Mackerel Curry Recipe: ಬಂಗುಡೆ ಪುಳಿಮುಂಚಿ, ಕರಾವಳಿ ಶೈಲಿಯಲ್ಲಿ ಮಾಡಿ ಫಿಶ್ ಕರಿ
ಎಚ್‌ಟಿ ಕನ್ನಡ ರೆಸಿಪಿಯಲ್ಲಿ ಇಂದು ರುಚಿಕರವಾಗಿ ಬಂಗುಡೆ ಪುಳಿಮುಂಚಿ ಮಾಡುವುದು ಹೇಗೆಂದು ತಿಳಿದುಕೊಳ್ಳೋಣ. ಪುಳಿಮುಂಚಿ ಎಂಬ ತುಳು ಪದವನ್ನು ಕನ್ನಡದಲ್ಲಿ ಹುಳಿ ಮೆಣಸು ಎನ್ನಬಹುದು. ನಾನ್ ವೆಜ್ ಅಡುಗೆಗೆ ಉಪ್ಪು, ಹುಳಿ, ಖಾರ ತುಸು ಹೆಚ್ಚೇ ಬೇಕು.
ಮೀನು ಪ್ರಿಯರಿಗೆ ಇಷ್ಟವಾದ ಮೀನುಗಳಲ್ಲಿ ಬಂಗುಡೆ (Mackerel) ಪ್ರಮುಖವಾದದ್ದು. ಕರಾವಳಿಗರಂತೂ ಪ್ರತಿನಿತ್ಯ ಬೂತಾಯಿ, ಬಂಗುಡೆ ಎಂದು ಬಹುಬಗೆಯ ಮೀನೂಟ ಬೇಕೇಬೇಕು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಡ್ಯ, ಉತ್ತರ ಕನ್ನಡ ಸೇರಿದಂತೆ ಮಂಗಳೂರೇತರರೂ ಕರಾವಳಿಗೆ ಬಂದಾಗ ಸಮುದ್ರ ಮೀನುಗಳ ರುಚಿಗೆ ಮಾರು ಹೋಗುತ್ತಾರೆ. ಈಗ ಕರಾವಳಿ ಮೀನುಗಳು ಎಲ್ಲೆಡೆ ಲಭ್ಯವಿರುವುದರಿಂದ ಯಾರೂ ಬೇಕಾದರೂ ಬಂಗುಡೆ ಸಾರು ಮಾಡಬಹುದು.
ಎಚ್‌ಟಿ ಕನ್ನಡ ರೆಸಿಪಿಯಲ್ಲಿ ಇಂದು ರುಚಿಕರವಾಗಿ ಬಂಗುಡೆ ಪುಳಿಮುಂಚಿ ಮಾಡುವುದು ಹೇಗೆಂದು ತಿಳಿದುಕೊಳ್ಳೋಣ. ಪುಳಿಮುಂಚಿ ಎಂಬ ತುಳು ಪದವನ್ನು ಕನ್ನಡದಲ್ಲಿ ಹುಳಿ ಮೆಣಸು ಎನ್ನಬಹುದು. ನಾನ್ ವೆಜ್ ಅಡುಗೆಗೆ ಉಪ್ಪು, ಹುಳಿ, ಖಾರ ತುಸು ಹೆಚ್ಚೇ ಬೇಕು.
ಬಂಗುಡೆ ಮೀನು ಪುಳಿಮುಂಚಿ ಮಾಡಲು ಬೇಕಾಗುವ ಸಾಮಾಗ್ರಿಗಳು
- ಬಂಗಡೆ ಮೀನು ½ ಕೆ.ಜಿ (ಒಂದು ಕೆ.ಜಿ. ಇದ್ದರೆ ಮುಂದೆ ತಿಳಿಸಿದ ಸಾಮಗ್ರಿಗಳನ್ನು ಎರಡು ಪಟ್ಟು ಹಾಕಿಕೊಳ್ಳಿ)
- ಒಣಮೆಣಸು 15-20 (ಬ್ಯಾಡಗಿ ಮೆಣಸು ಹಾಕಿ, ನಾಟಿ ಮೆಣಸು ಇಷ್ಟು ಹಾಕಿದರೆ ಖಾರದಲ್ಲಿ ತಿನ್ನಲು ಅಸಾಧ್ಯ).
- ಕಾಳುಮೆಣಸು 1 ಚಮಚ, ಜೀರಿಗೆ 1 ಚಮಚ, ಮೆಂತೆ ¼ ಚಮಚ ಇರಲಿ.
- ಧನಿಯಾ (ಕೊತ್ತಂಬರಿ ಬೀಜ) 3 ಚಮಚ ಸಾಕು.
- ಬೆಳ್ಳುಳ್ಳಿ ಎಸಳು 10 ( ಸಿಪ್ಪೆ ತೆಗೆದುಹಾಕಿ)
- ಶುಂಠಿ 1 ಇಂಚು
- ಈರುಳ್ಳಿ ಸಣ್ಣದಾದರೆ ಒಂದು, ದೊಡ್ಡದಾದರೆ ಅರ್ಧ
- ಒಂದೆರಡು ಚಿಟಿಕೆ ಅರಶಿನ (ನೆನಪಿಡಿ, ಮೀನು ಕೊಂಚ ವಾಸನೆ, ಹೀಗಾಗಿ ಅರಶಿನ ಅತ್ಯವಶ್ಯಕ)
- ಹುಣಸೇಹಣ್ಣು 1 ½ ಲಿಂಬೆ ಹಣ್ಣಿನ ಗಾತ್ರದಷ್ಟು ಇರಲಿ.
