ಕನ್ನಡ ಸುದ್ದಿ  /  ಜೀವನಶೈಲಿ  /  ಬಯಸಿದ್ದನ್ನು ಮನೆಬಾಗಿಲಿಗೆ ತಂದು ನೀಡುವ ಕೊರಿಯರ್‌ ಹುಡುಗರ ಬದುಕು-ಬವಣೆ; ಡೆಲಿವರಿ ಬಾಯ್ಸ್‌ ಕುರಿತ ರೇಣುಕಾ ಮಂಜುನಾಥ್‌ ಆಪ್ತಬರಹ

ಬಯಸಿದ್ದನ್ನು ಮನೆಬಾಗಿಲಿಗೆ ತಂದು ನೀಡುವ ಕೊರಿಯರ್‌ ಹುಡುಗರ ಬದುಕು-ಬವಣೆ; ಡೆಲಿವರಿ ಬಾಯ್ಸ್‌ ಕುರಿತ ರೇಣುಕಾ ಮಂಜುನಾಥ್‌ ಆಪ್ತಬರಹ

ಮಹಾನಗರಿ ಬೆಂಗಳೂರಿನಲ್ಲಿ ಡೊಂಜೊ, ಸ್ವಿಗ್ವಿ, ಜೊಮ್ಯಾಟೊ ಸೇರಿದಂತೆ ಹಲವು ಆಪ್‌ ಆಧಾರಿತ ಸಂಸ್ಥೆಗಳಲ್ಲಿ ದುಡಿಯುವ ಡೆಲಿವರಿ ಹುಡುಗರ ಬದುಕು ನಿಜಕ್ಕೂ ಕಷ್ಟವೇ. ಅಂದುಕೊಂಡಿದ್ದನ್ನ ನಮ್ಮ ಮನೆ ಬಾಗಿಲಿಗೆ ತಲುಪಿಸಲು ಬಿಸಿಲಿ, ಮಳೆ-ಗಾಳಿ ಲೆಕ್ಕಿಸದೇ ದುಡಿಯುವ ಡೆಲಿವರಿ ಹುಡುಗರ ಕುರಿತ ರೇಣುಕಾ ಮಂಜುನಾಥ್‌ ಅವರ ಬರಹ.

ಕೊರಿಯರ್‌ ಹುಡುಗರ ಬದುಕು-ಬವಣೆ
ಕೊರಿಯರ್‌ ಹುಡುಗರ ಬದುಕು-ಬವಣೆ

ಬೆಂಗಳೂರು ಎಂಬ ಮಹಾನಗರಿಯಲ್ಲಿ ದುಡಿಮೆಗೆ ಅವಕಾಶ ಇದ್ದಷ್ಟೂ ಬೇರೆಲ್ಲೂ ಇಷ್ಟ ಎನ್ನಬಹುದು, ಅಷ್ಟರ ಮಟ್ಟಿಗೆ ಬೆಂಗಳೂರಿನಲ್ಲಿ ಜನರು ದುಡಿಯುತ್ತಿದ್ದಾರೆ. ಬೆಂದಕಾಳೂರನ್ನು ನಂಬಿ ನಂಬದವರು ಎಂದೂ ಖಾಲಿ ಕೈಯಲ್ಲಿ ಹೋಗಿಲ್ಲ ಎಂಬ ಮಾತೂ ಇದೆ. ಇತ್ತೀಚಿನ ದಿನಗಳಲ್ಲಿ ಡೆಲಿವರಿ, ಕೊರಿಯರ್‌ ರೂಪದಲ್ಲಿ ಮನೆಬಾಗಿಲಿಗೆ ನಾವಿಷ್ಟಪಟ್ಟ ವಸ್ತುಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಬೆಂಗಳೂರಿನ ಕೊರಿಯರ್‌, ಡೆಲಿವರಿ ಹುಡುಗರು. ಬಿಸಿಲು, ಗಾಳಿ, ಮಳೆ, ಚಳಿ ಎನ್ನದೇ ನಾವು ಅಂದುಕೊಂಡು ಹೊತ್ತಿನ ಒಳಗೆ ನಮ್ಮ ವಸ್ತುಗಳನ್ನು ನಮಗೆ ತಲುಪಿಸುವ ಇವರ ಬದುಕಿನ ಕಥೆಗಳು, ಇವರ ಕಷ್ಟಗಳನ್ನು ಕೇಳುವವರಿಲ್ಲ. ಕಾರ್ಮಿಕ ದಿನಾಚರಣೆ ಹಿನ್ನೆಲೆ ಡೆಲಿವರಿ ಹುಡುಗರ ಬಗ್ಗೆ ರೇಣುಕಾ ಮಂಜುನಾಥ್‌ ಬರೆದ ಆಪ್ತ ಬರಹ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ರೇಣುಕಾ ಮಂಜುನಾಥ್‌ ಅವರ ಬರಹ ಇಲ್ಲಿದೆ

