಡ ಎನ್‌ಕೌಂಟರನ್ನು ಖಂಡಿಸುತ್ತ, ಸರ್ಕಾರದ ನೀತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ನಕ್ಸಲ್ ಶರಣಾಗತಿ ಪ್ಯಾಕೇಜ್‌ ಎಂದರೇನು, ನಕ್ಸಲರ ಪುನರ್ವಸತಿಗೆ ಸಂಬಂಧಿಸಿ ಅದರಲ್ಲಿ ಗಮನಿಸಬೇಕಾದ 5 ಅಂಶಗಳ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಸದ್ಯ ಚರ್ಚೆಯಲ್ಲಿರುವ ನಕ್ಸಲ್ ಶರಣಾಗತಿ ಪ್ಯಾಕೇಜ್‌ ಎಂದರೇನು ಮತ್ತು ನಕ್ಸಲರ ಪುನರ್ವಸತಿಗೆ ಸಂಬಂಧಿಸಿ ಗಮನಿಸಬೇಕಾದ 5 ಅಂಶಗಳ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕದಲ್ಲಿ ಸದ್ಯ ಚರ್ಚೆಯಲ್ಲಿರುವ ನಕ್ಸಲ್ ಶರಣಾಗತಿ ಪ್ಯಾಕೇಜ್‌ ಎಂದರೇನು ಮತ್ತು ನಕ್ಸಲರ ಪುನರ್ವಸತಿಗೆ ಸಂಬಂಧಿಸಿ ಗಮನಿಸಬೇಕಾದ 5 ಅಂಶಗಳ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಬಳಿಕ ನಕ್ಸಲ್‌ ಶರಣಾಗತಿ ಮತ್ತು ಪುನರ್ವಸತಿ ಪ್ಯಾಕೇಜ್‌ ವಿಚಾರ ಸದ್ಯ ಚರ್ಚೆಯಲ್ಲಿದೆ. ಕರ್ನಾಟಕ ಸರ್ಕಾರ ಘೋಷಿಸಿರುವ ನಕ್ಸಲ್ ಪುನರ್ವಸತಿ ಪ್ಯಾಕೇಜ್‌ ನೀತಿಯಲ್ಲಿ ದೋಷಗಳಿರುವ ಕಾರಣ ಮತ್ತು ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸದೇ ಇರುವ ಕಾರಣ ಶರಣಾದ ನಕ್ಸಲರು ವಿಶೇಷವಾಗಿ 2016ರ ನಂತರ ಶರಣಾದವರು ಇಂದಿಗೂ ಸಂಕಷ್ಟ ಅನುಭವಿಸುತ್ತಿದ್ದು, ಶರಣಾಗಬಾರದಿತ್ತು ಎಂಬ ಮನಸ್ಥಿತಿಗೆ ತಲುಪಿರುವುದಾಗಿ ಮಾಜಿ ನಕ್ಸಲರಾದ ನೂರ್ ಶ್ರೀಧರ್‌, ಸಿರಿಮನೆ ನಾಗರಾಜು ಬುಧವಾರ (ನವೆಂಬರ್ 20) ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನೊಂದೆಡೆ, ಕೊಪ್ಪದಲ್ಲಿ ಮಾಜಿ ನಕ್ಸಲ ಅಗಲಗಂಡಿ ವೆಂಕಟೇಶ್ ಕೂಡ ನಕ್ಸಲ್ ಪುನರ್ವಸತಿ ಪ್ಯಾಕೇಜ್ ವಿಚಾರದ ಕಡೆಗೆ ಗಮನಸೆಳೆದು, ಸರ್ಕಾರ ಅದನ್ನು ನಿರ್ಲಕ್ಷಿಸಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಕರ್ನಾಟಕದಲ್ಲಿ ನಕ್ಸಲ್ ಶರಣಾಗತಿ ಪ್ಯಾಕೇಜ್‌ ಎಂದರೇನು