- ಕೊಬ್ಬರಿ ಎಣ್ಣೆ (ಇಲ್ಲದಿದ್ದರೆ ನೀವು ನಿತ್ಯ ಬಳಸುವ ಅಡುಗೆ ಎಣ್ಣೆ ಬಳಸಿ)
- 4 ಚಮಚ, ಉಪ್ಪು (ರುಚಿಗೆ ತಕಷ್ಟು)
ಬಂಗುಡೆ ಮೀನಿನ ಪುಳಿಮುಂಚಿ ಮಾಡುವುದು ಹೇಗೆ?
- ಮೊದಲು ಮೀನನ್ನು ಶುಚಿಯಾಗಿಸಿ. ಬೆಂಗಳೂರಿನಂತಹ ನಗರಗಳಲ್ಲಿ ಮೀನಿನ ಅಂಗಡಿಗಳಲ್ಲಿಯೇ ಶುಚಿ ಮಾಡಿಕೊಡುತ್ತಾರೆ. ಆನ್‌ಲೈನ್ ಆರ್ಡರ್ ಮಾಡಿದರೂ ಕ್ಲೀನ್ ಮಾಡಿ ಕೊಡುತ್ತಾರೆ. ದೊಡ್ಡ ಮೀನಾಗಿದ್ದರೆ ಎರಡು ಭಾಗ ಕಟ್ ಮಾಡಿ. ಸಣ್ಣ ಮೀನುಗಳಾದರೆ ಕಟ್ ಮಾಡುವುದು ಬೇಡ.
- ಬಾಣಲೆಯನ್ನು ಒಲೆಯಲ್ಲಿಡಿ. ಅದು ಬಿಸಿಯಾದಗ ಅದಕ್ಕೆ ಒಣಮೆಣಸು, ಕಾಳುಮೆಣಸು, ದನಿಯ, ಜೀರಿಗೆ, ಮೆಂತೆ ಇತ್ಯಾದಿಗಳನ್ನು ಹಾಕಿ ಹುರಿದುಕೊಳ್ಳಿ. ಇವೆಲ್ಲವನ್ನು ಬೇರೆಬೇರೆಯಾಗಿ ಹುರಿದರೆ ಉತ್ತಮ.
- ಒಂದು ಮಿಕ್ಸಿ ಜಾರ್‌ಗೆ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ (ಈರುಳ್ಳಿಯನ್ನೂ ತುಸು ಬಿಸಿ ಮಾಡಿಕೊಂಡರೆ ಚೆನ್ನಾಗಿರುತ್ತದೆ) , ಅರಶಿನ, ಹುಣಸೆ ಮತ್ತು ಹುರಿದ ಮಸಾಲೆಗಳನ್ನುತುಸು ನೀರಿನೊಂದಿಗೆ ಹಾಕಿ ನುಣ್ಣಗೆ ರುಬ್ಬಿ.
- ಈಗ ಮೀನು ಸಾರು ಮಾಡಲು ದಪ್ಪ ತಳದ ಪಾತ್ರೆ ತೆಗೆದುಕೊಳ್ಳಿ. ಅದಕ್ಕೆ ಕೊಂಚ ಎಣ್ನೇ ಹಾಕಿ. ಕಾದ ನಂತರ ಅದಕ್ಕೆ ರುಬ್ಬಿದ ಮಸಾಲೆ ಹಾಕಿ. ಸ್ವಲ್ಪ ಕುದಿ ಬಂದಾಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
- ಮಸಾಲೆ ಚೆನ್ನಾಗಿ ಕುದಿದಾಗ ಮೀನಿನ ತುಂಡುಗಳನ್ನು ಹಾಕಿ. ಒಂದು ಹತ್ತು ಹದಿನೈದು ನಿಮಿಷ ಬೇಯಿಸಿ.
ಮೀನು ಪದಾರ್ಥಗಳನ್ನು ಬಿಸಿಬಿಸಿಯಾಗಿ ತಿನ್ನಬಾರದು. ಅಡುಗೆ ರೆಡಿಯಾಗಿ ಒಂದರ್ಧ ಅಥವಾ ಒಂದು ಗಂಟೆ ಕಳೆದು ತಿಂದರೆ ಚೆನ್ನಾಗಿರುತ್ತದೆ. ಈ ನಿಯಮ ಚಿಕನ್‌ಗೆ ಅನ್ವಯಿಸುವುದಿಲ್ಲ. ಮೀನಿನ ಕರಿ ಸಿದ್ಧವಾದ ಬಳಿಕ ತುಸು ತಡವಾಗಿ ತಿಂದರೆ ಮಸಾಲೆ ಮೀನಿಗೆ ಚೆನ್ನಾಗಿ ಸೇರಿರುತ್ತದೆ.
ವಿಭಾಗ