#ಕಾರ್ಮಿಕ ದಿನಾಚರಣೆಯಂದು ಬರೆಯಬೇಕೆniಸಿತ್ತು...

ಕೆಲದಿನಗಳ ಹಿಂದೆ ನಡೆದ ವಿಷಯ, ಹಂಚಿಕೊಳ್ಳಬೇಕೆನಿಸಿತು. ನನಗೆ ಈ ಕೊರಿಯರ್ ಹುಡುಗರನ್ನು ನೋಡುವಾಗ (dunzo swiggy, porter), ಅದೇಕೋ ಗೊತ್ತಿಲ್ಲ ಮನಸ್ಸು ಸಿಕ್ಕಾಪಟ್ಟೆ ಆರ್ದ್ರಗೊಳ್ಳುತ್ತೆ. ಅವರು ನಮಗಾಗಿ, ನಮಗೆ ಬೇಕಾದ್ದನ್ನು ತಂದುಕೊಡುವ, ನಮ್ಮಿಂದ ಪಡೆದು ನಮಗೆ ಬೇಕಾದವರಿಗೆ ತಲುಪಿಸುವ ರೀತಿ ಅವರೊಂದಿಗೆ ಒಂದು ರೀತಿಯ ಆತ್ಮೀಯತೆ ಬೆಳೆಸುತ್ತೆ. ತಮಾಷೆಯೆಂದರೆ ಇವರೆಲ್ಲಾ ಒಮ್ಮೆಯಷ್ಟೇ ಮನೆಬಾಗಿಲಿಗೆ ಬರುವವರು, ಕಾಣಿಸಿಕೊಳ್ಳುವವರು! ಆದರೂ ಅವರು ಬಂದೊಡನೆ ನಮ್ಮ ಮನೆಯ ಹುಡುಗನೊಬ್ಬ ಬಂದಂತಾಗಿಬಿಡುತ್ತೆ!

ಎಲ್ಲರಿಗೂ ಹಾಗಾಗುತ್ತಾ ಗೊತ್ತಿಲ್ಲ! ಮುಖ್ಯ ಕಾರಣ ಆಪ್‌ನಲ್ಲಿ ಅವರು ಸೀದಾ ನಮಗೆ ಬೇಕಾದ ಕಡೆಗೆ ಹೋಗೋದು ಕಾಣುತ್ತೆ, ಹಾಗೇ ಸೀದಾ ನಮ್ಮನೆಗಷ್ಟೇ ಬರೋದು ಕಾಣುತ್ತೆ! ಅಂದರೆ ಅವರದ್ದು ಸಂಪೂರ್ಣ ನಮ್ಮ ಕೆಲಸ ಅಷ್ಟೆ!

ಕೆಲದಿನಗಳ ಹಿಂದೆ, ನಾನು ಇಂಧೋರ್‌ಗೆ ಹೋಗಿದ್ದರಿಂದ ಮನೆಯಲ್ಲಿ ರಾಗಿಹಿಟ್ಟು, ಅಕ್ಕಿಹಿಟ್ಟು, ಗೋದಿಹಿಟ್ಟು ಮತ್ತು ಜೋಳದಹಿಟ್ಟು, ಜೊತೆಗೆ ಸಾವಯವ ಕೆಂಪಕ್ಕಿ ಎಲ್ಲಾ ಖಾಲಿ ಆಗಿತ್ತು. ಇಷ್ಟನ್ನೂ ನಾನು ಸಹಕಾರಿನಗರದಿಂದ ತರಿಸುವೆ. ಅಲ್ಲಿಂದ ನನ್ನ ತಮ್ಮ ಕೊರಿಯರ್ ಮೂಲಕ ಕಳಿಸುತ್ತಿದ್ದ, ನಾನು‌ ಇಲ್ಲಿಂದ ಪೋರ್ಟರ್ ಬುಕ್ ಮಾಡುವೆ. ಅದರಲ್ಲೂ ಅಲ್ಲಿನ ರಾಗಿ ಹಿಟ್ಟು, ಜೋಳದ ಹಿಟ್ಟು ರುಚಿ ಕಂಡ ನಂತರ ಎಲ್ಲೂ ಸರಿಹೋಗೋಲ್ಲ.

