ಪಿಪಿಎಫ್, ಸುಕನ್ಯಾ ಸಮೃದ್ಧಿ, ಸಣ್ಣ ಉಳಿತಾಯ ಯೋಜನೆಗಳ ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದ ಬಡ್ಡಿದರ ಪ್ರಕಟ
ಕನ್ನಡ ಸುದ್ದಿ  /  ಜೀವನಶೈಲಿ  /  ಪಿಪಿಎಫ್, ಸುಕನ್ಯಾ ಸಮೃದ್ಧಿ, ಸಣ್ಣ ಉಳಿತಾಯ ಯೋಜನೆಗಳ ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದ ಬಡ್ಡಿದರ ಪ್ರಕಟ

ಪಿಪಿಎಫ್, ಸುಕನ್ಯಾ ಸಮೃದ್ಧಿ, ಸಣ್ಣ ಉಳಿತಾಯ ಯೋಜನೆಗಳ ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದ ಬಡ್ಡಿದರ ಪ್ರಕಟ

ಸಣ್ಣ ಉಳಿತಾಯ ಮಾಡುತ್ತಿರುವವರು ಬಹಳ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ವಿಷಯ ಇದು. ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆಗಳು ಸೇರಿ ಎಲ್ಲ ಸಣ್ಣ ಉಳಿತಾಯ ಯೋಜನೆಗಳ ಅಕ್ಟೋಬರ್-ಡಿಸೆಂಬರ್ 2024 ತ್ರೈಮಾಸಿಕದ ಬಡ್ಡಿದರಗಳು ಪ್ರಕಟವಾಗಿವೆ. ಆ ವಿವರ ಇಲ್ಲಿದೆ.

ಪಿಪಿಎಫ್, ಸುಕನ್ಯಾ ಸಮೃದ್ಧಿ, ಸಣ್ಣ ಉಳಿತಾಯ ಯೋಜನೆಗಳ ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದ ಬಡ್ಡಿದರ ಪ್ರಕಟವಾಗಿದೆ. (ಸಾಂಕೇತಿಕ ಚಿತ್ರ)
ಪಿಪಿಎಫ್, ಸುಕನ್ಯಾ ಸಮೃದ್ಧಿ, ಸಣ್ಣ ಉಳಿತಾಯ ಯೋಜನೆಗಳ ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದ ಬಡ್ಡಿದರ ಪ್ರಕಟವಾಗಿದೆ. (ಸಾಂಕೇತಿಕ ಚಿತ್ರ)

ನವದೆಹಲಿ: ಪಿಪಿಎಫ್‌, ಸುಕನ್ಯಾ ಸಮೃದ್ಧಿ ಸೇರಿ ಎಲ್ಲ ಸಣ್ಣ ಉಳಿತಾಯ ಯೋಜನೆಗಳ ಅಕ್ಟೋಬರ್-ಡಿಸೆಂಬರ್ 2024 ರ ತ್ರೈಮಾಸಿಕದ ಬಡ್ಡಿದರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ (ಪಿಪಿಎಫ್‌), ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ), ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್‌), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ), ಪೋಸ್ಟ್ ಆಫೀಸ್ ಸಮಯ ಠೇವಣಿಗಳು (ಪಿಒಟಿಡಿ), ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ, ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್‌) , ಅವಧಿ ಠೇವಣಿಗಳು ಮತ್ತು ಇತರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಇದರಲ್ಲಿ ಸೇರಿಕೊಂಡಿದೆ. ಕೇಂದ್ರ ಸರ್ಕಾರದ ಸುತ್ತೋಲೆ ಪ್ರಕಾರ, 2024ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಿರುವ ಬಡ್ಡಿದರವೇ ಡಿಸೆಂಬರ್ ತನಕವೂ ಮುಂದುವರಿಯಲಿದೆ. ಕೇಂದ್ರ ಹಣಕಾಸು ಸಚಿವಾಲಯ ಈ ಸಂಬಂಧ ಸೋಮವಾರ (ಸೆಪ್ಟೆಂಬರ್ 30) ಹೇಳಿಕೆ ಬಿಡುಗಡೆ ಮಾಡಿದ್ದು, “2024-25 ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಅಂದರೆ ಅಕ್ಟೋಬರ್ 1ರಿಂದ ಶುರುವಾಗಿ ಡಿಸೆಂಬರ್ 31ಕ್ಕೆ ಕೊನೆಯಾಗುವ ಅವಧಿಗೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಎರಡನೇ ತ್ರೈಮಾಸಿಕಕ್ಕೆ ಸೂಚಿಸಲಾದ ಬಡ್ಡಿದರವೇ ಆಗಿರಲಿದ್ದು, ಬದಲಾಗದೆ ಉಳಿಯುತ್ತವೆ” ಎಂದು ತಿಳಿಸಿದೆ.

