Baby skincare: ಶಿಶುಗಳಲ್ಲಿ ದದ್ದುಗಳು, ಶುಷ್ಕತೆ ಉಂಟಾಗದಂತೆ ತಡೆಯಿರಿ: ಮಗುವಿನ ಚರ್ಮವನ್ನು ರಕ್ಷಿಸಲು ಇಲ್ಲಿದೆ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  Baby Skincare: ಶಿಶುಗಳಲ್ಲಿ ದದ್ದುಗಳು, ಶುಷ್ಕತೆ ಉಂಟಾಗದಂತೆ ತಡೆಯಿರಿ: ಮಗುವಿನ ಚರ್ಮವನ್ನು ರಕ್ಷಿಸಲು ಇಲ್ಲಿದೆ ಟಿಪ್ಸ್

Baby skincare: ಶಿಶುಗಳಲ್ಲಿ ದದ್ದುಗಳು, ಶುಷ್ಕತೆ ಉಂಟಾಗದಂತೆ ತಡೆಯಿರಿ: ಮಗುವಿನ ಚರ್ಮವನ್ನು ರಕ್ಷಿಸಲು ಇಲ್ಲಿದೆ ಟಿಪ್ಸ್

ಪೋಷಕರು ಶಿಶುವಿನ ಚರ್ಮದ ಆರೈಕೆಗೆ ಪ್ರಾಮುಖ್ಯತೆ ನೀಡದಿದ್ದರೆ ಮಗು ವಿವಿಧ ಚರ್ಮದ ಸಮಸ್ಯೆಗಳನ್ನು ಎದುರಿಸಬಹುದು.ಮಗುವಿನ ಆರೋಗ್ಯದ ದೃಷ್ಟಿಯಿಂದ ತ್ವಚೆಯ ಕಾಳಜಿ ಮಾಡುವುದು ಬಹಳ ಮುಖ್ಯ.ಶಿಶುವಿನಚರ್ಮವನ್ನು ರಕ್ಷಿಸಲು ಮತ್ತು ಪೋಷಿಸಲು ಇಲ್ಲಿ ನೀಡಲಾಗಿರುವ ಸಲಹೆಗಳನ್ನು ಪಾಲಿಸಬಹುದು.

ಶಿಶುವಿನ ಚರ್ಮವನ್ನು ರಕ್ಷಿಸಲು ಮತ್ತು ಪೋಷಿಸಲು ಇಲ್ಲಿದೆ ಸಲಹೆ.
ಶಿಶುವಿನ ಚರ್ಮವನ್ನು ರಕ್ಷಿಸಲು ಮತ್ತು ಪೋಷಿಸಲು ಇಲ್ಲಿದೆ ಸಲಹೆ. (freepik)

ವಯಸ್ಕರಿಗಿಂತ ಶಿಶುಗಳು ಹೆಚ್ಚು ಸೂಕ್ಷ್ಮವಾದ ಚರ್ಮವನ್ನು ಹೊಂದಿರುತ್ತವೆ. ಮಗುವಿನ ಚರ್ಮದ ಆರೈಕೆ ಬಹಳ ಸೂಕ್ಷ್ಮವಾಗಿರುತ್ತದೆ. ಸರಿಯಾದ ಉತ್ಪನ್ನಗಳನ್ನು ಬಳಸದಿದ್ದಲ್ಲಿ ದದ್ದುಗಳು, ಶುಷ್ಕತೆ ಮತ್ತು ಕಿರಿಕಿರಿಯು ಇರುವುದು ಸಾಮಾನ್ಯ. ಹೀಗಾಗಿ ಮಗುವಿನ ಆರೋಗ್ಯದ ದೃಷ್ಟಿಯಿಂದ ತ್ವಚೆಯ ಕಾಳಜಿ ಮಾಡುವುದು ಬಹಳ ಮುಖ್ಯ. ಶಿಶುಗಳಲ್ಲಿ ರೋಗನಿರೋಧಕ ಶಕ್ತಿಯೂ ಕಡಿಮೆಯಿರುತ್ತದೆ. ನೈರ್ಮಲ್ಯವನ್ನು ಕಾಪಾಡದಿದ್ದರೆ ಇದು ಸೋಂಕುಗಳಿಗೆ ಕಾರಣವಾಗಬಹುದು. ಪೋಷಕರು ಶಿಶುವಿನ ಚರ್ಮದ ಆರೈಕೆಗೆ ಪ್ರಾಮುಖ್ಯತೆ ನೀಡದಿದ್ದರೆ ವಿವಿಧ ಚರ್ಮದ ಸಮಸ್ಯೆಗಳನ್ನು ಎದುರಿಸಬಹುದು. ಶಿಶುವಿನ ಚರ್ಮವನ್ನು ರಕ್ಷಿಸಲು ಮತ್ತು ಪೋಷಿಸಲು ಇಲ್ಲಿ ನೀಡಲಾಗಿರುವ ಸಲಹೆಗಳನ್ನು ಪಾಲಿಸಬಹುದು.

ಶಿಶುವಿನ ಚರ್ಮವನ್ನು ಪೋಷಿಸುವ ಸಲಹೆಗಳು

ಎಚ್ಚರಿಕೆಯಿಂದ ಸ್ನಾನ ಮಾಡಿಸಿ: ಶಿಶುಗಳು ಸೂಕ್ಷ್ಮ ಚರ್ಮವನ್ನು ಹೊಂದಿರವುದರಿಂದ ಸುಗಂಧ ರಹಿತ ಸಾಬೂನ್ ಅನ್ನು ಬಳಸುವುದು ಉತ್ತಮ. ಅವು ಕಿರಿಕಿರಿಯನ್ನು ಉಂಟುಮಾಡುವ ಸಾಧ್ಯತೆ ಕಡಿಮೆ. ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಬೇಕು ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಯಾಕೆಂದರೆ ಬಿಸಿನೀರು ಚರ್ಮದಿಂದ ನೈಸರ್ಗಿಕ ತೈಲಗಳನ್ನು ತೆಗೆದುಹಾಕಬಹುದು. ಇದು ಶುಷ್ಕತೆಗೆ ಕಾರಣವಾಗುತ್ತದೆ. ಅಲ್ಲದೆ, ಪ್ರತಿದಿನ ಸ್ನಾನ ಮಾಡಿಸುವ ಅಗತ್ಯವಿಲ್ಲ. ಇದು ಶಿಶುವಿನ ಚರ್ಮವನ್ನು ಒಣಗಿಸಬಹುದು. ಮಗುವನ್ನು ವಾರಕ್ಕೆ ಮೂರು ಅಥವಾ ನಾಲ್ಕು ಬಾರಿ ಮಾತ್ರ ಸ್ನಾನ ಮಾಡಿಸಬಹುದು. ಈ ವೇಳೆ ಮಗು ಮೂತ್ರ ಮಾಡುವ ಸ್ಥಳದಲ್ಲಿ, ಚರ್ಮದ ಮಡಿಕೆಗಳತ್ತ ಸ್ವಚ್ಛತೆ ಮಾಡುವುದು ಬಹಳ ಮುಖ್ಯ. ಇಲ್ಲದಿದ್ದಲ್ಲಿ ದದ್ದುಗಳುಂಟಾಗಬಹುದು.

ಮಾಯಿಶ್ಚರೈಸ್: ಸ್ನಾನದ ನಂತರ, ಮಗುವಿನ ಚರ್ಮ ತೇವಾಂಶ ಇರುವುದರಿಂದ ತೇವಗೊಳಿಸುವುದು ಅತ್ಯಗತ್ಯ. ಸುಗಂಧ ಮತ್ತು ಕಠಿಣ ರಾಸಾಯನಿಕಗಳಿಂದ ಮುಕ್ತವಾದ ಸೌಮ್ಯವಾದ, ಮಗುವಿಗೆಂದೇ ಇರುವ ನಿರ್ದಿಷ್ಟವಾದ ಮಾಯಿಶ್ಚರೈಸರ್ ಅನ್ನು ಬಳಸಿ. ಮಾಯಿಶ್ಚರೈಸಿಂಗ್ ತೇವಾಂಶವನ್ನು ತಡೆಯಲು, ಶುಷ್ಕತೆಯನ್ನು ತಡೆಯಲು ಮತ್ತು ಚರ್ಮವನ್ನು ಮೃದುವಾಗಿರಿಸಲು ಸಹಾಯ ಮಾಡುತ್ತದೆ.