ಕಳೆದವಾರ ಬುಕ್ ಮಾಡಿದೆ. ತಕ್ಷಣ ಸಿಕ್ಕಿದ್ದ ಕೊರಿಯರ್ ಕ್ಯಾನ್ಸಲ್ ಮಾಡಿದ.! ನಾನು ಫೋನ್ ಮಾಡಿ ಕೇಳಿದರೆ ' 'ಆಪ್' ಸಮಸ್ಯೆ ಇದೆ ಮೇಡಂ, ಬೇರೆ ಬುಕ್ ಮಾಡಿ' ಅಂದ.

ನಾನು ಮತ್ತೊಬ್ಬನನ್ನು ಬುಕ್ ಮಾಡಿ, ಬರುತ್ತಾನಾ ಎಂದು ಫೋನ್ ಮಾಡಿದೆ. ಬಹಳ ವಿನೀತ ದನಿಯಲ್ಲಿ ಆತ ʼಮೇಡಂ, ಇಪ್ಪತ್ತು ನಿಮಿಷ ಆಗುತ್ತೆ. ಅಲ್ಲಿಗೆ ತಲುಪಲು. ತರುವೆʼ ಎಂದು ಹೇಳಿದ. ನಾನು ತಮ್ಮನ ಹೆಂಡತಿಗೆ ಫೋನ್ ಮಾಡಿ ಅವನು ಬರಲು‌ ಇಪ್ಪತ್ತು ನಿಮಿಷ ಆಗುತ್ತಂತೆ. ಸಾಧ್ಯವಾದರೆ ತಿಂಡಿ ಮಾಡಿದ್ದರೆ ಅದನ್ನೂ ಕಳಿಸಲು ಹೇಳಿದೆ. ಅವಳು ಲಗುಬಗೆಯಿಂದ ಪಲ್ಯ ದೋಸೆ ರೆಡಿ ಮಾಡುವಷ್ಟರಲ್ಲಿ ಇವನು ಹೋಗಿಬಿಟ್ಟಿದ್ದಾನೆ! ಹಾಗಾಗಿ ಅವಳು ಇನ್ನೂ ಮಾಡಿರಲಿಲ್ಲವಾದ್ದರಿಂದ, ಆ ಎಲ್ಲಾ ಹಿಟ್ಟುಗಳ ಜೊತೆಗೆ ರುಬ್ಬಿದ ದೋಸೆ ಹಿಟ್ಟು ಕೊಟ್ಟಿದ್ದಾಳೆ. ನಾನು ಮನೆಯಲ್ಲೇ ದೊಸೆ ಮಾಡಿಕೊಳ್ಳೋದೆಂದು ಮಾತಾಡಿಕೊಂಡೆವು.

ಈ ಕೊರಿಯರ್‌ಗಳ ಫೋನ್ ನಂಬರ್ ಹೆಸರು ನಮಗೆ ಸಿಗುತ್ತೆ. ಈ ಹುಡುಗ ಉತ್ತರ ಕರ್ನಾಟಕ ಅಂತ ಗೊತ್ತಾಯ್ತು. ಆಗಾಗ ಫೋನ್ ತೆಗೆದು ಎಲ್ಲಿದ್ದಾನೆಂದು ನೋಡುತ್ತಿದ್ದೆ. ಪಾಪ ಅಷ್ಟು ದೂರದಿಂದ ಅದೆಷ್ಟು ಫಾಸ್ಟಾಗಿ ಬರುತ್ತಿದ್ದಾನೆ ಅನಿಸುತ್ತಿತ್ತು. ಹಾಗೇ ನಿರೀಕ್ಷೆಗಿಂತ ಮೊದಲೇ ಮನೆಯ ಮುಂದೆ ಹಾಜರ್..!

