ಮಗುವಿಗೆ ಎದೆಹಾಲು ಉಣಿಸುವ ಸವಾಲನ್ನು ಉದ್ಯೋಗಸ್ಥ ತಾಯಿ ನಿಭಾಯಿಸುವುದು ಹೇಗೆ? ವರ್ಕಿಂಗ್ ಅಮ್ಮನಿಗೆ ಅಮೂಲ್ಯ 6 ಸಲಹೆ
ವೃತ್ತಿ ಜೀವನ ಹಾಗೂ ಮಗುವಿನ ಆರೈಕೆ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಒಂದು ಸವಾಲೇ ಹೌದು. ಉದ್ಯೋಗದ ಜೊತೆಗೆ ಮಗುವಿಗೆ ಹಾಲುಣಿಸುವುದನ್ನು ಸಮತೋಲನಗೊಳಿಸಬಹುದು. ಕೆಲಸಕ್ಕೆ ತೆರಳುವಾಗ ಮಗುವಿಗೆ ಹೇಗಪ್ಪಾ ಹಾಲುಣಿಸುವುದು ಎಂಬ ಚಿಂತೆ ಕಾಡಬಹುದು. ಅದಕ್ಕಾಗಿ ಇಲ್ಲಿದೆ ಸಲಹೆ.
ಉದ್ಯೋಗಕ್ಕೆ ಹೋಗುವ ಮಹಿಳೆಯರು ಹಲವು ಅಡೆತಡೆಗಳನ್ನೆದುರಿಸಿ ಕೆಲಸಕ್ಕೆ ತೆರಳಬೇಕಾದುದು ಸಾಮಾನ್ಯ. ಅದರಲ್ಲೂ ಹಾಲುಣಿಸುವ ತಾಯಂದಿರಿಗಂತೂ ಇದು ಸವಾಲೇ ಸರಿ. ಆದರೆ, ಕೆಲವೊಂದು ತಯಾರಿ ಹಾಗೂ ತಂತ್ರಗಳನ್ನು ಉಪಯೋಗಿಸಿ ಕೆಲಸ ಹಾಗೂ ಮಗು ಎರಡನ್ನೂ ಸಂಭಾಳಿಸಬಹುದು. ಮಗುವಿಗೆ ಹಾಲುಣಿಸುವ ಜವಾಬ್ದಾರಿ ಜೊತೆಗೆ ವೃತ್ತಿಪರ ಜವಾಬ್ದಾರಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು. ಉದ್ಯೋಗಕ್ಕೂ ತೆರಳಬೇಕು, ಮಗುವಿಗೂ ಹಾಲುಣಿಸಬೇಕು ಎಂದರೆ ಹೇಗೆ ನಿರ್ವಹಿಸುವುದು ಎಂದು ನೀವು ಚಿಂತಿಸುತ್ತಿರಬಹುದು ಅದಕ್ಕಾಗಿ ಇಲ್ಲಿದೆ ಸಲಹೆ:
ಕೆಲಸಕ್ಕೆ ಹೋಗುವ ತಾಯಂದಿರು ಮಗುವಿಗೆ ಹಾಲುಣಿಸುವುದು
ಸ್ತನ್ಯಪಾನ ವೇಳಾಪಟ್ಟಿ ಮಾಡಿ: ಕೆಲಸಕ್ಕೆ ಹೋಗುವ ಮುನ್ನ ಸ್ತನ್ಯಪಾನ ದಿನಚರಿಯನ್ನು ಸ್ಥಾಪಿಸಿ. ಇದು ಮಗುವಿಗೆ ಆಹಾರದ ಸಮಯವನ್ನು ಸರಿಹೊಂದಿಸಲು ಸಹಾಯ ಮಾಡುತ್ತದೆ. ಕೆಲಸಕ್ಕೆ ಹೊರಡುವ ಮೊದಲು ಮತ್ತು ಹಿಂದಿರುಗಿದ ತಕ್ಷಣ ಮಗುವಿಗೆ ಶುಶ್ರೂಷೆ ಮಾಡಲು ಪ್ರಯತ್ನಿಸಿ. ಹಾಲನ್ನು ದಿನವಿಡಿ ಪಂಪ್ ಮಾಡಿ ಸಂಗ್ರಹಿಸಿಟ್ಟುಕೊಳ್ಳಿ. ಇದರಿಂದ ಹಾಲು ತುಂಬಿ ನೋವಾಗದಂತೆಯೂ ತಡೆಯಬಹುದು, ಜೊತೆಗೆ ಮಗುವಿಗೆ ತಾಯಿ ಹಾಲನ್ನೇ ಪೂರೈಸಬಹುದು.
