ತ್ವಚೆ ಪಳಪಳ ಹೊಳೆಯಬೇಕಾ, ಈ ಟೊಮೆಟೊ ಫೇಸ್‌ಮಾಸ್ಕ್ ಬಳಸಿ: ಬ್ಯೂಟಿಪಾರ್ಲರ್‌ಗೆ ಹೋಗದೆ ಮುಖದ ಕಾಂತಿ ಹೆಚ್ಚಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ತ್ವಚೆ ಪಳಪಳ ಹೊಳೆಯಬೇಕಾ, ಈ ಟೊಮೆಟೊ ಫೇಸ್‌ಮಾಸ್ಕ್ ಬಳಸಿ: ಬ್ಯೂಟಿಪಾರ್ಲರ್‌ಗೆ ಹೋಗದೆ ಮುಖದ ಕಾಂತಿ ಹೆಚ್ಚಿಸಿ

ತ್ವಚೆ ಪಳಪಳ ಹೊಳೆಯಬೇಕಾ, ಈ ಟೊಮೆಟೊ ಫೇಸ್‌ಮಾಸ್ಕ್ ಬಳಸಿ: ಬ್ಯೂಟಿಪಾರ್ಲರ್‌ಗೆ ಹೋಗದೆ ಮುಖದ ಕಾಂತಿ ಹೆಚ್ಚಿಸಿ

ಸೌಂದರ್ಯ ಹೆಚ್ಚಿಸಲು ಪಾರ್ಲರ್‌ಗೆ ಹಣವನ್ನು ಸುರಿಯುವ ಬದಲು,ಅಡುಗೆ ಮನೆಯ ಬಳಕೆಗೆ ಇರುವ ಟೊಮೆಟೊಗಳನ್ನು ಬಳಸುವ ಮೂಲಕ ತ್ವರಿತ ಹೊಳಪನ್ನು ಪಡೆಯಬಹುದು. ಹಾಗಿದ್ದರೆ ಟೊಮೆಟೊಗೆ ಸಂಬಂಧಿಸಿದ ಕೆಲವು ಬ್ಯೂಟಿ ಹ್ಯಾಕ್ಸ್‌ಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಬ್ಯೂಟಿಪಾರ್ಲರ್‌ಗೆ ಹೋಗದೆ ಮುಖದ ಕಾಂತಿ ಹೆಚ್ಚಿಸಲು ಟೊಮೆಟೊ ಫೇಸ್‍ಪ್ಯಾಕ್ ಬಳಸಿ.
ಬ್ಯೂಟಿಪಾರ್ಲರ್‌ಗೆ ಹೋಗದೆ ಮುಖದ ಕಾಂತಿ ಹೆಚ್ಚಿಸಲು ಟೊಮೆಟೊ ಫೇಸ್‍ಪ್ಯಾಕ್ ಬಳಸಿ. (Shutterstock)

ತರಕಾರಿ, ಮಾಂಸಾಹಾರ ಭಕ್ಷ್ಯಗಳ ರುಚಿಯನ್ನು ಹೆಚ್ಚಿಸುವುದರಿಂದ ಹಿಡಿದು ಸಲಾಡ್ ಪ್ಲೇಟ್ ಅನ್ನು ಅಲಂಕರಿಸುವವರೆಗೆ, ಟೊಮೆಟೊದ ಬಳಕೆ ಹಲವು. ಕೇವಲ ಖಾದ್ಯಗಳಿಗೆ ಮಾತ್ರವಲ್ಲ ತ್ವಚೆಯ ಸೌಂದರ್ಯಕ್ಕೂ ಟೊಮೆಟೋವನ್ನು ಬಳಸಲಾಗುತ್ತದೆ. ಮುಖ ಪಳಪಳ ಹೊಳೆಯಲು ಟೊಮೆಟೊ ಸಹಕಾರಿ. ನವರಾತ್ರಿ ಹಬ್ಬವೇನೋ ಮುಗಿಯಿತು, ಇನ್ನೇನು ದೀಪಾವಳಿಗೆ ಕೆಲವೇ ದಿನಗಳು ಬಾಕಿಯಿದೆ. ಹೀಗಾಗಿ ತ್ವಚೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಬಹುತೇಕ ಎಲ್ಲಾ ಹೆಂಗಳೆಯರು ಮುಂದಾಗುವುದು ಸಹಜ. ಹಬ್ಬಕ್ಕೆ ಹೊಸ ಉಡುಪು ತೊಟ್ಟು, ಸುಂದರವಾಗಿ ಕಾಣಬೇಕೆಂದು ಹಂಬಲಿಸುತ್ತಾರೆ. ಇದಕ್ಕಾಗಿ ಹಬ್ಬಕ್ಕಿಂತ ಮುಂಚಿತವಾಗಿ ದುಬಾರಿ ಚಿಕಿತ್ಸೆಗಳು ಮತ್ತು ಫೇಶಿಯಲ್‌ಗಾಗಿ ಪಾರ್ಲರ್ ಮೊರೆ ಹೋಗುವುದು ಸಾಮಾನ್ಯ. ಆದರೆ, ತ್ವಚೆಯ ಸೌಂದರ್ಯಕ್ಕೆ ದುಬಾರಿ ವೆಚ್ಚ ವ್ಯಯಿಸುವ ಬದಲು ಅಡುಗೆ ಮನೆಯಲ್ಲಿ ಇರಿಸಲಾಗಿರುವ ಟೊಮೆಟೊಗಳನ್ನು ಬಳಸುವ ಮೂಲಕ ತಕ್ಷಣದ ಹೊಳಪನ್ನು ಪಡೆಯಬಹುದು. ಟೊಮೆಟೊದಲ್ಲಿರುವ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಚರ್ಮದಿಂದ ಡೆಡ್ ಸ್ಕಿನ್ ತೆಗೆದುಹಾಕಲು ಮತ್ತು ಮುಚ್ಚಿದ ಚರ್ಮದ ರಂಧ್ರಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಇದರಲ್ಲಿರುವ ಕಿಣ್ವಗಳು ಚರ್ಮವನ್ನು ಎಕ್ಸ್ಫೋಲಿಯೇಟ್ ಮಾಡುತ್ತವೆ. ವಿಟಮಿನ್ ಸಿ ಮತ್ತು ಲೈಕೋಪೀನ್ ಚರ್ಮದಿಂದ ಟ್ಯಾನಿಂಗ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಿದ್ದರೆ ಟೊಮೆಟೊಗೆ ಸಂಬಂಧಿಸಿದ ಕೆಲವು ಬ್ಯೂಟಿ ಹ್ಯಾಕ್ಸ್‌ಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ತ್ವಚೆಯ ಸೌಂದರ್ಯಕ್ಕೆ ಟೊಮೆಟೊ ಫೇಸ್ ಮಾಸ್ಕ್

- ಮುಖಕ್ಕೆ ವಿಭಿನ್ನ ಹೊಳಪನ್ನು ನೀಡಲು ಬಯಸಿದರೆ, 1 ಟೀ ಚಮಚ ಟೊಮೆಟೊ ರಸದಲ್ಲಿ ಹಸಿ ಅರಿಶಿನವನ್ನು ಬೆರೆಸಿ ತೆಳುವಾದ ಪೇಸ್ಟ್ ತಯಾರಿಸಿ, ಮುಖಕ್ಕೆ ಹಚ್ಚಿ. ಈ ಪೇಸ್ಟ್ ಅನ್ನು ಮುಖದ ಮೇಲೆ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಮುಖವನ್ನು ತೊಳೆಯಿರಿ.