ನಾನು ಬ್ಯಾಗ್ ಪಡೆಯಲು ಹೊರಗೆ ಬಂದೆ. ಅವನು ಗೇಟ್ ಒಳಗೆ ತಂದುಕೊಟ್ಟ. ಬಹಳವೇ ಭಾರ ಇತ್ತು. ನಮ್ಮದೊಂದೇ ಆದರೂ ಬೈಕ್ ಮೇಲಿಟ್ಟುಕೊಂಡು ಅಷ್ಟು ದೂರ ಬಂದಿರೋದನ್ನು ನೋಡಿ 'ಪಾಪ, ಯಾವ ಋಣವೋ ಇವರೆಲ್ಲಾ ಮನೆಬಾಗಿಲಿಗೆ ಒದಗಿಸ್ತಾರೆ, ಎಷ್ಟೊಂದು ಭಾರ ಇದೆ' ಅನಿಸಿತ್ತು. ಬ್ಯಾಗ್ ತೆಗೆದು ದೋಸೆಹಿಟ್ಟಿನ ಡಬ್ಬ ಹುಡುಕಿದೆ. ಅವನು ʼಮೇಡಂ ಅದು ಆ ಹಿಟ್ಟುಗಳ ಜೊತೆ ಓಪನ್ ಆಗ್ಬಿಟ್ರೆ ಅಂತ ನನ್ನ ಬ್ಯಾಗಲ್ಲಿಟ್ಟಿದ್ದೇನೆʼ ಅಂತ ಅವನ ಬೆನ್ನು ಮೇಲಿನ ಸ್ವಂತ ಬ್ಯಾಗಲ್ಲಿಟ್ಟುಕೊಂಡು ಬಂದಿದ್ದ! ನಮ್ಮ ಮನೆಯ ಮಕ್ಕಳಂತೆ ಜವಾಬ್ದಾರಿಯಿಂದ ತೆಗೆದುಕೊಟ್ಟ. ಅವನಿಗೆ ಕೊಡಬೇಕಿದ್ದ ಹಣವನ್ನು ರೌಂಡ್ ಮಾಡಿಕೊಟ್ಟಿದ್ದೆ, ಅವನು ಚಿಲ್ಲರೆ ವಾಪಸ್ ಕೊಡಲು ಜೇಬಲ್ಲಿ ಹುಡುಕುತ್ತಿದ್ದ. ನಾನು 'ಇರಲಿ ಬಿಡಪ್ಪಾ, ಅಲ್ಲಿಂದ ಅಷ್ಟು ಭಾರ ಹೊತ್ಕೊಂಡು ತಂದಿದೀಯ. ಅದ್ಯಾವ ಲೆಕ್ಕʼ ಅಂದೆ. ಅವನಿಗೆ ಆ ಹಣಕ್ಕಿಂತ ನಾನು ಥ್ಯಾಂಕ್ಸ್ ರೂಪದಲ್ಲಿ ಅವನ ಶ್ರಮವನ್ನು ಗುರುತಿಸಿದ್ದಕ್ಕೆ ಮುಖದಲ್ಲೆಲ್ಲಾ ಆತ್ಮೀಯಭಾವ!

ತಿಂಡಿ ಆಯ್ತೇನಪ್ಪಾ..

ಇಲ್ಲ ಮೇಡಂ, ನಿಮ್ಮದೇ ಮೊದಲ ಕೊರಿಯರ್ ಅಂದ.

ಅಯ್ಯೋ ಇನ್ನೂ ಏನೂ ತಿಂದಿಲ್ವಾ? ಮನೆಯಿಂದ ತರ್ತೀರಾ ತಿಂಡಿ ಬಾಕ್ಸ್? ಯಾವ ಊರು ನಿಮ್ನದು?

"ಗುಲ್ಬರ್ಗಾ ಮೇಡಂ, ನಾನೂ ನಮ್ಮಣ್ಣ ರೂಮ್ ಮಾಡ್ಕೊಂಡಿದೀವಿ. ಇಬ್ಬರದ್ದೂ ಇದೇ ಕೆಲಸ. ಬಾಡಿಗೆ ಮತ್ತೊಂದು ಖರ್ಚು, ಊರಿಗೂ ಕಳಿಸ್ತೀವಿʼ ಅಂದ..