ಉತ್ತಮ ಗುಣಮಟ್ಟದ ಬ್ರಸ್ಟ್ ಪಂಪ್ ತೆಗೆದುಕೊಳ್ಳಿ: ಗುಣಮಟ್ಟದ ಬ್ರಸ್ಟ್ ಪಂಪ್ ತೆಗೆದುಕೊಳ್ಳುವುದು ಉತ್ತಮ. ಬ್ರಸ್ಟ್ ಪಂಪ್‍ಗೆ ಹೂಡಿಕೆ ಮಾಡುವುದರಿಂದ ಯಾವುದೇ ನಷ್ಟವಿಲ್ಲ. ಇದು ಆರಾಮದಾಯಕವಾಗಿದ್ದು, ಬಳಸಲೂ ಸುಲಭವಾಗಿದೆ. ಎಲೆಕ್ಟ್ರಿಕ್ ಪಂಪ್‍ಗಳು ಲಭ್ಯವಿದ್ದು, ಸಮಯ ಕಡಿಮೆಯಿದ್ದರೆ ಇದನ್ನು ಬಳಸಬಹುದು. ಆಗಾಗ ಪ್ರಯಾಣ ಬೆಳೆಸುವವರಾಗಿದ್ದರೆ ಪೋರ್ಟಬಲ್ ಪಂಪ್ ಅನ್ನು ಬಳಸಬಹುದು.
ಆರಾಮದಾಯಕ ಸ್ಥಳವನ್ನು ಹುಡುಕಿ: ಕಚೇರಿಯಲ್ಲಿ ಬ್ರಸ್ಟ್ ಪಂಪ್ ಮಾಡಬೇಕಾದ ನಿಮಗೆ ಆರಾಮದಾಯಕ ಸ್ಥಳವನ್ನು ಹುಡುಕಬಹುದು. ಕೆಲವು ಕಚೇರಿಗಳಲ್ಲಿ ಮಗುವಿಗೆ ಹಾಲುಣಿಸಲೆಂದೇ ಕೊಠಡಿಗಳನ್ನು ನೀಡಲಾಗುತ್ತದೆ. ಒಂದು ವೇಳೆ ಈ ಅವಕಾಶ ಇಲ್ಲದಿದ್ದಲ್ಲಿ ಮೇಲಾಧಿಕಾರಿಗಳ ಜೊತೆ ಮಾತನಾಡಿ ಕೊಠಡಿಯನ್ನು ನಿಗದಿಪಡಿಸಿಕೊಳ್ಳಬಹುದು.
ಹಾಲನ್ನು ಸುರಕ್ಷಿತವಾಗಿ ಸಂಗ್ರಹಿಸಿ: ಮಗು ಎದೆಹಾಲನ್ನು ಕುಡಿಯುವಾಗ ಹಾಲು ಶುದ್ಧವಾಗಿರುವುದು ಮುಖ್ಯ. ಇಲ್ಲದಿದ್ದಲ್ಲಿ ಮಗುವಿನ ಆರೋಗ್ಯಕ್ಕೆ ತೊಂದರೆಯಾಗಬಹುದು. ಮಗುವಿನ ಸುರಕ್ಷತೆಗಾಗಿ ಎದೆಹಾಲಿನ ಸರಿಯಾದ ಶೇಖರಣೆಯು ಮುಖ್ಯವಾಗಿದೆ. ಶುದ್ಧ ಬಾಟಲಿಗಳು ಅಥವಾ ಹಾಲು ಶೇಖರಣಾ ಬಾಟಲಿಗಳನ್ನು ಬಳಸಿ, ಅವುಗಳ ಮೇಲೆ ದಿನಾಂಕ ಹಾಗೂ ಸಮಯವನ್ನು ಲೇಬಲ್ ಮಾಡಬೇಕು. ಬಳಿಕ ಅದನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸಿಡಬೇಕು. ಹೊಸದಾಗಿ ಪಂಪ್ ಮಾಡಿದ ಹಾಲನ್ನು ಕೋಣೆಯ ಉಷ್ಣಾಂಶದಲ್ಲಿ ನಾಲ್ಕು ಗಂಟೆಗಳವರೆಗೆ, ರೆಫ್ರಿಜರೇಟರ್‌ನಲ್ಲಿ ನಾಲ್ಕು ದಿನಗಳವರೆಗೆ ಅಥವಾ ಫ್ರೀಜರ್‌ನಲ್ಲಿ ಆರು ತಿಂಗಳವರೆಗೆ ಸಂಗ್ರಹಿಸಬಹುದು.
