ತ್ವಚೆಯಲ್ಲಿನ ಮೊಡವೆಗಳು, ಸುಕ್ಕುಗಳನ್ನು ಕಡಿಮೆ ಮಾಡಲು ರಕ್ತಚಂದನ ಪ್ರಯೋಜನಕಾರಿ: ಇದನ್ನು ಬಳಸುವುದು ಹೇಗೆ, ಇಲ್ಲಿದೆ ಮಾಹಿತಿ
ರಕ್ತಚಂದನವುಅದರ ಆಳವಾದ ವರ್ಣ ಮತ್ತು ಆಕರ್ಷಕ ಪರಿಮಳವನ್ನು ಹೊಂದಿದೆ.ಇದನ್ನು ಸಾಂಪ್ರದಾಯಿಕ ತ್ವಚೆಯ ಆರೈಕೆಗಳಲ್ಲಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಮೊಡವೆ, ಕಿರಿಕಿರಿ ಕಡಿಮೆ ಮಾಡಲು, ಸುಕ್ಕುಗಳನ್ನು ಕಡಿಮೆ ಮಾಡುವಲ್ಲಿ ಇದು ಬಹಳ ಪರಿಣಾಮಕಾರಿಯಾಗಿದೆ.
ಶ್ರೀಮಂತ ಸುವಾಸನೆ, ಮಣ್ಣಿನ ಪರಿಮಳ ಮತ್ತು ರೋಮಾಂಚಕ ಬಣ್ಣಕ್ಕೆ ಹೆಸರುವಾಸಿಯಾದ ರಕ್ತಚಂದನವು ಶತಮಾನಗಳಿಂದಲೂ ಚರ್ಮದ ಆರೈಕೆಯಲ್ಲಿ ಗುರುತಿಸಲ್ಪಟ್ಟಿದೆ. ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿರುವ ಇದು ಮೊಡವೆಗಳಿಂದ ಪಿಗ್ಮೆಂಟೇಶನ್‍ವರೆಗೆ ವಿವಿಧ ಚರ್ಮದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳೊಂದಿಗೆ ಸಮೃದ್ಧವಾಗಿರುವ ರಕ್ತಚಂದನವು ಆರೋಗ್ಯಕರ, ಕಾಂತಿಯುತ ಮೈಬಣ್ಣವನ್ನು ಪಡೆಯಲು ಉತ್ತೇಜಿಸುತ್ತದೆ. ಕಿರಿಕಿರಿಗೊಂಡ ಚರ್ಮಕ್ಕೆ ಇದು ಶಮನಗೊಳಿಸುತ್ತದೆ.
ರಕ್ತಚಂದನವನ್ನು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ. ಇದು ಚರ್ಮಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಆಯುರ್ವೇದದಲ್ಲಿಯೂ ಇದನ್ನು ಸಾಕಷ್ಟು ಪ್ರಶಂಸಿಸಲಾಗಿದೆ. ತ್ವಚೆಗೆ ಇದನ್ನು ಬಳಸುವುದರಿಂದ ಮೊಡವೆಗಳು, ನಸುಕಂದು ಮಚ್ಚೆಗಳು ಮುಂತಾದ ಅನೇಕ ರೀತಿಯ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತವೆ.