ನನಗಂತೂ ಗಂಡುಮಕ್ಕಳು ಹೀಗೆ ಜವಾಬ್ದಾರಿಯುತವಾಗಿ ನಡೆದುಕೊಂಡರೆ, ಪರದೇಶದಲ್ಲಿ ದುಡಿಯುತ್ತಾ ನಮ್ಮ ಬಗ್ಗೆ ವಿಶೇಷ ಕಾಳಜಿ, ಅಕ್ಕರೆ, ತೋರುವ ನನ್ನಿಬ್ಬರೂ ಮಕ್ಕಳಂತೆಯೇ ಅನಿಸಿಬಿಡುತ್ತೆ..

ನಾನು, ʼಐದು ನಿಮಿಷ ಇರ್ತೀಯಾ, ತಿಂಡಿ ಮಾಡ್ತಿದೀನಿ. ಕೊಡ್ತೀನಿʼ ಅಂದೆ.

ಅವನಿಗೆ ಅದೆಷ್ಟು ಖುಷಿ ಆಯ್ತೆಂದರೆ ʼಪರವಾಗಿಲ್ಲ ಮೇಡಂ, ಇಷ್ಟು ಕಷ್ಟ-ಸುಖ ವಿಚಾರಿಸೋದೇ ತುಂಬಾ ಖುಷಿಕೊಡುತ್ತೆ, ಆಗಲೇ ಮುಂದಿನ ಕೊರಿಯರ್‌ಗೆ ಫೋನ್ ಬರ್ತಿದೆʼ ಎಂದು ಅವನ ಭಾಷೆಯಲ್ಲಿ ಹೇಳಿದ!

ನನಗೆ ಈ ಇಬ್ಬರು ಅಣ್ಣತಮ್ಮಂದಿರು, ಬಾಡಿಗೆ ಮನೆ ಅವರ ಊಟತಿಂಡಿ ಎಲ್ಲಾ ಕಣ್ಮುಂದೆ ಬಂದು ಆ ಕ್ಷಣಕ್ಕೆ ಏನು ಮಾಡಲೂ ತೋಚಲಿಲ್ಲ. 'ಒಂದು ನಿಮಿಷ ' ಎಂದು ಒಳಗೆ ಹೋಗಿ ಬ್ಯಾಗಿಗೆ ಕೈಹಾಕಿ ಸ್ವಲ್ಪ ಹೆಚ್ಚೇ ಹಣ ಅನಿಸುವಷ್ಟು ತಂದು ಅವನಿಗೆ 'ತಗೊಳಪ್ಪಾ, ಇಂದಿನ ತಿಂಡಿ ಊಟಕ್ಕೆ ಕೊಡುವೆʼ ಅಂತ ಕೊಟ್ಟೆ. ಆ ಕ್ಷಣ ತಬ್ಬಿಬ್ಬಾದವನು, ಕಣ್ಣಲ್ಲಿ ‌ನೀರು ತುಂಬಿಕೊಂಡುಬಿಟ್ಟ. ಅವನ ಕಣ್ಣಲ್ಲಿ‌ ನೀರು ನೋಡಿ ನನಗೆ ಗಂಟಲುಬ್ಬಿತ್ತು, ಮಾತು ಹೊರಡಲಿಲ್ಲ. ಊರು ಬಿಟ್ಟು ನಗರ ಸೇರಿದ ಇಂತಹ ಗಂಡು ಹುಡುಗರ ಬಗ್ಗೆ ನನಗೆ ಯಾವಾಗಲೂ ಮನಸ್ಸು ಆರ್ದ್ರವಾಗುತ್ತೆ. ಹುಡುಗಿಯರಿಗೆ ಒಂದು ರಕ್ಷಣಾ ವ್ಯವಸ್ಥೆ ಇರುತ್ತೆ. ಈ ಗಂಡುಮಕ್ಕಳು ಎಲ್ಲಾ ಸ್ವಯಂ ವ್ಯವಸ್ಥೆ ಮಾಡಿಕೊಂಡು ಊರಲ್ಲಿರುವ ಹೆತ್ತವರ, ಒಡಹುಟ್ಟಿದವರ ಕಷ್ಟಸುಖದ ಬಗ್ಗೆ ಭರವಸೆಯಾಗಿ ನಿಲ್ಲುವರು! ನಾನು 1972ನೇ ಇಸವಿಯಿಂದ ಈ ಮಹಾನಗರದಲ್ಲಿ ಇದ್ದೇನೆ. ನಾನು ನೋಡಿದಂತೆ ಈ ನಗರವನ್ನು ನಂಬಿ ಬಂದವರು ಯಾರೂ ಸೋತು, ವಾಪಸಾಗಿಲ್ಲ. ಎಲ್ಲರಿಗೂ ಬದುಕನ್ನು ಕಟ್ಟಿಕೊಟ್ಟಿದೆ ನಮ್ಮ ಬೆಂಗಳೂರು.