ಮೇಲಾಧಿಕಾರಿಗಳ ಸಹಾಯ ಪಡೆಯಿರಿ: ಮಾತೃತ್ವ ರಜೆ ಪಡೆದು ಮತ್ತೆ ಕೆಲಸಕ್ಕೆ ಹಿಂದಿರುಗುವ ಮೊದಲು ಸ್ತನ್ಯಪಾನ ಅಗತ್ಯಗಳ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಮಾತನಾಡಿ. ಹಾಲನ್ನು ಪಂಪ್ ಮಾಡಲು ಸ್ವಲ್ಪ ಸಮಯದ ಅಗತ್ಯತೆ ಹಾಗೂ ಪ್ರತ್ಯೇಕ ಕೊಠಡಿಯ ಪ್ರಾಮುಖ್ಯತೆಯನ್ನು ಚರ್ಚಿಸಬಹುದು. ಸ್ತನ್ಯಪಾನ ಮಾಡುವ ತಾಯಂದಿರಿಗೆ ಕೊಠಡಿಗಳನ್ನು ಒದಗಿಸುವ ಬಗ್ಗೆ ಕಾನೂನು ಅದೆ. ಹೀಗಾಗಿ ನಿಮ್ಮ ಹಕ್ಕನ್ನು ಪಡೆದುಕೊಳ್ಳಬಹುದು.
ಮನೆಯಲ್ಲೇ ಹಾಲು ಶೇಖರಿಸಿ ಕೆಲಸಕ್ಕೆ ತೆರಳಬಹುದು: ಬೆಳಗ್ಗೆ ಕಚೇರಿಗೆ ಹೊರಡುವ ಮುನ್ನ ಹಾಲನ್ನು ಪಂಪ್ ಮೂಲಕ ತೆಗೆದಿಟ್ಟು, ಫ್ರಿಡ್ಜ್ ನಲ್ಲಿ ಸಂಗ್ರಹಿಸಿ. ಮಗು ನೋಡಿಕೊಳ್ಳುವವರು, ತಾಯಿ ಮನೆಗೆ ಮರಳುವ ತನಕ ಹಾಲುಣಿಸಲು ಸಹಾಯಕವಾಗುತ್ತದೆ.
ಉದ್ಯೋಗಕ್ಕೂ ತೆರಳಿ, ಮಗುವಿಗೆ ಹಾಲುಣಿಸುವಿಕೆಯಲ್ಲೂ ಯಾವುದೇ ತೊಂದರೆಯಾಗದಂತೆ ಈ ಮೂಲಕ ನೋಡಿಕೊಳ್ಳಬಹುದು. ಹಾಲುಣಿಸುವ ತಾಯಿಗೆ ಪತಿ ಹಾಗೂ ಕುಟುಂಬದವರ ಬೆಂಬಲವೂ ಅಷ್ಟೇ ಅಗತ್ಯವಾಗಿರುತ್ತದೆ. ವೃತ್ತಿಜೀವನವನ್ನು ಮುಂದುವರಿಸುವಾಗ ಮಗುವಿಗೆ ಉತ್ತಮ ಪೋಷಣೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಬಹುದು.