Nominee; ಡಿಮ್ಯಾಟ್, ಮ್ಯೂಚುಫಂಡ್‌ಗಳಲ್ಲಿ ಇಷ್ಟು ನಾಮಿನಿಗಳ ಹೆಸರು ಸೇರಿಸಬಹುದು, ನಾಮಿನಿ ಬದಲಾವಣೆಗೆ ಮಿತಿಯೂ ಇಲ್ಲ
ಷೇರುಪೇಟೆ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆದಾರರ ಗಮನಕ್ಕೆ. ಇನ್ನು ಮೇಲೆ ಡಿಮ್ಯಾಟ್, ಮ್ಯೂಚುಫಂಡ್‌ಗಳಲ್ಲಿ ಇಷ್ಟು ನಾಮಿನಿಗಳ ಹೆಸರು ಸೇರಿಸಬಹುದು. ನಾಮಿನಿ ಬದಲಾವಣೆಗೆ ಮಿತಿಯೂ ಇಲ್ಲ. ನಾಮಿನಿ ನಿಯಮದಲ್ಲಿ ಒಂದಷ್ಟು ಪರಿಷ್ಕರಣೆಗಳನ್ನು ಸೆಬಿ ಮಾಡಿದ್ದು, ಅದರ ವಿವರ ಇಲ್ಲಿದೆ.
ನವದೆಹಲಿ: ಡಿಮ್ಯಾಟ್ ಖಾತೆಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರಿಗೆ ಸಂಬಂಧಿಸಿದ ನಾಮನಿರ್ದೇಶನ (ನಾಮಿನಿ) ನಿಯಮಗಳನ್ನು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಅಂದರೆ ಸೆಬಿ ಬದಲಾಯಿಸಿದೆ. ಈ ಮಹತ್ವದ ತೀರ್ಮಾನವನ್ನು ಸೋಮವಾರ (ಸೆಪ್ಟೆಂಬರ್ 30) ತೆಗೆದುಕೊಂಡ ಸೆಬಿ, ಡಿಮ್ಯಾಟ್ ಖಾತೆಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ನಾಮಿನಿ ಹೆಸರು ಬದಲಾವಣೆಯ ಮಿತಿ ಮತ್ತು ನಾಮಿನಿ ಹೆಸರು ಸೇರ್ಪಡೆಗೆ ಸಂಬಂಧಿಸಿದ ನಿಯಮ ಬದಲಾವಣೆಗೆ ಅನುಮತಿ ನೀಡಿದೆ. ಇದರಂತೆ ಈಗ ನಾಮಿನಿ ಬದಲಾವಣೆಗೆ ಮಿತಿ ಇಲ್ಲ. ನಾಮಿನಿ ಹೆಸರು ಸೇರ್ಪಡೆಯ ಮಿತಿಯನ್ನು 10ಕ್ಕೆ ಏರಿಸಿದೆ. ಇದಕ್ಕೂ ಮೊದಲು ಇದು ಮೂರಕ್ಕೆ ಸೀಮಿತವಾಗಿತ್ತು. ಇದಲ್ಲದೆ ಹೊಸ ನಿಯಮಗಳ ಪ್ರಕಾರ, ಕೆಲವು ಸುರಕ್ಷತೆಗಳೊಂದಿಗೆ ಅಂಗವಿಕಲ ಹೂಡಿಕೆದಾರರ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾಮಿನಿಗಳಿಗೆ ಅವಕಾಶ ನೀಡಲಾಗುತ್ತದೆ. ಹೆಚ್ಚುವರಿಯಾಗಿ, ನಾಮನಿರ್ದೇಶಿತರಿಗೆ ಸ್ವತ್ತುಗಳನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಸಹ ಸುವ್ಯವಸ್ಥಿತಗೊಳಿಸಲಾಗುತ್ತಿದ್ದು, ಅದಕ್ಕೆ ಕನಿಷ್ಠ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ನಾಮಿನಿ ಬದಲಾಯಿಸಲು ಯಾವುದೇ ಮಿತಿ ಇಲ್ಲ
ಡಿಮ್ಯಾಟ್ ಖಾತೆಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ನಾಮಿನಿಗಳನ್ನು ನೀವು ಎಷ್ಟು ಬಾರಿ ಬೇಕಾದರೂ ಬದಲಾಯಿಸಬಹುದು. ಇದಲ್ಲದೆ, ಅಪ್ರಾಪ್ತ ವಯಸ್ಕರನ್ನು ನಾಮನಿರ್ದೇಶನ ಮಾಡಿದರೆ ಅವರಿಗೆ ಪಾಲಕರನ್ನು ಘೋಷಿಸುವ ಆಯ್ಕೆಯೂ ಇರುತ್ತದೆ. ಮಾರುಕಟ್ಟೆಯಲ್ಲಿ ಬೇನಾಮಿ ಆಸ್ತಿಗಳ ಹೆಚ್ಚಳವನ್ನು ತಡೆಗಟ್ಟಲು ಸೆಕ್ಯುರಿಟೀಸ್ ವರ್ಗಾವಣೆ ಸೌಲಭ್ಯಕ್ಕಾಗಿ ನೋಂದಾಯಿಸಿಕೊಳ್ಳುವಂತೆ ಅಸ್ತಿತ್ವದಲ್ಲಿರುವ ಎಲ್ಲ ಹೂಡಿಕೆದಾರರು ಮತ್ತು ಮ್ಯೂಚುವಲ್ ಫಂಡ್ ಯುನಿಟ್ ಹೋಲ್ಡರ್‌ಗಳಿಗೆ ಸೆಬಿ ಮನವಿ ಮಾಡಿದೆ.
