Wedding Expense; ಅಬ್ಬಾ ಇಷ್ಟೊಂದಾ! ನನ್ನ ಮಗಳಿಗೆ ಈಗ 5 ವರ್ಷ ಅವಳಿಗೆ 25 ವರ್ಷವಾಗುವಾಗ ಮದುವೆ ಮಾಡಲು ಎಷ್ಟು ಖರ್ಚಾಗಬಹುದು?
Wedding Expense after 20 years; ಹೆಣ್ಣು ಹೆತ್ತವರು ಸಹಜವಾಗಿಯೆ ಮಗಳ ಮದುವೆಗೆ ಬಹಳ ಮುಂಚಿತವಾಗಿ ಹಣ ಕೂಡಿಡಲಾರಂಭಿಸುತ್ತಾರೆ. ಮಗಳಿಗೆ ಈಗ 5 ವರ್ಷ. ಹಾಗಾದರೆ, 2044ರಲ್ಲಿ ಮದುವೆ ಖರ್ಚು ಎಷ್ಟಾಗಬಹುದು, ಈಗ ಎಷ್ಟಿದೆ ಎಂದು ಪ್ರತಿ ವರ್ಷ ಪರಿಶೀಲಿಸುವುದು ವಾಡಿಕೆ. ಅಂತಹ ಒಂದು ಲೆಕ್ಕಾಚಾರ ಇಲ್ಲಿದೆ.
ಬಹುತೇಕ ಹೆಣ್ಣು ಹೆತ್ತ ಪಾಲಕರು ತಮ್ಮ ಮಗಳ ಭವಿಷ್ಯಕ್ಕಾಗಿ ವಿಶೇಷವಾಗಿ ಮದುವೆ ವಿಚಾರದಲ್ಲಿ ಬಹಳ ಮುಂಚಿತವಾಗಿಯೆ ಯೋಜನೆ ರೂಪಿಸುತ್ತಾರೆ. ವಿಷಯ ಇಷ್ಟೆ - ಖರ್ಚು ವೆಚ್ಚಗಳನ್ನು ನಿಭಾಯಿಸಬೇಕಲ್ಲ. ಅದಕ್ಕಾಗಿ ಈ ಎಲ್ಲ ಕಸರತ್ತುಗಳು. ಇದರಲ್ಲಿ ಹೆಣ್ಮಗುವಿನ ಭವಿಷ್ಯವಷ್ಟೇ ಅಲ್ಲ, ವೈಯಕ್ತಿಕ ಹಣಕಾಸು ನಿರ್ವಹಣೆ, ಪಾಲನಾ ಯೋಜನೆ ಸೇರಿ ಎಲ್ಲವೂ ಒಳಗೊಂಡಿದೆ. ಉದಾಹರಣೆಗೆ ನನಗೊಬ್ಬ 5 ವರ್ಷದ ಮಗಳಿದ್ದಾಳೆ ಎಂದಿಟ್ಟುಕೊಳ್ಳೋಣ. ಆಕೆಯ 25 ನೇ ವಯಸ್ಸಿಗೆ, ಅಂದರೆ ಇನ್ನು 20 ವರ್ಷಕ್ಕೆ ಆಕೆಗೆ ಮದುವೆ ಮಾಡಿಸಬೇಕು. ಈಗ ಇರುವ ಹಣದುಬ್ಬರ ಪರಿಸ್ಥಿತಿ ಖರ್ಚು ವೆಚ್ಚದ ಲೆಕ್ಕಾಚಾರದಲ್ಲಿ ಗಮನಿಸುವಾಗ ಇನ್ನು 20 ವರ್ಷಕ್ಕೆ ಎಷ್ಟು ಮದುವೆ ಖರ್ಚಿಗಾಗಿ ಕೂಡಿಡಬೇಕು? ವೈಯಕ್ತಿಕ ಹಣಕಾಸು ನಿರ್ವಹಣೆಯಲ್ಲಿ ನಾನು ನನ್ನ ಆದಾಯದಲ್ಲಿ ಎಷ್ಟು ಹಣ ಕೂಡಿಡಲಾರಂಭಿಸಬೇಕು ಎಂಬಿತ್ಯಾದಿ ಪ್ರಶ್ನೆಗಳು ಕಾಡುವುದು ಸಹಜ.