ಡೈಪರ್ ಬದಲಾವಣೆ: ಮಗುವಿನ ಖಾಸಗಿ ಭಾಗಗಳ ಮೇಲೆ ಡೈಪರ್ ರ್ಯಾಶ್‌ಗಳನ್ನು ತಡೆಗಟ್ಟಲು ಡೈಪರ್‌ಗಳನ್ನು ಆಗಾಗ ಬದಲಾಯಿಸುವುದು ಬಹಳ ಮುಖ್ಯ. ಕೊಳಕು ಅಥವಾ ಒದ್ದೆಯಾದ ಡೈಪರ್ ಚರ್ಮಕ್ಕೆ ಕಿರಿಕಿರಿ ಉಂಟು ಮಾಡಬಹುದು. ಇದು ದದ್ದುಗಳು ಮತ್ತು ಅಸ್ವಸ್ಥತೆಗೆ ಕಾರಣವಾಗುತ್ತದೆ. ಸತು ಆಕ್ಸೈಡ್ ಹೊಂದಿರುವ ಡೈಪರ್ ರಾಶ್ ಕ್ರೀಮ್ ಅನ್ನು ಬಳಸಿ. ಇದು ತೇವಾಂಶದ ವಿರುದ್ಧ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಕಿರಿಕಿರಿಗೊಂಡ ಚರ್ಮವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಚರ್ಮವು ಉಸಿರಾಡಲು ಮತ್ತು ದದ್ದುಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಡೈಪರ್ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ.

ಮೃದುವಾದ ಬಟ್ಟೆಗಳನ್ನು ಆರಿಸಿ: ಹತ್ತಿಯಂತಹ ಮೃದುವಾದ ಬಟ್ಟೆಗಳ್ನನು ಶಿಶುಗಳಿಗೆ ಧರಿಸುವುದು ಮುಖ್ಯ. ಏಕೆಂದರೆ ಈ ವಸ್ತುಗಳು ಚರ್ಮದ ಮೇಲೆ ಮೃದುವಾಗಿರುತ್ತವೆ ಮತ್ತು ಸರಿಯಾದ ಗಾಳಿಯ ಪ್ರಸರಣವನ್ನು ಅನುಮತಿಸುತ್ತದೆ. ಮಗುವಿಗೆ ಹೊಸ ಉಡುಪನ್ನು ಹಾಕುವ ಮೊದಲು ಬಟ್ಟೆಗಳನ್ನು ತೊಳೆದು, ಒಣಗಿಸಿ ಬಳಿಕ ಹಾಕಬೇಕು. ಶಿಶುಗಳಿಗೆಂದೇ ಇರುವ ಸಾಬೂನುಗಳನ್ನು ಬಳಸಬಹುದು.

ಸೂರ್ಯನ ರಕ್ಷಣೆ: ಶಿಶುಗಳ ಚರ್ಮವು ಸೂರ್ಯನ ನೇರಳಾತೀತ (UV) ಕಿರಣಗಳಿಗೆ ಬಹಳ ಸೂಕ್ಷ್ಮವಾಗಿರುತ್ತದೆ. ವಯಸ್ಕರಂತೆ, ಶಿಶುಗಳು ಸಹ ನೇರ ಸೂರ್ಯನ ಬೆಳಕಿನಿಂದ ದೂರವಿರಬೇಕು. ವಿಶೇಷವಾಗಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗಿನ ಸಮಯದಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಸೂರ್ಯನ ಕಠಿಣ ಕಿರಣಗಳಿಂದ ಶಿಶುಗಳ ಚರ್ಮವನ್ನು ರಕ್ಷಿಸಲು ಟೋಪಿ ಹಾಗೂ ರಕ್ಷಣಾತ್ಮಕ ಬಟ್ಟೆಗಳನ್ನು ಬಳಸಿ. ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸನ್‌ಸ್ಕ್ರೀನ್ ಬಳಸಬಾರದು.