ನಾನಾ ಕಾರಣಗಳಿಂದಾಗಿ ನಕ್ಸಲ್ ಚಳವಳಿಯಲ್ಲಿ ಭಾಗವಹಿಸಿದವರನ್ನು ಮನವೊಲಿಸಿ ಮತ್ತೆ ಸಮಾಜದ ಮುಖ್ಯವಾಹಿನಿಗೆ ಜೋಡಿಸುವುದಕ್ಕಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕರ್ನಾಟಕ ಸರ್ಕಾರ ನಕ್ಸಲ್ ಶರಣಾಗತಿ ನೀತಿಯನ್ನು ರೂಪಿಸಿ ಜಾರಿಗೊಳಿಸಿತ್ತು. ಇದರಂತೆ ಶರಣಾಗುವ ನಕ್ಸಲರಿಗೆ ಬದುಕು ರೂಪಿಸಿಕೊಳ್ಳುವುದಕ್ಕೆ ಅಗತ್ಯ ಹಣಕಾಸು ನೆರವು, ವೃತ್ತಿ ತರಬೇತಿ ನೆರವು ಮುಂತಾದವು ಪ್ಯಾಕೇಜ್‌ನಲ್ಲಿ ಸೇರಿಕೊಂಡಿವೆ.

ನಕ್ಸಲರ ಪುನರ್ವಸತಿಗೆ ಸಂಬಂಧಿಸಿ ಗಮನಿಸಬೇಕಾದ 5 ಅಂಶ

1) 2015ರಲ್ಲಿ ಇದ್ದ ಪ್ರಕಾರ, ಶರಣಾಗುವ ನಕ್ಸಲರಿಗೆ, ನಕ್ಸಲ್ ಚಳವಳಿಯಲ್ಲಿ ಅವರು ತೊಡಗಿಸಿಕೊಂಡ ರೀತಿಗೆ ಅನುಗುಣವಾಗಿ ಎ , ಬಿ, ಸಿ ಎಂದು ವರ್ಗೀಕರಿಸಿ 5 ಲಕ್ಷ ರೂಪಾಯಿ, 3 ಲಕ್ಷ ರೂಪಾಯಿ, 2 ಲಕ್ಷ ರೂಪಾಯಿ ಪರಿಹಾರ ಧನವನ್ನೂ ಪ್ರಕಟಿಸಲಾಗಿತ್ತು.

ಎ-ಕೆಟಗರಿ: ಕರ್ನಾಟಕದ ನಿವಾಸಿಗಳು. ಸಶಸ್ತ್ರ ಗುಂಪುಗಳಲ್ಲಿ ಅಂದರೆ ನಕ್ಸಲ್‌ ಚಳವಳಿಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು. ಅದೇ ರೀತಿ ಒಂದು ಅಥವಾ ಹೆಚ್ಚಿನ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವವರು ಎ-ಕೆಟಗರಿ ಅಡಿಯಲ್ಲಿ ಬರುತ್ತಾರೆ.

ಬಿ - ಕೆಟಗರಿ: ನಕ್ಸಲ್ ಚಳವಳಿಯ ಪ್ರಮುಖ ಸಮಿತಿಗಳಲ್ಲಿ ಸ್ಥಾನಗಳನ್ನು ಹೊಂದಿರುವ ಮತ್ತು ಒಂದು ಅಥವಾ ಹೆಚ್ಚಿನ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಹೊರಗಿನವರು (ಕರ್ನಾಟಕದವರಲ್ಲದವರು) ಬಿ-ಕೆಟಗರಿಯಲ್ಲಿ ಬರುತ್ತಾರೆ.

