Guinness Record: ಒಂದು ಫುಲ್ ಚಾರ್ಜ್‌ನಲ್ಲಿ 949 ಕಿಮೀ ಸಂಚರಿಸಿದ ಇವಿ, ಸುರಿವ ಮಳೆಯ ನಡುವೆ ಬೆಂಗಳೂರಿನಿಂದ ಮುಂಬೈಗೆ ದಾಖಲೆಯ ಸವಾರಿ
Mercedes Benz EQS EV Guinness record: ಆಟೋಕಾರ್ ಇಂಡಿಯಾ ಮತ್ತು ಮರ್ಸಿಡಿಸ್ ಬೆಂಝ್ ಇಂಡಿಯಾ ಜಂಟಿಯಾಗಿ ಇವಿ ಕಾರುಗಳ ಕ್ಷೇತ್ರದಲ್ಲೊಂದು ಗಿನ್ನೆಸ್ ದಾಖಲೆ ಬರೆದಿದೆ. ಮರ್ಸಿಡಿಸ್ ಇಕ್ಯೂಎಸ್ 580 ಕಾರನ್ನು ಒಂದು ಬಾರಿ ಚಾರ್ಜ್ ಮಾಡಿ ಬೆಂಗಳೂರಿನಿಂದ ನವೀ ಮುಂಬೈ ನಡುವೆ 949.0 ಕಿಮೀ ಪ್ರಯಾಣಿಸಿದೆ.
Mercedes Benz EQS EV Guinness record: ಆಟೋಕಾರ್ ಇಂಡಿಯಾ ಮತ್ತು ಮರ್ಸಿಡಿಸ್ ಬೆಂಝ್ ಇಂಡಿಯಾ ಜಂಟಿಯಾಗಿ ಇವಿ ಕಾರುಗಳ ಕ್ಷೇತ್ರದಲ್ಲೊಂದು ಗಿನ್ನೆಸ್ ದಾಖಲೆ ಬರೆದಿದೆ. ಮರ್ಸಿಡಿಸ್ ಇಕ್ಯೂಎಸ್ 580 ಕಾರನ್ನು ಒಂದು ಬಾರಿ ಚಾರ್ಜ್ ಮಾಡಿ ಬೆಂಗಳೂರಿನಿಂದ ನವೀ ಮುಂಬೈ ನಡುವೆ 949.0 ಕಿ.ಮೀ ದೂರ ಕ್ರಮಿಸುವ ಮೂಲಕ ವಿನೂತನ ದಾಖಲೆ ನಿರ್ಮಿಸಲಾಗಿದೆ. ಈ ಮೂಲಕ ಈ ಹಿಂದೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಫೋರ್ಡ್ ಮಸ್ಟಂಗ್ ಮ್ಯಾಚ್ ಇ ನಿರ್ಮಿಸಿದ್ದ 916.74 ಕಿಲೋಮೀಟರ್‌ಗಳ ದಾಖಲೆಯನ್ನು ಈ ಮರ್ಸಿಡಿಸ್ ಬೆಂಝ್ ಕಾರು ಮುರಿದಿದೆ.
ಮಳೆಯ ನಡುವೆ ಪ್ರಯಾಣ
ಗಿನ್ನೆಸ್ ದಾಖಲೆ ಸೃಷ್ಟಿಸಿರುವುದು ದೊಡ್ಡ ಸಾಧನೆ. ಈ ಕಾರಿನ ಚಾಲನೆಯ ಅವಧಿಯಲ್ಲಿ ಅಡೆತಡೆಗಳು ಹೆಚ್ಚಿದ್ದವು. ಬೆಂಗಳೂರಿನಿಂದ ನವೀ ಮುಂಬೈಗೆ ಹೋಗುವ ಮಾರ್ಗದುದ್ದಕ್ಕೂ ಮಳೆಗಾಲ ತೀವ್ರಗತಿಯಲ್ಲಿತ್ತು. ಕಾರು ಸಾಗಿದ ಅನೇಕ ಭಾಗಗಳಲ್ಲಿ ಧಾರಾಕಾರ ಮಳೆಯೂ ಸುರಿದಿತ್ತು. ಬೃಹತ್ ದಾಖಲೆ ಮುರಿಯುವ ಒತ್ತಡದ ನಡುವೆ ಪ್ರಯಾಣದ ಪರಿಸ್ಥಿತಿಗಳು ಕ್ಲಿಷ್ಟಕರವಾಗಿದ್ದವು. ನಿರಂತರವಾಗಿ ಸುರಿಯುತ್ತಿದ್ದ ಭಾರಿ ಮಾನ್ಸೂನ್ ಮಳೆಯಿಂದಾಗಿ ಮಾರ್ಗದುದ್ದಕ್ಕೂ ಅನೇಕ ಕಡೆ ರಸ್ತೆ ಬದಲಾವಣೆ ಅನಿವಾರ್ಯವಾಗಿದ್ದವು. ಅಲ್ಲಲ್ಲಿ ನಡೆಯತ್ತಿದ್ದ ರಸ್ತೆ ಕಾಮಗಾರಿಗಳು ಮತ್ತು ದುರಸ್ತಿ ಕೆಲಸಗಳಿಂದಾಗಿ ಹೆಚ್ಚಿನ ತಿರುವುಗಳ ಮೂಲಕ ಕಾರು ಸಂಚರಿಸಬೇಕಾಯಿತು. ಇವೆಲ್ಲವೂ ಚಾಲನಾ ಸವಾಲನ್ನು ಮತ್ತಷ್ಟು ಹೆಚ್ಚಿಸಿತ್ತು. ಡ್ರೈವ್‌ನ ಕೊನೇ ಹಂತದಲ್ಲಿ ಆಘಾತಕಾರಿ ಎಂಬಂತೆ ಕಾರಿನ ಟಯರ್ ಕೂಡ ಪಂಚರ್ ಆಯಿತು. ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿ ಪ್ರಯಾಣ ಮುಂದುವರಿಸಿ ನಿರೀಕ್ಷಿತ ಗುರಿ ಮುಟ್ಟಲಾಗಿದೆ.
