ಟಾಟಾ ಮೋಟಾರ್ಸ್ ಕಾರುಗಳ ಬೇಡಿಕೆ ಕಡಿಮೆಯಾಗಿದೆಯೇ? ಎಲ್ಲವೂ ಎಲೆಕ್ಟ್ರಿಕ್ ಕಾರುಗಳ ದಯೆ
ಸೆಪ್ಟೆಂಬರ್ 2024ರಲ್ಲಿ ಟಾಟಾ ಮೋಟಾರ್ಸ್ ಕಾರು ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಶೇಕಡ 23ರಷ್ಟು ಇಳಿಕೆ ಕಂಡಿದೆ. ಈ ಅವಧಿಯಲ್ಲಿ ಕಂಪನಿಯು 4,680 ಇವಿಗಳನ್ನು ಮಾರಾಟ ಮಾಡಿದೆ. ಪಂಚ್ ಇವಿ ಮೂಲಕ ಮುಂದಿನ ದಿನಗಳಲ್ಲಿ ಕಂಪನಿಯು ಇವಿ ವಾಹನಗಳ ಮಾರಾಟ ಹೆಚ್ಚಿಸಿಕೊಳ್ಳುವ ಸೂಚನೆ ಇದೆ.
ಬೆಂಗಳೂರು: ಭಾರತದ ಪ್ರಮುಖ ಕಾರು ತಯಾರಿಕಾ ಕಂಪನಿ ಟಾಟಾ ಮೋಟಾರಸ್ ಕಂಪನಿಯು ಸೆಪ್ಟೆಂಬರ್ 2024ರಲ್ಲಿ ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಕಾರು ಮಾರಾಟದಲ್ಲಿ ಶೇಕಡ 8ರಷ್ಟು ಇಳಿಕೆ ದಾಖಲಿಸಿದೆ. ಕಂಪನಿಯು ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ 41,063 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಟಾಟಾ ಕಾರುಗಳ ಮಾರಾಟ 44,809 ಯೂನಿಟ್ ಆಗಿತ್ತು. ಆಸಕ್ತಿದಾಯಕ ಸಂಗತಿಯೆಂದರೆ ಇದೇ ಅವಧಿಯಲ್ಲಿ ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಮಾರಾಟ ಶೇಕಡ 23ರಷ್ಟು ಕುಸಿತ ಕಂಡಿದೆ. ಇದು ದೇಶೀಯ ಮತ್ತು ರಫ್ತು ಎರಡೂ ಸೇರಿದ ಲೆಕ್ಕವಾಗಿದೆ. ಕಂಪನಿಯು ಸೆಪ್ಟೆಂಬರ್‌ನಲ್ಲಿ 4,680 ಇವಿ ಮಾರಾಟ (ಸಗಟು) ಮಾಡಿದೆ.
"ಪ್ಯಾಸೆಂಜರ್ ವಾಹನ ಮಾರಾಟವು 2025ರ ಎರಡನೇ ಹಣಕಾಸು ವರ್ಷದಲ್ಲಿ ಶೇಕಡ 5ರಷ್ಟು ಇಳಿಕೆ ಕಂಡಿದೆ. ಇದು 2024ರ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಆಗಿರುವ ಇಳಿಕೆ. ಇದಕ್ಕೆ ಕಡಿಮೆಯಾದ ಗ್ರಾಹಕರ ಬೇಡಿಕೆ ಮತ್ತು ಋತುಮಾನದ ಕಾರಣಗಳು ಇವೆ" ಎಂದು ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಹೇಳಿದ್ದಾರೆ.
ಹಬ್ಬದ ಋತುವಿನ ಆರಂಭದ ನಿರೀಕ್ಷೆಯಲ್ಲಿ ವಾಹನಗಳ ದಾಸ್ತಾನು ಹೆಚ್ಚಿಸಿಲಾಯಿತು. ಇದರಿಂದ ಸಂಗರಹ ಹೆಚ್ಚಾಯಿತು. ಕೆಲವೊಂದು ರಾಜ್ಯಗಳಲ್ಲಿ ನೋಂದಣಿ ಮತ್ತು ರಸ್ತೆ ತೆರಿಗೆ ಮನ್ನ ವಿಳಂಬವಾಗಿರುವುದೂ ಮಾರಾಟದ ಮೇಲೆ ಪರಿಣಾಮ ಬೀರಿತ್ತು. ವಿಶೇಷವಾಗಿ ಎಲೆಕ್ಟ್ರಿಕ್ ವಾಹನಗಳ ಮಾರಾಟದ ಮೇಲೆ ಇದು ಪರಿಣಾಮ ಬೀರಿತು.