ಸಿ- ಕೆಟಗರಿ: ಎ ಅಥವಾ ಬಿ ಕೆಟಗರಿಗೆ ಸೇರದ ಜನರು, ಆದರೆ ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸುವವರು, ಮಾಹಿತಿದಾರರು ಮತ್ತು ನೇಮಕಾತಿ ಮಾಡುವವರು ಸಿ- ಕೆಟಗರಿಯಲ್ಲಿರುತ್ತಾರೆ.

2) ನಕ್ಸಲ್ ಶರಣಾಗತಿ ಮತ್ತು ಪುನರ್‌ವಸತಿ ಪ್ಯಾಕೇಜ್‌ನ ಪರಿಹಾರ ಧನವನ್ನು ಇದೇ ವರ್ಷ ಮಾರ್ಚ್‌ ತಿಂಗಳು (2024 ಮಾರ್ಚ್‌) ಪರಿಷ್ಕರಿಸಲಾಗಿತ್ತು. ಇದರಂತೆ ಎ ಕೆಟಗರಿಗೆ 7.5 ಲಕ್ಷ ರೂಪಾಯಿ, ಬಿ ಕೆಟಗರಿಗೆ 5 ಲಕ್ಷ ರೂಪಾಯಿ, ಸಿ ಕೆಟಗರಿಗೆ 3 ಲಕ್ಷ ರೂಪಾಯಿ ಪರಿಹಾರ ಧನ ನಿಗದಿ ಮಾಡಲಾಗಿದೆ.

3) ಶರಣಾದ ನಕ್ಸಲರು ಸ್ವಂತ ಉದ್ಯಮ ಆರಂಭಿಸಲು ಅಥವಾ ತಮ್ಮ ವೃತ್ತಿ ಕೌಶಲ್ಯವನ್ನು ಸುಧಾರಿಸಿಕೊಳ್ಳಲು ಆಸಕ್ತಿ ತೋರಿದರೆ, ಮಾನ್ಯತೆ ಪಡೆದ ಸಂಸ್ಥೆಯಲ್ಲಿ ತರಬೇತಿಗೆ ಸೇರಬಹುದು. ಹಾಗೆ ಸೇರಿದರೆ ಅವರಿಗೆ ಕಲಿಕೆಯ ಅವಧಿಯಲ್ಲಿ ತಿಂಗಳಿಗೆ 5,000 ಆರ್ಥಿಕ ನೆರವು ಪಡೆಯುತ್ತಾರೆ. ಅದೇ ರೀತಿ, ಎರಡು ವರ್ಷಗಳ ಅವಧಿಗೆ ಔಪಚಾರಿಕ ಶಿಕ್ಷಣವನ್ನು ಪಡೆಯಲು ಬಯಸುವವರಿಗೆ ಅದೇ ಪ್ರಯೋಜನವನ್ನು ಒದಗಿಸಲಾಗುತ್ತದೆ. ಇದಲ್ಲದೆ, ಅವರು ಶಸ್ತ್ರಾಸ್ತ್ರಗಳು ಮತ್ತು ಗ್ಯಾಜೆಟ್‌ಗಳನ್ನು ಒಪ್ಪಿಸಿದರೆ ಅವರು ಹೆಚ್ಚುವರಿ ಆರ್ಥಿಕ ಬೆಂಬಲವನ್ನು ಪಡೆಯುತ್ತಾರೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಭಾರತ ಸರ್ಕಾರ ಪ್ರಕಟಿಸಿದೆ.

4) ಗಮನಿಸಬೇಕಾದ ಮುಖ್ಯ ಅಂಶ ಇದು. ನಕ್ಸಲರು ಎದುರಿಸುತ್ತಿರುವ ಗಂಭೀರ ಪ್ರಕರಣಗಳು ನ್ಯಾಯಾಲಯದಲ್ಲಿ ಮುಂದುವರಿಯಲಿವೆ ಎಂದು ನೀತಿ ಸ್ಪಷ್ಟಪಡಿಸುತ್ತದೆ. ಸೂಕ್ತ ಕಾರ್ಯವಿಧಾನವನ್ನು ಅನುಸರಿಸಿದ ನಂತರ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರವು ಪರಿಗಣಿಸಬಹುದು ಎಂಬ ನೀತಿಯಲ್ಲಿ ಉಲ್ಲೇಖವಾಗಿದೆ.