ಈಗ ಮೊದಲಿನಂತೆ ಲೆಕ್ಕಾಚಾರ ಹಾಕಲು ತಲೆಕೆಡಿಸಿಕೊಳ್ಳಬೇಕಾದ್ದಿಲ್ಲ. ಕ್ಷಣ ಮಾತ್ರದಲ್ಲಿ ಎಲ್ಲ ಲೆಕ್ಕ ಹಾಕಿ ವೈಯಕ್ತಿಕ ಹಣಕಾಸು ನಿರ್ವಹಣೆಗೆ ಮುನ್ನಂದಾಜಿನ ಪ್ರಕಾರವೇ ಯೋಜನೆ ರೂಪಿಸಿಕೊಳ್ಳಬಹುದು. ತೀರಾ ಕನಿಷ್ಠ ಮಟ್ಟದಲ್ಲಿ ಲೆಕ್ಕ ಹಾಕಿದರೂ ಸರಾಸರಿ ಮೂರು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಬಹುದು. ಅಂದರೆ ಈಗ ಒಂದು ಮದುವೆಗೆ 20 ಲಕ್ಷ ರೂಪಾಯಿ ಖರ್ಚಾಗುತ್ತಿದ್ದರೆ, ಇಲ್ಲಿಗೆ 20 ವರ್ಷಗಳ ನಂತರ ಇದನ್ನು 60 ಲಕ್ಷ ಎಂದು ಇಟ್ಟುಕೊಳ್ಳಬಹುದು. ನೆನಪಿರಲಿ, ಇದು ಆರ್ಥಿಕವಾಗಿ ಬಲಾಢ್ಯರ ಕುಟುಂಬದ ಲೆಕ್ಕವನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಲೆಕ್ಕಾಚಾರವಲ್ಲ. ಸಾದಾಸೀದ ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಲೆಕ್ಕಾಚಾರ. ಇದು ಒಂದು ಸರಾಸರಿ ಚಿತ್ರಣ ಕೊಡಬಹುದು ಅಷ್ಟೇ.
ಪ್ರಸಕ್ತ ವರ್ಷ (2024) ಮದುವೆ ವೆಚ್ಚ ಎಷ್ಟಾಗುತ್ತೆ?
ಭಾರತೀಯ ರಿಸರ್ವ್ ಬ್ಯಾಂಕ್ ದತ್ತಾಂಶ ಪ್ರಕಾರ, 2024ರ ಜುಲೈನಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇಕಡ 3.54ಕ್ಕೆ ಇಳಿದಿದೆ. ಈ ಪೈಕಿ ನಗರ ಪ್ರದೇಶದಲ್ಲಿ ಇದು ಶೇಕಡ 2.98ಕ್ಕೆ ಇಳಿದರೆ, ಗ್ರಾಮಾಂತರದಲ್ಲಿ ಶೇಕಡ 4.10ಕ್ಕೆ ಏರಿದೆ. ಮದುವೆಯಂತಹ ಪ್ರಮುಖ ಖರ್ಚುಗಳನ್ನು ಒಳಗೊಂಡ ಕಾರ್ಯಕ್ರಮಗಳ ಮೇಲೆ ಹಣದುಬ್ಬರ ಪ್ರಮಾಣ ಪರಿಣಾಮ ಬೀರುತ್ತದೆ. ಹೀಗಾಗಿ ಈ ಅಂಕಿ ಅಂಶ ನಿರ್ಣಾಯಕ.
ಬಜಾಜ್ ಫಿನ್‌ಸರ್ವ್ 2024ರ ಆಗಸ್ಟ್ 23ಕ್ಕೆ ಅಪ್ಡೇಟ್ ಮಾಡಿದ ಮಾಹಿತಿ ಪ್ರಕಾರ, ಭಾರತೀಯ ಮದುವೆಯ ಸರಾಸರಿ ವೆಚ್ಚವು 5 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿ. ಇದು ಮದುವೆ ಎಲ್ಲಿ ಮಾಡುತ್ತಾರೆ, ಎಷ್ಟು ಸರಳವಾಗಿ ಅಥವಾ ಅದ್ದೂರಿಯಾಗಿ ಮಾಡುತ್ತಾರೆ ಎಂಬುದನ್ನು ಅವಲಂಬಿಸಿದೆ. ಹಾಲ್ ಬಾಡಿಗೆ, ಉಡುಪು, ಅಡುಗೆ, ಆಭರಣ ಮತ್ತು ಛಾಯಾಗ್ರಹಣದಂತಹ ವಿವಿಧ ಖರ್ಚು ವೆಚ್ಚವನ್ನು ಒಳಗೊಂಡಿದೆ. ದೊಡ್ಡ ಮಟ್ಟಿನ ಮದುವೆ ಎಂದಾದರೆ ಕನಿಷ್ಠ 50 ಲಕ್ಷ ರೂಪಾಯಿ ಖರ್ಚು ಖಚಿತ.