ಆ ಹುಡುಗನಿಗೆ ಅದೆಂತಹ ಕಷ್ಟವಿತ್ತೋ, ನಾನು‌ ಕೊಟ್ಟ ಹಣ ಅವನಿಗೆ ಉಪಯೋಗಕ್ಕೆ ಬಂದಂತಿತ್ತು ಅವನ ಭಾವ. ಆ ತಕ್ಷಣಕ್ಕೆ ಅವನಿಗೆ ಹೇಗೆ ಸ್ಪಂದಿಸಬೇಕೆಂದು ತಿಳಿಯದೆ, all of a sudden, instant ಆಗಿ ನನ್ನ ಕಾಲಿಗೆ ನಮಸ್ಕಾರ ಮಾಡಲು ಬಗ್ಗಿದ. ನನಗೆ ಗಾಬರಿಯಾಗಿ

ʼಅಯ್ಯೋ ಬಿಡಪ್ಪಾ ಇಷ್ಟಕ್ಕೆಲ್ಲಾ ಇದೆಲ್ಲಾ ಮಾಡಬೇಡ. ನಿನಗೆ ತಿಂಡಿ ತಿನ್ನಲು ಸಮಯವಿಲ್ಲವೆಂದು ಕೊಟ್ಟಿದ್ದೇನೆʼ ಎಂದೊಡನೆ, ಅವನಿಗೆ ಆ ಹಣಕ್ಕೆ ಹಿಂತಿರುಗಿ ಏನಾದರೂ ಮಾಡಬೇಕೆನಿಸಿದೆ. ಅವನು ಹೇಳಿದ್ದು ʼಮೇಡಂ ಈಗ ನಾನು ತಂದಿದ್ದು ನಿಮ್ಮ ತಮ್ಮನ ಮನೆ ಅಲ್ವಾ? ಯಾವಾಗಾದರೂ ನಿಮಗೆ ಅಲ್ಲಿಂದ ತರಿಸುವುದಿದ್ದರೆ ನನ್ನ‌ ನಂಬರ್ ಇದೆಯಲ್ಲಾ ಅದಕ್ಕೆ ಫೋನ್ ಮಾಡಿʼ ಅಂದ. ʼಪರ್ವಾಗಿಲ್ಲಪ್ಪಾ, ನೀವೆಲ್ಲಾ ಎಷ್ಟು ಕಷ್ಟಪಡ್ತೀರ ಅನಿಸ್ತಿರುತ್ತೆ, ಹಾಗಾಗಿ ಕೊಡಬೇಕೆನಿಸಿತು. ನನ್ನ ಮಕ್ಕಳ ಜರ್ಕಿನ್‌ಗಳು‌ ಪ್ಯಾಂಟ್ ಶರ್ಟ್‌ಗಳು ತುಂಬಾ ಇವೆ. ಈ ಕಡೆ ಬಂದಾಗ ಬಾ ಕೊಡುವೆ, ನಿಮ್ಮ ಈ ಓಡಾಟದ ವೃತ್ತಿಗೆ ಉಪಯೋಗವಾಗುತ್ತೆʼ ಅಂದೆ. ʼಆಯ್ತು ಮೇಡಂʼ ಎಂದು ಹೊರಟುಬಿಟ್ಟ...