ಮರ್ಸಿಡಿಸ್ ಇಕ್ಯುಎಸ್ ಆಯ್ಕೆ ಯಾಕೆ?
ಗಿನ್ನೆಸ್ ದಾಖಲೆಗೆ ಮೊದಲು ಕಾರಿನ ಆಯ್ಕೆ ನಿರ್ಣಾಯಕವಾಗಿತ್ತು. ಹೀಗಾಗಿ ಮರ್ಸಿಡಿಸ್ ಇಕ್ಯೂಎಸ್ ಸೂಕ್ತ ಆಯ್ಕೆಯಾಗಿತ್ತು. ಏಕೆಂದರೆ ಬೃಹತ್ 107.8 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಇಕ್ಯೂಎಸ್ 580, ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಅಧಿಕೃತ ರೇಂಜ್ ನೀಡುವ ಕಾರಾಗಿದೆ. ಇದು ಎಆರ್‌ಎಐ ಪ್ರಕಾರ 857 ಕಿ.ಮೀ. ದಾಖಲೆಯ ರೇಂಜ್ ನೀಡುತ್ತದೆ. ಹೀಗಾಗಿ ಪ್ರಮಾಣೀಕೃತ ರೇಂಜ್‌ಗಿಂತಲೂ ಶೇಕಡಾ 10ಕ್ಕಿಂತ ಹೆಚ್ಚುದಾಖಲೆಯ ಸಮಯದಲ್ಲಿ ಪಡೆಯಲಾಗಿದೆ. ಮರ್ಸಿಡಿಸ್ ಇಕ್ಯೂಎಸ್ ಕಾರಿನ ಡ್ರ್ಯಾಗ್ ಕೊಎಫಿಷಿಯೆಂಟ್ ಕೇವಲ 0.20 ಆಗಿದ್ದು, ಇದು ಭಾರತದ ಅತ್ಯಂತ ಹೆಚ್ಚು ಏರೋಡೈನಾಕ್ಸ್ ದಕ್ಷತೆ ಹೊಂದಿರುವ ಕಾರಾಗಿದೆ. ಹೀಗಾಗಿ ಒಟ್ಟು ರೇಂಜ್ ಹೆಚ್ಚಿಸಲು ಮತ್ತಷ್ಟು ಸಹಾಯ ಮಾಡಿತು .
ಪ್ರಯಾಣದ ರೇಂಜ್ ಹೆಚ್ಚಿಸುವ ಉದ್ದೇಶದಿಂದ ಹೆದ್ದಾರಿಯಲ್ಲಿ ಸರಾಸರಿ 50ರಿಂದ60 ಕಿ.ಮೀ ವೇಗ ಕಾಯ್ದುಕೊಳ್ಳಲಾಯಿತು. ಅದೇ ರೀತಿ ಬ್ಯಾಟರಿ ಪ್ಯಾಕ್ ನೆರವಿನಿಂದ ಕೊನೆಯ ಕಿಲೋಮೀಟರ್ ತನಕ ಪ್ರಯಾಣಿಸಲು ಕಾರಿನಲ್ಲಿರುವ ಎಲ್ಲಾ ಮೂರು ಹಂತದ ರೀಜೆನ್ ಅನ್ನು ಬಳಸಲಾಯಿತು. ಈ ಎಲ್ಲ ಯೋಜನೆಗಳು ಗಿನ್ನೆಸ್ ವಿಶ್ವ ದಾಖಲೆಯ ಪ್ರಶಸ್ತಿ ಪಡೆಯಲು ನೆರವಾಯಿತು.