5) ನಕ್ಸಲ್ ಶರಣಾಗತಿ ಮತ್ತು ಪುನರ್‌ವಸತಿ ನೀತಿಯನ್ನು ಕರ್ನಾಟಕ ಸರ್ಕಾರವು 2024 ರ ಮಾರ್ಚ್‌ನಲ್ಲಿ ಪರಿಷ್ಕರಿಸಿತು. ಪುನರ್ವಸತಿ ಪ್ಯಾಕೇಜ್‌ನ ಪರಿಹಾರ ಧನ ಮತ್ತು ಪ್ರೋತ್ಸಾಹ ಧನವನ್ನು ಹೆಚ್ಚಿಸಿತ್ತು. ಅಲ್ಲದೆ, ಸಮಿತಿಯನ್ನು ಮರು ರಚಿಸಿತ್ತು. ಬಂಜಗೆರೆ ಜಯಪ್ರಕಾಶ್ ನೇತೃತ್ವದ ಸಮಿತಿಯಲ್ಲಿ ಪತ್ರಕರ್ತ ಪಾರ್ವತೀಶ್ ಮತ್ತು ವಕೀಲ ಕೆ.ಪಿ.ಶ್ರೀಪಾಲ್ ಅವರನ್ನು ಸೇರಿಸಿತ್ತು.

ನಕ್ಸಲ್ ಶರಣಾಗತಿ ಮತ್ತು ಪುನರ್‌ವಸತಿ ಸಮಿತಿಯು, ನಕ್ಸಲರ ಪ್ರಕರಣಗಳನ್ನು ಬೇಗ ವಿಲೇವಾರಿ ಮಾಡುವುದಕ್ಕಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಕಳೆದ ತಿಂಗಳು (ಅಕ್ಟೋಬರ್ 2024) ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಇದಕ್ಕೂ ಮೊದಲು, ಈ ನೀತಿಯನ್ನು ಅನುಷ್ಠಾನಗೊಳಿಸುವುದಕ್ಕಾಗಿ 2015ರಲ್ಲಿ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯನ್ನು ಕರ್ನಾಟಕ ಸರ್ಕಾರ ರಚಿಸಿತ್ತು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಎ.ಕೆ.ಸುಬ್ಬಯ್ಯ ಮತ್ತು ದಿವಂಗತ ಗೌರಿ ಲಂಕೇಶ್ ನೇತೃತ್ವದಲ್ಲಿ ಸಮಿತಿಯ ರಚನೆಯಾಗಿತ್ತು. ಈ ಸಮಿತಿಯ ಮೂಲಕ ಒಟ್ಟು 15 ಮಾವೋವಾದಿ ಕಾರ್ಯಕರ್ತರು ಶರಣಾದರು ಅಥವಾ ಮುಖ್ಯವಾಹಿನಿಗೆ ಸೇರಿದರು. ಈ ಪೈಕಿ 14 ಮಾಜಿ ನಕ್ಸಲರು ಎಲ್ಲ ಪ್ರಕರಣಗಳಲ್ಲೂ ಜಾಮೀನು ಪಡೆದು ಹೊರಗಿದ್ದಾರೆ. ಒಬ್ಬ ಮಹಿಳೆ (ಕನ್ಯಾಕುಮಾರಿ) ಮಾತ್ರ ಇನ್ನೂ ಜೈಲಿನಲ್ಲೇ ಇದ್ದಾರೆ. ಉಳಿದವರು ಇನ್ನೂ ಕೋರ್ಟಿಗೆ ಅಲೆಯುತ್ತಲೇ ಇದ್ದಾರೆ.

Whats_app_banner