Personality Test: ತುಟಿಯ ಆಕಾರದಿಂದ ತಿಳಿಯಬಹುದು ವ್ಯಕ್ತಿತ್ವ; ನಿಮ್ಮ ತುಟಿ ಹೇಗಿದೆ ಗಮನಿಸಿ
ಮನುಷ್ಯ ದೇಹದಲ್ಲಿನ ಅಂಗಾಂಗಗಳು ಒಬ್ಬರಿಗಿಂತ ಒಬ್ಬರದ್ದು ಭಿನ್ನವಾಗಿರುತ್ತವೆ. ಕೆಲವರಿಗೆ ಕಣ್ಣು ದೊಡ್ಡದಿದ್ದರೆ, ಕೆಲವರಿಗೆ ಮೂಗು ಅಗಲವಾಗಿರುತ್ತದೆ. ಇನ್ನೂ ಕೆಲವರಿಗೆ ಕಿವಿ ಚಿಕ್ಕದಾಗಿರುತ್ತದೆ. ಹೀಗೆ ಅಂಗಾಂಗಗಳ ಆಧಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಬಹುದು. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ತುಟಿಯ ಆಕಾರದ ಮೇಲೆ ವ್ಯಕ್ತಿತ್ವ ಹೇಗಿರುತ್ತೆ ತಿಳಿಯೋಣ.
ಮನುಷ್ಯ ದೇಹದ ಪ್ರಮುಖ ಅಂಗಗಳಲ್ಲಿ ತುಟಿ ಕೂಡ ಒಂದು. ಇದು ಬಾಯಿಗೆ ರಕ್ಷಾಕವಚದಂತೆ. ನಾವು ಮಾತನಾಡಲು ಕೂಡ ತುಟಿ ಬೇಕು. ಆದರೆ ತುಟಿಯ ಆಕಾರ ಒಬ್ಬೊಬ್ಬರದ್ದು ಒಂದೊಂದು ರೀತಿ ಇರುವುದನ್ನು ನೀವು ಗಮನಿಸಿ ಇರಬಹುದು. ಹೀಗೆ ತುಟಿಯ ಆಕಾರದ ಮೇಲೂ ಕೂಡ ವ್ಯಕ್ತಿತ್ವ ಪರೀಕ್ಷೆ ಮಾಡಬಹುದು. ತುಟಿಗಳ ತೆಳ್ಳಗೆ ಇದ್ದರೆ ಅವರು ಅಂತರ್ಮುಖಿಗಳು, ತುಟಿ ದಪ್ಪವಾಗಿದ್ದರೆ ಹೇಗೆ, ಅಗಲವಾಗಿದ್ದರೆ ಹೇಗೆ ಎಂಬಿತ್ಯಾದಿ ತಿಳಿಯಬೇಕು ಅಂದ್ರೆ ಮುಂದೆ ಓದಿ. ಇದು ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿರುತ್ತದೆ.
ಚಿಕ್ಕದಾಗಿ, ತುಟಿ ತೆಳುವಾಗಿದ್ದರೆ
ನಿಮ್ಮ ತುಟಿ ಚಿಕ್ಕದಾಗಿ ತೆಳುವಾಗಿದ್ದರೆ ನೀವು ಬೌದ್ಧಿಕ ಚಿಂತಕರು. ಅಂತರ್ಮುಖಿಯಾಗಿರುವ ನೀವು ಎಲ್ಲರ ಜೊತೆ ಬೆರೆಯುವಂತರಲ್ಲ. ನೀವು ನಿಮ್ಮೊಳಗೆ ಪರಿಪೂರ್ಣರಾಗಿರಬೇಕು ಎಂದು ಬಯಸುವವರು. ಏಕಾಂತ ನಿಮಗೆ ಹೆಚ್ಚು ಇಷ್ಟವಾಗುತ್ತದೆ. ಬೇರೆಯವರು ನಿಮ್ಮ ಬಗ್ಗೆ ಹೊಂದಿರುವ ಭಾವನೆಗಳನ್ನು ಪರಿಗಣಿಸಿ ನಿಮ್ಮ ಬಗ್ಗೆ ನೀವೇ ಮನಸ್ಸಿನಲ್ಲಿ ಕೊರಗಬಹುದು. ಕೆಲವೊಮ್ಮೆ ಆಂತರಿಕ ಒತ್ತಡಗಳು ನಿಮ್ಮ ಮನಸ್ಸನ್ನು ಘಾಸಿಗೊಳಿಸಬಹುದು. ನೀವು ಅಂತರ್ಮುಖಿ ಮತ್ತು ನಾಚಿಕೆ ಸ್ವಭಾವದವರಾಗಿದ್ದರೂ, ನಿಮ್ಮ ಏಕಾಂತ ಸಮಯವನ್ನು ನೀವು ಆನಂದಿಸಬಹುದು. ಹಲವರು ಮೆಚ್ಚುವ ಕೌಶಲ ನಿಮ್ಮಲ್ಲಿರುವುದು ವಿಶೇಷ. ನಿಮ್ಮ ಸಂಗಾತಿಯು ನಿಮ್ಮ ಆದರ್ಶ ಹಾಗೂ ತತ್ವಗಳನ್ನು ಮೆಚ್ಚುವವರಾಗಿರುತ್ತಾರೆ. ಆದರೆ ನೀವು ಕೋಪವನ್ನು ನಿಯಂತ್ರಿಸಲು ಕಲಿಯಬೇಕು. ಕೋಪವೇ ನಿಮಗೆ ಕೆಡುಕು ಉಂಟು ಮಾಡಬಹುದು.