ಅವನು ಹೋದ ಮೇಲೆ ಸಾಕಷ್ಟು ಸಮಯ ಮನಸ್ಸು ಆರ್ದ್ರಗೊಂಡಿತ್ತು. ದಿನವೂ ಮುದ್ದೆ ರೊಟ್ಟಿ ಮಾಡುವಾಗ ಅವನು ನೆನಪಾಗ್ತಾನೆ. ಅವನ ಫೋನ್ ನಂಬರನ್ನು ನೆನಪಿಸಿಕೊಂಡು ಹುಡುಕುವಷ್ಟರಲ್ಲಿ ಬಹಳಷ್ಟು ಫೋನ್‌ಗಳು ಬಂದಿವೆ. ಮಕ್ಕಳ ಉತ್ತಮೋತ್ತಮ ಬಳಸದೆಯೂ ಇರುವ ಬಟ್ಟೆಗಳನ್ನು ನೋಡಿ ಕರೆದು ಕೊಡೋಣ ಅನಿಸುತ್ತದೆ. ಫೋನ್ ನಂಬರ್ ಸಿಗದೆ ಸುಮ್ಮನಾದೆ..

ಶ್ರಮಿಕರ ದಿನಕ್ಕೆ ನೆನಪಿಸಿಕೊಂಡು ಬರೆದಿದ್ದೆ..

ಪೋಸ್ಟ್ ಮಾಡಲಾಗದಷ್ಟು ಕೆಲವೊಮ್ಮೆ ಬಹಳ ಕೆಲಸವಿರುತ್ತೆ. ಮನಸ್ಸಿಗೆ ಒಂದು ರೀತಿಯ ಸೋಮಾರಿತನ. ಇಂದು, ಟ್ರಾಫಿಕ್‌ನ ಮಧ್ಯೆ ಆಟೊದಲ್ಲಿ ಕುಳಿತು ಹೋಗುವಾಗ, ಅಲ್ಲಲ್ಲೇ ಈ ಕೊರಿಯರ್ ಮಕ್ಕಳು ಗಾಳಿ ಧೂಳು ಬಿಸಿಲು ಎಲ್ಲದರ ಮಧ್ಯೆ, ಅಷ್ಟೊಂದು ವಾಹನಗಳ ಮಧ್ಯೆ ಕೆಲವೊಮ್ಮೆ ಜೀವದ ಹಂಗು ತೊರೆದು ನಮ್ಮಂತಹವರ ಸೇವೆಗೆ ಓಡಾಡುವುದನ್ನು ನೋಡುವಾಗ, ನಗರದ ನರನಾಡಿಗಳಂತೆ ಕಾಣುವರು.

ಈಗ ಅದೇಕೋ ಇದನ್ನು ಪೋಸ್ಟ್ ಮಾಡೋಣ ಅನಿಸಿತು...

(ಇಲ್ಲಿ ನಾನು ಮಹಾದಾನಿ ಅಂತ ತೋರಿಸಿಕೊಳ್ಳಲು ಈ‌ ಪೋಸ್ಟ್ ಹಾಕಿಲ್ಲ. ಆದರೆ ಆ ಹುಡುಗನ ಮುಖಭಾವ ಅಕ್ಕರೆ ಜವಾಬ್ದಾರಿ ಮಾತುಗಳು‌, ಕೃತಜ್ಞತಾ ಭಾವ ಕಣ್ಮುಂದೆ ಹಾಗೇ ಇದೆ...)

#ಮನೆಮನೆಗೆ_ಬಂದು_ಬೇಕಾದ್ದನ್ನು_ತಲುಪಿಸುವ__ಈ_ಕೊರಿಯರ್_ಹುಡುಗರು

ಆಗೆಲ್ಲಾ, #ಮನೆಮನೆಗೆ_ನ್ಯೂಸ್‌ಪೇಪರ್_ಹಾಕುತ್ತಿದ್ದ_ಹೋಟೆಲ್‌ಗಳಲ್ಲಿ_ಮಾಣಿ_ಕೆಲಸ_ಮಾಡುತ್ತಿದ್ದ_ಗಂಡುಮಕ್ಕಳನ್ನು_ನೆನಪಿಸುವರು...

ಇವರನ್ನು ಹೃದಯವಂತರಾಗಿ ಗಮನಿಸಿದರೆ ಅದು ಹೃದಯ ತುಂಬುವ ಭಾವ ಕೊಡುತ್ತಷ್ಟೆ...

ವಿಭಾಗ