"ನಾನು ಈ ಹಿಂದೆಯೂ ಆಂತರಿಕ ದಹನ ಮತ್ತು ಇವಿಗಳೆರಡರಲ್ಲೂ ಸಾಕಷ್ಟು ಬಾರಿ ಹೈಪರ್ಮಿಲ್ (ಕಡಿಮೆ ಸ್ಪೀಡ್‌ನಲ್ಲಿ ಸಾಗಿ ಅತಿ ಹೆಚ್ಚು ಮೈಲೇಜ್ ಪಡೆಯುವುದ) ಮಾಡಿದ್ದೇನೆ. ಆದರೆ ಐಷಾರಾಮಿ ಇವಿಯಲ್ಲಿ ಹೈಪರ್‌ಮೈಲಿಂಗ್ ಮಾಡಿರುವುದು ಇದೇ ಮೊದಲು. ಇದು ನಾನು ಕೈಗೊಂಡ ಅತ್ಯಂತ ಸವಾಲಿನ ಪರೀಕ್ಷೆಯಾಗಿದೆ. ಏಕೆಂದರೆ ಈ ಹಿಂದೆ ನಾನು ಅಸ್ತಿತ್ವದಲ್ಲಿರುವ ದಾಖಲೆಯನ್ನು ಮುರಿಯಲು ಎಂದಿಗೂ ಚಾಲನೆ ಮಾಡಿರಲಿಲ್ಲ. ಭಾರಿ ಮಳೆಯ ನಡುವಿನ ಸಂಚಾರ ಇದಾಗಿತ್ತು. ಹಾಳಾದ ರಸ್ತೆಗಳು, ಸಂಚಾರ ದಟ್ಟಣೆ ಟೈರ್‌ಗಳು ಹೆಚ್ಚು ಹಾಳಾಗುವ ಸಾಧ್ಯತೆಗಳ ನಡುವೆ ಈ ಚಾಲನೆಯು ಹೆಚ್ಚು ಸವಾಲಿನಿಂದ ಕೂಡಿತ್ತು. ಸಾಧನೆಯ ಗುರಿಯೊಂದಿಗಿನ ಈ ಚಾಲನೆಯಲ್ಲಿ ಬ್ಯಾಟರಿಯಲ್ಲಿನ ಪ್ರತಿ ಶೇಕಡಾವಾರು ಇಳಿಕೆಯಾದಾಗಲೂ ನಾನು ಇಕ್ಯೂಎಸ್‌ನಲ್ಲಿ ಉಳಿದ ರೇಂಜ್‌ನ ಲೆಕ್ಕಾಚಾರಗಳನ್ನು ಮಾಡಿ ಹೈಪರ್‌ಮಿಲ್ ಮಾಡಬೇಕಾಗಿತ್ತು. ಹೀಗಾಗಿ ಈ ಸಾಧನೆ ರಕ್ತದೊತ್ತಡದ ಏರಿಕೆಗೆ ಸಮಾನಾಗಿತ್ತು. ಮಾಡಿರುವ ಎಲ್ಲಾ ಪ್ರಯತ್ನಗಳು ಮತ್ತು ಅನುಭವಿಸಿರುವ ಒತ್ತಡವು ಗಿನ್ನೆಸ್ ವಿಶ್ವ ದಾಖಲೆ ಮಾಡುವುದರ ಮೂಲಕ ಖುಷಿಯೊಂದಿಗೆ ಕೊನೆಯಾಯಿತು" ಎಂದು ಆಟೋಕಾರ್ ಇಂಡಿಯಾದ ಚಾಲಕರಾದ ರಾಹುಲ್ ಕಾಕರ್ ಹೇಳಿದ್ದಾರೆ.
"ಬ್ಯಾಟರಿ ಚಾಲಿತ ವಾಹನಗಳನ್ನು ಆಯ್ಕೆಮಾಡಿಕೊಳ್ಳುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಲು ಮುಂದಾಗಿರುವ ಮತ್ತು ಮರ್ಸಿಡಿಸ್ ಬೆಂಝ್ ಮೇಲಿನ ನಂಬಿಕೆಯಿಂದ ಬ್ಯಾಟರಿ ಚಾಲಿತ ವಾಹನದ ರೂಪದಲ್ಲಿ ಇಕ್ಯೂಎಸ್ ಹೊಂದಿರುವ ಗ್ರಾಹಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮಾನ್ಸೂನ್ ಸಮಯದಲ್ಲಿ ಬೆಂಗಳೂರಿನಿಂದ ನವೀ ಮುಂಬೈಗೆ ನೈಜ ಮತ್ತು ಪ್ರಯಾಸಕರ ಡ್ರೈವಿಂಗ್ ಪರಿಸ್ಥಿತಿಗಳಲ್ಲಿ 'ಮೇಡ್ ಇನ್ ಇಂಡಿಯಾ' ಇಕ್ಯೂಎಸ್ ಸೆಡಾನ್ ಅನ್ನು ಓಡಿಸಿ ಗಿನ್ನೆಸ್ ವಿಶ್ವ ದಾಖಲೆಯ ಸಾಧಿಸಿದ ಆಟೋಕಾರ್ ಇಂಡಿಯಾ ತಂಡಕ್ಕೆ ಅಭಿನಂದನೆಗಳು" ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂತೋಷ್ ಅಯ್ಯರ್ ಹೇಳಿದ್ದಾರೆ.