ತ್ವಚೆ ನೈಸರ್ಗಿಕ ಹೊಳಪು ಪಡೆಯಲು ಸಹಕಾರಿ
ರಕ್ತ ಚಂದನವು ತ್ವಚೆಯ ಟೋನ್ ಮತ್ತು ಬಣ್ಣವನ್ನು ಸುಧಾರಿಸಲು ಸಹಾಯಕವಾಗಿದೆ. ತ್ವಚೆಗೆ ರಕ್ತಚಂದನವನ್ನು ಬಳಸುವುದರಿಂದ ನೈಸರ್ಗಿಕ ಹೊಳಪನ್ನು ಪಡೆಯುತ್ತದೆ. ಇದು ಕಲೆಗಳು, ಕಪ್ಪು ಕಲೆಗಳು ಮತ್ತು ಹೈಪರ್ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡುವ ಮೂಲಕ ಹೊಳಪಿನ, ಕಾಂತಿಯುತ ಮೈಬಣ್ಣವನ್ನು ಪಡೆಯಲು ಸಹಾಯ ಮಾಡುತ್ತದೆ. ರಕ್ತಚಂದನವು ತ್ವಚೆಯ ಜೀವಕೋಶಗಳಿಗೆ ಸಾಕಷ್ಟು ಪೋಷಣೆಯನ್ನು ನೀಡುತ್ತದೆ. ಇದರಿಂದ ಚರ್ಮವು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ. ಕಲೆಗಳನ್ನು ಕಡಿಮೆ ಮಾಡಲು ಮತ್ತು ಮೊಡವೆಗಳಿಗೆ ಚಿಕಿತ್ಸೆ ನೀಡಲು ಇದು ತುಂಬಾ ಪರಿಣಾಮಕಾರಿಯಾಗಿದೆ. ಇದು ಸೂರ್ಯನ ಬಿಸಿಲಿನಿಂದ ಉಂಟಾಗುವ ಟ್ಯಾನ್ ಅನ್ನು ಮತ್ತು ಸುಕ್ಕುಗಟ್ಟಿದ ಚರ್ಮವನ್ನು ತೊಡೆದುಹಾಕುವಲ್ಲಿ ಸಹಕಾರಿಯಾಗಿದೆ.
ರಕ್ತಚಂದನವನ್ನು ಈ ಎರಡು ರೀತಿಯಲ್ಲಿ ಬಳಸಿ
- ರಕ್ತಚಂದನವನ್ನು ಕಲ್ಲಿನಲ್ಲಿ ಸ್ವಲ್ಪ ನೀರು ಹಾಕಿ ಉಜ್ಜಿಕೊಳ್ಳಿ. ಶ್ರೀಗಂಧವನ್ನು ಉಜ್ಜಿ ಅದರ ಗಂಧವನ್ನು ತೆಗೆಯುವಂತೆಯೇ ರಕ್ತಚಂದನವನ್ನು ಉಜ್ಜಿ, ಇದನ್ನು ತ್ವಚೆಯ ಮೇಲೆ ಹಚ್ಚಿ. ತ್ವಚೆಯ ಮೇಲೆ ಇದನ್ನು ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ನಂತರ ನೀರಿನಿಂದ ಮುಖವನ್ನು ತೊಳೆಯಿರಿ. ನಂತರ ಹತ್ತಿ ಬಟ್ಟೆಯಿಂದ ಮುಖವನ್ನು ಉಜ್ಜಿಕೊಂಡು, ತ್ವಚೆಗೆ ವ್ಯಾಸಲಿನ್ ಜೆಲ್ ಅನ್ನು ಅನ್ವಯಿಸಿ. ನಂತರ ತ್ವಚೆಯನ್ನು ಚೆನ್ನಾಗಿ ಮಸಾಜ್ ಮಾಡಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ಮುಖದ ಮೇಲಿನ ಕಲೆಗಳು ಮತ್ತು ಮೊಡವೆಗಳು ಕೆಲವೇ ದಿನಗಳಲ್ಲಿ ಕಡಿಮೆಯಾಗಲು ಪ್ರಾರಂಭಿಸುತ್ತವೆ.
- ಇನ್ನೊಂದು ರೀತಿಯಲ್ಲೂ ರಕ್ತಚಂದನವನ್ನು ತ್ವಚೆಗೆ ಹೀಗೆ ಬಳಸಬಹುದು. ಒಂದು ಬೌಲ್‍ನಲ್ಲಿ 1 ಚಮಚ ಕೆಂಪು ಚಂದನ ಮತ್ತು 1 ಚಮಚ ಬೇವಿನ ಪುಡಿಯನ್ನು ತೆಗೆದುಕೊಳ್ಳಿ. ನಂತರ ಅದರಲ್ಲಿ 1 ಚಮಚ ಮೊಸರು ಮಿಶ್ರಣ ಮಾಡಿ. ಇದನ್ನು ತ್ವಚೆಯ ಮೇಲೆ ಹಚ್ಚಿ, 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ನೀರಿನಿಂದ ಮುಖವನ್ನು ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಬಳಸಬಹುದು.
ವಿಭಾಗ