ದಪ್ಪ ತುಟಿ
ತುಟಿಯು ಅಗಲವಾಗಿ, ದಪ್ಪವಾಗಿದ್ದರೆ ನೀವು ಅತಿಯಾದ ಪ್ರೀತಿ, ಕಾಳಜಿ ತೋರುವವರಾಗಿರುತ್ತೀರಿ. ನೀವು ಭಾವೋದ್ರಿಕ್ತ ಮತ್ತು ಆಶಾವಾದಿ ವ್ಯಕ್ತಿಯಾಗಿದ್ದು, ನಿಮ್ಮ ಸ್ವಂತದಕ್ಕಿಂತ ಇತರರ ಅಗತ್ಯಗಳಿಗೆ ಆದ್ಯತೆ ನೀಡುತ್ತೀರಿ. ನಿಮ್ಮಲ್ಲಿ ಆತ್ಮವಿಶ್ವಾಸ ಅಚಲವಾಗಿರುತ್ತದೆ. ಮನೋಭಾವವನ್ನು ಕಾಪಾಡಿಕೊಳ್ಳಿ ಆದರೆ ಹಠಮಾರಿಯಾಗುವುದನ್ನು ತಪ್ಪಿಸಿ. ಸಂಬಂಧದಲ್ಲಿ ಸಂಗಾತಿಗೆ ನಿಮ್ಮ ಪ್ರೀತಿ ಮತ್ತು ಮೆಚ್ಚುಗೆಯನ್ನು ಭವ್ಯವಾದ ಸನ್ನೆಗಳ ಮೂಲಕ ವ್ಯಕ್ತಪಡಿಸಿ.
ತೆಳ್ಳಗಿನ ತುಟಿ ಹೊಂದಿರುವ ಪುರುಷರು
ಪುರುಷರಲ್ಲಿ ತುಟಿ ತೆಳ್ಳಗಿದ್ದರೆ ಅವರು ತಾರ್ತಿಕ ಹಾಗೂ ವಿಶ್ಲೇಷಣಾತ್ಮಕ ವಿಧಾನವನ್ನು ಹೆಚ್ಚು ಅನುಸರಿಸುತ್ತಾರೆ. ಅಂತಹ ವ್ಯಕ್ತಿಗಳು ಸಾಮಾನ್ಯವಾಗಿ ಗುರಿ-ಆಧಾರಿತ ಮತ್ತು ವೃತ್ತಿಜೀವನದ ಪ್ರಗತಿಯ ಮೇಲೆ ಕೇಂದ್ರೀಕರಿಸುವತ್ತ ಹೆಚ್ಚು ಗಮನ ಹರಿಸುತ್ತಾರೆ.
ಊದಿಕೊಂಡಂತಹ ತುಟಿ ಹೊಂದಿರುವವರು
ಯಾರ ತುಟಿ ಊದಿಕೊಂಡಂತೆ ಇರುತ್ತದೋ ಅವರು ಅತಿಯಾದ ಕಾಳಜಿಯುಳ್ಳ, ಪ್ರೀತಿಯನ್ನು ಹೊಂದಿದವರಾಗಿರುತ್ತಾರೆ. ಭಾವೋದ್ರಿಕ್ತ ಮನಸ್ಥಿತಿಯ ಆಶಾವಾದಿಗಳು ಇವರಾಗಿರುತ್ತಾರೆ.
ತೆಳ್ಳಗಿನ ತುಟಿ ಹೊಂದಿರುವ ಮಹಿಳೆ
ತುಟಿಯ ಆಕಾರ ತೆಳ್ಳಗಿರುವ ಮಹಿಳೆಯು ವಿಶ್ಲೇಷಣಾತ್ಮಕ ಮತ್ತು ಬೌದ್ಧಿಕ, ತನ್ನ ವೃತ್ತಿ ಮತ್ತು ಸ್ವಾತಂತ್ರ್ಯಕ್ಕೆ ಆದ್ಯತೆ ನೀಡುತ್ತಾಳೆ. ಕೋಪಗೊಂಡಾಗ ಇಂತಹವರು ತನ್ನ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಸಾಧ್ಯತೆ ಹೆಚ್ಚು.
(ಗಮನಿಸಿ: ಈ ಲೇಖನವು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ದೊರೆತ ಮಾಹಿತಿಯನ್ನು ಆಧರಿಸಿದ ಬರಹ. ಈ ಅಂಶಗಳನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪುಷ್ಟೀಕರಿಸುವುದಿಲ್ಲ. ಈ ಕುರಿತ ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)