ಪ್ರಸ್ತುತ ಮದುವೆ ಖರ್ಚು ವೆಚ್ಚ ವಿಂಗಡಣೆ
ಮದುವೆಯ ಸ್ಥಳ (ಹಾಲ್) ಮತ್ತು ಅಲಂಕಾರ: 2 - 10 ಲಕ್ಷ ರೂ
ಉಡುಪುಗಳು: ಒಟ್ಟು ಬಜೆಟ್‌ನ 15-20 ಪ್ರತಿಶತ, 1 - 5 ಲಕ್ಷ ರೂಪಾಯಿ
ಅಡುಗೆ: ಎಲೆ/ತಟ್ಟೆಗೆ 500 ರೂಪಾಯಿಯಿಂದ 2,500 ರೂಪಾಯಿ (300 ಅತಿಥಿಗಳಿದ್ದರೆ 1.5 ಲಕ್ಷ ರೂ.ನಿಂದ 7.5 ಲಕ್ಷ ರೂಪಾಯಿ)
ಆಭರಣ: 2 - 10 ಲಕ್ಷ ರೂಪಾಯಿ ಅಥವಾ ಹೆಚ್ಚು
ಛಾಯಾಗ್ರಹಣ: 50,000 ರೂಪಾಯಿಯಿಂದ 3 ಲಕ್ಷ ರೂಪಾಯಿ
ಈ ಲೆಕ್ಕಾಚಾರದಲ್ಲಿ 2044ರಲ್ಲಿ ಮದುವೆ ಖರ್ಚು ಎಷ್ಟಾಗಬಹುದು
ಈ ಲೆಕ್ಕಾಚಾರವನ್ನು ಇಟ್ಟುಕೊಂಡೇ ಇನ್ನು 20 ವರ್ಷ ನಂತರದ ಲೆಕ್ಕಾಚಾರ ಹಾಕಬೇಕಷ್ಟೆ. ಪ್ರಸ್ತುತ ಚಾಲ್ತಿಯಲ್ಲಿರುವ ಹಣಕಾಸು ಲೆಕ್ಕಗಳು ಬಹಳ ಮಹತ್ವ ಪಡೆಯುತ್ತವೆ. ಅದೇ ರೀತಿ ನಿರ್ಣಾಯಕ ಕೂಡ. ವಾರ್ಷಿಕ ಶೇಕಡ 6 ಹಣದುಬ್ಬರ ಪ್ರಕಾರ 20 ವರ್ಷದಲ್ಲಿ ಖರ್ಚು ವೆಚ್ಚಗಳು ಎಷ್ಟು ಹೆಚ್ಚಾಗಬಹುದು ಎಂಬುದನ್ನು ಅಂದಾಜು ಮಾಡೋಣ. ಇದು ನಮ್ಮ ವೈಯಕ್ತಿಕ ಹಣಕಾಸು ಯೋಜನೆಗೆ ಸ್ಪಷ್ಟ ಚಿತ್ರಣ ಒದಗಿಸೀತು.
2044ರ ಮದುವೆ ಖರ್ಚು - ಮುನ್ನಂದಾಜಿನ ಲೆಕ್ಕಾಚಾರ
1) ಮದುವೆ ಹಾಲ್ ಮತ್ತು ಅಲಂಕಾರ
ಪ್ರಸ್ತುತ ದರ - 2 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ
20 ವರ್ಷದ ನಂತರ ಇದು - 6.4 ಲಕ್ಷ ರೂಪಾಯಿಯಿಂದ 32.3 ಲಕ್ಷ ರೂಪಾಯಿ
2) ಉಡುಪು ಖರೀದಿಗೆ ಎಷ್ಟು ಬೇಕಾಗಬಹುದು?