ಟಾಟಾ ಮೋಟಾರ್ಸ್‌ನಿಂದ ಡಿಸ್ಕೌಂಟ್
ಮಾರಾಟ ಕಡಿಮೆಯಾದ ಹಿನ್ನಲೆಯಲ್ಲಿ ತನ್ನ ಹಲವು ಕಾರುಗಳಿಗೆ ಟಾಟಾ ಮೋಟಾರ್ಸ್ ಡಿಸ್ಕೌಂಟ್ ನೀಡಿದೆ. ನಿರ್ದಿಷ್ಟ ಮಾಡೆಲ್‌ಗಳನ್ನು ಅಕ್ಟೋಬರ್ 31ರ ಮೊದಲು ಖರೀದಿಸಿದರೆ 2 ಲಕ್ಷ ರೂಪಾಯಿಗೂ ಹೆಚ್ಚು ಡಿಸ್ಕೌಂಟ್ ದೊರಕಲಿದೆ. ಪೆಟ್ರೋಲ್, ಡೀಸೆಲ್, ಸಿಎನ್‌ಜಿಯ ಎಲ್ಲಾ ಟಾಟಾ ಕಾರುಗಳು ಮತ್ತು ಎಸ್‌ಯುವಿಗಳಿಗೆ ಈ ಆಫರ್ ನೀಡಲಾಗಿದೆ.
ನೆಕ್ಸಾನ್, ಹ್ಯಾರಿಯರ್, ಸಫಾರಿ ಮುಂತಾದ ಕಾರುಗಳನ್ನು ಖರೀದಿಸುವರಿಗೆ ಹೆಚ್ಚಿನ ದರ ಕಡಿತದ ಲಾಭವಾಗಲಿದೆ. ಟಿಯಾಗೊ, ಟೈಗೂರ್, ಆಲ್ಟೋಜ್ ಖರೀದಿದಾರರಿಗೂ ಡಿಸ್ಕೌಂಟ್‌ನ ಲಾಭ ದೊರಕಲಿದೆ. ಈ ಡಿಸ್ಕೌಂಟ್ ಮಾತ್ರವಲ್ಲದೆ ಎಕ್ಸ್‌ಚೇಂಜ್ ಬೋನಸ್ 45 ಸಾವಿರ ಸೇರಿದಂತೆ ಹೆಚ್ಚುವರಿ ಪ್ರಯೋಜನಗಳನ್ನೂ ಕಂಪನಿ ನೀಡಿದೆ.
ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೂ ಸಾಕಷ್ಟು ಪ್ರಯೋಜನಗಳು ದೊರಕಲಿವೆ. ಟಾಟಾ ಪಂಚ್ ಇವಿ, ನೆಕ್ಸನ್ ಇವಿ ಮತ್ತು ಟಿಯಾಗೊ ಇವಿಗಳನ್ನು ಕಂಪನಿ ಪರಿಚಯಿಸಿದೆ. ಈ ಕಾರುಗಳ ದರವನ್ನು ವಿವಿಧ ಹೆಚ್ಚುವರಿ ಪ್ರಯೋಜನಗಳ ಜತೆಗೆ 3 ಲಕ್ಷ ರೂಪಾಯಿ ರೂ.ವರೆಗೆ ಡಿಸ್ಕೌಂಟ್ ನೀಡುತ್ತಿದೆ. ಟೈಗೂರ್ ಇವಿ ಅಥವಾ ಇತ್ತೀಚಿನ ಕರ್ವ್ ಇವಿಗಳಿಗೆ ಯಾವುದೇ ಡಿಸ್ಕೌಂಟ್ ನೀಡಲಾಗಿಲ್ಲ.
ಟಾಟಾ ನೆಕ್ಸಾನ್ ಇವಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ. ಈ ಕಾರಿಗೆ 3 ಲಕ್ಷ ರೂಪಾಯಿಯಷ್ಟು ಡಿಸ್ಕೌಂಟ್ ನೀಡುತ್ತಿದೆ. ಇದು ಮಹೀಂದ್ರ ಎಕ್ಸ್‌ಯುವಿ4ಒಒ, ಎಂಜಿ ಝಡ್‌ಎಸ್ ಇವಿಗಳಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತಿದೆ. ಸದ್ಯ ಟಾಟಾ ಪಂಚ್ ಇವಿ ಭಾರತದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುವ ಎಲೆಕ್ಟ್ರಿಕ್ ವಾಹನವಾಗಿದೆ. ಟಾಟಾ ಟಿಯಾಗೊದ ದರವನ್ನೂ ಸುಮಾರು 40 ಸಾವಿರ ರೂಪಾಯಿಯಷ್ಟು ಇಳಿಕೆ ಮಾಡಲಾಗಿದೆ.