ಯಡಿಯೂರಪ್ಪ ಪೋಕ್ಸೋ ಕೇಸ್; ಮಾಜಿ ಸಿಎಂಗೆ ಮತ್ತೆ ಸಂಕಷ್ಟ, ಬಾಲಕಿ ತಾಯಿ ಸಾವಿನ ಬಗ್ಗೆ ಮಹಿಳಾ ಆಯೋಗ ಅನುಮಾನ
BS Yediyurappa: ಬಿಎಸ್ವೈ ವಿರುದ್ಧದ ಪೊಕ್ಸೋ ಪ್ರಕರಣದಲ್ಲಿ ಬಾಲಕಿ ತಾಯಿಯ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರು ಸಮಗ್ರ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ.
ಬೆಂಗಳೂರು: ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇಷ್ಟು ದಿನ ತಣ್ಣಗಾಗಿದ್ದ ತಮ್ಮ ವಿರುದ್ಧ ದಾಖಲಾಗಿದ್ದ ಫೋಕ್ಸೋ ಪ್ರಕರಣವು ಇದೀಗ ಮತ್ತೆ ಮರುಜೀವ ಪಡೆದುಕೊಂಡಿದೆ. ಬಾಲಕಿ ತಾಯಿಯ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರು ಸಮಗ್ರ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ.
ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಈ ಪ್ರಕರಣ ವೇಗ ಪಡೆದುಕೊಳ್ಳುತ್ತಿಲ್ಲ. ಪ್ರತಿ ಬಾರಿಯೂ ಮುಂದಕ್ಕೆ ಹೋಗುತ್ತಿದೆ. ಮಾಜಿ ಸಿಎಂ ಅವರನ್ನು ಬಂಧಿಸದಂತೆ ಹೈಕೋರ್ಟ್ ಸೂಚಿಸಿದೆ. ತನಿಖೆ ನಡೆಯುತ್ತಿರುವ ಹಂತದಲ್ಲೇ ಬಾಲಕಿ ತಾಯಿ ನಿಧನರಾಗಿದ್ದರು. ಆದರೆ ಮಮತಾ ಸಾವಿನ ಕುರಿತು ಮಹಿಳಾ ಆಯೋಗ ಅನುಮಾನ ವ್ಯಕ್ತಪಡಿಸಿದ್ದು, ಇದು ಕೊಲೆಯೇ ಅಥವಾ ಆಕಸ್ಮಿಕ ಸಾವೇ ಎಂದು ಗೊಂದಲ ಸೃಷ್ಟಿಸಿದೆ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದರ ಬೆನ್ನಲ್ಲೇ ಮಾಜಿ ಸಿಎಂ ವಿರುದ್ಧದ ಪೋಕ್ಸೋ ಪ್ರಕರಣ ದಾಖಲಾದ ಎರಡೇ ದಿನಗಳಲ್ಲಿ ಸಂತ್ರಸ್ತ ಬಾಲಕಿಯ ತಾಯಿಯ ಸಾವನ್ನಪ್ಪಿದ್ದು, ಅನುಮಾನ ಹುಟ್ಟು ಹಾಕಿದೆ. ಹಾಗಾಗಿ, ಮಹಿಳಾ ಆಯೋಗ ಅನುಮಾನ ವ್ಯಕ್ತಪಡಿಸಿ ಸಾವಿನ ಪ್ರಕರಣದ ತನಿಖೆ ಚುರುಕುಗೊಳಿಸುವಂತೆ ಮಹಿಳಾ ಆಯೋಗದ ಮುಖ್ಯಸ್ಥೆ ಪೊಲೀಸ್ ಇಲಾಖೆಗೆ ಪತ್ರ ಬರೆದು ಖಡಕ್ ಸೂಚನೆ ನೀಡಿದೆ. ಪೊಕ್ಸೋ ಪ್ರಕರಣ ರದ್ದುಕೋರಿ ಬಿಎಸ್ವೈ ಸಲ್ಲಿಸಿರುವ ಅರ್ಜಿಗೆ ಮಧ್ಯಂತರ ರಕ್ಷಣೆ ನೀಡಿದೆ.