ಒಗೆಯುವ ಬಟ್ಟೆಯತ್ತ ಇರಲಿ ಕಾಳಜಿ: ಶಿಶುವಿನ ಬಟ್ಟೆಗಳು, ಹಾಸಿಗೆ ಮತ್ತು ಹೊದಿಕೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸೌಮ್ಯವಾದ, ಸುಗಂಧ-ಮುಕ್ತ ಸಾಬೂನ್ ಅಥವಾ ಡಿಟರ್ಜೆಂಟ್ ಅನ್ನು ಬಳಸಿ. ಈ ಡಿಟರ್ಜೆಂಟ್‌ಗಳು ಮಗುವಿನ ಚರ್ಮವನ್ನು ಕೆರಳಿಸುವ ಕಠಿಣ ರಾಸಾಯನಿಕಗಳನ್ನು ಒಳಗೊಂಡಿರುವ ಸಾಧ್ಯತೆ ಕಡಿಮೆ. ಬೇರೆಯವರಿಗೆ ಲಾಂಡ್ರಿ ಕೊಡಬಾರದು. ಸ್ವತಃ ನೀವೇ ಬಟ್ಟೆ ಒಗೆಯಬೇಕು, ಇಲ್ಲವೇ ವಾಷಿಂಗ್ ಮೆಷಿನ್ ಹಾಕಬಹುದು.

ಕೈಗಳು ಸ್ವಚ್ಛವಾಗಿರಲಿ: ಶಿಶುವನ್ನು, ವಿಶೇಷವಾಗಿ ಮುಖವನ್ನು ಮುಟ್ಟುವ ಮೊದಲು ಕೈಗಳನ್ನು ತೊಳೆಯಬೇಕು. ಕೈಗಳಲ್ಲಿರುವ ತೈಲಗಳು, ಕೊಳಕು ಮತ್ತು ಬ್ಯಾಕ್ಟೀರಿಯಾಗಳಿಗೆ ಶಿಶುಗಳ ಚರ್ಮವು ಒಳಗಾಗುತ್ತದೆ. ಇದು ಚರ್ಮದ ಸಮಸ್ಯೆಗಳು ಅಥವಾ ಸೋಂಕುಗಳಿಗೆ ಕಾರಣವಾಗಬಹುದು. ನಿಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ.

ನಿರಂತರವಾಗಿ ಗಮನಿಸುತ್ತಿರಿ: ಕಿರಿಕಿರಿ, ಶುಷ್ಕತೆ ಅಥವಾ ಅಸಾಮಾನ್ಯ ದದ್ದುಗಳ ಯಾವುದೇ ಲಕ್ಷಣಗಳು ಕಂಡು ಬರುವ ಮುನ್ನವೇ ಶಿಶುವಿನ ಚರ್ಮವನ್ನು ನಿಯಮಿತವಾಗಿ ಪರಿಶೀಲಿಸುವುದು ಬಹಳ ಮುಖ್ಯ. ತೀವ್ರವಾದ ಚರ್ಮದ ಸಮಸ್ಯೆಗಳನ್ನು ಗಮನಿಸಿದರೆ, ಸೂಕ್ತ ಚಿಕಿತ್ಸೆ ಮತ್ತು ಸಲಹೆಗಾಗಿ ಮಕ್ಕಳ ವೈದ್ಯರನ್ನು ಸಂಪರ್ಕಿಸಬೇಕು.

Whats_app_banner