- ಚರ್ಮದ ಶುಷ್ಕತೆಯನ್ನು ತೆಗೆದುಹಾಕಲು ಮತ್ತು ಮೃದು ಚರ್ಮಕ್ಕಾಗಿ ಈ ಟೊಮೆಟೊ ಬ್ಯೂಟಿ ಹ್ಯಾಕ್ ಅನ್ನು ಪ್ರಯತ್ನಿಸಬಹುದು. 5 ರಿಂದ 6 ಬಾದಾಮಿಗಳನ್ನು ಹಾಲಿನಲ್ಲಿ ನೆನೆಸಿಟ್ಟು ಬಳಿಕ ಅದನ್ನು ರುಬ್ಬಿಕೊಂಡು ದಪ್ಪ ಪೇಸ್ಟ್ ತಯಾರಿಸಬೇಕು. ಈ ಪೇಸ್ಟ್‌ಗೆ ತುರಿದ ಟೊಮೆಟೊ ರಸವನ್ನು ಸೇರಿಸಿ ಮುಖಕ್ಕೆ ಹಚ್ಚಿ, 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಮುಖವನ್ನು ತೊಳೆಯಿರಿ.

- ಟೊಮೆಟೊದಿಂದ ಹೈಡ್ರೇಟಿಂಗ್ ಫೇಸ್ ಮಾಸ್ಕ್ ತಯಾರಿಸಲು, 1 ಟೀ ಚಮಚ ಟೊಮೆಟೊ ರಸವನ್ನು ತೆಗೆದುಕೊಂಡು ಅದರಲ್ಲಿ ಆಲಿವ್ ಎಣ್ಣೆಯನ್ನು ಬೆರೆಸಿ ಮಾಯಿಶ್ಚರೈಸರ್ ಆಗಿ ಬಳಸಿ. ಇದನ್ನು ರಾತ್ರಿಯಿಡೀ ತ್ವಚೆಯ ಮೇಲೆ ಹಾಗೆಯೇ ಬಿಡಿ. ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆಯಿರಿ.

- ಮುಖದ ಮೇಲಿನ ಕಪ್ಪು ಕಲೆಗಳನ್ನು ತೆಗೆದುಹಾಕಲು ಟೊಮೆಟೊ ಫೇಸ್ ಪ್ಯಾಕ್ ಅನ್ನು ಹೀಗೆ ತಯಾರಿಸಿ. ಮೊದಲಿಗೆ ಬಾಳೆಹಣ್ಣನ್ನು ಮ್ಯಾಶ್ ಮಾಡಿ. ಅದರಲ್ಲಿ ಸ್ವಲ್ಪ ಟೊಮೆಟೊ ತಿರುಳನ್ನು ಮಿಶ್ರಣ ಮಾಡಿ. ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ಮುಖವನ್ನು ತೊಳೆದುಕೊಳ್ಳಿ.

- ಚರ್ಮದ ರಂಧ್ರಗಳನ್ನು ಬಿಗಿಗೊಳಿಸಲು ಟೊಮೆಟೊ ಸಹಾಯ ಮಾಡುತ್ತದೆ. ಟೊಮೆಟೊದಲ್ಲಿರುವ ವಿಟಮಿನ್-ಎ, ವಿಟಮಿನ್-ಬಿ, ವಿಟಮಿನ್-ಸಿ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ಗುಣಲಕ್ಷಣಗಳು ಚರ್ಮವನ್ನು ಬಿಗಿಯಾಗಿ ಮತ್ತು ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ. ಇದು ತುಂಬಾನೇ ಸಿಂಪಲ್. ಟೊಮೆಟೊವನ್ನು ಕತ್ತರಿಸಿ ಅದರ ಮೇಲೆ ಸ್ವಲ್ಪ ಜೇನುತುಪ್ಪವನ್ನು ಹಚ್ಚಿ ಮುಖಕ್ಕೆ ಸ್ಕ್ರಬ್ ಮಾಡಿ.

Whats_app_banner