ಹೂಡಿಕೆ ವರ್ಗಾವಣೆಗೆ ಪ್ಯಾನ್, ಪಾಸ್‌ಪೋರ್ಟ್ ಸಂಖ್ಯೆ ಅಥವಾ ಆಧಾರ್ ಬೇಕು
ಜಂಟಿ ಖಾತೆದಾರರ ಹೂಡಿಕೆ ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸುವುದಾಗಿ ಮಾರುಕಟ್ಟೆ ನಿಯಂತ್ರಕ ಸೆಬಿ ಘೋಷಿಸಿದೆ. ನಾಮಿನಿಗಳು ಪ್ಯಾನ್, ಪಾಸ್‌ಪೋರ್ಟ್ ಸಂಖ್ಯೆ ಅಥವಾ ಆಧಾರ್‌ನಂತಹ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಹೂಡಿಕೆಯನ್ನು ನಾಮಿನಿಗಳಿಗೆ ವರ್ಗಾಯಿಸಿದಾಗ, ಅವರು ಹೂಡಿಕೆದಾರರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಟ್ರಸ್ಟಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಮ್ಯೂಚುವಲ್ ಫಂಡ್ ಫೋಲಿಯೊದಲ್ಲಿ ನಾಮಿನಿಯ ಹೆಸರನ್ನು ಸೇರಿಸುವ ಅಥವಾ ಬದಲಾಯಿಸುವ ನಿಯಮಗಳು ಈಗ ಸುಲಭವಾಗಿದೆ. ಇದಕ್ಕಾಗಿ ಇನ್ನು ಮುಂದೆ ಜಂಟಿ ಖಾತೆದಾರರ ಸಹಿ ಅಗತ್ಯವಿಲ್ಲ.
ಜಂಟಿ ಖಾತೆಗಳಿಗೆ ಹೊಸ ನಾಮಿನಿ ನಿಯಮ ಅನ್ವಯವಾಗುತ್ತದೆ. ಹಿಂದೂ ಅವಿಭಜಿತ ಕುಟುಂಬದಲ್ಲಿ ಮುಖ್ಯಸ್ಥನ ಮರಣದ ಸಂದರ್ಭದಲ್ಲಿ ಖಾತೆಯನ್ನು ನಡೆಸಲು ಹೊಸ ಮಾರ್ಗಸೂಚಿಗಳನ್ನು ನೀಡಲಾಗುವುದು. ಸತ್ತವರು ಅವರು ಸಾಯುವ ಮೊದಲೇ ಆಸ್ತಿಯನ್ನು ಅಡಮಾನವಿಟ್ಟಿದ್ದರೆ, ಅದರ ಮೇಲೆ ಕಾನೂನುಬದ್ಧ ಉತ್ತರಾಧಿಕಾರಿಗಳು ಯಾವುದೇ ಹಕ್ಕುಗಳನ್ನು ಹೊಂದಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನಾಮನಿರ್ದೇಶಿತರಿಗೆ ಆಸ್ತಿಗಳ ವರ್ಗಾವಣೆಗಿಂತ ಸಾಲಗಾರರ ಹಕ್ಕುಗಳಿಗೆ ಆದ್ಯತೆ ನೀಡಲಾಗುತ್ತದೆ. ಜಂಟಿ ಡಿಮ್ಯಾಟ್ ಖಾತೆಗಳು ಮತ್ತು ಜಂಟಿಯಾಗಿ ಹೊಂದಿರುವ ಮ್ಯೂಚುವಲ್ ಫಂಡ್ ಫೋಲಿಯೊಗಳಿಗೆ ನಾಮನಿರ್ದೇಶನವು ಐಚ್ಛಿಕವಾಗಿರುತ್ತದೆ ಎಂದು ಸೆಬಿ ನಿಯಮ ವಿವರಿಸಿದೆ.
ವಿಭಾಗ