ಸುಕನ್ಯಾ ಸಮೃದ್ಧಿ, ಪಿಪಿಎಎಫ್‌, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ವಿವರ

1) ಸುಕನ್ಯಾ ಸಮೃದ್ಧಿ ಖಾತೆ ಯೋಜನೆ (ಎಸ್‌ಎಸ್‌ವೈ): ಬಡ್ಡಿ ದರ ವಾರ್ಷಿಕ ಶೇಕಡ 8.2

2) ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್‌): ಬಡ್ಡಿ ದರ ವಾರ್ಷಿಕ ಶೇಕಡ 8.2

3) ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌): ಬಡ್ಡಿ ದರ ವಾರ್ಷಿಕ ಶೇಕಡ 7.1

4) ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (ಎನ್‌ಎಸ್‌ಸಿ): ಬಡ್ಡಿದರ ವಾರ್ಷಿಕ ಶೇಕಡ 7.7

5) ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್‌): ಬಡ್ಡಿದರ ವಾರ್ಷಿಕ ಶೇಕಡ 7.4

6) ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ: ಬಡ್ಡಿ ದರ ವಾರ್ಷಿಕ ಶೇಕಡ 7.5

7) ಅಂಚೆ ಕಚೇರಿಯ ಆರ್‌ಡಿ ಖಾತೆ: ಬಡ್ಡಿದರ ವಾರ್ಷಿಕ ಶೇಕಡ 6.7

ಹಿಂದೆ ಬಡ್ಡಿದರ ಪರಿಷ್ಕರಣೆ ಆಗಿದ್ದು ಯಾವಾಗ

ಕೇಂದ್ರ ಸರ್ಕಾರವು ಪಿಪಿಎಫ್‌, ಸುಕನ್ಯಾ ಸಮೃದ್ಧಿ ಸೇರಿ ಎಲ್ಲ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೊನೆಯದಾಗಿ ಪರಿಷ್ಕರಿಸಿದ್ದು 2023ರ ಡಿಸೆಂಬರ್ 31ಕ್ಕೆ. ಅದರ ನಂತರ ಬಡ್ಡಿದರ ಸ್ಥಿರವಾಗಿ ಉಳಿದಿದೆ. ಹಿಂದಿನ ತ್ರೈಮಾಸಿಕದಲ್ಲಿ ಪಿಪಿಎಫ್‌ ಬಡ್ಡಿದರ ಶೇಕಡ 7.1ರಲ್ಲೇ ಸ್ಥಿರವಾಗಿತ್ತು. ಅದು ಈ ತ್ರೈಮಾಸಿಕ್ಕಕೂ ಹಾಗೆಯೇ ಮುಂದುವರಿಯಲಿದೆ.

ಕೇಂದ್ರ ಸರ್ಕಾರವು 2020-2021 ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಿಂದ ವ್ಯಾಪಕವಾಗಿ ಒಲವು ಹೊಂದಿರುವ ಸಾರ್ವಜನಿಕ ಭವಿಷ್ಯ ನಿಧಿಗೆ ಬಡ್ಡಿದರವನ್ನು ಸ್ಥಿರವಾಗಿ ಇರಿಸಿದೆ. ಆ ಸಂದರ್ಭದಲ್ಲಿ ಅದನ್ನು 7.9 ಪ್ರತಿಶತದಿಂದ 7.1 ಪ್ರತಿಶತಕ್ಕೆ ಪರಿಷ್ಕರಿಸಲಾಯಿತು. ಅನೇಕ ಸಣ್ಣ ಉಳಿತಾಯ ಹೂಡಿಕೆದಾರರು ಈ ಯೋಜನೆಯಲ್ಲಿ ಹೂಡಿಕೆ ಮಾಡಿರುವ ಕಾರಣ ಬಡ್ಡಿದರದಲ್ಲಿ ಹೆಚ್ಚಳಕ್ಕಾಗಿ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುವುದು ಸಹಜ.

ಈ ಎಲ್ಲ ಸಣ್ಣ ಉಳಿತಾಯ ಯೋಜನೆಗಳನ್ನು ಅಂಚೆ ಕಚೇರಿಯ ಮೂಲಕ ನಿರ್ವಹಿಸಲಾಗುತ್ತಿದೆ. ಈ ಯೋಜನೆಗಳಿಗೆ ಕೇಂದ್ರ ಸರ್ಕಾರದ ಪ್ರಾಯೋಜಕತ್ವ ಇದ್ದು, ಸಾರ್ವಭೌಮ ಖಾತರಿಯನ್ನು ಖಾತರಿಪಡಿಸುತ್ತದೆ. ಹೀಗಾಗಿ ಸಣ್ಣ ಉಳಿತಾಯ ಹೂಡಿಕೆದಾರರ ವಿಶ್ವಾಸಾರ್ಹ ಹೂಡಿಕೆ ಯೋಜನೆಗಳಾಗಿ ಪಿಪಿಎಫ್, ಸುಕನ್ಯಾ ಸಮೃದ್ಧಿ ಸೇರಿ ಈ ಎಲ್ಲ ಯೋಜನೆಗಳು ಮುಂದುವರಿದಿವೆ.

Whats_app_banner