ಆದರೆ, ಮಧ್ಯಂತರ ತಡೆ ಆದೇಶ ರದ್ದುಪಡಿಸಲು ತೆರವುಗೊಳಿಸಲು ಅಶೋಕ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. 2024ರ ಮಾರ್ಚ್ 15ರಂದು ಸಹಾಯ ಕೇಳಿಕೊಂಡು ಬಿಎಸ್ವೈ ಮನೆಗೆ ತಾಯಿಯೊಂದಿಗೆ ಬಂದಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬ ಆರೋಪ ಬಿಎಸ್ವೈ ಮೇಲಿದೆ. ಈ ಆರೋಪದಡಿ ಪೊಕ್ಸೋ ಮತ್ತು ಐಪಿಸಿ ಸೆಕ್ಸನ್ 354 (4) ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಸಂತ್ರಸ್ತೆಯ ತಾಯಿ ಸದಾಶಿವಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ದೂರು ಕೊಟ್ಟ ಎರಡೇ ದಿನದಲ್ಲಿ ಸಾವು
ಯಾರೇ ಆಗಲಿ.. ದೂರು ಕೊಟ್ಟ ಎರಡೇ ದಿನಕ್ಕೆ ಸಾವನ್ನಪ್ಪಿದರೆ ಅನುಮಾನ ಒಂದೇ ಬರುತ್ತದೆ. ಅದೇ ರೀತಿ ಬಾಲಕಿ ತಾಯಿಯೂ ಸಹ ದೂರು ನೀಡಿದ ಎರಡೇ ದಿನಕ್ಕೆ ಅನುಮಾನಸ್ಪದವಾಗಿ ನಿಧನರಾದರು. ಉಸಿರಾಟದ ತೊಂದೆರೆಯ ಕಾರಣ ಅವರು ಹುಳಿಮಾವು ಸಮೀಪದ ನ್ಯಾನೋ ಆಸ್ಪತ್ರೆಗೆ ಮಾರ್ಚ್ 26ರಂದು ರಾತ್ರಿ ಅಡ್ಮಿಟ್ ಆಗಿದ್ದರು. ಆ ಬಳಿಕ ಸ್ಯಾಚುರೇಷನ್ ತುಂಬಾ ಕಡಿಮೆ ಇದ್ದ ವೆಂಟಿಲೇಟರ್ಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಈ ವೇಳೆ ಮೋಷನ್ಗೆ ಹೋಗಬೇಕು ಎಂದು ಮಮತಾ ಹೇಳುತ್ತಾರೆ. ಕೆಲವೇ ಹೊತ್ತಿನಲ್ಲಿ ಸುಸ್ತಾಗಿ ಮೃತಪಟ್ಟರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಏನಿದೆ?
ತಾಯಿ ಮತ್ತು ಮಗಳು ಇದೇ ವರ್ಷ ಫೆಬ್ರವರಿ 2ರಂದು ಬಿಎಸ್ವೈ ನಿವಾಸಕ್ಕೆ ಸಹಾಯ ಕೇಳಿ ಹೋಗಿದ್ದರು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಮಾಜಿ ಸಿಎಂ ಬಳಿ ಕೇಳಿದ್ದರು. ಆದರೆ, ನೆರವು ಕೇಳಲು ಬಂದಿದ್ದ ಬಾಲಕಿ ಮೇಲೆಯೇ ಯಡಿಯೂರಪ್ಪ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾದರು. ಈ ಪ್ರಕರಣದಲ್ಲಿ ನಿಮಗೆ ಸಹಾಯ ಮಾಡುತ್ತೇನೆ, ಆದರೆ ಈ ವಿಚಾರ ಬಾಯ್ಬಿಡಬೇಡಿ ಎಂದು ಎಚ್ಚರಿಕೆ ನೀಡಿದ್ದರು ಎಂದು ತಾಯಿ ತಮ್ಮ ದೂರಿನಲ್ಲಿ ತಿಳಿಸಿದ್ದರು.