ಪ್ರಸ್ತುತ ವೆಚ್ಚ - 1 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿ
ಮುನ್ನಂದಾಜು ಲೆಕ್ಕ - 3.2 ಲಕ್ಷ ರೂಪಾಯಿಯಿಂದ 16.1 ಲಕ್ಷ ರೂಪಾಯಿ
3) ಅಡುಗೆ (ಕೆಟರಿಂಗ್)
ಪ್ರಸ್ತುತ ದರ ಒಂದು ಎಲೆ/ ತಟ್ಟೆ - 500 ರೂಪಾಯಿಯಿಂದ 2,500 ರೂಪಾಯಿ
ಮುನ್ನಂದಾಜು ಲೆಕ್ಕ - 1,600 ರೂಪಾಯಿಯಿಂದ 8,100 ರೂಪಾಯಿ
300 ಅತಿಥಿಗಳನ್ನು ಆಹ್ವಾನಿಸಿದರೆ 4.8 ಲಕ್ಷ ರೂಪಾಯಿಯಿಂದ 24.3 ಲಕ್ಷ ರೂಪಾಯಿ
4) ಆಭರಣ ಖರೀದಿ
ಪ್ರಸ್ತುತ ಕನಿಷ್ಠ ವೆಚ್ಚ 2 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ
ಮುನ್ನಂದಾಜು ಲೆಕ್ಕ - 6.4 ಲಕ್ಷ ರೂಪಾಯಿಯಿಂದ 32.3 ಲಕ್ಷ ರೂಪಾಯಿ
5) ಛಾಯಾಗ್ರಹಣ ವಿಡಿಯೋ
ಪ್ರಸ್ತುತ ಕನಿಷ್ಠ ವೆಚ್ಚ 50,000 ರೂಪಾಯಿಯಿಂದ 3 ಲಕ್ಷ ರೂಪಾಯಿ
ಮುನ್ನಂದಾಜು ಲೆಕ್ಕ - 1.6 ಲಕ್ಷ ರೂಪಾಯಿಯಿಂದ 9.7 ಲಕ್ಷ ರೂಪಾಯಿ
ಇಲ್ಲಿ ಪ್ರಮುಖ ಖರ್ಚುಗಳನ್ನಷ್ಟೇ ಉಲ್ಲೇಖಿಸಲಾಗಿದೆ. ಈ ರೀತಿ ಲೆಕ್ಕಾಚಾರಗಳು ವೈಯಕ್ತಿಕ ಹಣಕಾಸು ಯೋಜನೆಗೆ, ಪೇರೆಂಟಿಂಗ್‌ಗೆ ನೆರವಾಗುವಂಥದ್ದು. ಇನ್ನು, 2024ರ ಜುಲೈಯಲ್ಲಿ ಆರ್‌ಬಿಐ ಬಿಡುಗಡೆ ಮಾಡಿದ ದತ್ತಾಂಶ ಪ್ರಕಾರ, ದಾಖಲಾದ ಕಡಿಮೆ ಹಣದುಬ್ಬರ ದರವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ನಿಧಾನಗತಿಯ ಹಣದುಬ್ಬರ ದರ ಹೆಚ್ಚಳವನ್ನು ಸೂಚಿಸುತ್ತದೆ. ಆದಾಗ್ಯೂ, ದೀರ್ಘಾವಧಿಯ ಗಮನಿಸುವಾಗ ಎರಡು ದಶಕಗಳಲ್ಲಿ ಸಂಚಿತ ಹಣದುಬ್ಬರ ಪರಿಣಾಮಗಳ ಕಾರಣ ವೆಚ್ಚದಲ್ಲಿ ಗಣನೀಯ ಹೆಚ್ಚಳವನ್ನು ನಿರೀಕ್ಷಿಸಬಹುದು. ಹೀಗಾಗಿಯೇ ಶೇಕಡ 6 ಹಣದುಬ್ಬರ ಪ್ರಮಾಣವನ್ನು ಮಾನದಂಡವಾಗಿ ತೆಗೆದುಕೊಂಡು ಲೆಕ್ಕ ಹಾಕಲಾಗಿದೆ.